ಮಗುವಿಗಾಗಿ ಹಂಬಲ
ಮಗುವಿಗಾಗಿ ಹಂಬಲಿಸಿದಾಕೆ
ಮಾಡದ ಯತ್ನವಿರಲಿಲ್ಲ.
ಯಾವುದೋ ಪೂಜೆ
ಇನ್ನಾವುದೋ ಪುನಸ್ಕಾರ
ಅಲ್ಲೆಲ್ಲೊ ಉರುಳುಸೇವೆ
ಇಲ್ಲೆಲ್ಲೊ ಮಂಡಿಸೇವೆ
ಹತ್ತಾರು ದಿನಗಳ ಉಪವಾಸ
ಎಷ್ಟೊ ದಿನಗಳ ವನವಾಸ,
ಕಂಡುಕಾಣದ ದೇವರುಗಳಿಗೆ
ಮುಡಿ, ಮುಡಿಪು, ಹರಕೆ,
ಅನ್ನದಾನ, ವಸ್ತ್ರದಾನ
ಚಿನ್ನದಾನ, ಗೋದಾನ
ತುಲಾಭಾರ, ತೆಪ್ಪೋತ್ಸವ
ಮಾಡದೇ ಇರುವ
ಪೂಜೆಗಳೇ ಇರಲಿಲ್ಲ.
ಆದರೂ ಮಕ್ಕಳಾಗಲಿಲ್ಲ.
ಯಾರೋ ಗುಡ್ಡ ಹತ್ತಿ
ಎಂದರು
ಯಾರೋ ನದಿ ಮುಳುಗಿ
ಅಂದರು
ಮಾಡಿದರೂ ಏನೆಲ್ಲಾ
ಕಂದ ಮಾತ್ರ ಸಿಗಲಿಲ್ಲ.
ಅದೊಂದು ದಿನ,
ಬಯಸುತ್ತಾ ತಾಯ್ತನ
ನದಿಯಲ್ಲಿ ಮಿಂದು
ಕಣ್ಣೀರಲಿ ತೋಯ್ದು
ದೇವರಲಿಡುತಿದ್ದಾಗ ಮೊರೆ
ಕೇಳಿತೊಂದು ಅಳುವಿನ
ಕರೆ
ನೋಡಿದರಲ್ಲಿ ನೆಲದ
ಮೇಲೆ
ಮಲಗಿ ಅಳುತಿದ್ದಳು ಬಾಲೆ
ಸುತ್ತನೋಡಿ, ತಾಯ
ಕರೆದರು
ಯಾರೂ ಬಾರದಾದರು.
ಕಂದನ ಎತ್ತಿಕೊಂಡು
ಎದೆಗವಚಿಕೊಂಡು
ಸಂತೈಸುವಾಗನಿಸಿತವಳಿಗೆ
ಮಾಡಬೇಕಿತ್ತೇ ಕಂದನಿಗಾಗಿ
ಇಷ್ಟೆಲ್ಲ ವ್ರತ, ಪೂಜೆ
ಅನುಭವಿಸಬೇಕಿತ್ತೇ ಸಜೆ?
ನೋಡಿದ್ದರೆ ಸುತ್ತಮುತ್ತ
ಹೊರಪ್ರಪಂಚದತ್ತ
ಕಾಣಿಸುತ್ತಿರಲಿಲ್ಲವೇ ?
ಸಿಗುತ್ತಿರಲಿಲ್ಲವೇ?
ತಾಯಪ್ರೀತಿ ಹಕ್ಕನು
ಕೇಳುವ ಅನಾಥ ಮಕ್ಕಳು!!
No comments:
Post a Comment