Tuesday, 5 May 2015

POEM 54 - ವಯಸ್ಸಿನ ಅಂತರ

ವಯಸ್ಸಿನ ಅಂತರ

ವಯಸ್ಸಿನಲ್ಲಿ ಅಂತರವಿದ್ದರೆ
ಸ್ನೇಹಿತರಾಗಬಾರದೇ?
ಅಪ್ಪನ ಜೊತೆ ಮಕ್ಕಳು
ಗೆಳೆಯರಂತಿರಬಾರದೇ?
ಅಮ್ಮ ಮಕ್ಕಳ ಜೊತೆ
ಐಸ್ ಕ್ರೀಂ ತಿನ್ನಬಾರದೇ?
ವಯಸ್ಸಿನ ಅಂತರ
ನನಗೆಂದೂ ಅರ್ಥವಾಗಲೇ ಇಲ್ಲ.
ಮಗುವೊಂದಿಗೆ ಮಗುವಾಗಿ
ನಾನು ಬೆರೆಯಬಲ್ಲೆ,
ಹುಡುಗರೊಂದಿಗೆ ಸೇರಿ
ಗೋಲಿ ಆಡಬಲ್ಲೆ
ಹದಿಹರೆಯದವರೊಂದಿಗೆ
ಹರಟೆ ಹೊಡೆಯಬಲ್ಲೆ
ಓರಗೆಯವರೊಂದಿಗೆ
ಸಮಯ ಕಳೆಯಬಲ್ಲೆ
ಹಿರಿಯರ ಕಷ್ಟಸುಖ
ಕೇಳಿ ಸಂತೈಸಬಲ್ಲೆ.
ವೃದ್ಧರ ಜೊತೆ ಸೇರಿ
ಹಳೆ ಕಥೆಗಳ ಕೇಳಬಲ್ಲೆ
ಹಾಗಿದ್ದರೆ,
ವಯಸ್ಸಿನ ಅಂತರ,
ಅದೇನೆಂದು ಹೇಳುವಿರಾ?

ಯಾರಾದರೂ!

POEM - 53 - ಆಕಾಶಕ್ಕೆ ಏಣಿ ಹಾಕಬಾರದೇಕೆ?

ಆಕಾಶಕ್ಕೆ ಏಣಿ ಹಾಕಬಾರದೇಕೆ?

ಸಿಗದು ಎಂದು
ಗೊತ್ತಿದ್ದಾಗಲೂ
ಕೈಚಾಚುವುದು ತರವೇ?
ಎಟುಕದು ಎಂದು
ತಿಳಿದಾಗಲೂ
ಆಶಿಸುವುದು ಸರಿಯೇ?
ಆದರೂ ಮನ
ಯಾವಾಗಲೂ ಸಿಗದನ್ನೆ
ಹುಡುಕುತ್ತದೇಕೆ?
ಇರುವುದೆಲ್ಲವ ಬಿಟ್ಟು
ಇರದುದದೆಡೆಗೆ
ತುಡಿಯುತ್ತದೇಕೆ?
ಎಟುಕುವುದನ್ನೇ
ಆಶಿಸಬೇಕೇ, ಆಕಾಶಕ್ಕೆ
ಏಣಿ ಹಾಕಬಾರದೇಕೆ?
ಜೀವನದ ಸಾಧನೆಗೆ
ಇತಿಮಿತಿಯ ಚೌಕಟ್ಟನ್ನು
ನಿರ್ಮಿಸುವುದೇಕೆ?
ಸೋಲಿನ ಭಯವನ್ನು
ಮೂಡಿಸುತ ಮನಕೆ
ಹಿಂದೆ ದೂಡುವುದೇಕೆ?
ಕೆಳಗೆ ಬಿದ್ದರೂ ಸರಿಯೇ,
ಮತ್ತೆ ಎದ್ದು ನಿಲ್ಲೆಂದು
ಪ್ರೇರೇಪಿಸಬಾರದೇಕೆ?
ಬೂದಿಯಿಂದ ಮೇಲೆದ್ದ
ಫೀನಿಕ್ಸ್ ಪಕ್ಷಿಯಂತೆ
ಏಳೆಂದು ಹೇಳಬಾರದೇಕೆ?

Sunday, 3 May 2015

ENGLISH POEM - 1 - Relationships


Relationships

Biologically I am not a mother,
Yet I have many sons and daughters;
By blood relation I have only 3 sisters & a brother,
But by virtue I have hundreds;
I have a mother & a father who gave birth to me,
Still there are umpteen who fed and cared for me;
I wanted at least few good friends,
I am granted with uncountable numbers;
Life is so,
You reap what you sow.

POEM 51- ಬದಲಾವಣೆ

ಬದಲಾವಣೆ

ಮನೆ ಬದಲಿಸಬೇಕಿತ್ತು!
ಅದೇನು ಮಹಾ ಕೆಲಸ
ಎಂದುಕೊಂಡೆ ನಾನು.
ಎರಡು ದಿನ ಸಾಕು,
ಎಲ್ಲವನ್ನು ಒಂದೆಡೆ ಕಟ್ಟಿಟ್ಟು
ಟೆಂಪೊದಲಿ ಎತ್ತಿಟ್ಟರೆ,
ಮುಗೀತು  ಕೆಲಸವೆಂದು.
ಸಹಾಯಕ್ಕೆ ಬೇಕಾದಷ್ಟು
ಜನರಿದ್ದಾರೆ, ಸ್ನೇಹಿತರಿದ್ದಾರೆ
ಚಿಂತೆಗೆ ತಾಣವೇ ಇಲ್ಲವೆಂದು.
ಇಲ್ಲವೇ ಎಲ್ಲಾ ಕೆಲಸವನು
ಮೂವರ್ಸ್, ಪ್ಯಾಕರ್ಸ್ ಗೆ
ಕೊಟ್ಟು ನಿಶ್ಚಿಂತಳಾಗಿರಬಹುದೆಂದು.
ಜೋಡಿಸಲು ಕುಳಿತಾಗ ತಿಳಿಯಿತು,
ಇದು ನಾನಂದುಕೊಂಡಷ್ಟು
ಸರಳವಲ್ಲವೆಂದು.
ರಾಶಿ ರಾಶಿ ವಸ್ತುಗಳ ಕಂಡು
ಡೋಲಾಯಮಾನ ಸ್ಥಿತಿ,
ಇದನು ಒಯ್ಯಬೇಕೇ?
ಅದು ಬೇಕೇ ಬೇಡವೇ?
ಇವೆಲ್ಲಾ ನಾನೇ ಕೊಂಡುಕೊಂಡಿದ್ದೇ?
ಅನುಮಾನ! ಯಾವಾಗ? ಗೊತ್ತಿಲ್ಲ!
ಕೆಲವು ಯಾತಕ್ಕೆ ಬಳಸಬೇಕು
ಅರ್ಥವಾಗುತ್ತಿಲ್ಲ.
ಮುಂದೆ ಬೇಕಾಗಬಹುದೆಂದು ಇಟ್ಟಿದ್ದು,
ಎಂದೂ ಬಳಸಿರಲಿಲ್ಲ.
ಮತ್ತೆ ಬೇಕಾಗಬಹುದಾ? ಗೊತ್ತಿಲ್ಲ.
ಸ್ನೇಹಿತರು ಕೊಟ್ಟದ್ದು,
ಆತ್ಮೀಯರಿತ್ತದ್ದು ಎಂದು
ಬೇಕಿರಲಿ,ಬೇಡದಿರಲಿ,
ಪೇರಿಸಿದ್ದೇ ಪೇರಿಸಿದ್ದು.
ಈಗ ತಿಳಿಯುತ್ತಿದೆ ಅದರ ಕಷ್ಟ.
ಮನೆಗೇ ಹೀಗಾದರೆ
ಮನದ ಕಥೆಯೇನು?
ಎಲ್ಲವನ್ನು ಹೀಗೆಯೇ
ಸೇರಿಸುತ್ತಾ ಹೋದರೆ
ಎಂದೋ ಒಂದು ದಿನ
ನಾವೇ ಅದರಲ್ಲಿ ಕಳೆದುಹೋಗುವುದಿಲ್ಲವೇನು?
ದಿನನಿತ್ಯವಲ್ಲದಿದ್ದರೂ
ವಾರಕ್ಕೊಮ್ಮೆಯಾದರೂ
ಸೇರಿಸಿಕೊಂಡಿರುವ
ಎಲ್ಲಾ ವಿಚಾರಗಳ,
ಭಾವನೆಗಳ, ಅಭಿಪ್ರಾಯಗಳ
ಭಿನ್ನತೆಗಳ, ನೋವುಗಳ
ಪರಿಶೀಲಿಸಿ, ಶೋಧಿಸಿ,
ಬೇಕಿರುವಷ್ಟನ್ನು ಮಾತ್ರ ಉಳಿಸಿಕೊಂಡರೆ

ಮನವೆಷ್ಟು ಹಗುರ, ಬದುಕೆಷ್ಟು ಸುಂದರ!!

POEM 50 - ಮೂಢನಂಬಿಕೆ

ಮೂಢನಂಬಿಕೆ
ಮಂತ್ರಿಸಿ ಕೊಟ್ಟ ಬೂದಿ
ತಯಾರಿಸಿದ ತಾಯತ
ರೋಗವನ್ನು ನಕಳೆವುದೇ?
ಉರುಳುಸೇವೆಗೈದರೆ
ಉಪವಾಸ ಮಾಡಿದರೆ
ಮದುವೆಯು ಆಗುವುದೇ?
ಅರಳೀಮರ ಸುತ್ತಿದರೆ
ನಾಗನಿಗೆ ಹಾಲೆರೆದರೆ
ಮಗುವು ಆಗುವುದೇ?
ನೂರುಕಾಯಿ ಹೊಡೆದರೆ
ಹಣೆಗೆ ಭಸ್ಮ ಇಟ್ಟರೆ
ಪರೀಕ್ಷೆಯು ಪಾಸಾಗುವುದೇ?
ಮಕ್ಕಳ ಬಲಿ ಕೊಟ್ಟರೆ
ಕುರಿಕೋಳಿ ತರಿದರೆ
ಸಂಪತ್ತು ಸಿಗುವುದೇ?
ಕುಲುಕಿ ಹಾಕಿದ ಕವಡೆ
ಕೈ ಮೇಲಿನ ರೇಖೆಯು
ಕೈಹಿಡಿದು ನಡೆಸುವುದೇ?
ಗ್ರಹಾಧರಿತ ಜ್ಯೋತಿಷ್ಯ
ಮೈಮೇಲೆ ಬರುವ ದೇವರು
ನಾಳೆಯದ ಹೇಳುವುದೇ?
ಗಿಣಿ ಆರಿಸಿದ ಚೀಟಿ
ಅಂಜನದಿ ಕಂಡ ಚಿತ್ರ
ಭವಿಷ್ಯವ ತೋರುವುದೇ?
ಮಂತ್ರಕ್ಕೆ,
ಮಾವಿನಕಾಯಿ

ಉದುರುವುದೇ!!!

POEM 0\- 49 -ಕಳೆದುಕೊಳ್ಳುವ ಭೀತಿ

ಕಳೆದುಕೊಳ್ಳುವ ಭೀತಿ

ಹೊಸದನ್ನು ಗಳಿಸಿದಾಗ
ಕಳೆದುಕೊಳ್ಳುವಾ ಭಯ
ಮನವ ಕಾಡುತ್ತದೇಕೆ?
ಹೊಸ ಸಂಬಂಧ ಬೆಳೆದಾಗ
ಕಡಿದುಹೋಗುವ ಭೀತಿ
ನಮ್ಮಲ್ಲಿ ಮೂಡುತ್ತದೇಕೆ?
ಆತ್ಮಗೆಳತಿಯನು ಕೇಳಿದಾಗ
ಉತ್ತರಿಸಿದಳು ನಗುನಗುತಾ,
ಬಂತು ಪ್ರಶ್ನೆ ನಿನಗೇಕೆ?
ಕಳೆದುಕೊಳ್ಳುವೆನೆಂಬ ಭಯವ
ಕಳೆದುಬಿಡು, ಸಂತೈಸಿದಳಾಕೆ,
ಆದರೂ ಭಯ ಕಾಡದಿರಲಿಲ್ಲ.
ಯಾರೂ ನಮ್ಮನ್ನು
ದೂರ ಮಾಡಲಾರರೇ?
ಮತ್ತೆ ಆತಂಕದ ಪ್ರಶ್ನೆ.
ಅಷ್ಟೊಂದು ಜೊಳ್ಳೇ,
ನಮ್ಮ ಸಂಬಂಧ?
ಪ್ರಶ್ನೆಗೆ ಪ್ರಶ್ನೆಯೇ ಉತ್ತರ.
ಸಂಬಂಧಗಳು ತಾವಾಗಿಯೇ
ಹುಟ್ಟುವುದೂ ಇಲ್ಲ
ಸಾಯುವುದೂ ಇಲ್ಲ,
ನಾವಾಗಿಯೇ ಬೆಳೆಸಿದ ಮೇಲೆ
ಸಾಯುವುದೆಂಬ ಭಯ ಏಕೆ?
ಬೀಜವ ಬಿತ್ತಿ,
ಅದು ಚಿಗುರೊಡೆದ ಮೇಲೆ
ಎಲ್ಲ ಆರೈಕೆ ನೀಡಿದರೆ
ಸಸಿ ಬೆಳೆಯದೇ ಬಾಡುವುದೇ?
ಅಂತೆಯೇ ಅಲ್ಲವೇ ಸಂಬಂಧ,
ಬಾಡದಂತೆ ನೋಡೋಣ,
ಸಂಬಂಧಕ್ಕೆ ನಿತ್ಯವೂ
ನೀರ ಉಣಬಡಿಸೋಣ,
ಹೆಮ್ಮರವಾಗಿ ಬೆಳೆಸೋಣ.
ಕಳಿಸು ಭಯವ ಮನದಿಂದ ಹೊರಗೆ
ನಾನೆಂದೂ ಇರುವೆ ನಿನ್ನ ಜೊತೆಗೆ.
ಇಳಿಸಿದಳು ಹೃದಯದ ಮೇಲಿನ
ಬಂಡೆಯಂತಹ ಭಾರವನ್ನು

ಮೂಡಿಸಿದಳು ಮೊಗದ ಮೇಲೆ
ಭರವಸೆಯ ನಗುವನ್ನು.

POEM 48 - ನಿಜದ ಪರಿಹಾರವೆ?

ನಿಜದ ಪರಿಹಾರವೆ?
ಅಲ್ಲೊಂದು ದಂಗೆ
ಇಲ್ಲಿ ಮಾನಭಂಗ,
ಮತ್ತೆಲ್ಲೋ ಒಂದೆಡೆ
ಕಾಮಣ್ಣರ ಕಾಟ;
ಹೆಂಗಳೆಯರ ಬದುಕು
ಆಗಿದೆ ನರಕ.
ಕಾರಣವೇನು ಕೇಳಿದರೆ
ಸಿಗುವ ಉತ್ತರ ತರತರ.
ಹುಡುಗಿಯರ ತೊಡುಗೆಯೆಂದು
ಅವರ ಹಾವ ಭಾವವೆಂದು,
ಅವರ ಮೇಕಪ್, ಲಿಪ್ಸ್ಟಿಕ್ ಎಂದು
ಕೊಡೋ ಕಾರಣ ತರತರ
ಪರಿಹಾರವೇನು ಕೇಳಿದರೆ
ಸಿಗುವ ಉತ್ತರ ತರತರ
೧೬ಕ್ಕೆ ಮದುವೆಯೆಂದು
ಓದುವುದು ಬೇಡವೆಂದು
ಕೆಲಸವಂತೂ ಒಲ್ಲೆಯೆಂದು
ಹೊರಗೆ ಓಡಾಡಬಾರದೆಂದು
ಟಿವಿ  ಮೊಬೈಲ್ ನಿಷೇಧವೆಂದು
ಸಿನಿಮಾ ನಾಟಕ ವರ್ಜ್ಯವೆಂದು
ಡ್ರೆಸ್ mo ಬೇಡವೆಂದು
ಮುಖಕೆ ಪರದೆ ಇರಬೇಕೆಂದು
ಆಟ ಆಡಬಾರದೆಂದು
ಒಟ್ಟಿನಲ್ಲಿ ಹೆಣ್ಣುಮಗಳು
ನಾಕು ಗೋಡೆಯೊಳಿರಬೇಕೆಂದು
ಮತ್ತೆ ಸಂಕಲೆಯು ಜಾತಿಯು,
ಮತ್ತದೇ ದಾಸ್ಯದ ಬಾಳ್ವೆಯು.
ಇದು ನಿಜದ ಪರಿಹಾರವೆ?
ಸಮಸ್ಯೆಗೆ ಪರಿಷ್ಕಾರವೇ?
ನೆಗಡಿಯಾದರೆ
ಮೂಗೆ ಕೊಯ್ವುದು

ಸರಿ ದಾರಿಯೇ?

POEM 47 - ಸ್ನೇಹ

ಸ್ನೇಹ

ಭೇಟಿಯಾಗಲು
ಯತ್ನಿಸಿ ಯತ್ನಿಸಿ,
ಸೋತು ಬೇಸತ್ತು
ನನಗನಿಸಿತ್ತು
ನೀ ಎಷ್ಟೊಂದು ದೂರವೆಂದು
ಹತ್ತಿರವೆನಿಸುತ್ತೀಯಾ
ಆದರೂ ಎಷ್ಟೊಂದು ದೂರವೆಂದು.
ದಿನನಿತ್ಯ ಭೇಟಿಯಾದರೆ
ಗಂಟೆಗಟ್ಟಲೆ ಹರಟಿದರೆ,
ಸಮಯದ ಪರಿವೆಯೇ ಇಲ್ಲದೆ
ಎದುರುಬದುರು ಕೂತಿದ್ದರೆ ಮಾತ್ರ
ಹತ್ತಿರವೆಂದೇ?
ಒಂದು ನೋಟ
ಒಂದೇ ಒಂದು ಮಾತು,
ಒಬ್ಬರ ಮನದ ಭಾವವ
ಇನ್ನೊಬ್ಬರಿಗೆ ತಲುಪಿಸಲಾದರೆ,
ಒಬ್ಬರ ಮೌನವನ್ನೂ
ಇನ್ನೊಬ್ಬರು ಅರಿಯಲಾದರೆ,
ನೋಡಿಲ್ಲವೆಂಬ ನೋವಿಗೆ
ಮಾತಾಡಿಲ್ಲವೆಂಬ ಭಾವಕ್ಕೆ
ತಾವೇ ಇರುವುದಿಲ್ಲವಲ್ಲವೇ?
ಈಗನಿಸುತ್ತಿದೆ
ನಮ್ಮಿಬ್ಬರ ನಡುವೆ
ದೂರವೇ ಇಲ್ಲವೆಂದು,

ನನ್ನೊಳಗೇ ನೀನಿದ್ದೀಯೆಂದು!

POEM 46 - ಏಕೆ ಈ ವೈಪರೀತ್ಯ?

ಏಕೆ  ವೈಪರೀತ್ಯ?

ಇಲ್ಲಿ ಮದುವೆಮನೆಯಲ್ಲಿ
ಅಬ್ಬರದಿಂದ ನಡೆದಿದೆ
ಭೂರಿ ಭೋಜನ;
ಅಲ್ಲಿ, ಪಕ್ಕದ
ಗುಡಿಸಿಲುಗಳ ಸಾಲಿನಲಿ
ಒಪ್ಪತ್ತಿಗೂ ಇಲ್ಲ ತಂಗಳನ್ನ.
ಇಲ್ಲಿ ಎಲೆಗಳ ತುಂಬ
ತರತರದ ಅನ್ನ, ಪಲ್ಲೆಗಳು,
ವಿಭಿನ್ನ ಸಿಹಿತಿಂಡಿಗಳು;
ಅಲ್ಲೊ, ತಿನ್ನಲೇನೂ ಇಲ್ಲ,
ತುಂಬಿಸಲು ಎಲೆಯೇ ಇಲ್ಲ
ಖಾಲಿಖಾಲಿ ಪಾತ್ರೆಗಳು.
ಊಟ ಮುಗಿದರೂ
ಇಲ್ಲಿ ಎಲೆಯಲ್ಲಿ
ಖಾಲಿಯೇ ಆಗಿಲ್ಲ;
ಅಲ್ಲಿ ತಿಂದರೂ,
ಎಲೆ ಖಾಲಿಯಾದರೂ
ಹಸಿವು ಹಿಂಗಿಲ್ಲ.
ಹೊಟ್ಟೆ ತುಂಬಿದವರು
ಬಿಟ್ಟುಂಡ ಎಲೆಯಲ್ಲಿ
ನಾಕಾರು ಜನ ತಿನ್ನಬಹುದು;
ಹಸಿವಾದ ಜನರು
ತಿಂದುಂಡು ಎಲೆಯಲ್ಲಿ
ನೊಣಕೂ ಆಹಾರ ಸಿಗದು.
ಏಕೆ ವಿಪರೀತ?
ಏಕೆ ವೈಪರೀತ್ಯ?

ಉತ್ತರವ ಹೇಳುವವರಾರು?

POEM - 45 - ಸಂಕುಚಿತತೆ

ಸಂಕುಚಿತತೆ 

ಮನಸ್ಸೇ ನೀನೇಕೆ
ಇಷ್ಟು ಸಂಕುಚಿತ?
ನಿನ್ನವರು ಮಾತ್ರ ನಿನ್ನವರೇ?
ಉಳಿದವರು ಪರರೇ?
ನಿನ್ನವರು ಯಾರು?
ಬೆನ್ನಲ್ಲಿ ಬಿದ್ದವರೇ?
ಕಟ್ಟಿಕೊಂಡವರೇ?
ನೀ ಜನ್ಮವನಿತ್ತವರೇ?
ನಿನಗೆ ಜನ್ಮವನಿತ್ತವರೇ?
ಇವರ ಬಿಟ್ಟರೆ
ಉಳಿದವರು ನಿನಗ್ಯಾರು?
ಹಸಿವು ಕಾಡಿದಾಗ
ಕೈತುತ್ತು ನೀಡಿದವರು,
ನಿದ್ದೆ ಬಂದಾಗ
ಮಡಿಲನಿತ್ತವರು,
ನೀರಡಿಕೆಯಾದಾಗ
ನೀರುಣಿಸಿದವರು,
ಜ್ವರ ಕಾಡಿದಾಗ
ತಣ್ಣೀರಬಟ್ಟೆ ಹಾಕಿದವರು,
ಕಷ್ದದಿ ಸೋತು ಕಂಗೆಟ್ಟಾಗ
ಕೈಹಿಡಿದು ನಡೆಸಿದವರು,
ಜೀವನದಿ ನೊಂದುಬೆಂದಾಗ
ಜೊತೆಗೇ ನಡೆದವರು,
ಹತಾಶೆ, ನಿರಾಶೆ ಕಾಡಿದಾಗ
ಉತ್ಸಾಹ ತುಂಬಿದವರು,
ಯಶಸ್ಸನ್ನು ಸಾಧಿಸಿದಾಗ
ಕೈತಟ್ಟಿ ಬೆಂಬಲಿಸಿದವರು,

ನಿನಗೇನು ಅಲ್ಲವೇ?

POEM 44 - ಯಾರು ಹೆಚ್ಚು?

ಯಾರು ಹೆಚ್ಚು?
ಇಬ್ಬರಲಿ ಮಹತ್ವ ನೀಡಲಿ
ನಾ ಯಾರಿಗೆ?
ಹೆತ್ತಮ್ಮ ದೇವಕಿಗೆ?
ಸಾಕಿದಾ ಯಶೋದೆಗೆ?
ಪ್ರಶ್ನೆ ಮೂಡಿತು ಕೃಷ್ಣಗೆ.
ಬೆಲೆಕೊಡಲಿ
ನಾ ಯಾರ ಮಾತಿಗೆ?
ಹೆತ್ತಮ್ಮ ಕುಂತಿಗೆ?
ಸಾಕಿದಾ ರಾಧೆಗೆ?
ಕಾಡಿತು ಪ್ರಶ್ನೆ ಕರ್ಣಗೆ.
ನವಮಾಸ ಹೊತ್ತು
ಪ್ರಾಣ ಪಣಕ್ಕಿಟ್ಟು
ಜೀವ ಕೊಟ್ಟ ತಾಯಿ ಹೆಚ್ಚೊ?
ಹಗಲಿರುಳು ಜೊತೆಗಿದ್ದು
ಪ್ರಾಣ ಒತ್ತೆಯಿಟ್ಟು
ಬದುಕು ಕೊಟ್ಟ ಮಾತೆ ಹೆಚ್ಚೊ?
ಹೆಚ್ಚು ಕಡಿಮೆಯ ವಾದ
ಬರುವುದೇಕೆ?
ಇಬ್ಬರಲಿ ಒಬ್ಬರನು
ಆಯ್ಕೆ ಮಾಡಿಕೊಳುವ
ಪದ್ಧತಿಯದೇಕೆ?
ಎರಡು ಕಣ್ಣುಗಳಲಿ
ಯಾವುದು ಹೆಚ್ಚು?
ಎರಡು ಕೈಗಳಲಿ
ಯಾವುದು ಮೆಚ್ಚು?
ಕಂಗಳೆರಡಿರಲು
ನೋಟ ಸುಂದರ,
ಕೈಗಳೆರಡಿರಲು

ಜೀವನ ಹಗುರ.

POEM 43 - ಮಗುವಿನ ಭಯಗಳು

ಮಗುವಿನ ಭಯಗಳು
ಅಮ್ಮ ಸೀರೆಯ ಮರೆಯಲ್ಲಿ
ಮುಚ್ಚಿಟ್ಟುಕೊ ನನ್ನ,
ಗುಮ್ಮ ಬರುತ್ತಾನೆ, ಎತ್ತೊಯ್ಯುತ್ತಾನೆ;
ಕರಕೊಂಡು ನನ್ನನ್ನು
ಕಣ್ಮರೆಯಾಗುತ್ತಾನೆ.
ಅಮ್ಮ ಸೀರೆಯ ಮರೆಯಲ್ಲಿ
ಬಚ್ಚಿಟ್ಟುಕೊ ನನ್ನ
ಕಳ್ಳ ಬರುತ್ತಾನೆ, ಕದ್ದೊಯ್ಯುತ್ತಾನೆ
ಸಂತೆಯಲಿ ನನ್ನನ್ನು
ಮಾರಿಬಿಡುತ್ತಾನೆ.
ಅಮ್ಮ ಸೀರೆಯ ಮರೆಯಲ್ಲಿ
ಮುಚ್ವಿಟ್ಟುಕೊ ನನ್ನ
ಟೀಚರ್ ಬರುತ್ತಾರೆ, ಒದ್ದೊಯ್ಯುತ್ತಾರೆ;
ಶಾಲೆಯೆಂಬ ಜೈಲಿನಲಿ
ಕೂಡಿಹಾಕುತ್ತಾರೆ,
ಹೊಡೀತಾರೆ, ಬೈತಾರೆ
ರಾಶಿ ಕೆಲಸ ಕೊಡ್ತಾರೆ,
ಕೈ ನೋಯೊವಷ್ಟು ಬರಿಸ್ತಾರೆ
ಕಣ್ ನೋವಾಗೋಷ್ಟು ಓದಿಸ್ತಾರೆ,
ಮಾಡದೆ ಹೋದ್ರೆ ಮಂಡಿಕಾಲು
ಗೋಡೆಕುರ್ಚಿ ಹಾಕಿಸ್ತಾರೆ,
ಕೈಮುರಿಯೋ ಹಾಗೆ ಹೊಡೀತಾರೆ
ಕಾಲ್ ಮುರಿಯೊ ಹಾಗೆ ಓಡಿಸ್ತಾರೆ,
ಎಲ್ರ ಮುಂದೆ ಹೀಯಾಳ್ಸತಾರೆ
ಮನ ನೋಯೊ ಹಾಗೆ ನಡ್ಕೋತಾರೆ,
ಅದಕೆ ನನ್ನ ಮುಚ್ಚಿಟ್ಟುಕೊ ಅಮ್ಮ

ನಾ ನಿನ್ನ ಮುದ್ದು ಕಂದಮ್ಮ!

POEM 42 - ಹಂಬಲ

ಹಂಬಲ
ನಿನ್ನನ್ನು ನೋಡಬೇಕೆನುವ ಹಂಬಲ
ಕೊಂಚವೂ ಇಂಗಿಲ್ಲ,
ನಿನ್ನೊಂದಿಗೆ ಮಾತನಾಡುವ ಆಸೆ
ಎಳ್ಳಷ್ಟೂ ತಗ್ಗಿಲ್ಲ
ನಿನ್ನೊಂದಿಗಿರಬೇಕೆನುವ ಮನಸು
ಸ್ವಲ್ಪವೂ ಬದಲಾಗಿಲ್ಲ
ಆದರೀಗ,
ನೋಡದಿದ್ದರಾಗುವ ನಿರಾಸೆಯ
ಸಹಿಸುವ ಛಲವಿದೆ
ಮಾತನಾಡದಿದ್ದರಾಗುವ ಖಿನ್ನತೆಯ
ತಡೆಯುವ ಬಲವಿದೆ
ಜೊತೆಗಿರದಿದ್ದರಾಗುವ ನಿರುತ್ಸಾಹವ

ತೊಡೆಯುವ ಕಸುವಿದೆ.

POEM 41 - ಅಂತರರಾಷ್ಟ್ರೀಯ ಮಹಿಳಾ ದಿನ

ಅಂತರರಾಷ್ಟ್ರೀಯ ಮಹಿಳಾ ದಿನ

ಮತ್ತೊಮ್ಮೆ ಬಂದಿದೆ
ಮಾರ್ಚ್ ಎಂಟು
ಮಹಿಳಾ ದಿನವೆಂದೆ
ನಮಗದರ ನಂಟು.
ನೂರು ವರುಷಗಳ
ಇತಿಹಾಸ ಉಂಟು
ಬಿಚ್ಚಿದರೆ ದೊರೆವುದು
ಹೋರಾಟಗಳ ಗಂಟು.
1909ರಲ್ಲಿ ನಡೆದ
ಸ್ತ್ರೀ ಸಮ್ಮೇಳನದಲ್ಲಿ
ನಾಯಕಿ ಕ್ಲಾರಾ, ರೋಸಾ
ಹೋರಾಟದ ಕರೆಯಿತ್ತರಲ್ಲಿ.
1910ರಲ್ಲಿ ಸೇರಿದರು
ನ್ಯೂಯಾರ್ಕ್ ನಲ್ಲಿ
ಕೇಳಿದರು ಬೇಕೆಂದು
ಮತದಾನದ ಹಕ್ಕನಲ್ಲಿ.
ಆರಂಭವಾದವೆಲ್ಲೆಡೆ
ಹಕ್ಕಿನ ಹೋರಾಟಗಳು
ವಿಶ್ವದಲಿ ಬೆಳದವು
ಮಹಿಳಾ ಚಳುವಳಿಗಳು.
ದೇಶ ದೇಶಗಳಲ್ಲಿ
ಸಿಕ್ಕವು ಕೆಲ ಹಕ್ಕುಗಳು
ಇನ್ನುಳಿದವುಗಳಿಗಾಗಿ
ನಡೆದಿವೆ ಸೆಣಸಾಟಗಳು.
ಬಂಧನ, ಅಪಮಾನ
ಗುಂಡೇಟಿನ ಸುರಿಮಳೆ
ಸಹಿಸಿದರು ಎಲ್ಲವನು
ಕೀಳಲು ದಮನದ ಕಳೆ.
ಮೂಡಿದೆ ಮನದಲಿಂದು
ಪ್ರಶ್ನೆಗಳ ಸರಮಾಲೆ
ಒಡೆದಿದ್ದೇವೆಯೇ ನಾವು
ದಾಸ್ಯದ ಶೃಂಖಲೆ?
ಸ್ವಾತಂತ್ರ್ಯ ಸಿಕ್ಕಿದೆಯೆ
ನಿಜವಾಗಿ ನಮಗೆ?
ಸಮಾನತೆ ದೊರೆತಿದೆಯೆ
ದಿಟವಾಗಿ ನಮಗೆ?
ಬಿಡುಗಡೆಯಾಗಿದೆಯೆ
ದಾಸ್ಯ ಬಂಧನಗಳಿಂದ?
ಮುಕ್ತರಾಗಿದ್ದೇವೆಯೆ
ಎಲ್ಲ ಅಪಮಾನಗಳಿಂದ?
ನಿಂತಿವೆಯೆ ಎಲ್ಲ
ದಮನ ದೌರ್ಜನ್ಯಗಳು?
ಕೊನೆಗೊಂಡಿದೆಯೆ
ದರ್ಪದಬ್ಬಾಳಿಕೆಗಳು?
ದಕ್ಕಿದೆಯೆ ಎಲ್ಲರಿಗೂ
ಹಕ್ಕು-ಅಧಿಕಾರ?
ಸಿಕ್ಕಿದೆಯೆ ನಮಗೆ
ಆತ್ಮ ಸಮ್ಮಾನ?
ದೂರವಿದೆ ಇನ್ನೂ
ವಿಮೋಚನೆಯ ಗುರಿ
ಕಡಿದಾಗಿದೆ ಅದನ್ನು
ಪಡೆಯುವ ದಾರಿ.
ತಲುಪಿಹೆವು  ಗಮ್ಯವರ್ಧ
ಶತಮಾನದ ಹೋರಾಟದಿ
ನಡೆಯಬೇಕಿದೆ ಇನ್ನೂ
ಛಲದಿ, ಆತ್ಮಬಲದಿ.
ದೊರೆಯಬೇಕಿದೆ ಶಿಕ್ಷಣ
ಸಂಬಳದ ಅಧಿಕಾರ
ಎಲ್ಲೆಡೆ ನಿರ್ಭಯವಾಗಿ
ಓಡಾಡಲು ಸಹಕಾರ.
ಬಿಡುಗಡೆಗೆ ಎಲ್ಲರು
ಐಕ್ಯತೆಯಿಂ ಕೂಡಿ
ದುಡಿದರೆ ಖಂಡಿತ

ಸಿಡಿಯುವುದು ಬೇಡಿ.