Saturday, 5 November 2016

ಪುಟಾಣಿ ಕಥೆಗಳು 11- 16

ಪುಟಾಣಿ ಕಥೆ - ೧೧
"ನೀ ನನ್ನ ಬಿಟ್ಟರೆ ಸಾವೇ ಗತಿ" ಅವಳು ಹೇಳಿದಳು. 
"ನಿನ್ನ ಬಿಟ್ಟು ನನಗೆ ಬದುಕಲು ಸಾಧ್ಯವೇ ಇಲ್ಲ" ಎಂದ ಅವನು.
ಅವರಿಬ್ಬರೂ ಈಗ ಬದುಕಿದ್ದಾರೆ, ಆದರೆ ಒಟ್ಟಿಗಲ್ಲ!
    

 ಪುಟಾಣಿ ಕಥೆ - 12
ಹೊರಗೆ ಹೋಗಿ ನೇರ ಮನೆಗೇ ಬಾ ಕಂದ."
"ಅಡ್ಡ ದಾರಿ ಹಿಡಿಯಲು ನಾನು ಮನುಷ್ಯನೇನಮ್ಮ?" ಕೇಳಿತು ಕತ್ತೆಮರಿ.
   
ಪುಟಾಣಿ ಕಥೆ -13
ಹರಿಶ್ಚಂದ್ರ ಘಾಟ್ ಬಸ್ ನಿಲ್ದಾಣದಲ್ಲಿ ಇಳಿಯುತ್ತಿದ್ದ ಅಜ್ಜಿಯನ್ನು ಕಂಡು ಕಿಸಕ್ಕೆಂದು ನಕ್ಕ ಯುವಕ. 
"ಎಲ್ಲರೂ ಒಂದಲ್ಲ ಒಂದು ದಿನ ಇಲ್ಲಿಗೆ ಬರಲೇಬೇಕಪ್ಪ " ನಗುತ್ತಾ ಇಳಿದುಹೋದರು ಅಜ್ಜಿ
ಪುಟಾಣಿ ಕಥೆ - 14
"ಅಮ್ಮ, ನನಗೆ ದೊಡ್ಡ ಶಿಕ್ಷೆ ಕೊಡು, ನಾನು ದೊಡ್ಡ ತಪ್ಪು ಮಾಡಿದ್ದೇನೆ." ಕಂದನನ್ನು ಅಪ್ಪಿ, ಹಣೆಗೊಂದು ಹೂಮುತ್ತನಿತ್ತು ಹೇಳಿದಳು ಅಮ್ಮ, "ಈಗ ಹೇಳು ಅದೇನು ತಪ್ಪು? "
ಪುಟಾಣಿ ಕಥೆ -  15
ತಾಯಿಗೆ ನೋವಾಯಿತೆಂದು ಮಗಳು, 
ಮಗಳಿಗೆ ಎಷ್ಟು ನೋವಾಗಿದೆಯಲ್ಲ ಎಂದು ತಾಯಿ, 
ಇಬ್ಬರೂ ಸುರಿಸಿದ ಕಣ್ಣೀರಿಗೆ ಕತ್ತಲೊಂದೇ ಸಾಕ್ಷಿಯಾಗಿತ್ತು
ಪುಟಾಣಿ ಕಥೆ - 16
"ನಾನು ನಿನಗೆ ಭಾರವಾಗಿರೋಲ್ಲ, ನನ್ನನ್ನು ವೃದ್ಧಾಶ್ರಮಕ್ಕೆ ಕಳಿಸಿಬಿಡು. "
"ನೀನೂ ನನ್ನ ಬಗ್ಗೆ ಹಾಗೇ ಅಂದುಕೊಂಡಿದ್ದರೆ ನಾನು ಈಗ ಇರುತ್ತಿದ್ದೆನಾ,  ಅಮ್ಮ?"
         

ಪುಟಾಣಿ ಕಥೆಗಳು 1-10

ಪುಟಾಣಿ ಕಥೆ -೧
ಮಚ್ಚನ್ನು ಹಿಡಿದು ಕನ್ನಡ ಕಲಿಯಿರಿ ಇಲ್ಲದಿದ್ದರೆ ಕೊಚ್ಚಿ ಹಾಕುತ್ತೇವೆ ಎನ್ನುತ್ತಿದ್ದರು ದೊಡ್ಡವರು. ಆದರೂ ಯಾರೂ ಕನ್ನಡ ಕಲಿಯಲಿಲ್ಲ.
ಅಲ್ಲೊಬ್ಬ ಕಿರಿಯನಿಗೆ ಇನ್ನೊಬ್ಬ  ಕಿರಿಯ ಹೇಳುತ್ತಿದ್ದ - "ನಿನ್ನ ಮಾತು ಸತ್ಯ ಕಣೊ. ನೆನ್ನೆ ಕನ್ನಡ ಪದಗಳನ್ನು ಕಲಿತದ್ದರಿಂದ ಇಂದು ಕಡಲೆಕಾಯಿ ಬುಟ್ಟಿ ಪೂರ್ತಿ ಖಾಲಿಯಾಯಿತು. ನೋಡಿಲ್ಲಿ" ಕೈತುಂಬ ಹಣ ತೋರಿಸಿದ.
ಪುಟಾಣಿ ಕಥೆ - ೨
ಸಾಯಲು ಹೊರಟವನಿಗೆ ಬಾವಿ ಸಿಗಲಿಲ್ಲ. 
ಬಾವಿ ತೋಡಲಾರಂಭಿಸಿದ. 
ಸುಮಾರು ದಿನಗಳ ನಂತರ ನೀರು ಚಿಮ್ಮಿತು. 
ಹಾಗೇ ಅವನಿಗೆ ಬದುಕಿನ ಬಗ್ಗೆ ಪ್ರೀತಿ ಸಹ.
ಪುಟಾಣಿ ಕಥೆ - ೩
ಅಪ್ಪ ಅಮ್ಮನ ಮಾತಿನಿಂದ ಪಾಠ ಕಲಿಯದವನು 
ಬದುಕಿನ ಹೊಡೆತಗಳಿಂದ ಪಾಠ ಕಲಿಯಲೇಬೇಕಾಗುತ್ತದೆ 
ಎಂಬುದನ್ನು ಅರಿಯುವ ಮುನ್ನವೇ ಅವನು ದೊಡ್ಡವನಾಗಿಬಿಟ್ಟಿದ್ದ..
 
ಪುಟಾಣಿ ಕಥೆ -೪
ಮುಟ್ಟಿದರೆ ಮುನಿ ಆಕೆ. 
ನಾನಿತ್ತದ್ದು ಒಂದು ಹನಿ ಪ್ರೀತಿ. 
ಆಕೆ ಅಮೃತದ ಕಲಶವನೇ ಹೊತ್ತು ತಂದಳು.

 ಪುಟಾಣಿ ಕಥೆ - ೫
ಇಬ್ಬರ ನಡುವೆ ಮೌನವಿತ್ತು.  
ಅಹಂಕಾರವೆಂದುಕೊಂಡಳು ಒಬ್ಬಳು. 
ಉದಾಸೀನವೆಂದುಕೊಂಡಳು ಇನ್ನೊಬ್ಬಳು. 
ಆಕಸ್ಮಿಕವಾಗಿ ಮಾತನಾಡುವ ಸಂದರ್ಭ ಬಂತು. 
ಈಗ ಅವರಿಬ್ಬರೂ ಆತ್ಮೀಯ ಗೆಳತಿಯರು.

 ಪುಟಾಣಿ ಕಥೆ - ೬
"ಹುಡುಗನಿಗಾಗಿ ಜೀವ ಕೊಟ್ಟೆ," ಒಂದು ಹುಡುಗಿ ಹೇಳಿದಳು. 
"ಬದುಕಲಾಗದೆ ಜೀವ ಕೊಟ್ಟೆ" ಇನ್ನೋರ್ವನ ಉವಾಚ.
"ಒಂದು ಸದುದ್ದೇಶಕ್ಕಾಗಿ ಜೀವ ಕೊಟ್ಟಿದ್ದರೆ ನಮಗಿಂಥಾ ಪರಿಸ್ಥಿತಿ ಬರುತ್ತಿರಲಿಲ್ಲ"  ಮರಕ್ಕೆ ತೂಗಾಡುತ್ತಾ ಹೇಳಿತಾ ದೆವ್ವ.
   
ಪುಟಾಣಿ ಕಥೆ - ೭
ಅಬ್ಬಾ ಎಷ್ಟೊಂದು ಓದಿಬಿಟ್ಟಿರುವೆ, ಇನ್ನು ಓದುವುದು ಸಾಕೆಂದುಕೊಂಡಳು. ಶಾಲೆಯಿಂದ ಬಂದ ತಕ್ಷಣ ಮಗಳು ಕೇಳಿದ ಪ್ರಶ್ನೆಗೆ ತಲೆಕೆಡಿಸಿಕೊಂಡು ಮತ್ತೆ ಪುಸ್ತಕ ತೆರೆದಳು!
 
ಪುಟಾಣಿ ಕಥೆ - ೮
ಮಗಳನ್ನು ಓದಿಗಾಗಿ ವಿದೇಶಕ್ಕೆ ಕಳಿಸಿ ಮನೆಗೆ ಬಂದ ತಕ್ಷಣವೇ ಫೋನ್ ಕರೆ. "ಮೇಡಮ್ ಇಂದು ಬಂದು ಎರಡನೇ ಮಗುವನ್ನು ಕರೆದುಕೊಂಡು ಹೋಗಬಹುದು." ಅನಾಥಾಶ್ರಮದ ಕರೆ!
     
ಪುಟಾಣಿ ಕಥೆ - ೯
ಹೆಣಭಾರ ಹೊತ್ತು  ಬದುಕಬಂಡಿ ಸಾಗಿಸಲು ಯತ್ನಿಸುತ್ತಿದ್ದ ತಾಯಿ ಪಕ್ಕದಲ್ಲಿ ನಡೆಯಲಾರಂಭಿಸಿದಳು 6 ವರ್ಷದ ಪುಟ್ಟ ಬಾಲೆ. 
"ಒಬ್ಬರು ಜೊತೆಗಿದ್ದರೆ ನಿನಗೆ ಸ್ವಲ್ಪ ಹಾಯೆನಿಸಿತ್ತದೆ, ಅಲ್ಲವೇನಮ್ಮ?"
  

ಪುಟಾಣಿ ಕಥೆ - ೧೦
ಆಗ ಆ ಮನೆ ತುಂಬ ಮಕ್ಕಳಿದ್ದರು.  ಈಗ ಆಕೆ ಒಬ್ಬಂಟಿ.
ಆಗ ಈ ಮನೆಯಲ್ಲಿ ಮಕ್ಕಳಿರಲಿಲ್ಲ. ನಂತರ ಎಲ್ಲೆಲ್ಲಿಂದಲೋ ಬಂದರು. ಈಗ ಆ ಮನೆಯಲ್ಲಿ ಜಾಗವೇ ಇಲ್ಲ!
  


Friday, 10 June 2016

POEM - 95 - ಹೀಗೊಂದು ಸಂವಾದ

ಹೀಗೊಂದು ಸಂವಾದ

ತಾಯಿ:

ಹೀಗೆ ಬೆಳೆಸಿದೆನೆ ನಿನ್ನ ನಾ?
ಸುಳ್ಳು ಹೇಳಲು ಕಲಿಸಿದೆನೇ ನಾ?
ತಪ್ಪು ಮಾಡಲು ಹೇಳಿಕೊಟ್ಟೆನಾ?
ಹಾಗೆ ಬೆಳೆಸಿಲ್ಲವಲ್ಲ ನಿನ್ನ ನಾ!

ಮಗಳು ಮಾತ್ರವೇ ನನಗೆ ನೀ?
ಪ್ರಾಣಗೆಳತಿಯಲ್ಲವೇ ನನಗೆ ನೀ?
ಮುಚ್ಚಿಟ್ಟೆ ಏಕೆ ನೀ ಮಾಡಿದ್ದು?
ಮರೆಮಾಚಿದೆ ಏಕೆ ನಿನಗನಿಸಿದ್ದು?

ವಂಚಿಸಿದೆಯಲ್ಲ ನೀ ನನ್ನ?
ಧಿಕ್ಕರಿಸಿದೆಯಲ್ಲ ಪ್ರೇಮವನ್ನ?
ಮೋಸಮಾಡಿದೆ ಏಕೆ ಕಂದ?
ಹಾಗಿದ್ದರೆ ಕಲಿತದ್ದೇನು ನನ್ನಿಂದ?

ಕುಸಿದುಹೋಗಿರುವೆ ನಾ ನೋವಿನಿಂದ
ವ್ಯಥೆಯಾಗಿದೆ ನಿನ್ನ ವರ್ತನೆಯಿಂದ
ತತ್ತರಿಸಿದೆ ಮನ ನಂಬಿಕೆದ್ರೋಹದಿಂದ
ಮಾಡಿದೆ ಏಕೆ ಹೀಗೆ, ನನ್ನ ಕಂದ?

ಮಗಳು:

ಅಮ್ಮ ಹಾಗೆ ನಾ ಬೆಳೆದಿರುವೆನಾ?
ಸುಳ್ಳು ಹೇಳಲು ಕಲಿತಿರುವೆನಾ?
ತಪ್ಪು ನಾನು ಮಾಡುವೇನಾ?
ಮೋಸದಾಟ ನಾ ಆಡುವೇನಾ?

ನೀ ನನ್ನ ತಾಯಿ ಮಾತ್ರವಲ್ಲ
ಜೀವದ ಗೆಳತಿಯೂ ಹೌದಲ್ಲ!
ಮರೆಮಾಚಲೊಂದು ಕಾರಣವಿತ್ತು
ಹೇಳದಿರಲೊಂದು ಔಚಿತ್ಯವಿತ್ತು.

ವಂಚಿಸಲಿಲ್ಲ ನಾನೆಂದು ನಿನ್ನ
ತಿರಸ್ಕರಿಸಲಿಲ್ಲ ನಿನ್ನ ವಾತ್ಸಲ್ಯವನ್ನ
ಹೇಳಲಿಲ್ಲ ನೋವಾಗುವುದು ನಿನಗೆಂದು
ಮಚ್ಚಿಟ್ಟೆ ಮತ್ತೆಂದೊ ಹೇಳಬಹುದೆಂದು.

ನೊಂದಿರುವೆ ನಿನ್ನ ನಡವಳಿಕೆಯಿಂದ
ಬೇಯುತ್ತಿರುವೆ ನಿನ್ನ ವರ್ತನೆಯಿಂದ
ದುಃಖವಾಗಿದೆ ನಿನ್ನ ಚುಚ್ಚುಮಾತಿನಿಂದ
ಇಷ್ಟು ಮಾತ್ರವೇ ನನ್ನ ನಿನ್ನ ಬಂಧ?

----***-----

ಮೌನ, ಮುನಿಸು ಸಮಸ್ಯೆಗೆ ಪರಿಹಾರವೇ?
ಕಣ್ಣೀರು, ಕೋಪ ನೆಮ್ಮದಿಯ ನೀಡುವವೇ?
ಒಂದು ಅಪ್ಪುಗೆ, ಒಂದು ಮುತ್ತು, ಉತ್ತರವಲ್ಲವೇ!

ಸ್ವಲ್ಪ ಮಾತು, ಹೆಚ್ಚು ಪ್ರೀತಿಯೇ ಪರಿಹಾರವಲ್ಲವೇ!!

Wednesday, 8 June 2016

STORY10 - ಅಪ್ಪ

ಅಪ್ಪ
ಬೆಳಿಗ್ಗೆ ಮನೆಯಲ್ಲಿ ನಡೆದ ಘಟನೆ ಮತ್ತು ತನ್ನ ವರ್ತನೆಯನ್ನು ನೆನೆಸಿಕೊಂಡು
ಸುಧೀರ್‍ಗೆ ತಲೆ ಕೆಟ್ಟು ಹೋಗಿತ್ತು. ಅಪ್ಪ ಮಹಾ ಕೇಳಿದ್ದೇನು ‘ತಮ್ಮ ಕನ್ನಡಕ
ಒಡೆದಿದೆಯೆಂದು, ಬೇರೆ ತಂದುಕೊಡೆಂದು.’
ಅದೂ ಕೂಡ ಅವರು ಒಡೆದದ್ದಲ್ಲ. ಆಕಸ್ಮಿಕವಾಗಿ ತಾನೇ ಒಡೆದಿದ್ದೆಂದು
ತನ್ನವಳೆ ಬಂದು ಹೇಳಿದ್ದಳು.
ಆದರೆ ತಾನು ಯಾವುದೊ ಚಿಂತೆಯಲ್ಲಿ ಇದ್ದುದ್ದರಿಂದ, “ಏನಪ್ಪಾ ಬೆಳಿಗ್ಗೆ
ಬೆಳಿಗ್ಗೆ ತಲೆ ತಿಂತೀರಾ?” ಎಂದುಬಿಟ್ಟಿದ್ದ.
ಅಪ್ಪ ಮುಖ ಚಿಕ್ಕದು ಮಾಡಿಕೊಂಡು ಮೌನವಾಗಿಬಿಟ್ಟಿದ್ದರು. ಆದರೆ ಅವರ
ಕಣ್ಣಂಚಿನಲ್ಲಿದ್ದ ನೀರು ಕಂಡಾಗ ಸುಧೀರ್‍ಗೆ ಶಾಕ್ ಆಗಿಬಿಟ್ಟಿತ್ತು. ಏನು
ಮಾಡುವುದೆಂದೇ ತೋಚದೆ ಹಾಗೆಯೇ ಬಂದುಬಿಟ್ಟಿದ್ದ. ಅಷ್ಟೆ ಅಲ್ಲದೆ ಮಗ
ಅದನ್ನು ನೋಡಿದ್ದು, ಅವನಿಗೂ ಬೇಸರವಾಗಿತ್ತು. ಅವನು ತನ್ನ ಬಗ್ಗೆ ಏನು
ತಿಳಿದುಕೊಳ್ಳುತ್ತಾನೋ ಎಂಬ ಚಿಂತೆಯಾಗಿತ್ತು.
ಆಫೀಸಿಗೆ ಬಂದು ಕುಳಿತವನಿಗೆ ತಲೆಯೇ ಓಡದಂತಾಗಿತ್ತು. ಛೇಂಬರ್ ಒಳಗೆ
ಬಂದ ಸ್ಟೆನೊ ಕವಿತಾ “ಸರ್, ಪ್ಲೀಸ್ ಮಧ್ಯಾಹ್ನ ರಜೆ ಕೊಡ್ತೀರಾ?” ಎಂದಳು.
ಅವಳನ್ನು ಕಂಡರೆ ಮಗಳಷ್ಟೇ ವಾತ್ಸಲ್ಯ. “ಏಕಮ್ಮ” ಕೇಳಿದ ಸುಧೀರ್.
“ಅಪ್ಪನಿಗೆ ಐಸ್‍ಕ್ರೀಮ್ ಕೊಡಿಸಬೇಕು ಸರ್” ಎಂದಳು.
ಅವಳಿಗೂ ಸುಧೀರ್ ಜೊತೆ ಸ್ವಲ್ಪ ಸಲಿಗೆಯೇ!
ಆಶ್ಚರ್ಯವಾಯಿತು ಸುಧೀರ್‍ಗೆ. “ಏನಮ್ಮ ಇದು, ಅಪ್ಪನಿಗೆ ಐಸ್‍ಕ್ರೀಮ್
ಕೊಡಿಸಲು ರಜೆ ಕೇಳ್ತಿದ್ದೀಯಾ?”
“ಏನಿಲ್ಲಾ ಸರ್, ಬೆಳಿಗ್ಗೆ ಅಪ್ಪನ ಮೇಲೆ ರೇಗಿಬಿಟ್ಟೆ.”
‘ಅರೆ ತನ್ನದೆ ಪರಿಸ್ಥಿತಿ’ ಎಂದುಕೊಂಡು “ಯಾಕಮ್ಮ” ಕೇಳಿದ.
“ನಾನು ಆಫೀಸಿಗೆ ಬರುವ ಅರ್ಜೆಂಟಿನಲ್ಲಿದ್ದೆ. ಅಪ್ಪ ‘ಸಂಜೆ ಬೇಗ
ಬರ್ತೀಯೇನಮ್ಮ, ಐಸ್‍ಕ್ರೀಮ್ ತಿನ್ನಲು ಹೋಗೋಣ’ ಎಂದರು. ಕೋಪ
ಬಂದು ರೇಗಿಬಿಟ್ಟೆ. ಅಪ್ಪ ಏನೂ ಮಾತನಾಡಲಿಲ್ಲ. ಮಂಕಾಗಿ ರೂಮಿಗೆ
ಹೋಗಿಬಿಟ್ಟರು. ನನಗೆ ಗೊತ್ತು, ನಾನು ಮನೆಗೆ ಹೋಗುವವರೆಗೆ ಅಪ್ಪ ಏನೂ
ತಿನ್ನುವುದಿಲ್ಲ ಎಂದು. ಅದಕ್ಕೆ ಮನೆಗೆ ಹೋಗಿ, ಅವರಿಗೆ ಮಸ್ಕಾ ಹೊಡೆದು ಊಟ
ಮಾಡಿಸಿ, ಸಂಜೆ ಐಸ್‍ಕ್ರೀಮ್ ಕೊಡಿಸುತ್ತೇನೆ.”
ಸುಧೀರ್‍ಗೆ ಏನು ಹೇಳುವುದೆಂದೆ ತೋಚಲಿಲ್ಲ.
ಕವಿತಾ ಮಾತು ಮುಂದುವರೆಸಿದಳು. “ವಿಚಿತ್ರ ಎನಿಸುತ್ತೆ ಅಲ್ಲವೇ ಸರ್? ಆದ್ರೆ
ನಿಮಗೆ ಗೊತ್ತಾ ಸರ್, ನಾನು ಚಿಕ್ಕವಳಿದ್ದಾಗ ಒಂದು ದಿನ ರಾತ್ರಿ 11 ಘಂಟೆಗೆ ಎದ್ದು
ಐಸ್‍ಕ್ರೀಮ್ ಕೇಳಿದ್ದೆ. ಬೆಳಿಗ್ಗೆ ಕೊಡಿಸುತ್ತೇನೆ ಎಂದಾಗ ಅಳಲು ಶುರುಮಾಡಿದ್ದೆ.
ಅಮ್ಮ ಎಷ್ಟು ಬೇಡ ಬೇಡವೆಂದರೂ ಅಪ್ಪ ಕೇಳದೆ ಹೊರಗೆ ಹೋಗಿ ಬಹಳಷ್ಟು
ಕಡೆ ಸುತ್ತಾಡಿ ರಾತ್ರಿ 1 ಘಂಟೆಗೆ ಐಸ್‍ಕ್ರೀಮ್ ತೆಗೆದುಕೊಂಡು ಮನೆಗೆ ಬಂದಿದ್ದರು.
ಇಂತಹದ್ದು ಎಷ್ಟೋ ಘಟನೆಗಳು ಸರ್. ನಮ್ಮಪ್ಪ ನನ್ನನ್ನು ಯಾವತ್ತೂ
ಬೈದವರಲ್ಲ. ನನ್ನ ಕಣ್ಣಲ್ಲಿ ಒಂದು ತೊಟ್ಟು ನೀರು ಕಂಡರೂ ಸಹಿಸುತ್ತಿರಲಿಲ್ಲ.
ನನಗಾಗಿ ಎಷ್ಟೆಲ್ಲ ಮಾಡಿದ್ದಾರೆ ಸರ್. ಹಾಗಂತ ನಮ್ಮಪ್ಪನಿಗೆ ತುಂಬಾ
ಸಂಬಳವೇನೂ ಬರ್ತಿರಲಿಲ್ಲ. ಅವರಿಗೆ ಟೆನ್ಷ್‍ನ್ ಇರಲಿಲ್ಲವಾ ಸರ್. ಆದರೆ
ಅವರೆಂದೂ ನನ್ನ ಮೇಲೆ ಕೋಪ ಮಾಡಿಕೊಂಡವರಲ್ಲ. ಮತ್ತೆ ನನಗೇನು ಹಕ್ಕಿದೆ
ಸರ್. ನಾನವತ್ತು ಚಿಕ್ಕವಳಾಗಿದ್ದೆ. ಈಗ ಅವರು ನನಗೆ ಮಗು ತರಹ ಸರ್. ತುಂಬಾ
ಮಾತಾಡಿಬಿಟ್ಟೆ ಅನಿಸುತ್ತೆ. ಎಲ್ಲಾ ಕೆಲಸ ಮುಗಿಸಿ ಹೋಗುತ್ತೇನೆ ಸರ್. ಪ್ಲೀಸ್ ರಜಾ
ಇಲ್ಲವೆನ್ನಬೇಡಿ.”
ಇಲ್ಲವೆನ್ನಲಾಗಲಿಲ್ಲ ಸುಧೀರ್‍ಗೆ. “ಸರಿ ಹೋಗಮ್ಮ” ಎಂದ.
ಅವಳು ಹೋದ ಮೇಲೆ ಸುಧೀರ್‍ಗೆ ತನ್ನಪ್ಪನ ಬಗ್ಗೆ ನೆನಪಾಗತೊಡಗಿತು.
ಅವನು 6ನೇ ತರಗತಿಯಲ್ಲಿರುವಾಗ ಎಲ್ಲರ ಹತ್ತಿರ ಸೈಕಲ್ ಇದೆ, ತನಗೂ
ಬೇಕು, ಎಂದು ಹಠ ಹಿಡಿದಿದ್ದ. ಅಮ್ಮ ಗದರಿದ್ದರು. ಆದರೆ ಅಪ್ಪ ಏನೂ
ಮಾತನಾಡಲಿಲ್ಲ. ಅದಾದ ಒಂದು ತಿಂಗಳು ಅಪ್ಪ 6 ಘಂಟೆಗೆ ಮನೆಗೆ
ಬರುತ್ತಿದ್ದವರು 9 ಘಂಟೆಗೆ ಬರುತ್ತಿದ್ದರು. ಒಂದು ತಿಂಗಳ ನಂತರ ಮನೆಗೆ ಸೈಕಲ್
ಬಂದಿತ್ತು.
ಅಪ್ಪ ಮತ್ತೆ 6 ಘಂಟೆಗೆ ಬರಲಾರಂಭಿಸಿದರು. ಆಗ ಅಪ್ಪ ಒಂದು ತಿಂಗಳು
ಓವರ್‍ಟೈಮ್ ಕೆಲಸ ಮಾಡಿದ್ದರು ಎಂದು ನಂತರ ಎಷ್ಟೋ ವರ್ಷಗಳ ಮೇಲೆ
ಅಮ್ಮ ಯಾವುದೋ ಸಂದರ್ಭದಲ್ಲಿ ಹೇಳಿದ್ದರು. ತನ್ನ ಆಸೆಗಾಗಿ ಒಂದು ತಿಂಗಳು
ಓಟಿ ಮಾಡಿದ ಅಪ್ಪ ಎಲ್ಲಿ, ಕೇವಲ 400-500 ರೂಪಾಯಿಗಳ ಕನ್ನಡಕಕ್ಕಾಗಿ
ರೇಗಿದ ತಾನೆಲ್ಲಿ? ಅವನಿಗೆ ತನ್ನ ಬಗ್ಗೆಯೇ ಅಸಹ್ಯವೆನಿಸಿಬಿಟ್ಟಿತು.
ಅಷ್ಟರಲ್ಲಿಯೇ ಒಳಗೆ ಬಂದ ಮ್ಯಾನೇಜರ್, “ಸರ್, ಈ ದಿನೇಶ್ ಜೊತೆ ಕೆಲಸ
ಮಾಡುವುದೇ ಕಷ್ಟವಾಗಿಬಿಟ್ಟಿದೆ. ಅವನು ಕೆಲಸಕ್ಕೆ ಸೇರಿ ಕೇವಲ 6 ತಿಂಗಳಾಯಿತು.
ಈಗಾಗಲೇ ಬಹಳಷ್ಟು ಬಾರಿ ಚಕ್ಕರ್ ಹಾಕಿದ್ದಾನೆ. ಈಗ ಬೆಳಿಗ್ಗೆ ಫೆÇೀನ್ ಮಾಡಿ
ಸರ್, ನನಗೆ ಬೆಳಿಗ್ಗೆ ಕೆಲಸಕ್ಕೆ ಬರಲು ಸಾಧ್ಯವಿಲ್ಲ ಅಂತಾನೆ.”
ಮನೆಯ ಟೆನ್ಷ್‍ನ್ ಜೊತೆ ಆಫೀಸ್ ಟೆನ್ಷ್‍ನ್ ಬೇರೆ ಎಂದುಕೊಂಡು, “ಸರಿ,
ಮಧ್ಯಾಹ್ನ ಅವನು ಬಂದ ತಕ್ಷಣ ಅವನನ್ನು ನನ್ನ ಬಳಿ ಕಳಿಸಿ” ಎಂದ ಸುಧೀರ್.
ಮಧ್ಯಾಹ್ನ ಮನೆಗೆ ಫೋನ್ ಮಾಡಿದಾಗ ಅಪ್ಪ ಊಟ ಮಾಡಿ
ಮಲಗಿದ್ದಾರೆಂದು ತಿಳಿದು ಸ್ವಲ್ಪ ಸಮಾಧಾನವಾಯಿತು. ಅಪ್ಪ ಸಾಮಾನ್ಯವಾಗಿ
ಯಾರ ಮೇಲೂ ಮುನಿಸಿಕೊಂಡವರಲ್ಲ, ಊಟ ಬಿಟ್ಟವರಲ್ಲ. ಆದರೆ ಇಂದು ತನ್ನ
ವರ್ತನೆಯಿಂದಾಗಿ ಅವರು ನೊಂದಿದ್ದು ಕಂಡು ಏನು ಮಾಡುತ್ತಾರೊ ಎಂಬ
ಹೆದರಿಕೆ ಇತ್ತು. ಸಧ್ಯ ಹಾಗೇನೂ ಆಗಲಿಲ್ಲವಲ್ಲ ಎಂದು ಸಮಾಧಾನದ
ನಿಟ್ಟುಸಿರಿಟ್ಟ. ಆದರೂ ಮನಸ್ಸಿನಲ್ಲಿ ಏನೋ ತಳಮಳ.
ತಾನೂ ಊಟ ಮಾಡಿ ಫೈಲ್ಸ್ ನೋಡುತ್ತಿದ್ದಾಗ ಮ್ಯಾನೇಜರ್ ದಿನೇಶ್‍ನನ್ನು
ಕರೆತಂದ. “ನಮಸ್ಕಾರ್ ಸರ್, ಅನಿವಾರ್ಯ ಕಾರಣದಿಂದ ಬೆಳಿಗ್ಗೆ ಬರಲಾಗಲಿಲ್ಲ.
ದಯವಿಟ್ಟು ಕ್ಷಮಿಸಿ ಸರ್” ಎಂದ ದಿನೇಶ್.
“ಏನಯ್ಯಾ ಹೀಗೆ ಮಾಡಿದರೆ? ಬೆಳಿಗ್ಗೆಯಿಂದ ಎಷ್ಟು ಕೆಲಸ ಪೆಂಡಿಂಗ್ ಇದೆ”
ಕೇಳಿದ ಸುಧೀರ್.
“ಇಲ್ಲ ಸರ್, ಹೆಚ್ಚು ಕೆಲಸವೇನು ಬಾಕಿ ಇಲ್ಲ. ನೆನ್ನೆ 8 ಘಂಟೆಯವರೆಗೂ ಇದ್ದು
ಕೆಲಸ ಮಾಡಿ ಹೋಗಿದ್ದೆ.”
ಮ್ಯಾನೇಜರ್ ಕಡೆ ತಿರುಗಿ ಸುಧೀರ್, “ಮತ್ತೀನ್ನೇನ್ರಿ ನಿಮ್ಮ ಪ್ರಾಬ್ಲಮ್. ಅವರ
ಕೆಲಸ ಮಾಡಿ ಹೋಗಿದ್ದಾರಲ್ಲಾ?”
“ಇಲ್ಲ ಸರ್, ಬಹಳ ಮುಖ್ಯವಾದ ಕೆಲಸವೇ ಆಗಿಲ್ಲ.” ದಿನೇಶ್ ಕಡೆ
ನೋಡಿದರೆ ಮೌನವಾಗಿ ನಿಂತಿದ್ದ.
“ಏನಪ್ಪಾ ಹೀಗೆ ಮಾಡಿದರೆ?”
“ಸರ್ ನಾನು ಬೇಕಾಗಿ ಮಾಡಲಿಲ್ಲ. ಅನಿವಾರ್ಯ ಕಾರಣದಿಂದಾಗಿ...”
ಮ್ಯಾನೇಜರ್ ಮಧ್ಯದಲ್ಲಿಯೇ ಬಾಯಿ ಹಾಕಿ, “ಹೌದ್ರಿ ನಿಮಗೆ ಪ್ರತಿ ವಾರದಲ್ಲಿ
ನಾಲ್ಕು ಅನಿವಾರ್ಯ ಕಾರಣಗಳಿರುತ್ತೆ. ನಿಮ್ಮಂಥವರಿಗೆ ಕೆಲಸ ಕೊಟ್ಟಿದ್ದೆ
ತಪ್ಪಾಯ್ತು. ಕಿತ್ತು ಬಿಸಾಕ್ತ ಇರಬೇಕು” ಎಂದರು.
“ಆಯ್ತು ನಿಮಗೆ ಸಮಧಾನವಿಲ್ಲದಿದ್ದರೆ ಕಿತ್ತು ಬಿಸಾಕಿ ಸರ್. ಆದ್ರೆ ನನ್ನ
ಜೀವನದಲ್ಲಿ ಮತ್ತೆ ಮತ್ತೆ ಇಂತಹ ಅನಿವಾರ್ಯ ಕಾರಣಗಳು ಬರುತ್ತಲೇ
ಇರುತ್ತವೆ. ದುಡಿಯೋರಿಗೆ ಎಲ್ಲೋ ಒಂದು ಕಡೆ ಕೆಲಸ ಸಿಕ್ಕೇ ಸಿಗುತ್ತದೆ”
ಕೋಪದಲ್ಲಿಯೇ ಉತ್ತರಿಸಿದ.
“ನೋಡಿದ್ರಾ ಸರ್ ಅವನ ಉತ್ತರಾನಾ, ಎಷ್ಟು ಧಿಮಾಕು,” ರೇಗಿದ
ಮ್ಯಾನೇಜರ್.
ಆದರೆ ಸುಧೀರ್‍ಗೆ ಅದು ಧಿಮಾಕೆನಿಸಲಿಲ್ಲ. ಏನೋ ಬಲವಾದ
ಕಾರಣವಿರಬೇಕೆನಿಸಿ, “ನೀವು ಹೋಗಿ, ನಾನು ವಿಚಾರಿಸುತ್ತೇನೆ” ಎಂದ.
ಮ್ಯಾನೇಜರ್ ಗೊಣಗುತ್ತಲೇ ಹೊರಹೋದರು.
“ದಿನೇಶ್, ನೀನು ತುಂಬಾ ಒಳ್ಳೆಯ ಕೆಲಸಗಾರ ಎಂದು ನನಗೆ ಗೊತ್ತು.
ಏನಾಯ್ತು ಹೇಳು?” ಎಂದ.
ತಕ್ಷಣವೇ ಶಾಂತನಾದ ಅವನು ಕಣ್ಣಲ್ಲಿ ನೀರು ತುಂಬಿಕೊಂಡು, “ಸರ್
ನನಗಿರೋದು ನಮ್ಮ ತಂದೆ ಒಬ್ಬರೆ. ಚಿಕ್ಕಂದಿನಲ್ಲಿಯೇ ಅಮ್ಮ ತೀರಿಕೊಂಡಾಗ
ಅಪ್ಪ ಮತ್ತೊಂದು ಮದುವೆ ಮಾಡಿಕೊಳ್ಳಲಿಲ್ಲ. ಅವರೆ ಅಮ್ಮ ಅಪ್ಪ ಎರಡೂ ಆಗಿ
ನನ್ನನ್ನು ನೋಡಿಕೊಂಡರು. ನನ್ನನ್ನು ಸುಖವಾಗಿ ಬೆಳೆಸಿ ಈ ಸ್ಥಾನ
ದೊರಕಿಸಿಕೊಟ್ಟಿದ್ದಾರೆ. ಅವರಿಗೆ ಈಗ ಕ್ಯಾನ್ಸರ್. ಅವರಿಗೆ ಆಗಾಗ ಆರೋಗ್ಯ
ಕೆಡುತ್ತಿರುತ್ತದೆ. ಅವರನ್ನು ನಾನೇ ನೋಡಿಕೊಳ್ಳಬೇಕು.”
“ಯಾರನ್ನಾದರೂ ಕೆಲಸಕ್ಕೆ ಇಟ್ಟುಕೊಳ್ಳಬಹುದಲ್ಲಾ?” ಕೇಳಿದ ಸುಧೀರ್.
“ಸರ್, ನಿಮಗೆ ಗೊತ್ತಾ, ನಮ್ಮಪ್ಪ ಬಹಳ ದೊಡ್ಡ ಕೆಲಸದಲ್ಲಿದ್ದವರು. ಅವರು
ಎಷ್ಟೆ ಕೆಲಸವಿದ್ದರೂ ನನ್ನನ್ನು ಶಾಲೆಗೆ ರೆಡಿ ಮಾಡಿ ಕಳಿಸುತ್ತಿದ್ದರು. ಅಪ್ಪನ ಕೈರುಚಿ
ನನಗೆ ಬಹಳ ಇಷ್ಟ ಎಂದು ಅವರೇ ಅಡಿಗೆ ಮಾಡುತ್ತಿದ್ದರು. ಈಗಲೂ
ಹುಷಾರಿದ್ದಾಗ ಅವರೇ ಅಡಿಗೆ ಮಾಡುತ್ತಾರೆ. ಡಾಕ್ಟರ್ ಅವರಿಗೆ
ಸಂತೋಷವಾಗುವ ಕೆಲಸ ಮಾಡಲಿ ಎಂದಿದ್ದಕ್ಕೆ ನಾನು ಸುಮ್ಮನಿದ್ದೇನೆ. ಈಗ
ಹೇಳಿ ಸರ್, ನಮ್ಮಪ್ಪನಿಗೆ ಹುಷಾರಿಲ್ಲದಾಗ ನಾನು ಸೇವೆ ಮಾಡಬೇಕೆ, ಬೇಡವೆ?”
ಏಕೋ ಇವರೆಲ್ಲಾ ಬಹಳ ಎತ್ತರಕ್ಕೆ ಬೆಳೆದಿದ್ದಾರೆ, ತಾನು ಮಾತ್ರ ಕೆಳಕ್ಕೆ
ಜಾರುತ್ತಿದ್ದೇನೆ ಎನಿಸಿತು ಸುಧೀರ್‍ಗೆ.
“ಒಳ್ಳೆ ಕೆಲಸ ಮಾಡುತ್ತಿದ್ದೀಯಾ. ನಿನಗೆ ರಜೆ ಬೇಕಾದರೆ ಇನ್ನು ಮುಂದೆ ನನಗೆ
ನೇರವಾಗಿ ಫೋನ್ ಮಾಡು” ಎಂದು ಹೇಳಿ ಕಳಿಸಿದ.
ತುಂಬು ಕೃತಜ್ಞತೆಯಿಂದ ದಿನೇಶ್, “ಸರ್, ನಿಮ್ಮ ಮನಸ್ಸು ಬಹಳ ದೊಡ್ಡದು.
ನಿಮ್ಮ ತಂದೆ ಬಹಳ ಅದೃಷ್ಟವಂತರು” ಎಂದ. ಅದನ್ನು ಕೇಳಿ ಸುಧೀರ್ ಮನಸ್ಸು
ಕುಸಿದುಬಿಟ್ಟಿತು.
ದಿನೇಶ್‍ನನ್ನು ಕಳಿಸಿದ ನಂತರ ‘ಕೆಲಸ ಮುಗಿಸಿಕೊಂಡು ಅಪ್ಪನಿಗೆ ಕನ್ನಡಕ
ತೆಗೆದುಕೊಂಡು ಹೋಗಬೇಕು’ ಎಂದುಕೊಂಡು ಬೇಗ ಬೇಗ ಫೈಲ್ಸ್
ನೋಡಲಾರಂಭಿಸಿದ.
4 ಘಂಟೆಗೆ ಫೋನ್ ರಿಂಗ್ ಆಯಿತು. ನೋಡಿದರೆ ಮಗನದ್ದು. ಆದರೆ ಧ್ವನಿ
ಮಾತ್ರ ಅಪ್ಪನದ್ದು. “ಥ್ಯಾಂಕ್ಸ್ ಕಣೋ. ಕನ್ನಡಕ ಬಹಳ ಚೆನ್ನಾಗಿದೆ. ನಿನ್ನ ಆಯ್ಕೆ
ಅಂದ್ರೆ ಕೇಳಬೇಕಾ? ಥ್ಯಾಂಕ್ಯೂ” ಎಂದರು.
ಶಾಕ್ ಆಯಿತು ಸುಧೀರ್‍ಗೆ. ಮಗ ಫೋನ್ ತೆಗೆದುಕೊಂಡ ಮೇಲೆ, “ಏನೊ
ಇದು?” ಕೇಳಿದರು.
“ಒಂದ್ನಿಮಿಷ ಇರು” ಹೊರಗೆ ಬಂದ ಮಗ, “ಅಪ್ಪಾ, ಬೆಳಿಗ್ಗೆ ನಡೆದ ಘಟನೆ
ನೋಡಿದೆ. ನೀವು ಯಾವತ್ತೂ ಆ ರೀತಿ ನಡೆದುಕೊಂಡವರಲ್ಲ. ಏನೋ ಆಫೀಸ್
ಟೆನ್ಷನ್ ಇರಬೇಕೆಂದುಕೊಂಡು ನಾನೇ ಕನ್ನಡಕ ತಂದು ಅಪ್ಪ ತುಂಬಾ ಕೆಲಸ
ಎಂದು ನನ್ನ ಕೈಯಲ್ಲಿ ಕಳಿಸಿದ್ದಾರೆ ಎಂದೆ, ತಾತ ಫುಲ್ ಖುಷ್” ಎಂದ.
ಮನಸ್ಸಿನ ಭಾರವನ್ನು ಯಾರೋ ಇಳಿಸಿದಂತಾಯಿತು ಸುಧೀರ್‍ಗೆ. “ಥ್ಯಾಂಕ್ಸ್
ಮಗನೆ” ಎಂದ.
“ತಾತ ಹೇಳಿದ ಡೈಲಾಗ್ ಇದು.”
“ಇಲ್ಲ ಕಣೋ, ನೀನು ನನ್ನ ಎದೆಯ ಭಾರ ಇಳಿಸಿದೆ.”
“ಏನಪ್ಪ ಇದು, ನೀವು ಇಷ್ಟೆಲ್ಲಾ ಹೇಳಬೇಕೇ. ನಿಮಗೆ ನಿಮ್ಮಪ್ಪನ ಬಗ್ಗೆ ಇರುವ
ಜವಾಬ್ದಾರಿ ನನಗೆ ನನ್ನಪ್ಪನ ಬಗ್ಗೆಯೂ ಇರಬೇಕಲ್ಲವೇ. ಜೊತೆಗೆ ತಾತ ಏನೂ
ನಿಮ್ಮ ಬಗ್ಗೆ ಬೇಜಾರು ಮಾಡಿಕೊಂಡಿಲ್ಲ. ‘ಪಾಪ ಅವನಿಗೆ ಬಹಳ ಕೆಲಸ. ನಾನು
ಬೆಳಿಗ್ಗೆ ಕೇಳಬಾರದಾಗಿತ್ತು. ಅಷ್ಟು ಕೆಲಸ ಇದ್ದರೂ ನೆನಪಿಟ್ಟುಕೊಂಡು
ಕಳಿಸಿದ್ದಾನಲ್ಲಾ, ನೋಡಮ್ಮ ನನ್ನ ಮಗ’ ಎಂದು ಅಮ್ಮನಿಗೆ ಹೇಳುತ್ತಿದ್ದರು.”
ಹೃದಯ ತುಂಬಿ ಬಂದಂತಾಯಿತು ಸುಧೀರ್‍ಗೆ. “ಏನು ಹೇಳಬೇಕೊ
ಗೊತ್ತಾಗ್ತಿಲ್ಲ ಕಣೋ. ನೀನು ನನ್ನ ಮಗ ಎಂದು ಹೇಳಿಕೊಳ್ಳಲು ಹೆಮ್ಮೆ
ಎನಿಸುತ್ತಿದೆ.”
“ಅಪ್ಪ, ಸಾಕು ಹೊಗಳಿಕೆ. ಸಂಜೆ ಬೇಗ ಬನ್ನಿ” ಹೇಳಿ ಫೋನ್ ಇಟ್ಟ.
ಸುಧೀರ್‍ಗೆ ತನ್ನ ಮಗನ ಬಗ್ಗೆ ಹೆಮ್ಮೆ ಎನಿಸಿತು. ಆದರೆ ತಾನಿಷ್ಟು ಒಳ್ಳೆಯ
ಅಪ್ಪನಾಗಲು ತನ್ನ ಅಪ್ಪನೇ ಕಾರಣ ಎಂಬುದು ಇಂದು ಅವನಿಗೆ ಸ್ಪಷ್ಟವಾಯಿತು.
ಅಪ್ಪ, ಮಗ ಇಬ್ಬರೂ ಒಳ್ಳೆಯವರು, ತನ್ನನ್ನು ಅರ್ಥ ಮಾಡಿಕೊಳ್ಳುವವರು.
ನಾನೆಷ್ಟು ಅದೃಷ್ಟಶಾಲಿ! ಎಂದುಕೊಂಡ.
* * *

POEM 94 - ಸರಿದಾರಿ

ಸರಿದಾರಿ

ಒಮ್ಮೆ ಎಡವಿಬಿದ್ದರೆ 
ದಾರಿಯಲಿ ನಡೆಯುವಾಗ 
ಮತ್ತೆ ಬೀಳದಂತೆ 
ಎಚ್ಚರಿಕೆಯ ವಹಿಸುವೆವು
ಕೆಲಸವನು ಮಾಡುವಾಗ 
ಪುನಃ ಬೀಳದಂತೆ 
ಜತನದಿ ನೋಡಿಕೊಳ್ಳುವೆವು
ಒಮ್ಮೆ ಫೇಲಾದರೆ
ಉಢಾಫೆಯಿಂದಿದ್ದಾಗ
ಇನ್ನೆಂದೂ ನಪಾಸಾಗದಂತೆ 
ಗಮನವ ನೀಡುವೆವು
ಆದರೆ
ಜೀವನದಲಿ ಮಾತ್ರ ಮುಗ್ಗರಿಸಿ ಬಿದ್ದರೂ
ಪಾಠವನ್ನು ಕಲಿವುದಿಲ್ಲವೇಕೆ?
ಪದೇಪದೇ ಜಾರಿ ಬೀಳುತ್ತೇವೇಕೆ?
ಸೋಲನ್ನು ಅನುಭವಿಸುತ್ತೇವೇಕೆ?
ಗಾಯದ ಮೇಲೆ ಉಪ್ಪು ಸವರುತ್ತೇವೇಕೆ?
ಕೆಳಗೆ ಬಿದ್ದಾಗ, ಜೀವನದಿ ಸೋತಾಗ, 
ಗುರಿ ಮುಟ್ಟಲು ಸಾಧ್ಯವಾಗದಾದಾಗ
ನೋವಷ್ಟೇ ಅನುಭವಿಸಿದರೆ ಸಾಲದು
ಆತ್ತು ಕಣ್ಣೀರಿಟ್ಟರೆ ಪ್ರಯೋಜನವಾಗದು
ಕಾರಣಗಳ ಹುಡುಕಬೇಕಾಗ
ತಪ್ಪುಗಳ ತಿದ್ದುಕೋಬೇಕಾಗ
ಸರಿದಾರಿಯಲಿ ನಡೆಯಬೇಕಾಗ
ಬೀಳದಂತೆ ಎಚ್ಚರವಹಿಸಬೇಕಾಗ
ಸಿಗುತ್ತದಾಗ ಸರಿ ಬದುಕಿನ ದಾರಿ
ಎಲ್ಲಿಯೂ ಬೀಳೆವು ಮತ್ತೆ ಕಾಲು ಜಾರಿ.

Monday, 25 April 2016

TRANSLATED POEM - ಲೆನಿನ್

ಲೆನಿನ್ (ಇಂಗ್ಲಿಷ್ ಕವನದ ಅನುವಾದ)
ಸೋವಿಯತ್ ರಷ್ಯಾದ ಜನವರಿಯ ಚಳಿಗಾಲದಿ
ನಾಡಿನುದ್ದಕ್ಕೂ ಮೊಳಗಿತು ದುಃಖದಾ ಘಂಟೆ
ನೋವಿನ ಕರಾಳ ರಾತ್ರಿಯಲಿ ನಾವತ್ತೆವು;
ಅವರೊ, ಚಲನೆಯಿಲ್ಲದೆ ಮಲಗಿದ್ದಾರಲ್ಲಿ,
ಮುಕ್ತಿದಾರಿದೀಪಕ ಮಹಾನ್ ಚಿರಂಜೀವಿ.

ನೋಡಲವರನು ಬಂದರು ಲಕ್ಷೋಪಾದಿಯಲಿ
ಅಶ್ರುತರ್ಪಣ ನೀಡಲು, ವಿಮುಕ್ತರಾದವರು,
ಹಳ್ಳಿ-ನಗರ, ಶಾಲೆ ಕಾರ್ಖಾನೆಗಳಿಂದ
ರಾತ್ರಿ ಹಗಲೆನ್ನದೆ, ದೋಣಿಯಲಿ, ಟ್ರೈನಿನಲಿ
ತಂಡೋಪತಂಡಗಳಲಿ ಸಮುದ್ರದ ತೆರದಿ.

ಮುಂದೂಡಲಾಯಿತು ದಹನಕ್ರಿಯೆ ಮತ್ತೆ ಮತ್ತೆ
ನೋವು - ಪ್ರೀತಿ ತುಂಬಿದ ಮನಗಳ ಆ ಸಾಲು
ಕರಗಿಲ್ಲ, ಅಂದಿನಿಂದ ಇಂದಿನವರೆಗೆ
ಸಾಗುತ್ತದದು ಮುಂಬರುವ ಯುಗಗಳಲೂ,
ಹೊತ್ತಿಸುವುದಿಲ್ಲ ಅವರ ಚಿತೆ ಯಾರೂ.

STORY 9 - ನಂಬಿಕೆ

ನಂಬಿಕೆ 



     “ಅಮ್ಮ ನನ್ನ ಮೇಲೆ ನಿಮಗೆ ನಂಬಿಕೆಯಿಲ್ಲವಾ?” ಮಗಳು ಕೇಳಿದ ಪ್ರಶ್ನೆಗೆ, “ನಿನ್ನ ಮೇಲೆ ನಂಬಿಕೆಯಿದೆ, ಆದರೆ ನಿನ್ನ ಸ್ನೇಹಿತರ ಮೇಲೆ ನಂಬಿಕೆಯಿಲ್ಲ.” ಹೀಗೆಂದು ಹೇಳಿ ಮಗಳನ್ನು ಪಿಕ್‍ನಿಕ್‍ಗೆ ಕಳಿಸಲು ನಿರಾಕರಿಸಿದೆ. 

     “ಅಮ್ಮ ನನ್ನ ಎಲ್ಲ ಸ್ನೇಹಿತರ ಬಗ್ಗೆ ನಿನಗೆ ಹೇಳಿದ್ದೇನೆ. ನಿನ್ನಿಂದ ಏನನ್ನೂ ಮುಚ್ಚಿಟ್ಟಿಲ್ಲ, ಹಾಗಿದ್ದರೂ ನೀನು ಈ ರೀತಿ ಮಾಡುವುದು ಸರಿಯೇ?” 
     “ಹೌದು ಕಂದ, ಅದಕ್ಕೇ ಕಳಿಸುತ್ತಿಲ್ಲ. ನಿನ್ನ ಕಾಲೇಜು ಟ್ರಿಪ್ ಆಗಿದ್ದರೆ, ನಿಮ್ಮೊಂದಿಗೆ ನಿಮ್ಮ ಟೀಚರ್ಸ್ ಬಂದಿದ್ದರೆ ಕಳಿಸುತ್ತಿದ್ದೆ. ಆದರೆ ನೀವು ನೀವೇ ಹುಡುಗ-ಹುಡುಗಿಯರು ಹೋಗುವುದು, ಅದೂ ಜೋಡಿಗಳ ಜೊತೆ, ಅದು ನನಗೆ ಇಷ್ಟವಿಲ್ಲ.”
     “ಅಮ್ಮ ನಿನ್ನೊಂದಿಗೆ ಎಲ್ಲ ಹಂಚಿಕೊಂಡಿದ್ದೇ ತಪ್ಪಾಯಿತು. ಈಗ ನಾನು ಉಮಳ ಬಗ್ಗೆಯೋ, ಸಂಗೀತಳ ಬಗ್ಗೆಯೋ ಹೇಳಿರದಿದ್ದರೆ, ಆಗ ಕಳಿಸುತ್ತಿದ್ದೆಯಾ?” ಮಗಳ ಮರುಸವಾಲು.
     “ಆದರೆ ನಿನಗೆ ಪ್ರೊಪೋಸ್ ಮಾಡಿದವನೂ ಸಹ ಬರುತ್ತಿದ್ದಾನಲ್ಲ. ನೀನು ಇಲ್ಲವೆಆಂದ ಮೇಲೆ ಅವನು ನಿನ್ನಿಷ್ಟ ಎಂದು ಹೇಳಿ ಕೇವಲ ಸ್ನೇಹಿತನಂತೆ ಇದ್ದಾನೆ ಎಂದು ನೀನು ಹೇಳಿದರೂ ನನಗೆ ಹಾಗನಿಸುವುದಿಲ್ಲ. ಮತ್ತೆ ಅಲ್ಲಿ ಏನಾದರೂ ಸಮಸ್ಯೆಯಾದರೆ?”
     “ಅಮ್ಮ, ಏನಮ್ಮ ನೀನು. ಅವನ ಬಗ್ಗೆ ಗೊತ್ತಿಲ್ಲವಾ ನಿನಗೆ. ನನ್ನ ಬಗ್ಗೆ ಗೊತ್ತಿಲ್ಲವಾ? ಅವನು ಅಲ್ಲಿ ಒತಾಯ ಮಾಡಿಬಿಟ್ಟರೆ ನಾನು ಕರಗಿಹೋಗಿ ಒಪ್ಪಿಕೊಳುತ್ತೀನಿ ಅಂತಾನಾ. ಒಂದು ಬಾರಿ ಇಲ್ಲ ಅಂದ ಮೇಲೆ ಮತ್ತೆ ಆ ಭಾವನೆ ಹೇಗೆ ಬರುತ್ತೆ, ವಿಚಿತ್ರ ನೀನು.”
     “ಅಷ್ಟೆ ಅಲ್ಲ. ಅಲ್ಲಿ ಹೋದ ಮೇಲೆ ನಿನ್ನನ್ನು ಅವರು ಬೇರೆ ಏನಕ್ಕಾದರೂ ಒತ್ತಾಯ ಮಾಡಿದರೆ. ನೀವು ಹುಡುಗ ಹುಡುಗಿಯರು ಈ ವಯಸ್ಸಿನಲ್ಲಿ ಬೀರ್ ಕುಡಿಯುತ್ತೀರಾ. ನೀನು ಕುಡಿಯುವುದಿಲ್ಲ ನನಗೆ ಗೊತ್ತು. ಆದರೆ ಅವರ ಬಗ್ಗೆ ನನಗೆ ಅನುಮಾನವಿದೆ. ಅಲ್ಲಿ ಹೋದಾಗ ನಿನ್ನನ್ನು ಒತ್ತಾಯ ಮಾಡಿದರೆ, ನೀನು ಬೇಡವೆಂದರೂ ಇನ್ನಾವುದರಲ್ಲಾದರೂ ಬೆರೆಸಿ ಕೊಟ್ಟುಬಿಟ್ಟರೆ. ಬೇಡಮ್ಮ, ಸುಮಾರು ಬೇರೆ ಬೇರೆ ವಿಷಯಗಳನ್ನು ಪೇಪರ್‍ನಲ್ಲಿ ಓದಿದ್ದೇನೆ.”
     “ತುಂಬಾ ಪೇಪರ್, ಟಿವಿ ನೋಡಿ ಮನಸ್ಸಿನ ತುಂಬಾ ಈ ಅನುಮಾನಾನೇ ತುಂಬಿಕೊಂಡಿದ್ದೀಯಾ. ನನ್ನ ಸ್ನೇಹಿತರು ಅಂತಹವರಲ್ಲಮ್ಮ. ಅವರು ಮನೆಯಲ್ಲೊ, ಹಾಸ್ಟೆಲ್ ನಲ್ಲೊ ಬೀರ್ ಕುಡಿಯಬಹುದು. ಅದು ನನಗೆ ಗೊತ್ತಿಲ್ಲ. ಆದರೆ ನಮ್ಮ ಜೊತೆ ಬಂದಾಗ ಅವರು ಯಾವತ್ತೂ ಆ ರೀತಿ ವರ್ತಿಸಿಲ್ಲ. ಅಮ್ಮ, ಒಂದು ಮಾತು ಹೇಳು. ನಿಮ್ಮ ಅಣ್ಣನ ಮಗ ಕುಡಿಯುತ್ತಾನಲ್ಲ. ನಾವು ಅವರ ಮನೆಗೆ ಹೋಗುತ್ತೇವೆ. ಅವರೂ ನಮ್ಮ ಮನೆಗೆ ಬರುತ್ತಾರೆ. ಮತ್ತೆ ಈ ಮಾತು ನೀನು ಅವನಿಗೆ ಹೇಳೆ ಇಲ್ಲ. ಮೊನ್ನೆ ಅವನೊಂದಿಗೆ ನನ್ನನ್ನು ರೈಲ್ವೆಸ್ಟೇಷನ್‍ಗೆ ಕಳಿಸಿದೆ.”
     “ಅದು ಬೇರೆ, ಇದು ಬೇರೆ, ನೀನು ಎಲ್ಲದಕ್ಕೂ ಅಷ್ಟೊಂದು ವಾದ ಮಾಡಬೇಡ. ಆದರೂ ನೀವು ನೀವೇ ಹೋಗುವುದು ಅಷ್ಟೊಂದು ಸೇಫ಼್  ಅಲ್ಲ. ನೀರಿರುವ ಜಾಗ, ರಾತ್ರಿ ಎಲ್ಲಿ ಇಳಿದುಕೊಳ್ಳುವಿರೋ, ದಾರಿಯಲ್ಲಿ ಹೋಗುವಾಗ ಯಾರಾದರೂ ಹಿಂಬಾಲಿಸಿದರೆ, ಇದೆಲ್ಲ ಚಿಂತೆ ನನ್ನನ್ನು ಕಾಡತೊಡಗುತ್ತದೆ. ನೀನು ಬರುವವರೆಗೂ ನಾನು ನೆಮ್ಮದಿಯಿಂದ ಇರಲಾರೆ. ಆದ್ದರಿಂದ ಕಳಿಸುವುದಿಲ್ಲ.” ಖಚಿತವಾಗಿ ಹೇಳಿದೆ.
     “ಅಮ್ಮ ಈಗ ನಾನು ಬೆಂಗಳೂರಿಗೆ ಕೆಲಸಕ್ಕೆ ಹೊಗುತ್ತಿಲ್ಲವಾ? ಟ್ಯಾಕ್ಸಿಯಲಿ, ರೈಲಿನಲ್ಲಿ ಒಬ್ಬೊಬ್ಬಳೇ ಹೋಗುತ್ತಿಲ್ಲವಾ. ಬೆಳಿಗ್ಗೆ 5 ಕ್ಕೂ ಹೋಗುತ್ತಿದ್ದೇನೆ. ರಾತ್ರಿ 10ಕ್ಕೂ ಮನೆಗೆ ವಾಪಸ್ ಬರುತ್ತಿದ್ದೇನೆ. ಅಲ್ಲೆಲ್ಲ ಸೇಫ್  ಎಂದು ಹೇಗೆ ಹೇಳಬಲ್ಲೆ?. ನನ್ನ ಜೊತೆ ಅಷ್ಟೊಂದು ಜನ ಬರುವಾಗ, ಅದೂ ಅವರೆಲ್ಲರನ್ನು ನೀನು 4 ವರ್ಷಗಳಿಂದ ನೋಡುತ್ತಿದ್ದೀಯ, ನಮ್ಮ ಮನೆಗೆ ಬಂದಿದ್ದಾರೆ, ಇನ್ನೇನಮ್ಮ ನಿನಗೆ.”
     “ಇಲ್ಲ ಪ್ರೀತಿ, ಅದು ಬೇರೆ, ಇದು ಬೇರೆ. ಅದು ಅನಿವಾರ್ಯ. ಇದರ ಅವಶ್ಯಕತೆ ಏನು. ಅನವಶ್ಯಕವಾಗಿ ಅಪಾಯ ತಂದುಕೊಳ್ಳುವುದು ಅವಶ್ಯವೇ? ಜೊತೆಗೆ ನಿನ್ನ ಸ್ನೇಹಿತೆ ಉಮಳ ಬಾಯ್ ಫ್ರೆಂಡ್ ಬೇರೆ ಯಾವುದೋ ಕಾಲೇಜಿನವನು. ಈಗ ಅದೇ ರೀತಿ ಅವನು ತನ್ನ ಸ್ನೇಹಿತರನ್ನೂ ಕರೆ ತರಬಹುದು. ಇದೆಲ್ಲ ಬೇಡ ಪ್ರೀತಿ, ಸರಿಹೋಗುವುದಿಲ್ಲ.”
     “ಅಮ್ಮ, ಅವನು ನಮಗೆ 2 ವರ್ಷದಿಂದ ಗೊತ್ತು. ನೀನು ನೋಡಿದ್ದೀಯಲ್ಲ. ಅವನು ಬೇರೆ ಯಾರನ್ನೂ ಕರೆತರಲಾರ. ಅಮ್ಮ ಇಷ್ಟೊಂದು ಅನುಮಾನಗಳು ಅವಶ್ಯವಿದೆಯಾ?”
     “ಹೌದಮ್ಮ, ನಿನಗೆ ಈಗ ಅರ್ಥವಾಗುವುದಿಲ್ಲ ನಮ್ಮ ಕಾಳಜಿ. ನಾಳೆ ನೀನೂ ತಾಯಿಯಾಗುತ್ತೀಯ ನೋಡು, ಆಗ ನಿನಗೆ ಅರಿವಾಗುತ್ತದೆ.” ಅದೇ ಹಳೆಯ ಡೈಲಾಗ್ ಹೇಳಿ ಅವಳ ಬಾಯಿ ಮುಚ್ಚಿಸಲೆತ್ನಿಸಿದೆ. ಆದರೆ ಅವಳೋ ಪ್ರಶ್ನೆಗಳ ಕಣಜ.
     “ಅಮ್ಮ, ನಾನು ನಿನಗೆ ಹೇಳದೆ, ಬೇರೆ ಏನೋ ಸುಳ್ಳು ಕಾರಣ ನೀಡಿ ಹೋಗಬಹುದಿತ್ತು. ಕಾಲೇಜು ಟ್ರಿಪ್ ಎಂದೇ ಹೇಳಬಹುದಿತ್ತು. ಆದರೆ ಅದೇನೂ ನಾನು ಮಾಡಿಲ್ಲ. ನನ್ನ ಸ್ನೇಹಿತರ ಬಗ್ಗೆ ಸಹ ನಿನಗೆ ಎಲ್ಲ ಸತ್ಯವನ್ನೇ ಹೇಳಿದ್ದೇನೆ. ಜೊತೆಗೆ ನಿನಗೆ ನೀನು ಬೆಳಸಿದ ಮಗಳ ಬಗ್ಗೆ ನಂಬಿಕೆ ಇಲ್ಲವೇ? ಇನ್ನಾವ್ಯತ್ತೂ ನಿನ್ನ ಮೇಲೆ ನನಗೆ ನಂಬಿಕೆಯಿದೆ ಎಂದು ಹೇಳಬೇಡ” ಹೊರಬರಲೆತ್ನಿಸುತ್ತಿದ್ದ ಕಣ್ಣೀರನ್ನು ತಡೆಯಲೆಂಬಂತೆ ರೂಮಿಗೆ ಹೋಗಿಬಿಟ್ಟಳು.
     ಆ ಮರುದಿನ ನನಗೆ ಹುಷಾರು ತಪ್ಪಿತು. ಮಗಳು ಟ್ರಿಪ್ ಬಗ್ಗೆ ನನಗೆ ಕೇಳಲೂ ಇಲ್ಲ. ಟಿಕೆಟ್ ಕ್ಯಾನ್ಸಲ್ ಮಾದಿಸಿಕೊಂಡು ಬಂದ ದಿನ ಸ್ವಲ್ಪ ಬೇಜಾರಿನಲ್ಲಿದ್ದಳು. ಸ್ವಲ್ಪ ದಿನ ಮುನಿಸಿತ್ತು, ನೋವಿತ್ತು, ಕೆಲವು ದಿನ ಸರಿಯಾಗಿ ಮಾತನಾಡಲಿಲ್ಲ. ನಾನೂ ಸಹ ಅದು ಕ್ರಮೇಣ ಅದು ಸರಿ ಹೋಗುತ್ತದೆ ಎಂದು ತಲೆ ಕೆಡಿಸಿಕೊಳ್ಳಲಿಲ್ಲ. ಸ್ವಲ್ಪ ದಿನವಾದ ಮೇಲೆ ಮತ್ತೆ ಯಥಾಸ್ಥಿತಿ ಬಂದಿತು ಮನೆಯಲ್ಲಿ,
     ಕೆಲಸದ ನಿಂಗಮ್ಮ ಮೂರು ದಿನವಾದರೂ ಬಾರದ್ದರಿಂದ ಅಂದು ಅವಳ ಮೇಲೆ ರೇಗುತ್ತಿದ್ದೆ. ಅವಳು “ಅಕ್ಕ, ಅಮ್ಮನಿಗೆ ತುಂಬಾ ಹುಷಾರಿರಲಿಲ್ಲ. ಅದಕ್ಕೆ ಬರಕ್ಕಾಗಲಿಲ್ಲ” ಎಂದಳು. ನಾನು “ನಿಜಾನಾ?” ಕೇಳಿದೆ. 
     “ಏನಕ್ಕ ಹೀಗೆ ಕೇಳ್ತಾ ಇದ್ದೀರಾ. ನನ್ನನ್ನು 1 ವರ್ಷದಿಂದ ನೋಡ್ತಾ ಇದ್ದೀರ. ನಾನ್ಯಾವತ್ತಾದರೂ ನಿಮ್ಮ ಹತ್ತಿರ ಸುಳ್ಳು ಹೇಳಿ ರಜ ತಗಂಡಿದ್ದೀನಾ? ನನ್ನ ಮೇಲೆ ನಂಬಿಕೆಯಿಲ್ಲವಾ?”
     ಅವಕ್ಕಾದೆ. ನಿಂಗವ್ವ ಹೇಳಿದ್ದು ನಿಜ. ಅವಳು ಇಲ್ಲಿಯವರೆಗೂ ಯಾವುದೇ ರಜ ತೆಗೆದುಕೊಳ್ಳಬೇಕಾದರೂ ನಿಜವಾದ ಕಾರಣವನ್ನೇ ಹೇಳಿದ್ದಾಳೆ. ಮತ್ತೆ ನಾನ್ಯಾಕೆ ಹೀಗೆ ಮಾತನಾಡಿದೆ ಎಂದುಕೊಂಡು, ತಕ್ಷಣವೇ “ಸಾರಿ ನಿಂಗಮ್ಮ, 3 ದಿನ ಬಂದಿಲ್ಲವಲ್ಲ ಅನ್ನೊ ಕೋಪಕ್ಕೆ ಏನೋ ಅಂದುಬಿಟ್ಟೆ, ಸಾರಿ” ಎಂದೆ. 
     ನಿಂಗಮ್ಮ “ಅಯ್ಯೊ, ಅದೆಲ್ಲ ಏನು ಬೇಡಕ್ಕ, ಸರಿ ಬಿಡಿ, ನಾನು ಕೆಲಸ ಮಾಡಕ್ಕೆ ಹೋಗ್ತೀನಿ. ಒಂದು ಲೋಟ ಕಾಫಿ ಕೊಟ್ಬಿಡಿ” ಎಂದು ಹಿತ್ತಲಿಗೆ ಹೋದಳು.
     ಕಾಫಿ ಬೆರೆಸಲು ಅಡಿಗೆ ಮನೆಗೆ ಹೋದಾಗ ಈ ವಾಕ್ಯ ಮತ್ಯಾರದ್ದೊ ಬಾಯಿಂದಲೂ ಕೇಳಿದ್ದೀನಲ್ಲ ಎನಿಸಿತು. ಆಗಲೇ ಧುತ್ತೆಂದು ಬಂದಿದ್ದು ನನ್ನ ಮನದಲ್ಲಿ ಪ್ರೀತಿಯ ಮಾತು. “ನನ್ನ ಮೇಲೆ ನಂಬಿಕೆಯಿಲ್ಲವಾ?” ಮಗಳಾಗಿದ್ದಕ್ಕೆ ನಾನು ಹೇಳಿದ್ದಕ್ಕೆ ಇಲ್ಲವೆಂದು ಹೋದಳಾ? ಅವಳ ಮಾತಿನಲ್ಲಿಯೂ ನಿಂಗಮ್ಮನ ಮಾತಿನಂತೆ ದೃಢತೆ ಎದ್ದು ಕಾಣುತ್ತಿತ್ತು. 
     ನಿಂಗಮ್ಮನಿಗೆ ಕಾಫಿ ಕೊಟ್ಟು, ನಾನು ಕೈಯಲ್ಲಿ ಕಾಫಿ ಕಪ್ ಹಿಡಿದು ಟಿವಿಯ ಮುಂದೆ ಕೂತೆ. ಆದರೆ ಮನದ ತುಂಬೆಲ್ಲ ಹಲವಾರು ಪ್ರಶ್ನೆಗಳು ಎದ್ದವು.
     ಟ್ರಿಪ್‍ಗೆ ಅವಳನ್ನು ಕಳಿಸದಿದ್ದದ್ದು ಸರಿಯೇ ತಪ್ಪೇ, ಪ್ರಶ್ನೆ ಮೂಡಿತು. ನೀರಿನ ಬಗ್ಗೆ ಭಯ, ಎಲ್ಲೆಡೆ ಪೇಪರ್‍ನಲ್ಲಿ ಬರುತ್ತಿದ್ದ - ಪ್ರವಾಸಕ್ಕೆ ಹೋದ ಯುವಕ ಯುವತಿಯರು ನೀರುಪಾಲು. ಹೌದು ನಿಜ, ದೊಡ್ಡವರೊಂದಿಗೆ ಹೋದಾಗ ಅಪಘಾತಗಳು ಕಡಿಮೆ. ಆ ಬಗ್ಗೆ ಅವರು ಹೆಚ್ಚು ಎಚ್ಚರ ವಹಿಸುತ್ತಾರೆ. ಮಕ್ಕಳಂತೆ ಅತೀ ಸಾಹಸಮಯವಾಗಿರುವುದಿಲ್ಲ. ಆದರೂ ದೊಡ್ಡವರೊಂದಿಗೆ ಹೋದಾಗ ರಸ್ತೆ ಅಪಘಾತವೊ, ನೀರಿನಲ್ಲಿ ಮುಳುಗಿರುವುದು ಆಗಿಯೇ ಇಲ್ಲವೇ. ಅವಳಿಗೆ ನಾನು ಎಚ್ಚರಿಕೆ ಕೊಟ್ಟು ಕಳಿಸಬಹುದಿತ್ತಲ್ಲವೇ. ಏಕೆಂದರೆ ಅವಳು ನಾನು ಹೇಳಿದ ಎಚ್ಚರಿಕೆಗಳನ್ನು ಬೇರೆಯ ವಿಷಯದಲ್ಲೂ ಸಹ ಯಾವತ್ತೂ ಮೀರಿರಲಿಲ್ಲ.
     ಅವಳ ಸ್ವಭಾವವೇ ಹಾಗಿತ್ತು. ಅವಳಿಗೆ ಅದು ಸರಿ ಎನಿಸಿದರೆ, ಅವಳದನ್ನು ಚಾಚೂತಪ್ಪದೆ ಅನುಸರಿಸುತ್ತಿದ್ದಳು. ಬೇರೆ ವಿಷಯದ ಬಗ್ಗೆ ಹೊಂದಾಣಿಕೆಯಾಗದಿದ್ದರೆ, ಪ್ರಶ್ನೆ ಮಾಡುತ್ತಲೇ, ಇರುತ್ತಿದ್ದಳು, ಆದರೆ ಆಗಲೂ ನಮ್ಮ ಮಾತು ಮೀರುತ್ತಿರಲಿಲ್ಲ. ನನ್ನ ಮಗಳೆಂಬ ಹೆಗ್ಗಳಿಕೆ ಅಲ್ಲ, ಅವಳಷ್ಟು ಸೆನ್ಸಿಬಲ್ ಮಕ್ಕಳನ್ನು ನಾನು ನೊಡಿರುವುದು ಬಹಳ ಕಡಿಮೆ.
     ಹಾಗಿದ್ದರೆ ಈ ಕಾರಣ ಸರಿಯಲ್ಲ ಅನಿಸಿತು. ಎಲ್ಲಿ ಉಳಿದುಕೊಳ್ಳುತ್ತಾರೆ. ಎಲ್ಲರೂ ಒಟ್ಟಿಗೆ ಉಳಿದುಕೊಂಡಾಗ ಏನಾಗಬಹುದು, ಈ ಪ್ರಶ್ನೆಗಳು ಸುಳಿದವು. ಅವಳು ಸ್ಪಷ್ಟವಾಗಿ ನಮಗೆ ಎಲ್ಲವನ್ನೂ ಹೇಳಿದ್ದಳು. ಇಲ್ಲಿ ಅವಳೇ ಹೇಳಿದ ಹಾಗೆ ನಮಗೆ ಸುಳ್ಳು ಹೇಳಿ ಹೋಗಬಹುದಿತ್ತು. ನಾವೇನೂ ಅವಳ ಕಾಲೇಜಿಗೆ ಫೋನ್ ಮಾಡಿ ಕೇಳುತ್ತಿರಲಿಲ್ಲ. ಅವಳ ಬಗ್ಗೆ ನಮಗೆ ಅಷ್ಟು ನಂಬಿಕೆ ಇದೆ. 
     ಅವಳು ಹುಡುಗರ ವಿಷಯವನ್ನೂ ನನ್ನೊಂದಿಗೆ ಮುಚ್ಚಿಟ್ಟಿರಲಿಲ್ಲ. ಅವಳ ಕ್ಲಾಸ್‍ಮೇಟ್ ಸಂತೋಷ್ ಅವಳಿಗೆ ಪ್ರೊಪೋಸ್ ಮಾಡಿದ ವಿಷಯವನ್ನೂ ಸಹ ಅವಳು ನನ್ನ ಹತ್ತಿರ ಬಂದು ಹೇಳಿದ್ದಳು. ನಾನು ಅವಲ ಮೇಲೆ ಮೊದಲಿನಿಂದಲೂ ಎಲ್ಲವನ್ನೂ ನನ್ನ ಬಳಿ ಹೇಳುವ ಸ್ವಾತಂತ್ರ್ಯವನ್ನು ಕೊಟ್ಟಿದ್ದೇನೆ. ಬೆಳೆದಂತೆಲ್ಲ ನಾವು ಅಮ್ಮ-ಮಗಳು ಎನ್ನುವುದಕ್ಕಿಂತ ಜೀವಗೆಳತಿಯರು ಎನ್ನುವಂತಿದ್ದೆವು.  
    ನಾನೇ ಅವಳಿಗೆ “ಒಪ್ಪಿಕೊಂಡೆಯಾ?” ಎಂದಿದ್ದಕ್ಕೆ "ಇಲ್ಲಮ್ಮ, ಅವನು ನನ್ನ ಒಳ್ಳೆಯ ಫ಼್ರೆಂಡ್ ಅಷ್ಟೇ" ಎಂದಿದ್ದಳು. ಅದಾದ ನಂತರ ಅವಳ ನಡವಳಿಕೆಯಲ್ಲಿ, ಸಂತೋಷ್ ಜೊತೆ ಮಾತುಕತೆಯಲ್ಲಿ ಯಾವುದೇ ಬದಲಾವಣೆಯಿರಲಿಲ್ಲ. ಮತ್ತೆ ನನಗೆ ನನ್ನ ಮಗಳ ಮೇಲೆ ನಂಬಿಕೆ ಇದ್ದಿದ್ದದ್ದರೆ, ಏಕೆ ಕಳಿಸುತ್ತಿರಲಿಲ್ಲ. ಅವಳು ಎಲ್ಲೇ ಹೋಗಿ ಬಂದರೂ ಅವಳು ಅವಳಾಗಿಯೇ ಇರುತ್ತಾಳೆ ಎನ್ನುವುದು ನನಗೆ ಏಕೆ ಹೊಳೆಯಲಿಲ್ಲ.
     ಹುಡುಗರು ಜೊತೆಗಿದ್ದರಲ್ಲವೆ ಎಂದು ತಾನೇ ಈ ಪ್ರಶ್ನೆಗಳು. ಆದರೆ ಅದೇ ಗುಂಪಿನಲ್ಲಿ ಅವಳು ಇಲ್ಲೇ ಎಲ್ಲ ಕಡೆ ಓಡಾಡುವಾಗ ನಾನು ಸುಮ್ಮನಿಲ್ಲವೇ? ಹುಡುಗ ಹುಡುಗಿ ಪ್ರೀತಿಸುವುದು ತಪ್ಪು ಎಂದು ನನ್ನ ವಾದವೆಂದೇನೂ ಅಲ್ಲ, ಆದರೆ ಅದಕ್ಕೊಂದು ಸಮಯವಿದೆ ಎಂದು ನಾನು ಪ್ರೀತಿಗೆ ಹಲವಾರು ಬಾರಿ ಹೇಳಿದ್ದೇನೆ. ಅವಳಿಗದು ಅರ್ಥವಾಗಿದೆ. ಫ಼್ರೆಂಡ್ಸ್ ಗೆಲ್ಲ ಜೊತೆಯಿದೆ ಎಂದ ಮಾತ್ರಕ್ಕೆ ಇವಳೂ ಸಹ ಆ ರೀತಿ ಜೊತೆ ಬೇಕೆಂದೋ ಯಾರದ್ದೋ ಹಿಂದೆ ಹೋಗುವಂತಹ  ಹುಡುಗಿಯಲ್ಲ. ಒಂದು ದಿನದ ಟ್ರಿಪ್‍ಗೂ ಕಳಿಸಿರಲಿಲ್ಲವೇ. ಮತ್ತೆ 4-6 ದಿನ ಎಂದಾಗ ಹೊರಗಡೆ ಇರಬೇಕೆಂದಾಗ ಈ ವಾದವೇಕೆ? ನನ್ನ ಮಗಳು ಆ ರೀತಿ ಹೊರಗಡೆ ಹೋದ ಮಾತ್ರಕ್ಕೆ ಹಾದಿ ತಪ್ಪುತ್ತಾಳೆಯೇ? ನಾನು ಆ ರೀತಿ ಬೆಳೆಸಿದ್ದೀನಾ? ಅವಳ ವ್ಯಕ್ತಿತ್ವ ಅಂತಹುದೇ?
     ಜೊತೆಗೆ ಬರಿ ಹುಡುಗಿಯರೇ ಆಗಿದ್ದರೆ ಕಳಿಸುತ್ತಿರಲಿಲ್ಲವೇ? ಕ್ಲಾಸ್‍ನ ಎಲ್ಲ ಮಕ್ಕಳು ಹೋಗಿದ್ದರೆ ಕಳಿಸುತ್ತಿದ್ದೆನಲ್ಲ, ಮನ ಸಮರ್ಥಿಸಿಕೊಳ್ಳಲು ಪ್ರಯತ್ನಿಸಿತು. ಹುಡುಗರು ಹುಡುಗಿಯರು ಎಂಬ ಭೇದವೇಕೆ? ನನಗೇ ಒಬ್ಬ ಗಂಡು ಮಗನಿದ್ದರೆ ಹೀಗೆಯೇ ಹೇಳುತ್ತಿದ್ದೆನೆ. ಅವನ ಬಗ್ಗೆ ಇಡೀ ಜಗತ್ತಿಗೇ ನಂಬಿಕೆ ಬರುವಂತೆ ಬೆಳೆಸುತ್ತಿರಲಿಲ್ಲವೇ? ಮತ್ತೆ ಬೇರೆ ಮನೆಯ ಗಂಡು ಮಕ್ಕಳನ್ನು ಅನುಮಾನ ಪಡಲು ನನಗೆ ಅಧಿಕಾರ ಏನಿದೆ. ಎಲ್ಲ ಗಂಡು ಮಕ್ಕಳೂ ಸರಿಯಲ್ಲ, ಆದರೆ ಎಲ್ಲರೂ ಕೆಟ್ಟವರೂ ಅಲ್ಲ ತಾನೇ? ಎಷ್ಟೋ ಕಡೆ ಹುಡುಗಿ ಪ್ರೀತಿಸಲಿಲ್ಲ ಎಂದು ಅವಳಿಗೆ ಚಾಕು ಹಾಕಿದ ಎನ್ನುವಂತಹ ಸುದ್ದಿಯನ್ನೆಲ್ಲ ಕೇಳಿದ್ದೇನೆ. ಆದರೆ ಈ ಹುಡುಗ ಸಂತೋಷ್ ಯಾವತ್ತೂ ಅವಳೊಂದಿಗೆ ಕೆಟ್ಟದಾಗಿ ನಡೆದುಕೊಂಡಿಲ್ಲ. ಬದಲಿಗೆ ಏನೇ ಸಮಸ್ಯೆ ಬಂದರೂ ಸಹಾಯಕ್ಕೆ ಬರುತ್ತಾನೆ. ಮತ್ತೇಕೆ ನನಗೆ ಈ ಅನುಮಾನಗಳು. ತಪ್ಪು ದಾರಿ ತುಳಿಯುವ, ತುಳಿಯಲು ಪ್ರೇರೇಪಿಸುವ ಹೆಣ್ಣುಮಕ್ಕಳಿಲ್ಲವೇ? ಒಳ್ಳೆತನ, ಕೆಟ್ಟತನಕ್ಕೆ ಈ ಗಂಡು ಹೆಣ್ಣುಗಳ ವೇಷವೇಕೆ? ತರಗತಿಯ ಎಲ್ಲ ಮಕ್ಕಳು ಹೊಗಿದ್ದರೂ ಅಲ್ಲಿ ಇಂತಹ ಅಪಾಯಗಳು ಅಪಘಾತಗಳು ಇರುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ ಇದೆ. ಟೀಚರ್ಸ್‍ಗಳೊಂದಿಗೆ ಹೋದಾಗ, ಶಿಕ್ಷಕರೇ ಕೆಟ್ಟದಾಗಿ ವರ್ತಿಸಿದ ಎಷ್ಟೊಂದು ಘಟನೆಗಳಿಲ್ಲ.
     ಹುಡುಗನಾಗಿದ್ದರೆ ಕಳಿಸುತ್ತಿರಲಿಲ್ಲವೇ? ಮತ್ತೆ ಹುಡುಗಿಯಾಗಿದ್ದಕ್ಕೆ ಅವಳಿಗೆ ಈ ಶಿಕ್ಷೆಯೇ? ಜೀವನದ ಬಹಳ ಸುಖ ಸಂತೋಷಗಳನ್ನು ಅವಳು ಕೇವಲ ಹುಡುಗಿಯಾಗಿದ್ದಕ್ಕೆ ಕಳೆದುಕೊಳ್ಳಬೇಕೇ? ಮೊಟ್ಟಮೊದಲ ಬಾರಿಗೆ ನನಗೆ ನಾನು ನನ್ನ ಮಗಳ ವಿಷಯದಲ್ಲಿ ಎಂತಹ ದೊಡ್ಡ ತಪ್ಪು ಮಾಡಿದೆನೆನಿಸಿತು. ನನ್ನ ಬಗ್ಗೆ ನನಗೆ ಬೇಸರವೆನಿಸಿತು.
     ಅವಳ ವ್ಯಕ್ತಿತ್ವವನ್ನು ಗಟ್ಟಿಯಾಗಿ ರೂಪಿಸಿದ ಮೇಲೆ, ಸರಿ-ತಪ್ಪುಗಳ ವಿವೇಚನೆಯನ್ನು ಮಾಡಿ ನಿರ್ಧಾರ ಕೈಗೊಳ್ಳಬೇಕೆಂದು ಹೇಳಿಕೊಟ್ಟ ಮೇಲೆ, ಎಲ್ಲವನ್ನೂ ಅವಳು ನನ್ನ ಹತ್ತಿರ ಮುಕ್ತವಾಗಿ ಹಂಚಿಕೊಳ್ಳುತ್ತಿರುವಾಗ ಅವಳಲ್ಲಿ ನಾನು ಪೂರ್ಣ ನಂಬಿಕೆಯಿಡಬೇಕಿತ್ತು. ಜೀವನದಲ್ಲಿ ಎಲ್ಲ ಕ್ಷಣಗಳಲ್ಲಿಯೂ ನಾವು ಅವಳೊಂದಿಗೆ ಇರುತ್ತೇವೆಯೇ? ಇಲ್ಲವಲ್ಲ. ಮತ್ತೆ ಸರಿ ದಾರಿಯನ್ನು ತೋರಿಸಿದ ಮೇಲೆ ಅವರು ಅದೇ ದಾರಿಯಲ್ಲಿ ನಡೆಯುತ್ತಾರೆಂಬ ನಂಬಿಕೆ ಬೇಕಲ್ಲವೇ? ಒಂದು ವೇಳೆ ಆಕಸ್ಮಿಕವಾಗಿ ತಪ್ಪು ದಾರಿ ಹಿಡಿದರೂ, ಎಚ್ಚರಿಸಿದರೆ ಹಿಂತಿರುಗಿ ಬರುವುದಿಲ್ಲವೇ. ಅಡಿಪಾಯ ಭದ್ರವಾಗಿ ಹಾಕಿದ ಮೇಲೆ ಮನೆ ಬೀಳುವ ಸಾಧ್ಯತೆ ಇರುತ್ತದೆಯೇ? ಅವಳ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿದ್ದೇವೆ ಎಂದಾಗ ಅವಳಿಗೂ ಸಹ ಆ ಜವಾಬ್ದಾರಿ ಇರುತ್ತದಲ್ಲವೇ? ಜೊತೆಗೆ ಅವರ ಬದುಕು ಅವರ ಹೊಣೆಗಾರಿಕೆ ಎಂದು ತೋರಿಸಿಕೊಟ್ಟಾಗ ಅದು ಅವರನ್ನೆಂದೂ ದಾರಿ ತಪ್ಪದಂತೆ ಮಾರ್ಗದರ್ಶನ ನೀಡುತ್ತಿರುವುದಲ್ಲವೇ?
     ನಮ್ಮ ಬಗ್ಗೆ ಪ್ರೀತಿಗೆ ಪೂರ್ಣ ನಂಬಿಕೆಯಿದೆ. ಹಾಗಾಗಿಯೇ ಅವಳು ನಾವು ಹೇಳಿದ್ದನ್ನು ಪ್ರಶ್ನಿಸಿದರೂ, ಸರಿ ಎನಿಸಿದರೆ ಚಾಚೂ ತಪ್ಪದೆ ಅನುಸರಿಸುತ್ತಾಳೆ. ಅವಳಿಗೆ ಸರಿ-ತಪ್ಪಿನ ಅರಿವಿದೆ, ತನ್ನ ಬದುಕಿನ ಬಗ್ಗೆ ಕಾಳಜಿಯಿದೆ. ಯಾರೊಂದಿಗೂ ಕೆಟ್ಟದಾಗಿ ನಡೆದುಕೊಳ್ಳುವುದಿಲ್ಲ. ತನ್ನ ವ್ಯಕ್ತಿತ್ವಕ್ಕೆ ಕುಂದುಂಟು ಮಾಡಿಕೊಳ್ಳುವ ಕೆಲಸ ಅವಳೆಂದೂ ಮಾಡಿಕೊಳ್ಳಲಾರಳು. ಬದುಕನ್ನು ಅವಳೆಂದೂ ಅಸಡ್ಡೆಯಿಂದ ನೋಡಲಿಲ್ಲ. ಸಮಾಜಕ್ಕೆ ಉಪಯುಕ್ತವಾಗಿ ಬದುಕಬೇಕೆಂದುಕೊಳ್ಳುತ್ತಾಳೆ. ಸಾಧ್ಯವಾದಾಗಲೆಲ್ಲ ಇತರರಿಗೆ ನೆರವು ನೀಡುತ್ತಾಳೆ. ಅಂತಹವರು ಹಾದಿ ತಪ್ಪಲು ಸಾಧ್ಯವೇ? ಮತ್ತೇಕೆ ನನಗೆ ಅನವಶ್ಯಕವಾಗಿ ಈ ಭಯಗಳು. ಈ ಆತಂಕಗಳು. ನನ್ನ ಮಗಳ ವ್ಯಕ್ತಿತ್ವದ ಬಗ್ಗೆ ನನಗೆ ಬಹಳ ಹೆಮ್ಮೆ ಎನಿಸಿತು
     ಅವಳು ಕಾಲೇಜಿನಿಂದ ಮನೆಗೆ ಬಂದ ತಕ್ಷಣ “ನಿನ್ನ ಬಗ್ಗೆ ನನಗೆ ಸಂಪೂರ್ಣ ನಂಬಿಕೆಯಿದೆ ಇದೆ ಕಂದ, ಎಲ್ಲ ವಿಷಯಗಳಲ್ಲಿಯೂ, ಎಲ್ಲಾ ಸಮಯದಲ್ಲಿಯೂ” ಎಂದು ಹೇಳಬೇಕೆಂದು ತೀರ್ಮಾನಿಸಿದಾಗ ನನ್ನ ಮನಸ್ಸು ನಿರಾಳವಾಯಿತು.

POEM - 93 - ನಿಂತಲ್ಲೇ ನಿಲ್ಲುವುದೇಕೆ?

ನಿಂತಲ್ಲೇ ನಿಲ್ಲುವುದೇಕೆ?

ಎಲ್ಲಕ್ಕೂ ಹೀಗೆ ಜೋತು ಬೀಳುತ್ತೇವೇಕೆ?
ಪ್ರತಿಯೊಂದಕ್ಕೂ ಅಂಟಿಕೊಳ್ಳುತ್ತೇವೇಕೆ?
ಎಲ್ಲವ ಬಿಟ್ಟು ನಿರಾತಂಕವಾಗಿರಬಾರದೇಕೆ?
ಮನಸ ನೆಮ್ಮದಿಯಾಗಿಟ್ಟುಕೊಳ್ಳಬಾರದೇಕೆ?

ಆಸೆಗಳಿರಬೇಕು ನಿಜ ಜೀವನದಲ್ಲಿ
ಅವಿಲ್ಲದೆ ನಮ ಬದುಕಿಗೆ ಅರ್ಥವೆಲ್ಲಿ?
ಅವುಗಳ ಹಿಂದೆಯೇ ಬಿದ್ದರೆ ಬಾಳಿನಲ್ಲಿ
ನೋವಾಗುವುದು ಮುಂದೆ ಖಚಿತವಿಲ್ಲಿ.

ಸಂಬಂಧಗಳು ಬೇಕು ಬದುಕಿನಲ್ಲ್ಲಿ
ಸ್ನೇಹವಿಲ್ಲದೆ ಇರಲಾರೆವು ಸುಖದಲ್ಲಿ
ಆದರೆ ಅವೇ ಎಲ್ಲ ಅಲ್ಲ ಜೀವನದಲ್ಲಿ
ಸಾಧಿಸಬೇಕಿರುವುದು ಎಷ್ಟಿದೆ ಭೂಮಿಯಲ್ಲಿ!!

Wednesday, 30 March 2016

POEM - 92 - ವಿವೇಕಾನಂದರಿಗೊಂದು ಪ್ರಶ್ನೆ

ವಿವೇಕಾನಂದರಿಗೊಂದು ಪ್ರಶ್ನೆ

ಅರಿತುಕೊಂಡಿರುವೆವೆ 
ನಿಮ್ಮ ಮನದ ಮಾತನ್ನು
ನಿಜವಾಗಿ ನಾವು?
ಆಚರಿಸುತ್ತಿರುವೆವೆ
ನಿಮ್ಮ ಜಯಂತಿಯನ್ನು
ಸರಿಯಾಗಿ ನಾವು?

ಯುವಜನತೆಗೆ ಸಾರಿದಿರಿ
ಉಕ್ಕಿನ ನರಗಳು
ಕಬ್ಬಿಣದ ಸ್ನಾಯುಗಳು
ನಿಮ್ಮದಾಗಲೆಂದು
ಅದಕಾಗಿಯೇ ಹೋಗಿರಿ
ಫುಟ್ ಬಾಲ್ ಮೈದಾನಕೆಂದು.

ಬ್ರಿಟಿಷರ ದೌರ್ಜನ್ಯಗಳ
ಮೆಟ್ಟಿನಿಲ್ಲಬಹುದೆಂದು
ಪರಾಧೀನತೆಯಿಂದ
ಮುಕ್ತರಾಗಬಹುದೆಂದು
ರೂಪಿಸಿದಿರಿ ನೂರಾರು
ಕ್ರಾಂತಿಕಾರಿಗಳ ನೀವಂದು.

ರಾರಾಜಿಸುತ್ತಿವೆ ಎಲ್ಲೆಡೆ 
ನಿಮ್ಮ ಫೋಟೊಗಳಿಂದು
ಬಟ್ಟೆ, ಕಾರ್ ಗಳ ಮೇಲೆ
ಹಾಕಿಕೊಂಡು ಯುವಕರಿಂದು
ದೇಹಶಕ್ತಿ ನಶಿಸಿಕೊಂಡು
ಹೋಗುತಿಹರು ಬಾರ್ ಗೆಂದು.

ನೀವಂದು ಧಿಕ್ಕರಿಸಿದಿರಿ
ಹಸಿದ ಹೊಟ್ಟೆಗೆ ಅನ್ನ
ನೀಡದ ಧರ್ಮ ಬೇಡೆಂದು. 
ಧರ್ಮಸಂಕೇತವಾಗಿಸಿ
ನಿಮ್ಮನ್ನು, ಆಟವಾಡುತಿಹರು
ರಾಜಕಾರಣಿಗಳು ಇಂದು.

ಅಂದು ನೀವ್ ಸಾರಿದಿರಿ
ಎಲ್ಲ ಧರ್ಮಗಳ ತಿರುಳು
ಮಾನವತೆಯ ಉದ್ಧಾರ
ಧರ್ಮಗಳ ನಡುವೆ
ಹೊಡೆದಾಟ ಬೇಡೆಂದು
ಜನರ ಐಕ್ಯತೆಗಾಗಿ 
ದುಡಿದಿರಿ ನೀವಂದು.

ಮಾಡುತ್ತ ನಿಮ್ಮದೇ
ನಾಮಸ್ಮರಣೆಯನು
ಜನಗಳ ವಿಂಗಡಿಸುತಿಹರು
ಕೋಮುಗಳಾಗಿ ಇಂದು.
ಉದ್ರೇಕಿಸುತಿಹರು
ಬಡಿದಾಡಿಕೊಳಿರೆಂದು.

ನಿಮ್ಮ ನೆನಪಿನಲಿಂದು
ಎಲ್ಲೆಲ್ಲೂ ಫೋಟೋಗಳು
ಹಾರಗಳ ಹಾಕಿ
ಭಾಷಣದಲಿ ಮುಳುಗಿ
ದೇಶದ ಜನತೆಯ
ಹಾದಿ ತಪ್ಪಿಸುತಿಹರಿಂದು.

ದೇಶದೆಲ್ಲೆಡೆ ತುಂಬಿದೆ
ನೂರಾರು ಸಮಸ್ಯೆಗಳು
ಕೋಮುಗಲಭೆ,  ಜಾತೀಯತೆ
ನಿರುದ್ಯೋಗ,  ಅನಕ್ಷರತೆ,
ದೌರ್ಜನ್ಯ, ಬಡತನ
ಸ್ತ್ರೀಯರಿಗೆ ಅಪಮಾನ.

ಇದೇ ಏನು ನೀವು
ಕನಸು ಕಂಡ ಭಾರತ?
ಇಂತಹ ದೇಶಕೇನು
ಶ್ರಮಿಸಿದಿರಿ ಸಂತತ?
ಇದಕ್ಕಾಗಿಯೇ ಏನು
ದುಡಿದಿರಿ ಅನವರತ?

TRANSLATED POEM - 9 - ದೇವಾಲಯಕೆ ಹೋಗದಿರಿ ನೀವು

Go not to the temple  ~ by Rabindranath Tagore: 

Go not to the temple to put flowers upon the feet of God,
First fill your own house with the Fragrance of love and kindness. 

Go not to the temple to light candles before the altar of God,
First remove the darkness of sin , pride and ego, 
from your heart...

Go not to the temple to bow down your head in prayer,
First learn to bow in humility before your fellowmen.
And apologise to those you have wronged. 

Go not to the temple to pray on bended knees,
First bend down to lift someone who is down-trodden.
And strengthen the young ones.  
Not crush them.

Go not to the temple to ask for forgiveness for your sins,
First forgive from your heart those who have hurt  you!

ದೇವಾಲಯಕೆ  ಹೋಗದಿರಿ ನೀವು  

ದೇಗುಲಕೆ ಹೋಗದಿರಿ ನೀವು 
ದೇವರಿಗೆ ಹೂಗಳ ಸಮರ್ಪಿಸಲು,
ನಿಮ್ಮ ಮನೆಯಲ್ಲಿ
ಕರುಣೆ ಪ್ರೀತಿಯ ಸುಗಂಧವ
ತುಂಬಿರಿ ಮೊದಲು

ಗುಡಿಗೆ ಹೋಗದಿರಿ ನೀವು
ದೇವರ ಮುಂದೆ ದೀಪ ಹೊತ್ತಿಸಲು 
ನಿಮ್ಮ ಮನದಿಂದ
ಪಾಪ, ಅಹಂ, ಜಂಬದ 
ನಿಶೆಯ ತೊಲಗಿಸಿರಿ ಮೊದಲು

ದೇವಸ್ಥಾನಕೆ ಹೋಗದಿರಿ ನೀವು
ತಲೆ ಬಾಗಿಸಿ ಪ್ರಾರ್ಥಿಸಲು
ಕಲಿಯಿರಿ ಸಹಚರರ ಮುಂದೆ 
ವಿನಯದಿಂದ ತಲೆ ಬಾಗಲು
ನೀವು ತಪ್ಪೆಸಗಿರುವವರ 
ಕ್ಷಮೆ ಕೇಳಿರಿ ಮೊದಲು

ಮಂದಿರಕ್ಕೆ ಹೋಗದಿರಿ ನೀವು 
ಮೊಳಕಾಲೂರಿ ದೇವರ ಪ್ರಾರ್ಥಿಸಲು
ಬಾಗಿರಿ ತುಳಿತಕ್ಕೊಳಗಾದವರ ಮೇಲೆತ್ತಲು 
ಚಿಕ್ಕವರ ತುಳಿಯದೆ 
ಸದೃಢಗೊಳಿಸಿರಿ ಮೊದಲು

ದೇಗುಲಕ್ಕೆ ಹೋಗದಿರಿ ನೀವು
ಪಾಪಗಳಿಗೆ ಕ್ಷಮೆ ಯಾಚಿಸಲು
ತುಂಬು ಮನದಿ 
ನಿಮ್ಮ ನೋಯಿಸಿದವರ 
ಕ್ಷಮಿಸಿರಿ ಮೊದಲು
        - ಸುಧಾ ಜಿ

POEM - 91 - ಸಂಕ್ರಾಂತಿ


ಸಂಕ್ರಾಂತಿ 

ಎಳ್ಳು ಬೆಲ್ಲ
ಕಬ್ಬು ಕೊಬ್ಬರಿ
ಎಲ್ಲರಿಗೂ ಹಂಚುತ್ತಾ
ಒಳ್ಳೆಯ ಮಾತನಾಡುತ್ತಾ 
ಮುನಿಸು ದ್ವೇಷ
ಕೋಪ ಕದನ
ಪಕ್ಕಕ್ಕೆ ಸರಿಸುತ್ತ
ನಗುನಗುತ ಓಡಾಡುತ್ತ
ಸ್ನೇಹ ಪ್ರೀತಿ
ಮಾತು ಮಮತೆ
ಎಲ್ಲರಲು ಹರಡುತ್ತ
ಸಂಬಂಧವನು ಬೆಳೆಸುತ್ತಾ
ಈ ಸಂಕ್ರಾಂತಿಯನು 
ಆಚರಿಸುವ
ಅದರ ನಿಜ ಸಾರವನು 
ಪ್ರಚುರಿಸುವ.

POEM - 90 - ಚೌಪದಿಗಳು

ಚೌಪದಿಗಳು 

ಚೌಪದಿ - ೧
ಅಳೆಯಲಾದೀತೇ ದುಡ್ಡಿನಿಂದೆಲ್ಲವನು,
ಪ್ರೀತಿ,  ಸ್ನೇಹ, ವಾತ್ಸಲ್ಯವನು?
ಪಡೆಯಲಾದೀತೇ ಹಣದಿಂದೆಲ್ಲವನು?
ಮಮತೆ, ನಂಬಿಕೆ, ಸಾಂತ್ವನವನು?

ಚೌಪದಿ - ೨
ಶ್ರಮಸಂಸ್ಕೃತಿ ಅದ್ಭುತ
ಆಗುವನು ವ್ಯಕ್ತಿ ವಿನೀತ,
ಎಲ್ಲರ ಬೆಳವಣಿಗೆ ತ್ವರಿತ
ಸಮಾಜವಾಗುವುದು ಶ್ರೀಮಂತ

ಚೌಪದಿ - ೩

ಕಾಣುವುದು ಹಲ್ಲುಗಳೆಂದು
ಮುಖಮುಚ್ಚಿ ನಗುವೆಯೇಕೆ?
ನಿಷ್ಕಲ್ಮಶ ಮನದ ಭಾವ
ತೋರ್ಪಡಿಸಲು ಸಂಕೋಚವೇಕೆ? 

ಚೌಪದಿ - ೪
ಸಹಿಸಿಯೂ ಅಷ್ಟೆಲ್ಲಾ ಕಷ್ಟವನು ಗೆಳತಿ
ಉಳಿಸಿಕೊಂಡಿರುವರು ಹೇಗೆ ಜೀವನಪ್ರೀತಿ?
ವಿಸ್ಮಯವೇ ನನಗೆ ನಿನ್ನ ಬದುಕಿನ ರೀತಿ
ಅದಕೆ ನಿನ್ನ ಕಂಡರೆ ಅಷ್ಟೊಂದು ಪ್ರೀತಿ.

POEM 89 - ಗಣರಾಜ್ಯೋತ್ಸವ

ಗಣರಾಜ್ಯೋತ್ಸವ  

ಬ್ರಿಟಿಷರ ಅಧಿಪತ್ಯಕೆ
ಸಾಮ್ರಾಜ್ಯಶಾಹಿ ಆಡಳಿತಕೆ
ಮಹಾರಾಜರ ಪದ್ಧತಿಗೆ
ಅಂತ್ಯ ಹಾಡಿದ ದಿನವಿದು.

ಪ್ರಜೆಗಳೇ ಪ್ರಭುಗಳೆಂದು
ಸಂವಿಧಾನ ಶ್ರೇಷ್ಠವೆಂದು
ಜನ ಸಾರ್ವಭೌಮರೆಂದು
ಜಗಕೆ ಸಾರಿದ ದಿನವಿದು.

ವಂಶಾಧಿಕಾರ ಇಲ್ಲವೆಂದು
ಚುನಾವಣೆಯೇ ಮುಖ್ಯವೆಂದು
ಎಲ್ಲ ಸ್ಥಾನ ಎಲ್ಲರಿಗೆಂದು
ಘೋಷ ಎದ್ದ ದಿನವಿದು

ಎಲ್ಲರೂ ಸಮಾನರೆಂದು
ಜಾತಿ ಧರ್ಮ ಬೇಡವೆಂದು
ಎಲ್ಲರೂ ಸೋದರರೆಂದು
ಪ್ರಕಟಪಡಿಸಿದ ದಿನವಿದು

ಎಲ್ಲರೂ ಸ್ವತಂತ್ರರೆಂದು
ಆತ್ಮಗೌರವ ಉಂಟು ಎಂದು
ನ್ಯಾಯವೆಲ್ಲರ ಪಾಲೆಂದು
ಸಾರಿ ಹೇಳಿದ ದಿನವಿದು.

ದೇಶದ ಐಕ್ಯತೆಗೆಂದು
ಎಲ್ಲರ ಸಮೃದ್ಧಿಗೆಂದು
ಒಗ್ಗೂಡಿ ನಡೆಯೋಣವೆಂದು
ಕಂಕಣ ತೊಟ್ಟ ದಿನವಿದು.

ಎಲ್ಲ ಧೀರ ಯೋಧರಂದು
ಮಾಡಿದ ಬಲಿದಾನವಿಂದು
ನಾವು ನೆನಪಿಸಿಕೊಂಡು
ಸಾಗೋಣ ದೇಶ ಕಟ್ಟಲೆಂದು.

POEM - 88 - ಎದ್ದೇಳು ಗೆಳತಿ ಫೀನಿಕ್ಸ್ ಪಕ್ಷಿಯಂತೆ!

ಎದ್ದೇಳು ಗೆಳತಿ ಫೀನಿಕ್ಸ್ ಪಕ್ಷಿಯಂತೆ!

ಗೆಳತಿ ಹೇಳಿದೆ ನೀನು
ವಿವಾಹವಾದ ಮೇಲೆ
ಬದಲಿಸಿದೆ ಹೆಸರನ್ನು
ಮರೆತೆ ಗೆಳತಿಯರನ್ನು
ದೂರಸರಿಸಿದೆ ತಾಯ್ತಂದೆಯರನ್ನು
ತೊರೆದೆ ಆಸೆಆಕಾಂಕ್ಷೆಗಳನ್ನು
ಕಳೆದುಕೊಂಡೆ ಅಸ್ತಿತ್ವವನ್ನೇ ಎಂದು.

ಕೇಳುತ್ತಿರುವೆ ನಾ ಗೆಳತಿ
ಅನ್ಯಮಾರ್ಗವಿರಲಿಲ್ಲವೇ ಸಖಿ?

ಅಂಗೀಕರಿಸಿದೆ ಏಕೆ ಬದಲಿಸಲು ಹೆಸರ?
ಒಪ್ಪಿದೆ ಏಕೆ ಮರೆಯಲು ಗೆಳತಿಯರ?
ಅನುಮೋದಿಸಿದ್ದೇಕೆ ಸರಿಸಲು ಹೆತ್ತವರ?
ಸಮ್ಮತಿಸಿದ್ದೇಕೆ ತೊರೆಯಲು ಮನಸಿನಾಸೆಗಳ?
ಕಳೆದುಕೊಳ್ಳುತ್ತಿರುವಾಗ ಅಸ್ತಿತ್ವವನ್ನೇ
ಮೌನವಾಗಿ ತಳ್ಳಿದ್ದೇಕೆ ಭಾವನೆಗಳನ್ನೇ?

 ಗೆಳತಿ ಕಾಲ ಮಿಂಚಿಲ್ಲವಿನ್ನೂ
ಗೋರಿಗೆ ಕಾಲಿಡುವ ಮುನ್ನ
ಮತ್ತೆ ಎದ್ದುನಿಲ್ಲುವ ಅವಕಾಶವಿದೆ
ಇನ್ನೂ ಸಾಧಿಸಲು ಸಮಯವಿದೆ
ಉಳಿಸಿಕೊಳ್ಳಲು ಹೆಸರ
ಆರಿಸಿಕೊಳ್ಳಲು ಗೆಳತಿಯರ
ನೋಡಿಕೊಳ್ಳಲು ತಾಯ್ತಂದೆಯರ
ಕೈಗೊಳ್ಳಲೊಂದು ವೃತ್ತಿಯ
ಕೈಬಿಡದಿರಲು ಆಸೆಯ
ಮರು ಸ್ಥಾಪಿಸಲು ಮರೆತ ಅಸ್ತಿತ್ವವ
ಬೆಳೆಸಿಕೊಳ್ಳಲು ನಮ್ಮ ವ್ಯಕ್ತಿತ್ವವ

ಎದ್ದೇಳು ಗೆಳತಿ
ಫೀನಿಕ್ಸ್ ಪಕ್ಷಿಯಂತೆ!!

             

POEM - 87 - ಮಹಿಳಾ ದಿನದ ಆಚರಣೆ

ಮಹಿಳಾ ದಿನದ ಆಚರಣೆ 

ಮಹಿಳಾ ದಿನದಂದು
ಕೇಳಿದರು ನಮ್ಮನ್ನು
ನಿಮಗೇಕೆ ಈ ದಿನ?
ಶಿಕ್ಷಣವಿದೆ, ಉದ್ಯೋಗವಿದೆ
ಸುಖೀ ಕುಟುಂಬವಿದೆ
ಮತ್ತೇಕೆ ಈ ಆಚರಣೆ?
ಇನ್ನೇಕೆ ಈ ಪ್ರತಿಭಟನೆ?

ಉತ್ತರಿಸಿದಳು ಒಬ್ಬಾಕೆ
ನಮ್ಮೆಲ್ಲರ ಪ್ರತಿನಿಧಿಯಾಗಿ
ನಿಜ, ನೀವು ಹೇಳುತ್ತಿರುವುದು
ಅಕ್ಕರೆಯ ತಂದೆ ಕೊಡಿಸಿದ ಶಿಕ್ಷಣ
ಸ್ವಸಾಮರ್ಥ್ಯದಿಂದ ಪಡೆದ ಉದ್ಯೋಗ
ಪ್ರೀತಿಯಿಂದ ಗೌರವಿಸುವ ಸಂಗಾತಿ
ಮಮತೆದಿಂದ ಕಾಣುವ ಸ್ನೇಹಿತರು
ಎಲ್ಲವೂ, ಎಲ್ಲರೂ ಇದ್ದಾರೆ ನಿಜ;

ಆದರೂ ಸಮಾಜದಲ್ಲಿ ನಮಗೆ ನಿಜ ಸಮಾನತೆ ಇದೆಯೇ?
ನಾವೇ ನಿರ್ಧಾರಗಳನ್ನು ಕೈಗೊಳ್ಳುವ ಹಕ್ಕಿದೆಯೇ?
ಆಕಾಶಕ್ಕೇರುವ ಕನಸುಗಳ ನನಸಾಗಿಸಲು ಆಗಿದೆಯೇ?
ವಿಭಿನ್ನ ರಂಗಗಳಲ್ಲಿ ಸಾಮರ್ಥ್ಯ ತೋರಿಸುವ ಅವಕಾಶವಿದೆಯೇ?
ನಿರ್ಭಯವಾಗಿ ಹೊರಗಡೆ ಓಡಾಡುವ ವಾತಾವರಣವಿದೆಯೇ?
ಕಛೇರಿಯಲಿ ವಕ್ರನೋಟಗಳ ಹಾವಳಿಯಿಂದ ಮುಕ್ತಿಯಿದೆಯೇ?
ಬೀದಿಕಾಮಣ್ಣರ ಕಾಟದಿಂದ ವಿಮುಕ್ತಿಯಿದೆಯೇ? 

ಇಷ್ಟು ಮಾತ್ರವಲ್ಲ
ಈ ದಿನದ ಆಚರಣೆಗೆ
ಇದೆ ಇನ್ನೊಂದು ದೊಡ್ಡ ಕಾರಣ -

ನಮಗಿರುವುದೆಲ್ಲವೂ
ನಮ್ಮೆಲ್ಲ ಸೋದರಿಯರಿಗೆ ಸಿಕ್ಕಿದೆಯೇ?
ಶಿಕ್ಷಣ, ಕೆಲಸ, ಸ್ಥಾನಮಾನ ದೊರೆತಿದೆಯೇ?
ಕುಡುಕ ಗಂಡನಿಂದ, ಅವನ ಹೊಡೆತಗಳಿಂದ ಮುಕ್ತಿ ಪಡೆದಿರುವಳೇ?
ಕೌಟುಂಬಿಕ ಹಿಂಸೆ, ವರದಕ್ಷಿಣೆ ಸಾವು ನಿಂತಿದೆಯೇ?
ಸಮಾನ ಕೆಲಸಕ್ಕೆ ಸಮಾನ ವೇತನ ಪಡೆಯುತಿಹಳೇ?
ತನ್ನ ದೇಹದ ಮೇಲೆ ಸಂಪೂರ್ಣ ಹಕ್ಕಿದೆಯೇ?
ಹೆಣ್ಣುಭ್ರೂಣವೆಂದಾಗ ಉಳಿಸಿಕೊಳ್ಳುವ ಅಧಿಕಾವಿದೆಯೇ?

ಅವರಿಗಾಗಿ ದನಿ ಎತ್ತದಿದ್ದರೆ
ನಮ್ಮ ಶಿಕ್ಷಣದ ಉಪಯೋಗವೇನು ?
ಅವರಿಗಿಲ್ಲದ್ದು ನಮಗೆ ದೊರೆತರೆ 
ಸಮಾಜಕ್ಕೆ ಪ್ರಯೋಜನವೇನು?
ಬೆಸೆದಿದೆ ನಮ್ಮೆಲ್ಲರ ಬಾಳು 
ಒಂದೇ ವಸ್ತ್ರದ ಎಳೆಗಳ ತೆರದಿ
ವಿಮುಕ್ತಿ ದೊರೆವುದು ಕೇಳು
ಎಲ್ಲರಿಗೂ, ಒಟ್ಟಿಗೆ, ಒಂದೇ ಸಮಯದಿ
ಬಟ್ಟೆಯ ಪ್ರತಿ ನೂಲು
ಗಟ್ಟಿಗೊಳ್ಳಲೇಬೇಕು 
ಅದುವರೆಗೂ ಹೋರಾಟ
ಸಾಗುತ್ತಿರಲೇಬೇಕು! !
             

POEM - 86 - ಇತಿಹಾಸದ ತಿರುಚುವಿಕೆ

ಇತಿಹಾಸದ ತಿರುಚುವಿಕೆ

ಮುಸಲ್ಮಾನರು ಯಾರು?
ಶತ್ರುಗಳಲ್ಲವೇ ಅವರು?
ಹೊರದೇಶದವರವರು
ಉಳಿದಿದ್ದಾರಿಲ್ಲೇಕೆ ಅವರು?
ನನ್ನ ಪ್ರಶ್ನೆ ಕೇಳಿದ
೧೦ ವರ್ಷದ ಕಂದ
ಏನು ಹೇಳಬೇಕು?
ಹೇಗೆ ಉತ್ತರಿಸಬೇಕು? 
ಮನ ಆಘಾತಕ್ಕೊಳಗಾಯಿತು
ಸುಧಾರಿಸಲು ಸಮಯವಾಯಿತು.
ಈ ಮಾತ ಹೇಳಿದವರು ಯಾರು?
ಇಂತಹುದು ತಲೆಗೆ ತುಂಬಿದವರಾರು?
ನಮ್ಮ ಸಮಾಜದ ಟೀಚರ್,
ದಂಗುಬಡಿಸಿತು ಬಂದ ಉತ್ತರ.
ದಾರಿ ತೋರಬೇಕಾದ ಗುರುವೇ
ಹಳಿ ತಪ್ಪಿಸುವುದು ತರವೇ? 

ಕಂದ ಹಮೀದಣ್ಣ ಅಣ್ಣನಲ್ಲವಾ? 
ಅಸ್ಲಾಂ ಚಾಚಾ ಪ್ರೀತಿಪಾತ್ರರಲ್ಲವಾ?
ಫಾತಿಮಾ ಚಾಚಿ ಬೇಡವಾ?
ಅಶ್ಫಾಕ್ ಜೊತೆ ಆಟವಾಡುವುದಿಲ್ಲವಾ?
ಅಯ್ಯೋ ಅವರೆಲ್ಲ ಬೇಕು ನನಗೆ
ಕೇಳುತ್ತಿರುವಿರಿ ಏಕೆ ಹೀಗೆ?
ನಾ ಕೇಳುತ್ತಿರುವುದು
ಮುಸಲ್ಮಾನರ ಬಗ್ಗೆ

ಕಂದ ಇವರೆಲ್ಲರೂ ಮುಸಲ್ಮಾನರೇ
ಆದರೆ ನಮ್ಮವರೇ ಅಲ್ಲವೇ?

ನನ್ನ ಜೊತೆ ದಿನನಿತ್ಯ ಆಟವಾಡುವ
ಅಶ್ಫಾಕ್ ಹೊರಗಿನವನು ಹೇಗೆ?
ಅಂಗಡಿಗೆ ಹೋದಾಗ ಮಿಠಾಯಿ ಕೊಡುವ 
ಕರೀಂ ಚಾಚಾ ಶತ್ರು ಹೇಗೆ?
ನನಗುಣಿಸುವ ಫಾತಿಮಾ ಚಾಚಿ
ದೂರದವಳು ಹೇಗೆ?
ಸೈಕಲ್ ಕಲಿಸಿದ ಹಮೀದಣ್ಣ
ಬೇರೆಯವನಾಗುವ ಹೇಗೆ?

ಹಾಗಾದರೆ ಇದೆಲ್ಲ ಏನಮ್ಮ?
ಹೀಗೆಲ್ಲ ಹೇಳುವರು ಏಕಮ್ಮ?

ಇತಿಹಾಸದ ತಿರುಚುವಿಕೆ ಬಗ್ಗೆ
ಏನೆಂದು ಹೇಳಲಿ ನಾ ಕಂದನಿಗೆ?
ದ್ವೇಷಪೂರ್ಣ ರಾಜಕೀಯ
ಅವನಿಗರ್ಥವಾಗುವುದು ಹೇಗೆ?
ಸಾಮರಸ್ಯ ಕದಕಿ
ಸಂಬಂಧ ಹೊಸಕಿ  
ನಂಬಿಕೆಯ ಹದಗೆಡಿಸಿ
ಸುಂದರ ಬಾಳ ನಶಿಸಿ
ಜನರ ಗೋರಿಗಳ ಮೇಲೆ
ಮಹಲು ಕಟ್ಟುತ್ತಿರುವವರ 
ಧರ್ಮದ ಹೆಸರಿನಲಿ
ಕಲಹಗಳ ಹುಟ್ಟಿಸುತಿರುವರ
ನೀಚತನ ತಿಳಿಸುವುದು ಹೇಗೆ?
ದುಷ್ಟತೆಯ ಅರಿವಾಗಿಸುವುದು ಹೇಗೆ?

ಕಂದ ತಿಳಿಯುವುದು ಎಲ್ಲ
ನೀ ಸ್ವಲ್ಪ ದೊಡ್ಡವನಾದ ಮೇಲೆ
ಕೋಮುದ್ವೇಷದ ಹಿಂದಿರುವೆಲ್ಲ
ನಿಜಕಾರಣಗಳ ಸರಮಾಲೆ 

ದೂಡು ಧರ್ಮಜಾತಿಗಳೆಲ್ಲವ ಪಕ್ಕಕ್ಕೆ 
ತಲೆಬಾಗು ಸದಾ ನೀ ಸ್ನೇಹಕ್ಕೆ
ಬೆಲೆ ಬೇಡ ವ್ಯಕ್ತಿಯ ಜಾತಿಧರ್ಮಕ್ಕೆ
ಗೌರವ ನೀಡು ಅವರ ವ್ಯಕ್ತಿತ್ವಕ್ಕೆ

POEM 85 - ಮಾನವೀಯತೆ ಎಲ್ಲಿ?

ಮಾನವೀಯತೆ ಎಲ್ಲಿ?

ಜೋರಾದ ಸದ್ದು ಕೇಳಿಬಂದಿತ್ತು
ಆರ್ತನಾದ ಕಿವಿಗಪ್ಪಳಿಸಿತ್ತು 
ದನಿ ಬಂದೆಡೆ ಕಣ್ಣು ನೋಡಿತ್ತು
ಕಂಡ ದೃಶ್ಯ ಕರುಳ ಕಿವುಚುವಂತಿತ್ತು
ಲಾರಿಯೊಂದು ವ್ಯಕ್ತಿ ಮೇಲೆ ಹಾಯ್ದಿತ್ತು
ದೇಹ ಎರಡು ಭಾಗವಾಗಿತ್ತು
ವಿಚಿತ್ರವೆಂದರೆ ವ್ಯಕ್ತಿಯಲಿ ಜೀವವಿತ್ತು 
ರಕ್ತ ಸುರಿದರೂ ದನಿ ಮಾತನಾಡುತಿತ್ತು
ನೆರವಿಗಾಗಿ ಎಲ್ಲರ ಯಾಚಿಸುತಿತ್ತು
ದೀನವಾಗಿ ನೆರೆದವರ ಬೇಡುತಿತ್ತು
ನೆರೆದ ಜನ ಮೂಕಪ್ರೇಕ್ಷಕರಾಗಿತ್ತು
ನೆರವೀಯದ ಮನ ಕಲ್ಲಾಗಿತ್ತು 

ನನ್ನೊಳಗಿನ ಪತ್ರಕರ್ತ ಪ್ರಜ್ಞೆ ಎದ್ದಿತ್ತು
ಮರುದಿನದ ಸುದ್ದಿ ಕಣ್ಮುಂದೆ ಇತ್ತು 
ಬ್ಯಾಗಿನಿಂದ ಕ್ಯಾಮರಾ ಹೊರಬಂತು 
ವೀಡಿಯೊ ಚಿತ್ರೀಕರಣ ಆರಂಭವಾಯ್ತು
ವ್ಯಕ್ತಿಯ ನಿಕಟ ಚಹರೆ ಬೇಕೆನಿಸಿತು 
ಜೂಮ್ ಲೆನ್ಸ್ ಹಾಕಿ ತೆಗೆಯಲಾರಂಬಿಸಿತು 
ಸಾಯುತ್ತಿದ್ದ ವ್ಯಕ್ತಿ ಕರೆದಂತೆ ಭಾಸವಾಯ್ತು
ಕೊನೆ ಶಾಟ್ ತೆಗೆಯುವುದು ಥ್ರಿಲ್ ಎನಿಸಿತು
ಹತ್ತಿರಕೆ ಹೋದಾಗ ಆ ಜೀವ ಬೇಡಿತು
ಕೊನೆಯಾಸೆಯನು ಶೂಟ್ ಮಾಡೆಂದಿತು 
ನನ್ನ ಕಣ್ಣು, ದಾನ ಕೊಡುತೇನೆಂದಿತು

ಕೇಳುತ್ತಿದ್ದಂತೆ ಕ್ಯಾಮರಾ ಕೆಳಜಾರಿತು
ನಾಚಿಕೆಯಿಂದ ತಲೆ ತಗ್ಗಿತ್ತು 
ಕಣ್ಣಿಂದ ಕಂಬನಿ ಸುರಿಯತೊಡಗಿತು
ಅವನಲ್ಲಿದ್ದ  ಮಾನವೀಯತೆಯ ತಂತು 
ನನ್ನಲ್ಲಿ ಮರೆಯಾಯಿತೇಕೆ?  ಪ್ರಶ್ನೆ ಮೂಡಿತು!!

Monday, 14 March 2016

Translated Poem - 9 - ಜೀವಜಾಲ

ಜೀವಜಾಲ

ಇದು 150 ವರ್ಷಗಳ ಹಿಂದೆ, ರೆಡ್ ಇಂಡಿಯನ್‍ರಲ್ಲಿ ಬಹಳ ವಿವೇಕಿ ಮತ್ತು ಅಗಾಧವಾಗಿ ಗೌರವಿಸಲ್ಪಡುತ್ತಿದ್ದ ಮುಖ್ಯಸ್ಥ ಚೀಫ್  ಸಿಯಾಟೆಲ್ ವಾಷಿಂಗ್ಟನ್ ನಲ್ಲಿ ಸರ್ಕಾರ ಅವರ ಜಮೀನನ್ನು ಕೊಂಡುಕೊಳ್ಳಬೇಕೆಂದಾಗ ಸರ್ಕಾರವನ್ನು ಉದ್ದೇಶಿಸಿ ಮಾಡಿದ ಭಾಷಣ. ಪರಿಸರದ ಬಗ್ಗೆ ಮಾಡಿರುವ ಎಲ್ಲ ಭಾಷಣಗಳಲ್ಲಿ ಅತ್ಯಂತ ಸ್ಪಷ್ಟ, ಪರಿಣಾಮಕಾರಿಯಾದ ಭಾಷಣ ಎನಿಸಲ್ಪಟ್ಟಿದೆ.
ಇಂದು ಪರಿಸರದ ದಿನದಂದು ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಬಯಸಿ ಇದನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ.
ಭಾಷಣ ನಿಮ್ಮ ಮನಮುಟ್ಟಿದರೆ, ಆ ಕೀರ್ತಿ ಭಾಷಣಕಾರರಾದ ಚೀ¥sóï ಸಿಯಾಟೆಲ್‍ರವರಿಗೆ ಸೇರಬೇಕಾದದ್ದು. ಲೇಖನ ಚೆನ್ನಾಗಿಲ್ಲವೆನಿಸಿದರೆ ಅದು ಅನುವಾದಕರ ಸಂಪೂರ್ಣ ಹೊಣೆಯಾಗಿರುತ್ತದೆ. ಆದ್ದರಿಂದ ಇಂಗ್ಲಿಷ್, ಕನ್ನಡ ಎರಡನ್ನೂ ಕಳಿಸುತ್ತಿದ್ದೇನೆ.
ದಯವಿಟ್ಟು ತಮ್ಮ ಅಭಿಪ್ರಾಯ ಸಲಹೆಗಳನ್ನು ತಿಳಿಸಿ. ಉತ್ತಮವಾಗಿದೆ ಎನಿಸಿದರೆ ನಿಮ್ಮ ಸ್ನೇಹಿತರಿಗೆ ಕಳಿಸಿಕೊಡಿ.
ಅವರು ಹೇಳಿರುವಂತೆ, ನಮಗೆ ಸಾಧ್ಯವಾದಷ್ಟು ಮಟ್ಟಿಗೆ ಆಚರಿಸಿದರೆ ಈ ಪರಿಸರದ ದಿನ ಆಚರಣೆಗೆ ಅರ್ಥ ಬರುತ್ತದೆ.

ಜೀವಜಾಲ

ಆಕಾಶವನ್ಹೇಗೆ ಕೊಂಡುಕೊಳ್ಳುವಿರಿ? ಸಿಯಾಟೆಲ್ ಮುಖ್ಯಸ್ಥ ಆರಂಭಿಸಿದರು.
ಗಾಳಿ, ಮಳೆಯನ್ಹೇಗೆ ನಿಮ್ಮದಾಗಿಸಿಕೊಳ್ಳುವಿರಿ?

ಹೇಳಿದ್ದರು ಅಮ್ಮ ನನಗೆ,
ಈ ಭೂಮಿಯ ಪ್ರತಿಯೊಂದು ಭಾಗವೂ ನಮ್ಮವರಿಗೆ ಪವಿತ್ರವೆಂದು.
ಪ್ರತಿಯೊಂದು ಮರ, ಪ್ರತಿಯೊಂದು ಸಮುದ್ರ ತೀರ,
ಕಗ್ಗತ್ತಲ ಕಾಡಿನ ಪ್ರತಿ ಮಂಜು,
ಪ್ರತಿ ಹುಲ್ಲುಗಾವಲು ಮತ್ತು ಸುತ್ತ ಗುಂಯ್‍ಗುಡುವ ಕೀಟ,
ಎಲ್ಲವೂ ನನ್ನ ಜನರ ನೆನಪಿನಲ್ಲಿ ಪವಿತ್ರವೆಂದು.

ಅಪ್ಪ ಹೇಳಿದ್ದರು ನನಗೆ,
ಮರಗಳಲ್ಲಿ ಹರಿವ ಜೀವರಸದ ಬಗ್ಗೆ ಗೊತ್ತು ನನಗೆ,
ನನ್ನದೇ ರಕ್ತನಾಳಗಳಲ್ಲಿ ಹರಿವ ರಕ್ತದ ಅರಿವಿರುವಂತೆ.
ಭೂಮಿಯೊಳಗೊಂದು ಭಾಗ ನಾವು, ನಮ್ಮೊಳಗೊಂದು ಭಾಗವದು.
ಸುವಾಸನೆಭರಿತ ಹೂಗಳು ನಮ್ಮ  ಅಕ್ಕತಂಗಿಯರು
ಕರಡಿ ಜಿಂಕೆ, ಹದ್ದುಗಳು ನಮ್ಮ ಅಣ್ಣತಮ್ಮಂದಿರು.
ಕಲ್ಲು, ಕಣಿವೆ, ಹುಲ್ಲುಗಾವಲು,
ಕುದುರೆಮರಿಗಳು – ಎಲ್ಲವೂ ಒಂದೇ ಕುಟುಂಬದವರು.

ನನ್ನ ಪೂರ್ವಜರ ದನಿ ಹೇಳಿತು ನನಗೆ,
ತೊರೆಗಳಲ್ಲಿ, ನದಿಗಳಲ್ಲಿ ಹೊಳೆವ ಹರಿವ ನೀರು
ನೀರು ಮಾತ್ರವಲ್ಲವದು, ನಿನ್ನ ಮುತ್ತಾತನ ತಾತನ ರಕ್ತವೆಂದು.
ಸರೋವರಗಳ ಸ್ವಚ್ಛ ಜಲದಿ ಕಾಣುವ ಅಸ್ಪಷ್ಟ ಛಾಯೆ
ನಮ್ಮ ಜನರ ಜೀವನದ ನೆನಪುಗಳ ಸಾರುತ್ತವೆಂದು.

ನೀರಿನ ಝುಳುಝುಳು ನಿನ್ನ ಮುತ್ತಜ್ಜಿಯ ಅಜ್ಜಿಯ ದನಿಯೆಂದು,
ನದಿಗಳು ನಮ್ಮ ಸೋದರರೆಂದು, ನಮ್ಮ ದಾಹ ತಣಿಸುತ್ತವೆ
ನಮ್ಮ ದೋಣಿಗಳ ತೇಲಿಸುತ್ತವೆ, ಮಕ್ಕಳನ್ನು ಪೆÇೀಷಿಸುತ್ತವೆ.
ನಿನ್ನ ಸೋದರನಿಗೆ ನೀ ನೀಡುವ ಪ್ರೀತಿಯನ್ನೇ ನದಿಗಳಿಗೂ ನೀಡಬೇಕೆಂದು.

ನನ್ನಜ್ಜನ ದನಿ ಹೇಳಿತು ನನಗೆ
ಗಾಳಿ ಅತ್ಯಮೂಲ್ಯ, ತನ್ನ ಚೇತನವನ್ನದು, 
ಅದು ಬೆಂಬಲಿಸುವ ಎಲ್ಲ ಜೀವರಾಶಿಯೊಂದಿಗೆ ಹಂಚಿಕೊಳ್ಳುತ್ತದೆ.
ನಮಗೆ ಮೊದಲ ಉಸಿರನ್ನು ನೀಡುವ ಗಾಳಿಯೇ 
ನಮ್ಮ ಕೊನೆಯುಸಿರನ್ನೂ ಸ್ವೀಕರಿಸುತ್ತದೆ.
ಭೂಮಿ ಮತ್ತು ಗಾಳಿಯನ್ನು ದೂರವಿಡಬೇಕು, ಪವಿತ್ರವಾಗಿಡಬೇಕು,
ಹೂಗಿಡಗಳ ತೋಟದಿಂದ ಸಿಹಿಯಾಗಿರುವ
ಗಾಳಿಯ ಸವಿಯಲು ಹೋಗುವಂತಹ ಸ್ಥಳದಂತೆ.

ಕೊನೆಯ ರೆಡ್ ಸ್ತ್ರೀ-ಪುರುಷ ಮರೆಯಾದಾಗಲೂ,
ಅವರ ನೆನಪು ಕೇವಲ ಹುಲ್ಲುಗಾವಲನ್ನು ದಾಟುವ ಮೋಡಗಳ ನೆರಳಿನಂತಾದಾಗಲೂ, 
ಆಗಲೂ ಈ ತೀರಗಳು, ಕಾಡುಗಳು ಇನ್ನೂ ಇರುತ್ತವೆಯೇ?
ನನ್ನ ಜನರ ಚೇತನ ಇನ್ನೂ ಇರುತ್ತದೆಯೇ?
ನನ್ನ ಪೂರ್ವಜರು ಹೇಳಿದರು, ಇದು ನಮಗೆ ಗೊತ್ತು:
ಭೂಮಿ ನಮಗೆ ಸೇರಿದ್ದಲ್ಲ. ನಾವು ಭೂಮಿಗೆ ಸೇರಿದವರು.

ನನ್ನ ಅಜ್ಜಿಯ ದನಿ ಹೇಳಿತು,
ನಿನಗೆ ಕಲಿಸಿದ್ದನ್ನು ನಿನ್ನ ಮಕ್ಕಳಿಗೆ ಕಲಿಸು.
ಭೂಮಿ ನಮ್ಮ ತಾಯಿ.
ಭೂಮಿಗೆ ಏನಾಗುತ್ತದೋ ಅದು ಅವಳ ಮಕ್ಕಳಿಗೂ ಆಗುತ್ತದೆ.

ನನ್ನ ದನಿ ಕೇಳಿ ಮತ್ತು ನನ್ನ ಪೂರ್ವಜರ ದನಿ ಕೇಳಿ,
ಸಿಯಾಟೆಲ್ ಮುಖ್ಯಸ್ಥ ಹೇಳಿದರು:
ನಿಮ್ಮ ಜನರ ಹಣೆಬರಹ ನಮಗೆ ನಿಗೂಢ
ಎಲ್ಲಾ ಕಾಡೆಮ್ಮೆಗಳನ್ನು ಕಡಿದರೆ ಪರಿಣಾಮ ಏನಾಗುವುದು?
ಎಲ್ಲಾ ಕುದುರೆಗಳನ್ನು ಪಳಗಿಸಿದರೆ ಫಲಿತಾಂಶ ಏನಾಗುವುದು?
ಕಾಡಿನ ನಿಗೂಢ ಮೂಲೆಮೂಲೆಗಳಲ್ಲೂ ಮನುಷ್ಯನ ವಾಸನೆ
ಪಸರಿಸಿದರೆ ವಾತಾವರಣ ಏನಾಗುವುದು?

ಬೆಟ್ಟಗಳ ನೋಟ, ಮಾತನಾಡುವ ಕಂಬಿಗಳಿಂದ ಆವರಿಸಿದರೆ,
ಪೆÇದೆಗಳು ಎಲ್ಲಿರುತ್ತವೆ? ಹಾಳಾಗುತ್ತವೆ.
ಹದ್ದುಗಳು ಎಲ್ಲಿರುತ್ತವೆ? ಹಾರಿಹೋಗುತ್ತವೆ
ವೇಗವಾಗಿ ಓಡುವ ಮರಿಕುದುರೆ ಮತ್ತು ಬೇಟೆಗೆ
ವಿದಾಯ ಹೇಳಿದಾಗ ಏನಾಗುವುದು?
ಬದುಕಿನ ಅಂತ್ಯವದು, ಉಳಿವಿನ ಆರಂಭವದು.

ಇದು ನಮಗೆಲ್ಲ ಗೊತ್ತು: ನಮ್ಮ ರಕ್ತ ನಮ್ಮನ್ನು ಒಂದುಗೂಡಿಸಿದಂತೆ 
ಎಲ್ಲವೂ ಸಂಬಂಧಿತವೆಂದು ನಮಗೆ ಗೊತ್ತು.
ಜೀವಜಾಲವನ್ನು ನಾವು ನೂಲಲಿಲ್ಲ, 
ನಾವದರಲ್ಲೊಂದು ಎಳೆಯಷ್ಟೇ.
ಆ ಜಾಲಕ್ಕೆ ನಾವೇನು ಮಾಡುತ್ತೇವೋ, ಅದು ನಮಗೇ ನಾವು ಮಾಡಿಕೊಳ್ಳುತ್ತೇವೆ.

ಈ ಭೂಮಿಯನ್ನು ನಾವು ಪ್ರೀತಿಸುತ್ತೇವೆ, ನವಜಾತ ಶಿಶು ತನ್ನಮ್ಮನ ಎದೆಬಡಿತವನ್ನು ಪ್ರೀತಿಸುವಂತೆ.
ನಾವು ನಿಮಗೆ ಭೂಮಿಯನ್ನು ಮಾರಿದರೆ, ನಾವು ಜತನಗೊಳಿಸಿದಂತೆ ನೀವೂ ಕಾಳಜಿ ವಹಿಸಿ.
ನೀವು ಪಡೆದಾಗ ಈ ಭೂಮಿ ಹೇಗಿತ್ತು ಎಂಬುದ ನಿಮ್ಮ ಸ್ಮೃತಿಪಟಲದಿಂದ ಅಳಿಸದಿರಿ.

ಭೂಮಿ, ಗಾಳಿ, ನದಿಗಳನ್ನು ರಕ್ಷಿಸಿ, ನಿಮ್ಮ ಮಕ್ಕಳ ಮಕ್ಕಳಿಗಾಗಿ.
ಪ್ರೀತಿಸಿ ಅದನ್ನು, ನಾವದನ್ನು ಪ್ರೀತಿಸಿದಂತೆ.