ಪುಟ್ಕಥೆ - 71
ದೇವಸ್ಥಾನಕ್ಕೆ ಹೊರಟು ನಿಂತ ಗೆಳತಿಯನ್ನು ಆಕೆ ಕೇಳಿದಳು, "ನಾನ್ಹೆಚ್ಚೊ, ದೇವರು ಹೆಚ್ಚೊ?"
"ನೀನೇ ಹೆಚ್ಚು" ಆಸ್ಪತ್ರೆಯಲ್ಲಿಯೇ ಉಳಿದಳು ಗೆಳತಿ!!
ಬದುಕಿನಲ್ಲಿ ಸೋತು ಸುಣ್ಣವಾಗಿದ್ದ ದಂಪತಿಗಳು ಮಗುವೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ನದಿಯ ಬಳಿ ಹೋದರು.
8 ವರ್ಷದ ಮಗು ಕೇಳಿತು "ಬದುಕುವುದು ಅಷ್ಟು ಕಷ್ಟವೇನಮ್ಮ?"
ಈಗ ಆ ಮಗು ಮನಃಶಾಸ್ತ್ರಜ್ಞೆಯಾಗಿದೆ! !
ಪುಟ್ಕಥೆ - 73
ಅಮ್ಮನೇ ಸರ್ವಸ್ವ ಎಂದುಕೊಂಡವಳು ಇದ್ದಕಿದ್ದಂತೆ ಅಮ್ಮನನ್ನು ಕಳೆದುಕೊಂಡಳು.
"ದೇವರೇ ಅಮ್ಮನ ಬದಲು ನನ್ನೇಕೆ ಕರೆದೊಯ್ಯಲಿಲ್ಲ? " ಗೋಳಾಡಿದಳು.
ರಾತ್ರಿ ಕನಸಲ್ಲಿ ಬಂದ ಅಮ್ಮ ಕೇಳಿದಳು "ಆ ರೀತಿಯಾಗಿದ್ದರೆ ನನ್ನ ಪರಿಸ್ಥಿತಿ ಏನಾಗಿರುತ್ತಿತ್ತು, ಊಹಿಸಿರುವೆಯಾ ಕಂದ?!!"
ಪುಟ್ಕಥೆ - 74
ಬೆಳಗಿನಿಂದಲೂ ಕ್ಯಾನ್ಸರ್ ವಾರ್ಡ್ ನಲ್ಲಿದ್ದ ಎಲ್ಲರಿಗೂ ಸಾಂತ್ವನ ಹೇಳುತ್ತಿದ್ದ ಆಕೆಯ ಬಗ್ಗೆ ಎಲ್ಲರಿಗೂ ಗೌರವ ಮೂಡಿತು. ಒಬ್ಬಾಕೆ ಕೇಳಿಯೇ ಬಿಟ್ಟಳು, "ನೀವು ಹೊಸ ಡಾಕ್ಟರಾ?"
ನಗುತ್ತಾ ಉತ್ತರಿಸಿದಳಾಕೆ
"ಇಲ್ಲಮ್ಮ ನಾಳೆ ನನಗೆ ಬ್ರೆಸ್ಟ್ ಆಪರೇಷನ್ ಇದೆ!"
ಪುಟ್ಕಥೆ - 75
ಮುಕ್ಕಾದ ಆ ಶಿಲೆ ಶಿಲ್ಪಿಯನ್ನು ಕೇಳಿತು "ನನ್ನನ್ನು ಬಿಸುಟಿದ್ದು ಸರಿಯೇ?" "ಮುಕ್ಕಾದ ಮೇಲೆ ಉಪಯೋಗಿಸಲಾಗುವುದೆ?" ಪ್ರಶ್ನಿಸಿದ.
"ದೊಡ್ಡ ಶಿಲ್ಪವಾಗದಿರಬಹುದು, ಯಾವ ಶಿಲ್ಪವೂ ಆಗಲಾರೆನೆ?" ದೀನವಾಗಿ ಕೇಳಿತು.
ಕನಸಿನಿಂದ ಧಿಗ್ಗನೆಂದು ಕುಳಿತಳಾ ಶಿಕ್ಷಕಿ. ಹಿಂದಿನ ದಿನವೇ ಮಗುವೊಂದಕ್ಕೆ ಪಾಠ ಹೇಳಿಕೊಡಲು ನಿರಾಕರಿಸಿದ್ದಳು! !
ಪುಟ್ಕಥೆ - 76
"ಪ್ರೀತಿಗೆ ಇಷ್ಟೇಕೆ ಬರಗೆಟ್ಟು ಕುಳಿತಿರುವೆ?" ಕೇಳಿದಳಾಕೆ.
"ಬರಪೀಡಿತ ಭೂಮಿಯಲ್ಲಿ ಹಸಿರ ಚಿಗುರಿಸಲು ಸಾಧ್ಯವಾಗುವುದು ಮಳೆಗೆ ಮಾತ್ರವಲ್ಲವೇ?" ಉತ್ತರಿಸಿದಳೀಕೆ.
ಪುಟ್ಕಥೆ - 77
"ಸನ್ಮಾನ ಸ್ವೀಕರಿಸಿ ಜನರಿಂದ ದೂರವಾಗಬೇಡ ಎಂದಿದ್ದಾಳೆ ನನ್ನವ್ವ" ಸಾಧನೆಗೈದಿದ್ದ ಶಿಕ್ಷಕಿ ನಿರಾಕರಿಸಿದಳು. ಆಹ್ವಾನಿಸಿದ್ದವರು ಆಕೆಯ ಶಿಕ್ಷಕರು. "ಅವ್ವ ಹೆಚ್ಚೊ, ಗುರುಗಳು ಹೆಚ್ಚೊ?" ಇಕ್ಕಟ್ಟಿನ ಪ್ರಶ್ನೆ ಮುಂದಿಟ್ಟರು.
"ಗುರುವನ್ನು ತೋರಿದವಳು ಅವ್ವನೇ ಸರ್!"
ಪುಟ್ಕಥೆ - 78
"ಜನರಲ್ಲಿ ಎಷ್ಟೊಂದು ಮಾನವೀಯತೆ, ಬರೀ 500 ರೂಗಳ ನೋಟನ್ನೇ ಹಾಕಿದ್ದಾರೆ" ಕೇಳಿದೆ ಭಿಕ್ಷುಕನನ್ನು.
"ಸರ್, ಮಾನವೀಯತೆ ನನಗಿದೆ. ಊಟ ಇಲ್ಲದೆ 500 ರೂಪಾಯಿ ನೋಟು ಇಟ್ಕೊಂಡು ಪರದಾಡ್ತಾ ಇದ್ದರು. ನಾನು ಅವರಿಗೆ ಚಿಲ್ಲರೆ ಕೊಟ್ಟಿದ್ದೇನೆ!!"
ಪುಟ್ಕಥೆ - 79
"ಡಿಜಿಟಲ್ ಕಾರ್ಡ್ ಬಗ್ಗೆ ನಿಮ್ಮ ಅಭಿಪ್ರಾಯವೇನು?" ಪ್ರಶ್ನಿಸಿದ ಪತ್ರಕರ್ತ ಒಬ್ಬ ಹಿರಿಯರನ್ನು.
"ಗಂಜಿ ಕುಡಿಯೋನಿಗೆ ಮೀಸೆ ತಿರುವೋನೊಬ್ಬ ಅನ್ನೋ ಗಾದೆ ಕೇಳಿದ್ದೀಯಾ?" ಮರುಪ್ರಶ್ನಿಸಿದರಾತ!!
ಪುಟ್ಕಥೆ - 80
ಅಕ್ಕನ ಮಗಳು "ಚಿಕ್ಕಮ್ಮ ಅಕ್ಷರ ಬರೆದುಕೊಡಿ " ಸ್ಲೇಟ್ ಹಿಡಿದು ಬಂದಳು. ಮಾಡಿದ ತಪ್ಪನ್ನು ತಿದ್ದಿಕೊಳ್ಳುವುದು ಹೇಗೆಂದು ತಿಳಿಯದೆ ಕೊರಗುತ್ತಿದ್ದ ನಾನು ಅದೇ ಜ್ಞಾನದಲ್ಲಿ ತಪ್ಪು ಬರೆದೆ. "ಅಳಿಸಿಬಿಡಿ" ಎಂದಳು. "ಹೋಗುತ್ತಿಲ್ಲವಲ್ಲ?" ಎಂದಿದ್ದಕ್ಕೆ "ನೀರು ಹಾಕಿ ಚೆನ್ನಾಗಿ ಒರೆಸಬೇಕು ಚಿಕ್ಕಮ್ಮ, ಆಗ, ಅದು ಹೊಸ ಸ್ಲೇಟ್ ಆಗಿಬಿಡುತ್ತದೆ" ಸಮಸ್ಯೆಗೆ ಪರಿಹಾರ ನೀಡಿದಳು!!