ಮರಳಿ ಯತ್ನವ ಮಾಡು
ಮನದ ಈ ಬಯಕೆ
ಹಿಂಗದೇಕೆ
ನೋಡಬೇಕೆನುವ ಆಸೆ
ಮರೆಯಾಗದೇಕೆ?
ಸಿಗಲಾರೆ ನೀ, ತಿಳಿದರೂ
ಮನ ಒಪ್ಪುತ್ತಿಲ್ಲವೇಕೆ?
ಮರೀಚಿಕೆಯನು
ಕಾಣಬಯಸುತ್ತಿದೆಯೇ ಮನ?
ಬಿಸಿಲ್ಗುದುರೆಯನು
ಏರಬಯಸುತ್ತಿದೆಯೇ ಮನ?
ಗಾಳಿಗೋಪುರವ
ಹತ್ತಬಯಸುತ್ತಿದೆಯೇ ಮನ?
ಮರೀಚಿಕೆಯಲ್ಲವದು
ಓಯಸಿಸ್ ಎಂದು,
ಮರಳಿ ಯತ್ನಿಸುತಿರು
ದಾಹ ಹಿಂಗಿಸುತದೆಯೆಂದು;
ಬಿಸಿಲ್ಗುದುರೆಯಲ್ಲವದು
ನಿಜದ ಕುದುರೆಯೆಂದು
ಸೋಲನೊಪ್ಪದಿರು,
ಓಟಕ್ಕೆ ಜೊತೆಯಾಗುತ್ತದೆಂದು;
ಗಾಳಿಗೋಪುರವಲ್ಲವದು
ದಿಟದ ಗೋಪುರವೆಂದು,
ಹಿಂಜರಿಯದಿರು
ಆಕಾಶ ಮುಟ್ಟಬಹುದೆಂದು;
ಗೆಲುವು ಬಾಗಿಲಲಿದೆ
ಏರಲಿನ್ನೊಂದೇ ಮೆಟ್ಟಲಿದೆ
ಆಶಿಸಿದ್ದು ದೊರಕಲಿದೆ
ಮುಂದೆ ಸಾಗು, ನಿಲ್ಲದೆ
ಎಂದು ಮನ ಬೆನ್ನುತಟ್ಟುತ್ತಿದೆ.
No comments:
Post a Comment