Friday, 18 December 2015

POEM - 78 - ನಿಜ ಭಾರತೀಯರು

ನಿಜ ಭಾರತೀಯರು
ದೇಶದುದ್ದಕ್ಕೂ ನಡೆಯುತಿದೆ
ವಾದ ಅಸಹನೆಯ ಬಗ್ಗೆ
ಅಲ್ಲಿ ಚೆನ್ನೈನಲ್ಲಿ ಚಿಮ್ಮುತ್ತಿದೆ 
ಜನರ ಒಗ್ಗಟ್ಟಿನ ಬುಗ್ಗೆ.
ಎಲ್ಲೆಡೆ ಘರ್ಷಣೆಯಾಗುತ್ತಿದೆ
ಕೋಮುಕೋಮುಗಳಲ್ಲಿ
ಒಗ್ಗಟ್ಟಿನ ಸೆಣೆಸಾಟ ಸಾಗುತ್ತಿದೆ
ಅಲ್ಲಿ ನೀರಿನ ಮಧ್ಯದಲ್ಲಿ.
ಭಾರತದೆಲ್ಲೆಡೆ ಪ್ರಶ್ನಿಸಲಾಗುತ್ತಿದೆ
ವ್ಯಕ್ತಿಯ ಧರ್ಮವೇನೆಂದು
ನೀರನಾಡಲಿ ಕೇಳಲಾಗುತ್ತಿದೆ 
ಹಸಿವೆಯೆ ಅನ್ನ ಬೇಕೆ ಎಂದು
ನೀರಡಿಕೆಯೇ ಇಗೊ ಎಂದು
ದ್ವೇಷದ ವಿಷ ತುಂಬಲಾಗುತ್ತಿದೆ
ದೇಶದ ಜನರ ಮನಸಿನಲ್ಲಿ
ಧೈರ್ಯವ ಉಣಿಸಲಾಗುತ್ತಿದೆ 
ನೆರೆಯಲಿ ನೊಂದವರಲ್ಲಿ
ರಾಷ್ಟ್ರದೆಲ್ಲೆಡೆ ವಾದಿಸಲಾಗುತ್ತಿದೆ 
ಬೇಕು ಬೇರೆ ಗುಡಿ, ಬೇಕು ಬೇರೆ ಮಸೀದಿ
ಒಂದೇ ಸೂರಿನಡಿ ಸಾಗುತ್ತಿದೆ 
ಪೂಜೆ ನೀರ್ತುಂಬಿದ ನಾಡಲಿ

ಚೆನ್ನೈ ನಮಗೆ ತೋರಿಸಿದೆ
ಬೇರೆಯೆಂಬುದು ಒಣವಾದವೆಂದು 
ನಮ್ಮಲ್ಲಿಯೂ ಒಗ್ಗಟ್ಟಿದೆ
ನಾವು ನಿಜ ಭಾರತೀಯರೆಂದು.

Friday, 6 November 2015

POEM - 77 - ಸ್ನೇಹ

ಸ್ನೇಹ

ಸ್ನೇಹವೆಂಬ ಕಡಲಿನಲಿ
ಎನಿತೊ ಮುತ್ತುರತ್ನಗಳು
ಯಾವುದನು ಹೆಕ್ಕಲಿ
ಸಾಲುತಿಲ್ಲ ಕೈಗಳು.

ಇದರ ಬಣ್ಣ ನೋಡಲೇ
ಕಣ್ಣ ತಂಪ ಮಾಡಲು
ಅದರಾಕಾರ ಅಳೆಯಲೇ
ಮನಕೆ ಮುದವ ನೀಡಲು?

ಸಿಕ್ಕವೆಲ್ಲ ಹೆಕ್ಕಲೇ 
ಬಿಟ್ಟರೆ ಕಳೆವುದೇನೋ?
ಆದದ್ದೆಲ್ಲ ಆಯಲೇ
ಎಲ್ಲವೂ ಸಿಗದೇನೊ?

ಬಾಳದೋಣಿ ಪಯಣದಲಿ
ಎನಿತೊ ಗೆಳತಿಗೆಳೆಯರು,
ಕೊನೆಯವರೆಗೂ ಜೊತೆಯಲಿ
ಬರುವರೆಷ್ಟು ಸ್ನೇಹಿತರು?

POEM 78 - ನನ್ನೊಳಗೆ ಅವಳು

ನನ್ನೊಳಗೆ ಅವಳು

ಅವಳು ಹೊರಹೋಗುವವರೆಗೆ 
ತಿಳಿದಿರಲಿಲ್ಲ ನನಗೆ
ಅವಳನ್ನು ಇಷ್ಟೊಂದು
ಹಚ್ಚಿಕೊಂಡಿದ್ದೇನೆಂದು
ಅವಳಲ್ಲೇ ನನ್ನ ಜೀವವಿರಿಸಿದ್ದೇನೆಂದು ,
ಮೂಡಿತು ಪ್ರಶ್ನೆ ಆಗ
ನನ್ನ ದೇಹದೊಂದು ಭಾಗ
ನನ್ನ ಜೀವದ, ಜೀವನದ
ಭಾಗವಾದ್ದು ಯಾವಾಗ?
ಅವಳು ಒಡಲಿನಿಂದ
ಮಡಿಲಿಗೆ ಬಂದಾಗಿನಿಂದ
ಅವಳ ಜೊತೆಯಾಗಿ
ನಾನೂ ಬೆಳೆದೆ ತಾಯಾಗಿ
ಅವಳು ನಗುವಾಗ ನಕ್ಕೆ
ಅಳುವಾಗ ಅತ್ತೆ
ತುಂಟತನಕೆ ಕೋಪಿಸಿದೆ
ಮುಗ್ಧತೆಗೆ ಸೋತೆ
ಎಲ್ಲ ಮಕ್ಕಳಂತೆ ಅವಳಲ್ಲ
ಅವಳು ಕೇವಲ ಮಗಳಲ್ಲ
ಜೀವದ ಗೆಳತಿಯವಳು
ಜೀವನದ ಜೊತೆಗಾತಿಯವಳು
ಅವಳಿಲ್ಲದೆ ನಾನಿಲ್ಲ
ಎಂಬರಿವು ಇರಲಿಲ್ಲ
ಕ್ಯಾಂಪ್ ಎಂದವಳು ಹೋದಾಗ
ಎರಡು ದಿನದಿ ನನಗಾಗ 
ಗೊತ್ತಾಯ್ತು,  ಅರಿವಾಯ್ತು
ಮನದಟ್ಟಾಗಿ ಹೋಯ್ತು
ಅವಳಿಲ್ಲದೆ ನಾನೇನೂ ಅಲ್ಲ
ಅವಳಿದ್ದರೆ ನನ್ನ ಹಿಡಿಯುವವರೇ ಇಲ್ಲ!!

Thursday, 29 October 2015

POEM - 76 - ನೇಹ

ನೇಹ
ಬರುವಾಗ ಒಬ್ಬರೇ
ಹೋಗುವಾಗಲೂ ಒಬ್ಬರೇ
ಮಧ್ಯದಲಿ ಬೆಳೆಯುವ
ಮನಸ್ಸನ್ನು ಆವರಿಸುವ
ಬಾಂಧವ್ಯಗಳು, ನಂಟುಗಳು
ಸಂಬಂಧಗಳು, ಸ್ನೇಹಗಳು
ಬದುಕಲು ಪ್ರೇರಕ
ಸಂತೋಷಕೆ ಪೂರಕ.
ಜೀವನದಿ ಸೋತಾಗ
ಬೇಕು ಬಾಳಿಗೆ ಸ್ನೇಹ
ಮನ ಹತಾಶೆಗೊಂಡಾಗ
ಬೇಕು ಬೆನ್ತಟ್ಟುವ ಗೆಳೆತನ
ಕಷ್ಟಗಳು ಬಂದಾಗ
ಬೇಕು ಬಾಂಧವ್ಯಗಳು
ನೋವು ಮನೆಮಾಡಿದಾಗ
ಬೇಕು ಸಿಹಿಸಂಬಂಧಗಳು.
ಬದುಕಿನಲಿ ಅವಶ್ಯವೆಲ್ಲರೂ
ಅನಿವಾರ್ಯವಲ್ಲ ಯಾರೂ,
ಯಾರೋ ಇಲ್ಲದಿದ್ದರೆ 
ಬಾಳು ಬಡವಾಗಬಹುದು
ಮುಕ್ತಾಯವಾಗುವುದೇ ? 
ಯಾರೋ ಮರೆಯಾದರೆ
ಬದುಕು ಕಹಿಯಾಗಬಹುದು
ಕೊನೆಯಾಗುವುದೇ?
ಕೊನೆವರೆಗೂ ಬರುವ
ಸ್ನೇಹಗಳು ಎಷ್ಟೋ?
ಕಡೆವರೆಗೆ ಬರುವ
ಸಂಬಂಧಗಳೆಷ್ಟೋ?
ಉಸಿರಿರುವತನಕ
ಉಸಿರಾಗುವವರೆಷ್ಟೋ!
ಬಾಳಹಾದಿಯನು
ಹಸಿರಾಗಿಸುವವರೆಷ್ಟೋ!

POEM 75 - ಉಸಿರಾದ ಜೀವ

ಉಸಿರಾದ ಜೀವ
ಎದೆಯಾಳದಲಿ ಬಚ್ಚಿಟ್ಟ 
ನೋವುಗಳ ಬಯಲಾಗಿಸಲಾದರೆ 
ಮನದೊಳಗೆ  ಅಡಗಿಸಿಟ್ಟ
ವ್ಯಥೆಗಳ ಹೊರತೆಗೆಯಲಾದರೆ 
ಹೃದಯಾಂತರಾಳದಲಿ ಹುಗಿದಿಟ್ಟ
ಕಥೆಗಳ ಬಹಿರಂಗಗೊಳಿಸಲಾದರೆ
ನೋವು ಮರೆಯಾಗದೇ?
ಮನ ಹಗುರಾಗದೇ?
ಬಚ್ಚಿಟ್ಟ ಭಾವಗಳ
ಮುಚ್ಚಿಟ್ಟ ನೋವುಗಳ
ಬೈತಿಟ್ಟ ಕಥೆಗಳ
ಅವಿಸಿಟ್ಟ ವ್ಯಥೆಗಳ
ಹೇಳಲು ಧೈರ್ಯ ಬೇಕು
ಹೊರಬರಲು ಕೆಚ್ಚಿರಬೇಕು.
ಆದರೆ
ಅಗ್ನಿಪರ್ವತದಂತೆ ಸಿಡಿದು
ಹೊರಬರುವ ಲಾವಾರಸವ
ತಡೆಯುವ, ತಂಪನೆರೆಯುವ
ಹೃದಯವಂತ ಜೀವ ಬೇಕು.
ಒಡ್ಡುಗಳೆಲ್ಲವ ಒಡೆದು
ಭೋರ್ಗರೆಯುವ ಜಲರಾಶಿಯ
ಹಿಡಿಯುವ, ತಡೆಯೊಡ್ಡುವ
ಸಿರಿವಂತ ಹೃದಯ ಬೇಕು.
ಅಡೆತಡೆಗಳೆಲ್ಲವ ಮೀರಿ
ದಹಿಸುವ ಕಾಡ್ಗಿಚ್ಚನು
ನಿಲಿಸುವ, ಶಮನಗೊಳಿಸುವ
ಭಾವನಾತ್ಮಕ ಮನವು ಬೇಕು.
ಆ ಜೀವವೊಂದು ದೊರೆತಾಗ
ಬೆಂಬಲಕೆ ನಿಲುವಾಗ
ನೋವನ್ನು ನೀಗುವಾಗ 
ನಲಿವನ್ನು ನೀಡುವಾಗ
ಕಂಬನಿಯ ಒರೆಸುವಾಗ
ಸಂತಸವ ಸುರಿಸುವಾಗ
ವ್ಯಥೆಯನ್ನು ಮರೆಸುವಾಗ
ನೆಮ್ಮದಿಯ ಹರಿಸುವಾಗ
ಬದುಕಾಗದೇ ಸುಂದರ?
ಬಾಳಾಗದೇ ಬಂಧುರ?
ಜೇನಾಗದೇ ಜೀವನ?
ಸಿಹಿಯಾಗದೇ ಭಾವನ?
ಹಳತಾಗದೇ ಗೋಳು?
ಬೆಳಕಾಗದೇ ಬಾಳು?
ಮರೆಯಾಗದೇ ನೋವು?
ಉಸಿರಾಗದೆ ಆ ಜೀವವು?

POEM 74 - ವಿಶ್ವ ಸ್ನೇಹದ ದಿನ

ವಿಶ್ವ ಸ್ನೇಹದ ದಿನ

ಗೆದ್ದಾಗ ಆರತಿಯನೆತ್ತುವ
ಬಿದ್ದಾಗ ಬೆಂಬಲ ನೀಡುವ
ನಲಿವಲ್ಲಿ ಜೊತೆಗೂಡುವ
ನೋವಲ್ಲಿ ಕಂಬನಿ ಮಿಡಿಯುವ
ಸುಖದಲ್ಲಿ ಸಂತಸ ಪಡುವ
ಕಷ್ಟದಲಿ ಕೈ ಹಿಡಿಯುವ
ಉತ್ಸಾಹದಲಿ ಬೆನ್ತಟ್ಟುವ
ನಿರಾಶೆಯಲಿ ನೆರಳಾಗಿ ನಿಲ್ಲುವ
ಬೆಳಕಲ್ಲಿ ನಡೆಯಲು ಪ್ರೇರೇಪಿಸುವ
ಕತ್ತಲಲಿ ದೀಪವನು ಹಚ್ಚುವ
ಆರಕ್ಕೇರಿದಾಗ ಕರುಬದ
ಮೂರಕ್ಕಿಳಿದಾಗ ಕೈಬಿಡದ
ಅಪರೂಪದ ನೇಹ ನಮದಾಗಲೆಂದು
ಅಂತಹ ನೇಹಿಗರು ನಮಗಿರಲೆಂದು
ಆಶಿಸುವೆ ಈ ದಿನ
ವಿಶ್ವ ಸ್ನೇಹದ ದಿನ

POEM - 73 - ಸಂಬಂಧಗಳು

ಸಂಬಂಧಗಳು
ಒತ್ತಾಯದಿಂದ
ಸ್ನೇಹ ಬೆಳೆಯುವುದೇ?
ಬಲವಂತದಿಂದ 
ಮಮಕಾರ ಹುಟ್ಟುವುದೇ? 
ಒತ್ತಡದಿಂದ
ಪ್ರೀತಿ ಉಂಟಾಗುವುದೇ? 
ಆಗ್ರಹದಿಂದ
ಸಂಬಂಧ ಉತ್ತಮವಾಗುವುದೇ?
ಸ್ನೇಹ ಬೆಳೆಯಲು
ಬೇಕು ವಿಶ್ವಾಸ 
ಮಮತೆ ಹುಟ್ಟಲು
ಬೇಕು ಮಾನವತೆ
ಪ್ರೀತಿ ಉಂಟಾಗಲು
ಬೇಕು ಸಂಸ್ಕೃತಿ
ಸಂಬಂಧ ಸದೃಢವಾಗಲು
ಬೇಕು ಸ್ವಾತಂತ್ರ್ಯ .

POEM - 72 - ನೋಯದಿರು ಕಂದ


ನೋಯದಿರು ಕಂದ
ಯಾರದೋ ತಪ್ಪಿಗೆ
ನೀ ನೋಯುವುದೇಕೆ ಕಂದ?
ಯಾರದೋ ದೂಷಣೆಗೆ
ನೀ ಬೇಯುವುದೇಕೆ ಕಂದ?
ಉಪಕಾರವ ಸ್ಮರಿಸದಿಹ
ಜನರಿರುವರು
ಮಾಡಿದ್ದನ್ನು ಮರೆಯುವ
ಮನುಜರಿರುವರು
ಚುಚ್ವುನುಡಿಗಳಾಡುವ
ಮಂದಿಯಿರುವರು
ಬಿರುನುಡಿಗಳಾಡುವ
ಕಟುಕರಿರುವರು
ಸರಿಯೆನಿಸಿದರೆ ನಿನ್ನ ವರ್ತನೆ 
ಎದ್ದು ನಿಲ್ಲು ಅದಕಾಗಿ 
ಸತ್ಯವೆನಿಸಿದರೆ ನಿನ್ನ ಚಿಂತನೆ
ಹೋರಾಡು ನೀ ಏಕಾಂಗಿ
ಸತ್ಯವಿದೆ ನಿನ್ನ ಮನದಲ್ಲಿ
ನಗುವು ಇದೆ ಮುಖದಲ್ಲಿ
ದೃಢತೆ ಇದೆ ಮಾತಿನಲ್ಲಿ
ಸಂಕಲ್ಪವಿದೆ ನಡೆಯಲ್ಲಿ
ಬೇಕಿದೆ ಇನ್ನೇನು ಕಂದ
ನಡೆ  ನೀ ನೆಮ್ಮದಿಯಿಂದ. 

POEM 71 - ಸ್ವಾತಂತ್ರ್ಯೋತ್ಸವ

ಸ್ವಾತಂತ್ರ್ಯೋತ್ಸವ

ಒಂದು ದಿನ ಧ್ವಜವ
ಏರಿಸಿದರೆ ಸಾಕೆ?
ಇದೊಂದು ದಿನ ದೇಶವ
ಹಾಡಿ ಹೊಗಳಿದರೆ ಸಾಕೆ?
ಎಲ್ಲೆಲ್ಲೂ ತಳಿರುತೋರಣ
ಹಬ್ಬದ ವಾತಾವರಣ
ಬಾವುಟಗಳ ರಾರಾಜಿಸುವಿಕೆ
ಬಣ್ಣದ ಬಟ್ಟೆಗಳ ತೊಡುವಿಕೆ
ಸಿಹಿತಿಂಡಿಗಳ ಹಂಚಿಕೆ
ಭಾಷಣಗಳ ವಾಚಿಕೆ
ಮಕ್ಕಳ ನಾಟಕ ನೃತ್ಯಗಳು
ವಿದ್ಯಾರ್ಥಿಗಳ ಪೆರೇಡ್ ಗಳು
ಶಾಲೆಗೆ ರಜ
ಒಂದಷ್ಟು ಮಜ
ಸ್ವಾತಂತ್ರ್ಯೋತ್ಸವವೆಂದರೆ ಹೀಗೇನಾ?
ಲಕ್ಷಾಂತರ ಜನರ ತ್ಯಾಗಬಲಿದಾನದ
ಸ್ವಾತಂತ್ರ್ಯದಿನದಾಚರಣೆ ಇಷ್ಟೇನಾ?
ದಾಸ್ಯವಿರದ, ದಮನವಿರದ
ಹೀನ ಅಪಮಾನವಿರದ
ನೋವಿರದ, ಕಣ್ಣೀರಿರದ
ಜಾತಿಧರ್ಮ ಭೇದವಿರದ
ಸ್ವಾತಂತ್ರ್ಯ, ಸಮಾನತೆಯ
ಉದ್ಯೋಗ, ಸಾಕ್ಷರತೆಯ
ಸಮೃದ್ಧಿ , ಏಕತೆಯ
ನೆಮ್ಮದಿ, ಸೌಹಾರ್ದತೆಯ
ಹೊಸನಾಡಿನ ಕನಸ ಕಂಡರು
ಭವ್ಯಭಾರತದ ಆಶೆ ಹೊತ್ತರು
ನಮ್ಮ ಮಕ್ಕಳ ಓದಿಗಾಗಿ 
ಅವರು ಓದು ಬಿಟ್ಟರು
ನಮ್ಮ ಮುಕ್ತ ಬದುಕಿಗಾಗಿ
ಅವರು  ಕೆಲಸ ಬಿಟ್ಟರು
ನಮ್ಮ ಸ್ವಾತಂತ್ರ್ಯಕಾಗಿ
ಅವರು ಪ್ರಾಣ ಕೊಟ್ಟರು
ಹೊಸ ದೇಶದ ಕನಸಿಗಾಗಿ
ತಮ್ಮ ಕನಸ ಬಲಿಯಿತ್ತರು
ನಮ್ಮಯ ಸುಖಬಾಳಿಗಾಗಿ
ತನುಮನಧನ ತೆತ್ತುಬಿಟ್ಟರು
ಮನೆಮಠ ಆಸ್ತಿಪಾಸ್ತಿ
ಕಳೆದುಕೊಂಡರು 
ಲಾಠಿಏಟು ಗುಂಡಿನೇಟು
ಸಹಿಸಿಕೊಂಡರು
ಜೈಲು ಶಿಕ್ಷೆ ಗಡೀಪಾರು ಶಿಕ್ಷೆ,
ಅನುಭವಿಸಿಬಿಟ್ಟರು
ದಮನದೌರ್ಜನ್ಯಗಳ
ಎದುರಿಸಿಬಿಟ್ಟರು
ನೇಣುಗಂಬವನ್ನು ಸಹ
ನಗುತ ಏರಿಬಿಟ್ಟರು
ತಾವ್ ಕಂಡ ಕನಸಿಗಾಗಿ
ಕನಸಾಗಿ ಹೋದರು.
ಅವರ ಕನಸ ಸಾಕಾರಗೊಳಿಸುವುದೇ
ಅವರಿಗೆ ನಾವ್ ನೀಡುವ ನಿಜಗೌರವ
ಹೊಸ ನಾಡ ಕಟ್ಟಲು ಪಣತೊಡುವುದೇ
ನಿಜವಾದ ರೀತಿಯ ಸ್ವಾತಂತ್ರ್ಯೋತ್ಸವ.

POEM - 70 - ಒಂದು ಹೆಣ್ಣಿನ ವ್ಯಥೆ

ಒಂದು ಹೆಣ್ಣಿನ ವ್ಯಥೆ
ಮುಚ್ಚುಮರೆಯಿಲ್ಲದೆ
ಎಲ್ಲವನು ಬಿಚ್ಚಿಟ್ಟ ಮೇಲೇಯೂ 
ನನ್ನ ಮೇಲೆಯೇ ಸಂದೇಹವೇಕೆ?
ಈ ಅನುಮಾನಗಳೇಕೆ?
ಹೃದಯ  ಹಿಂಡುವಂತಹ
ನೋವುಗಳು ಮಿಥ್ಯವೇ?
ಅನುಭವಿಸಿದಂತಹ
ವೇದನೆ ಅಸತ್ಯವೇ?
ಮನಕೆ ಕೊಳ್ಳಿಯಿಟ್ಟಂತಹ 
ಸಂಕಟಗಳು ಅಸಹಜವೇ?
ಪ್ರಶ್ನೆಗಳು ಮೂಡಿದ್ದಾದರೂ
ಹೇಗೆ? ಏಕೆ?
ಚಿಕ್ಕಂದಿನಲಿ ಓದಿದ
ಅಜ್ಜಿ ವೇಷ ಧರಿಸಿ ಬಂದ
ತೋಳದ ಕಥೆ ನೆನಪಿಲ್ಲವೇ?
ಪದೇಪದೇ ಕಿವಿಗೆ ಬಿದ್ದ
ಸನ್ಯಾಸಿಯ ವೇಷ ತೊಟ್ಟು ಬಂದ
ರಾವಣನ ಕತೆ ನೆನಪಿಲ್ಲವೇ?
ಪತ್ರಿಕೆಗಳಲ್ಲಿ ದಿನವೂ ಓದಿದ
ತಂದೆ, ಅಣ್ಣನ ರೂಪ ಧರಿಸಿದ
ಗೋಮುಖವ್ಯಾಘ್ರರ ಕತೆ ನೆನಪಿಲ್ಲವೇ?
ಮುಖವಾಡ ಹೊತ್ತಂತವರ ಮುಂದೆ
ಮುಖವಾಡ ಕಳಚಿದವರ ನೋವು
ಕಾಣುವುದು ಕಡಿಮೆಯೇ?
ಈ ಕಾರಣಕ್ಕೆ ಇರಬಹುದು
ನಾವೆಲ್ಲರೂ ಮುಖವಾಡ ತೊಟ್ಟೇ
ಬದುಕುವುದು! !
ನೋವ ಹುದುಗಿಸಿ
ನಗುವ ಚೆಲ್ಲುತಾ
ಬದುಕಬಯಸುವುದು!!

POEM 69 - ಅಪೂರ್ಣತೆ

ಅಪೂರ್ಣತೆ
ಪ್ರತಿಬಾರಿಯೂ
ನಿನ್ನ ಭೇಟಿಯಾಗಿ ಬಂದಾಗ
ಏನೋ ಅಪೂರ್ಣತೆ
ಮನವ ಕಾಡುತ್ತದೇಕೆ?
ಅಶಾಂತಿ ಆವರಿಸುತ್ತದೇಕೆ?
ನಿನ್ನೊಂದಿಗೆ ಹೆಚ್ಚು ಕಾಲ
ಕಳೆಯಬೇಕೆನ್ನುವ
ಹಂಬಲವಿನ್ನೂ
ಮರೆಯಾಗಿಲ್ಲವೇಕೆ?
ದಿನ ನಿತ್ಯ ಮಾತಾಡಿದರೂ
ಘಂಟೆಗಟ್ಟಲೆ ಹರಟಿದರೂ
ಮುಗಿದಿಲ್ಲ ಮಾತೆಂಬ
ಭಾವ ಮೂಡುತ್ತದೇಕೆ?

ನಿಜ ನೀ ಹೇಳಿದಾ ಮಾತು
ಸಂದೇಹವಿಲ್ಲ ಇದಕೆ.
ಜೀವಂತ ಉಳಿವುದು
ನಮ್ಮ ಸಂಬಂಧ
ಅಪೂರ್ಣತೆಯ ಭಾವ
ಮನದಾಳದಿ ಉಳಿವವರೆಗೆ
.

POEM 68 - ಪುಟ್ಟಿಯ ಕೋಟು

ಪುಟ್ಟಿಯ ಕೋಟು 
     - ಸುಧಾ ಜಿ (ನನ್ನದೇ ಕಥೆ)
ಪುಟ್ಟಿಗೆಂದು ಅಪ್ಪನೊಂದು
ಕೋಟು ತಂದರು
ಅದನು ನೋಡುತಲೇ ಪುಟ್ಟಿ
ಖುಷಿಯ ಪಟ್ಟಳು.

ಶಾಲೆಗೊಂದು ದಿನ ಕೋಟು
ಧರಿಸಿ ಹೋದಳು
ಮಕ್ಕಳೆಲ್ಲ ಅದನು ಕಂಡು
ಭೇಷ್ ಎಂದರು.

ಪುಟ್ಟಿಗೋ ಅದರ ಜೊತೆಗೆ
ಬಂಧ ಬೆಳೆಯಿತು.
ಅವಳು ಎಲ್ಲೊ ಕೋಟು ಅಲ್ಲೆ
ಜೊತೆಗೆ ಉಳಿಯಿತು.

ಆಟ ಆಡುವಾಗಲವಳು
ತೆಗೆಯಲೊಲ್ಲಳು
ಮಲಗುವಾಗ ಕೂಡ ಕೋಟ
ಬಿಚ್ಚಲೊಲ್ಲಳು.

ಸ್ನಾನ ಮಾಡುವಾಗ ತೆಗೆದು
ಧರಿಸಿ ಬಿಡುವಳು
ಯಾವ ಬಟ್ಟೆ ಧರಿಸಿದರೂ
ಕೋಟ ಹಾಕ್ವಳು

ಒಗೆಯಲೆಂದು ಅಮ್ಮ ಅದನು
ಕೊಂಡು ಹೋದರೆ
ಅತ್ತು ಕರೆದು ಸಣ್ಣ ಮುತ್ತು
ಸುರಿಸಿ ಬಿಡುವಳು.

ಹಳೇದಾಯ್ತು, ಬಣ್ಣ ಹೋಯ್ತು
ಕೇಳಲೊಲ್ಲಳು
ಅಲ್ಲಿ ಇಲ್ಲಿ ತೂತು ಬಿತ್ತು
ತೆಗೆಯಲೊಲ್ಲಳು.

ಬೈದು ಅಮ್ಮ ಹೆದರಿಸಿದರು
ಬಗ್ಗಲೊಲ್ಲಳು
ಆಮಿಷ ಆಸೆಗಳಿಗೆ ಅವಳು
ಸಿಕ್ಕಲೊಲ್ಲಳು.

ಹೊಸ ಕೋಟು ಕೊಡುವೆನೆಂದ್ರು
ಜಗ್ಗಲೊಲ್ಲಳು
ಗೊಂಬೆ ಕೊಡುವೆನೆಂದ್ರು
ಅವಳು ಒಪ್ಪಲೊಲ್ಲಳು.

ಮೈಸೂರ್ಪಾಕ್ ಕೊಡುವೆನೆಂದ್ರೆ
ಒಪ್ಪಿಕೊಂಡಳು
ಎರಡೇ ನಿಮಿಷ, ಮತ್ತೆ ತಾನು
ಕೊಡೆನು ಎಂದಳು.

ಕಿತ್ತುಕೊಳಲು ಅಳುವಳಲ್ಲ
ಚಿಂತೆ ಅಮ್ಮಂಗೆ
ಕಸಿದುಕೊಂಡ್ರೆ ನೋಯ್ವಳಲ್ಲ
ನೋವು ಅಪ್ಪಂಗೆ.

ಒಂದು ದಿನ ನರ್ಸ್ ಆಂಟಿ
ಕೋಟು ತೆಗೆದರು
ಮಾಯ ಮಾಡಿ ಮಹಡಿ ಮೇಲೆ 
ಎಸೆದು ಬಿಟ್ಟರು.

ರಂಪ ಅಳುವು ಹಠವು ಎಲ್ಲ
ಶುರೂ ಆಯಿತು
ನಗುವು ಖುಷಿಯು ಅವಳ ಮೊಗದಿ
ಮಾಯವಾಯಿತು..

ನನಗೆ ನನ್ನ ಕೋಟು ಬೇಕು 
ಕೇಳಿಕೊಂಡಳು
ತಂದುಕೊಡಿರಿ ಎಂದೆಲ್ಲರ
ಬೇಡಿಕೊಂಡಳು.

ಸಿಗದು ಎಂದು ತಿಳಿದ ಮೇಲೆ
ಕಣ್ಣೀರಿಟ್ಟಳು
ದುಃಖಿಸುತ್ತ ಹಸಿವಿನಿಂದ
ಮಲಗಿಬಿಟ್ಟಳು.

ಪಕ್ಕದ್ಮನೆ ಆಂಟಿ ಹೃದಯ
ಕರಗಿಹೋಯಿತು
ಮೈಸೂರ್ ಪಾಕು ಆಗಲೇ
ಸಿದ್ಧವಾಯಿತು.

ಕಣ್ಣಿನಿಂದ ಹನಿಗಳೆಲ್ಲ
ಜಾರುತಿದ್ದವು
ಮೈಸೂರ್ ಪಾಕು ಚೂರುಗಳ
ಹೊಟ್ಟೆಗಿಳಿದಿತ್ತು

ಅತ್ತು ಅತ್ತು ಪುಟ್ಟಿ ಅಂದು
ನಿದ್ರೆ ಹೋದಳು
ಎದ್ದ ಕ್ಷಣ ಮತ್ತೆ ಅವಳು
ಕೋಟು ಕೇಳಿದ್ಳು.

ಅಪ್ಪ ಒಂದು ಹೊಸ ಕೋಟು
ತಂದು ಕೊಟ್ಟರು
ಹಳೆಯದನ್ನು ಮರೆತು ಪುಟ್ಟಿ
ಖುಷಿಯ ಪಟ್ಟಳು.
       

POEM 67 - ಒರತೆ

ಒರತೆ
ಪ್ರೀತಿಗಾಗಿ ಆಗ್ರಹಿಸಿದರೆ
ದೊರೆವುದೇನದು?
ಸ್ನೇಹಕಾಗಿ ಹಂಬಲಿಸಿದರೆ
ಸಿಗುವುದೇನದು?
ವಾತ್ಸಲ್ಯಕ್ಕಾಗಿ ಕೊರಗಿದರೆ
ಬರುವುದೇನದು?
ಮಮತೆಗಾಗಿ ಮರುಗಿದರೆ
ನಿಲುಕುವುದೇನದು?
ಸ್ನೇಹ, ಪ್ರೀತಿ, ಮಮತೆ
ಬರುವುದಿಲ್ಲ ಹಾಗೆಯೇ
ನೇಹ, ವಾತ್ಸಲ್ಯದೊರತೆ
ಇರಬೇಕು ನಮ್ಮಲ್ಲಿಯೇ
ಇದ್ದರದು ನಮ್ಮ ಜೊತೆ
ನೀಡಿದರೆ ಇತರರಿಗಾಗಿಯೇ
ತೋರದಾಗ ಪ್ರೀತಿ ಕೊರತೆ
ಸಿಗುವುದು ಸುಲಭವಾಗಿಯೇ

POEM 66 - ಚೇತನ

ಚೇತನ
ಗತಜೀವನದ
ಸಂಕಲೆಯ ಭಾರಕ್ಕೆ
ಕುಗ್ಗಿತ್ತು ಮನ
ಹಳೆಬಾಳಿನಾ
ಕಟ್ಟುಗಳ ವಜನಕ್ಕೆ
ಕುಸಿದಿತ್ತು ಮನ
ಹಿಂದಿನ ಬದುಕಿನ
ಸರಪಳಿಯ ತೂಕಕ್ಕೆ
ಜಗ್ಗಿತ್ತು ಮನ

ಅದಾವುದೋ ಘಳಿಗೆಯಲಿ
ಬಂದ ಚೇತನ
ನೀಡಿತ್ತು ಬಾಳಿಗೆ ಪುನಃಶ್ಚೇತನ
ಸಂಕಲೆಯ ಕಿತ್ತೆಸೆದು
ಸರಪಳಿಯ ಕಡಿದು
ವಜನವಾ ತೊಡೆದು
ಹಗುರಗೊಳಿಸಿತ್ತು ಮನವ
ನಿರಾಳಗೊಳಿಸಿತ್ತು ಭಾವವ
ಮುದಗೊಳಿಸಿತ್ತು ಜೀವವ
.

Thursday, 18 June 2015

CALENDAR ON GREAT PERSONALITIES OF INDIA - JUNE



THIS IS THE CALENDAR BROUGHT OUT ON GREAT PERSONALITIES OF INDIA
ACCORDING TO THEIR BIRTHDAYS


POEM 65 - ನೆನಪುಗಳು

ನೆನಪುಗಳು

ಕಾಡುತ್ತವೇಕೆ ನೆನಪುಗಳು
ದಿನನಿತ್ಯವೂ ನಮ್ಮ?
ಬಾಳಿನ ಜಂಜಡಗಳ ನಡುವೆ
ಮುತ್ತುತ್ತವೇಕೆ ಎಮ್ಮ?
ಕಾಡಿದರೆ ಕಾಡಲಿ ಬಿಡಿ ಎಂದು 
ಪಕ್ಕಕ್ಕೆ ಸರಿಸಲಾಗುತ್ತಿಲ್ಲವೇಕೆ?
ನೆನಪುಗಳಿರಬೇಕು,
ಅವಿಲ್ಲದೆ ಬದುಕಿಲ್ಲ.
ಬೇರಿಲ್ಲದೆ ಮರವಿರಲು ಸಾಧ್ಯವೇ?
ಕಹಿ ನೆನಪುಗಳ ಮರೆಯಬೇಕು
ಸಿಹಿ ನೆನಪ ಜತನವಾಗಿಡಬೇಕು.
ಮರೆಯಲಾರೆವು ನಿಜ
ನಡೆದ ಘಟನೆಗಳ,
ಮರೆಯಲಾರೆವೇ ಅದರ
ಜೊತೆಗಿನ ನೋವುಗಳ?
ಕಲಿಸುತ್ತದೆ ಪಾಠವ
ಕಹಿ ಅನುಭವವು
ತುಂಬುತ್ತದೆ ಉತ್ಸಾಹವ
ಸಿಹಿಯನುಭವವು.

POEM 64 - ಮಾತೃಮೂರ್ತಿಗೆ ನಮನಗಳು

ಮಾತೃಮೂರ್ತಿಗೆ ನಮನಗಳು

ಹೊತ್ತು ನಮ್ಮ, ನವಮಾಸಗಳು
ನಡೆದ ನಮ್ಮ ತಾಯಿಯ
ನವದಿನವಾದರೂ ಕೈಹಿಡಿದು
ನಡೆಸಲಾರೆವೆ ನಾವುಗಳು?

ಕೊಟ್ಟು ತನ್ನ ರಕ್ತಮಾಂಸಗಳು
ನಮ್ಮ ಬೆಳೆಸಿದ ಅಮ್ಮನ
ಕೆಲಕಾಲವಾದರೂ ಹಿತವಾಗಿ
ನೋಡಲಾರೆವೆ ನಾವುಗಳು?

ಸಹಿಸಿ ನೂರು ನೋವುಗಳು
ಜನ್ಮ ಕೊಟ್ಟ ಜನನಿಯ
ಹಲಕಾಲವಾದರೂ ಜತನವಾಗಿ
ಕಾಪಾಡಲಾರೆವೆ ನಾವುಗಳು?

ಮಾಡಿ ಎಲ್ಲ ತ್ಯಾಗಗಳು
ಓದಲು ಬೆನ್ತಟ್ಟಿದ ಮಾತೆಗೆ
ಕೂತು ಕಥೆಯೊಂದನು
ಓದಲಾರೆವೆ ನಾವುಗಳು?

ಸಹಿಸಿ ನೂರು ಹಸಿವುಗಳು
ನಮಗುಣಬಡಿಸಿದ ಅವ್ವನಿಗೆ
ತುತ್ತು ಅನ್ನವನ್ನಾದರೂ
ನೀಡಲಾರೆವೆ ನಾವುಗಳು?

ಎಷ್ಟೋ ಹಗಲುರಾತ್ರಿಗಳು
ನಿದ್ದೆಗೆಟ್ಟು ಸೇವೆಗೈದ ತಾಯಿಯ
ಸೇವೆಯನು ಕಿಂಚಿತ್ತಾದರೂ
ಮಾಡಲಾರೆವೆ ನಾವುಗಳು?

ನಮ್ಮ ಬಾಳಲಿ ತುಂಬಿ ನಗೆಗಳು
ನೋವನೆಲ್ಲ ನುಂಗುವ ಅಮ್ಮನ
ಬದುಕನ್ನು ಸುಗಮಗೊಳಿಸುವ
ಪಣ ತೊಡಲಾರೆವೆ ನಾವುಗಳು?

POEM 63 - ಒಗ್ಗಟ್ಟಿನಲ್ಲಿ ಬಲವಿದೆ

ಒಗ್ಗಟ್ಟಿನಲ್ಲಿ ಬಲವಿದೆ

"ಒಗ್ಗಟ್ಟಿನಲ್ಲಿ ಬಲವಿದೆ"
ಕೇಳುತ್ತಲೇ ಬಂದಿದ್ದೆ
ಈ ಮಾತ, ಚಿಕ್ಕಂದಿನಿಂದ. 

ಮನವರಕೆಯಾದದ್ದು
ನೆನ್ನೆ ಸಂಜೆಯಷ್ಟೇ,
ಕಂಡಾಗ ಕಾಲೇಜಿನ ಆವರಣದ
ದೈತ್ಯ ಮರ ಉರುಳಿದಾಗ ಧರೆಗೆ.
ಸುರಿದ ಧಾರಾಕಾರ ಮಳೆ
ಕುಂಟು ನೆಪವಾಯಿತಷ್ಟೇ.
ಉರುಳಿಸಿದ್ದು ನಿಜವಾಗಲೂ 
ಮರಕ್ಕತ್ತಿದ ಗೆದ್ದಲು.
ನೋಡಲವು ಸಣ್ಣ ಕೀಟಗಳು
ಲೆಕ್ಕಕ್ಕೇ ಬಾರದವು!
ಆದರವು ಗುಂಪುಗೂಡಿದಾಗ
ಒಟ್ಟಿಗೆ ರಾಶಿಗಟ್ಟಲೆಯಾದಾಗ 
ಹೆಮ್ಮರವ ಉರುಳಿಸಿದವು
ಸುನಾಯಾಸವಾಗಿ ಧರೆಗೆ.
ಒಂದು ದಿನದ ಸಾಧನೆಯಲ್ಲ
ಹಲವು ವರುಷಗಳಿರಬಹುದು,
ಛಲ ಬಿಡದ ತ್ರಿವಿಕ್ರಮರವರು
ಸಾಧಿಸಿ ತೋರಿಸಿಕೊಟ್ಟರು. 
ಮತ್ತೇಕೆ ನಾವು ನಮ್ಮನ್ನೇ 
ಅಸಹಾಯಕರೆಂದುಕೊಳುತ್ತೇವೆ?
ಒಬ್ಬಂಟಿಯಾಗಿ ಸಾಧಿಸಲಾರೆವೇನೋ,
ಆದರೆ, ಜಂಟಿಯಾಗಿ?

POEM 62 - ಬದುಕಿನ ತಿರುವುಗಳು

ಬದುಕಿನ ತಿರುವುಗಳು

ಹದಿಮೂರು ವರ್ಷ ನನಗಾಗ,
ಎಳೆ ಬಾಲೆಯು ನಾನಾಗ?
ಕಳಿಸಿದರು ನನ್ನನ್ನು 
ಕೊಟ್ಟು ಹೊಸ ಬದುಕನ್ನು 
ಗೊತ್ತಿಲ್ಲದ ಪ್ರಪಂಚಕ್ಕೆ
ಅಪರಿಚಿತ ವ್ಯಕ್ತಿಯೊಂದಿಗೆ
ಮದುವೆ ಎಂದರೇನು
ತಿಳಿದಿತ್ತೇನು ನನಗೆ?
ಮನೆ ಹೊಕ್ಕಾಗ ತಿಳಿಯಿತು 
ಎರಡನೆಯವಳು ನಾನೆಂದು.
ಹೇಳಿದರೆ ಅಪ್ಪಾಮ್ಮನಿಗೆ,
ಬೋಧಿಸಿದರು ನನಗೆ -
ಯಾರೂ ಆಗಿಲ್ಲವೇ,
ಎರಡನೇ ಮದುವೆ?
ಹೇಗೊ ಹೊಂದಿಕೊ
ಪತಿ ಪರಮೇಶ್ವರ ಅರಿತುಕೊ.
ಯತ್ನಿಸಿದೆ ಹಾಗೇ ಇರಲು
ಹೊಂದಿಕೊಂಡು ಬಾಳಲು.
ವಿವರಿಸಲಿ ಹೇಗೆ 
ನಾ ಪಟ್ಟ ಪಾಡ
ಅದು ನನ್ನ ವೈರಿಗೂ ಬೇಡ.
ಗಂಡನ ಹಿಂಸೆಯೊಂದು ಕಡೆ
ತೌರಿನ ತಾತ್ಸಾರ ಮತ್ತೊಂದೆಡೆ 
ಈ ರೀತಿ ಬದುಕುವ ಬದಲು
ಹೊರಟೆ ಸಾವಿಗೆ ಶರಣಾಗಲು.
ರೈಲು ಕಂಬಿಯ ಮೇಲೆ
ಮಲಗಬೇಕೆಂದುಕೊಂಡಾಗಲೇ
ಬದುಕಿನ ಆಸೆ ಕರೆದಿತ್ತು
ದೇಹ ರೈಲನ್ನು ಹತ್ತಿತ್ತು.
ಕಾಸಿಲ್ಲದೆ ಕೈಯಲ್ಲಿ
ಕನಸಿರದೆ ಬಾಳಿನಲಿ
ಹಸಿದ ಹೊಟ್ಟೆಯಲಿ
ಮಾಸಿದ ಬಟ್ಟೆಯಲಿ
ತಲುಪಿದ್ದೆ ಗೊತ್ತಿಲ್ಲದೂರಿಗೆ 
ಅಪರಿಚಿತರ ನಾಡಿಗೆ.
ಅವರಿವರ ಕಾಡಿಬೇಡುತ್ತಲೇ
ಹೊಟ್ಟೆ ತುಂಬಿಸುವಾಗಲೇ
ಬಂತೊಂದು ಜೋಡಿ
ಬೆಣ್ಣೆಮಾತಗಳಾಡಿ
ನನ್ನ ಮರುಳುಮಾಡಿ
ಒಯ್ದರು ತಮ್ಮ ಮನೆಗೆ
ಕಾದಿತ್ತಲ್ಲಿ ನರಕ ನನಗೆ 
ಬಿದ್ದಿದ್ದೆ ನಾ ಖಚಿತವಾಗಿ
ಬೆಂಕಿಯಿಂದ ಬಾಣಲೆಗೆ.
ಬಿಟ್ಟಿ ಚಾಕರಿ ಮಾಡುತ್ತಾ 
ತಂಗಳನ್ನವ ತಿನ್ನುತ್ತಾ 
ಹೊಡೆತ, ಬಡೆತ,  
ಅವಮಾನಕ್ಕೆ ಒಳಗಾಗುತ್ತಾ
ಇರಲಾರದೆ ಆ ನರಕದಲ್ಲಿ
ಮತ್ತೆ ನಿಂತೆ ಬೀದಿಯಲ್ಲಿ
ಹೋಗುವುದು ಎಲ್ಲಿ
ಪ್ರಶ್ನೆ ಮೂಡಿತು ಮನದಲ್ಲಿ.
ನಿಂತು ರೈಲು ನಿಲ್ದಾಣದಲ್ಲಿ
ಚಿಂತಿಸುತ್ತಿರುವಾಗ ಅಲ್ಲಿ
ಕಂಡರೋರ್ವ ಸಂತರು
ಹೊಸ ಬದುಕನ್ನು ಕೊಟ್ಟರು.
ದುಡಿವ ಕೈಗೆ ಕೊಟ್ಟು ಕೆಲಸ
ನೊಂದ ಮನಕೆ ನೀಡಿ ಹರುಷ 
ಉತ್ಸಾಹವ ತುಂಬಿದರು
ದಾರಿದೀಪವಾದರು.
ಬೆಳೆದೆ ನಾನು ಅಲ್ಲಿಂದ
ಬಾಳುತಿರುವೆ ಘನತೆಯಿಂದ
ನನ್ನಂತೆ ನೊಂದವರ
ಬಾಳಿನಲಿ ಬೆಂದವರ
ಕಂಬನಿಯ ಒರೆಸಲು
ಶ್ರಮಿಸುತಿರುವೆ ನಿತ್ಯವು.


POEM 61 - ಗೆಳೆತನ



ಗೆಳೆತನ

ಕಷ್ಟಸುಖಗಳ ಹಂಚಿಕೊಂಡೆ

ಬೆಳೆಯಿತವರಲಿ ಗೆಳೆತನ

ಜನರಿಗಚ್ಚರಿ ಅದನು ಕಂಡೆ

ಸ್ವಭಾವದಲ್ಲಿತ್ತು ಭಿನ್ನತನ


ಹುಟ್ಟಿದೆಲ್ಲೊ, ಬೆಳೆದುದೆಲ್ಲೊ

ಬಂದರವರು ಇಲ್ಲಿಗೆ

ಯಾರೋ ಏನೊ ಅರಿಯದು

ಸ್ನೇಹವಾಯ್ತು ಮೆಲ್ಲಗೆ


ಬೆಳೆಯಿತದು ದಿನವುದಿನವು

ಕೊಂಚಕೊಂಚವಾಗಿಯೇ

ದಿನವು ಹರಟೆ, ದಿನವು ನಗುವು

ಕಾಲ ಕಳೆಯಿತು ಹೀಗೆಯೇ


ಮುನಿಸು ಇತ್ತು ಜಗಳವಿತ್ತು

ಬರುತಲಿತ್ತು ತಪ್ಪರ್ಥವು

ಸ್ನೇಹ ಇತ್ತು ವಿಶ್ವಾಸವಿತ್ತು

ಮರೆಯಾಗುತಿತ್ತು ಎಲ್ಲವು


ಏಕೋ ಏನೋ ಒಂದಿನ

ಬಂದಿತೇನೊ ಅಪಾರ್ಥವು

ಜೋರು ಮಾತು ಆದಿನ

ಮರೆಯಾಯಿತಲ್ಲಿ ಸ್ನೇಹವು


ನಗುವು ಇಲ್ಲ ಖುಷಿಯು ಇಲ್ಲ

ಕವಿದಿದೆ ಬರಿ ಮೌನವು

ನಲಿವು ಇಲ್ಲ ಗೆಲುವು ಇಲ್ಲ

ಬದುಕಲ್ಹೇಗೆ ಸಾಧ್ಯವು ?


ಬಂಧಿಯಾಗೆ ನಾವುಗಳೆಲ್ಲ

ನಮ್ಮ ಅಹಂನ ಕೋಟೆಯಲಿ

ಕತ್ತಲಾಗದೆ ಬದುಕೆಲ್ಲ

ಬೆಳಕಿರುವುದೆ ಈ ಬಾಳಿನಲಿ?


ನಮ್ಮವರೆಂದು ಭಾವಿಸಿ ಅವರ

ಕ್ಷಮಿಸಬಾರದೆ ಒಂದೊಮ್ಮೆ

ಬಿಟ್ಟು ಅಹಂ, ನಾವವರ

ಮಾತಾಡಬಾರದೇ ಈಗೊಮ್ಮೆ?


ಮಾತಾನಾಡಿದರೆ ಮನಬಿಚ್ಚಿ

ಮರೆಯಾಗವೆ ಮನಸ್ತಾಪಗಳು?

ಚರ್ಚಿಸಿದರೆ ಸಿಹಿ ಲೇಪವ ಹಚ್ಚಿ

ಮೂಡದೆ ಮತ್ತೆ ಹೊಸ ಹಗಲು!


POEM 60 - ಸ್ಬಚ್ಛತೆ

ಸ್ಬಚ್ಛತೆ 
ಮನೆಯ ಮೂಲೆಗಳ
ಒಂದಿಂಚೂ ಬಿಡದೆ
ಗುಡಿಸಿ ಕಸವ ಹೊರಹಾಕುವ ನಾವು
ಮನದ ಕಸವ
ಸ್ವಚ್ಛಗೊಳಿಸದೆ 
ಭದ್ರವಾಗಿಟ್ಟುಕೊಳ್ಳುತ್ತೇವೇಕೆ?

ಪಾತ್ರೆ ಕರೆ ಕಟ್ಟಿದಾಗ 
ಹರಸಾಹಸ ಮಾಡಿ
ತಿಕ್ಕಿ ತೀಡಿ ಹೋಗಲಾಡಿಸುವ  ನಾವು
ಮನದ ಕರೆಗಳ
ಉಜ್ಜಿ ತೆಗೆಯದೆ
ಜಡ್ಡುಗಟ್ಟಲು ಬಿಡುತ್ತೇವೇಕೆ?

ಬಟ್ಟೆಯ ಕೊಳೆ ತೆಗೆದು
ಹೊಳೆವಂತೆ ಮಾಡಲು
ಭಿನ್ನ ಸೋಪುಗಳ ಬಳಸುವ ನಾವು
ಮನದ ಕೊಳೆಗಳ
ತೊಳೆದುಕೊಳ್ಳದೆ
ಹಾಗೆಯೇ ಉಳಿಸಿಕೊಳ್ಳುತ್ತೇವೇಕೆ?

ತಲೆತೊಳೆದು ಮೈ ಉಜ್ಜಿ
ದಿನವೂ ದೇಹವ
ಶುದ್ಧೀಕರಿಸುವ ನಾವು
ಮನದ ಕಲ್ಮಶಗಳ
ಕಳೆದುಕೊಳ್ಳದೆ
ಜೋಪಾನವಾಗಿಟ್ಟುಕೊಳ್ಳುತ್ತೇವೇಕೆ?

POEM 59 - ಮಾನವ ಹಕ್ಕು?

(ಸಂದರ್ಭ - ಇಂಡೊನೇಷ್ಯಾದಲ್ಲಿ ಮಾದಕದ್ರವ್ಯ ಜಾಲದ ಆರೋಪಿಗಳಿಗೆ ಗಲ್ಲುಶಿಕ್ಷೆ ಘೋಷಣೆಯಾದಾಗ)

ಮಾನವ ಹಕ್ಕು?
ಜೇಡ ಸುಂದರ ಬಲೆ ನೇಯ್ದು
ಬಲಿಯ ಆಕರ್ಷಿಸುವಂತೆ
ಡ್ರಗ್ಸ್ ಮಾಯಾಜಾಲದಲಿ
ಬರಸೆಳೆದಪ್ಪಿ ಜನರ
ನೂಕಿ ಮೃತ್ಯುಕೂಪದಲಿ 
ಆ ಅಮಾಯಕರ 
ಯುವಕರ ಬದುಕನ್ನು
ನರಕಮಯಗೊಳಿಸಿ
ಬಡಮಕ್ಕಳನು ಈ
ಅಸಹ್ಯ ದಂಧೆಗಿಳಿಸಿ
ಜನರ ಲೂಟಿ ಹೊಡೆದ
ನಾಲ್ವರು ನರಹಂತಕರಿಗೆ 
ನೀಡಲಾಗಿದೆ ಗಲ್ಲುಶಿಕ್ಷೆ
ನ್ಯಾಯಾಲಯದಲ್ಲಿ ಕೊನೆಗೂ.

ನೆಮ್ಮದಿಯ ನಿಟ್ಟುಸಿರಿಟ್ಟು
ನ್ಯಾಯಕ್ಕೆ ಗೆಲುವಾಯಿತೆಂದು
ಖುಷಿ ಪಡುವ ಸಮಯದಲಿ
ಕೇಳಿಬರುತ್ತಿದೆ ದನಿಯೊಂದು
ಈ ನರಹಂತಕರಿಗೆ
ಜೀವದಾನ ಮಾಡಿರೆಂದು,
ಜೀವ ತೆಗೆಯುವ ಹಕ್ಕು 
ನಮಗಿಲ್ಲವೆಂದು
ಇದು ಮಾನವ ಹಕ್ಕುಗಳ
ಉಲ್ಲಂಘನೆಯೆಂದು
ಬೊಬ್ಬಿಡುತ್ತಿದ್ದಾರೆ
ಗೋಗರೆಯುತ್ತಿದ್ದಾರೆ
ಮಾನವ ಹಕ್ಕುಗಳ ರಕ್ಷಕರೆಂದು
ಹಣೆಪಟ್ಟಿ ತೊಟ್ಟವರು ಇಂದು.

ನಿಜಕ್ಕೂ ಇದು
ಹಕ್ಕುಗಳ ಉಲ್ಲಂಘನೆಯೇ? 
ಜೀವದಾನ ಮಾಡುವುದು 
ನ್ಯಾಯಸಮ್ಮತವೇ?

ತಮ್ಮಯ ದುರಾಸೆಗಾಗಿ
ದೇಶವಿದೇಶಗಳಲ್ಲಿ
ಮುಗ್ಧ ಮಕ್ಕಳ
ಮಾರಣಹೋಮಗೈದ
ಸದೃಢ ಯುವಕರ
ಬಲಿತೆಗೆದುಕೊಂಡ
ಅಸಂಖ್ಯಾತ ಕುಟುಂಬಗಳು
ದಿನನಿತ್ಯ ಕಣ್ಣೀರಲಿ
ಕೈತೊಳೆವಂತೆ ಮಾಡಿದ
ಖೂಳರನು ರಕ್ಷಿಸುವುದು
ತರವೇ? ಸರಿಯೇ?

ಸಾವಿರಾರು ಜೀವಗಳ ತೆಗೆದ ಹಂತಕರಿಗೆ
ಜೀವದಾನ ಪಡೆಯುವ ಹಕ್ಕಿದೆಯೆ?!


POEM 58 - ಇತಿಹಾಸದ ಚಕ್ರ

ಇತಿಹಾಸದ ಚಕ್ರ 
ಇತಿಹಾಸದ ಚಕ್ರ
ತಿರುಗುತ್ತಿದೆ
ಇತಿಹಾಸ
ಮರುಕಳಿಸುತಿದೆ.

ಚಿಕ್ಕಂದಿನಲ್ಲಿ
ಅಮ್ಮ ಇದ್ದಾಗ 
ಅಡಿಗೆಮನೆಯಲ್ಲಿ
ಸ್ವಲ್ಪ ಹೊತ್ತು
ಕೇಳುತ್ತಿದ್ದೆವು ನಾವಂದು, 
ಎಷ್ಟೊತ್ತು ಬೇಕಮ್ಮ ಎಂದು.
ಇಂದು ನಾವಿಲ್ಲಿ
ಅಡಿಗೆಮನೆಯಲ್ಲಿದ್ದಾಗ
ಹೆಚ್ಚು ಹೊತ್ತು,
ಮಕ್ಕಳು ಕೇಳುವಾಗ
ಅನಿಸುತ್ತಿದೆ
ರಾಶಿ ಕೆಲಸಗಳು 
ಮುಗಿಯುತ್ತಲೇ ಇಲ್ಲವೆಂದು!

ಚಿಕ್ಕವರಿದ್ದಾಗ ಅಮ್ಮ
ನಮ್ಮ ತುಂಟಾಟಕ್ಕೆ
ಬೇಸತ್ತು ಗದರಿದರೆ
ಈ ಅಮ್ಮನಿಗೆ ನಾವು
ಅರ್ಥವಾಗುವುದೇ ಇಲ್ಲವೇ
ಎಂದು ಗೊಣಗಿದ್ದುಂಟು.
ಈಗ ಒಂದೇ ಮಗು
ಸ್ವಲ್ಪ ಹೇಳಿದ ಮಾತು
ಕೇಳದೇ ಹೋದರೆ
ಇದರೊಂದಿಗೆ
ಹೆಣಗುವುದು ಸಾಧ್ಯವೇ?
ವಟಗುಟ್ಟುವುದುಂಟು.

ಬಾಲ್ಯದಲಿ ನಾವು
ಓದದೇ ಇದ್ದಾಗ
ಅಮ್ಮ ಬುದ್ಧಿ ಹೇಳಿದಾಗ
ಇವರ ವರಾತ
ಯಾವಾಗಲೂ ಇದ್ದದ್ದೇ
ಎಂದು ಕೋಪಿಸಿದ್ದುಂಟು.
ಈಗ ಮಕ್ಕಳು
ಒಂದೆರಡು ಅಂಕಗಳು
ಕಡಿಮೆ ಪಡೆದರೂ
ಬೈದುಹೊಡೆದು
ಆಕಾಶ ಭೂಮಿಗಳ
ಒಂದು ಮಾಡುವುದುಂಟು .

ಭಿನ್ನತೆ ಇರುವುದಿದರಲ್ಲಿ

ಅವರಿಗೆ ಬದುಕು
ಸಂತಸದಿ ಸ್ವೀಕರಿಸಿ
ಯಶಸ್ವಿಯಾಗಿ 
ನಿಭಾಯಿಸಬಲ್ಲ
ಒಂದು ಜವಾಬ್ದಾರಿ.
ನಮಗಾದರೋ
ಅದೊಂದು 
ಭಾರವಾದ
ನೀರಸವಾದ
ಅನಿವಾರ್ಯ ದಾರಿ.


POEM 57 - ಇಂದಿನ ವಿದ್ಯಾರ್ಥಿಗಳು

ಇಂದಿನ ವಿದ್ಯಾರ್ಥಿಗಳು
ರಿಸಲ್ಟ್  ದಿನ ಅಳುವಿರಿ
ಎಲ್ಲರನ್ನು ತೆಗಳುವಿರಿ
ಎಲ್ಲೆ ಮೀರಿ ದೂರುವಿರಿ
ಜಗತ್ತನ್ನೇ ಖಂಡಿಸುವಿರಿ

ಕಡಿಮೆ ಅಂಕ ಬಂದಿತೆಂದು
ಇಷ್ಟು ಅಂಕ ಸಾಲದೆಂದು
ಫೇಲಾಗಿ ಕೂತೆನೆಂದು
ಮಾನ ಕಳೆದು ಹೋಯಿತೆಂದು

ಎಲ್ಲರ ದೂಷಿಸುವಿರಿ
ದೇವರ ಹಳಿಯುವಿರಿ
ಹಣೆಬರಹ ಎನ್ನುವಿರಿ
ಸುಮ್ಮನೇ ಕೊರಗುವಿರಿ

ಪಠ್ಯಕ್ರಮ ಸರಿಯಿಲ್ಲವೆಂದು
ಪಾಠ ಮಾಡಲಿಲ್ಲವೆಂದು
ಪ್ರಶ್ನೆಗಳೆ ಕ್ಲಿಷ್ಟವೆಂದು
ಸಮಯ ಸಾಲಲಿಲ್ಲವೆಂದು

ತಪ್ಪು ಹುಡುಕಲೊಲ್ಲಿರಿ
ಕಾರಣ ಅರಿಯಲೊಲ್ಲಿರಿ
ಬದಲಾಗಲು ಒಪ್ಪಲೊಲ್ಲಿರಿ
ಸರಿಯಾಗಿ ಓದಲೊಲ್ಲಿರಿ

ಟೀಕಿಸುತ್ತ ಎಲ್ಲರ ಇಂದು
ಸಾಧಿಸಿದ್ದೇನು ನೀವು ಎಂದು
ಕೇಳಬಯಸುವೆ ನಾನಿಂದು
ಉತ್ತರಿಸಿರಿ ನೀವ್ ಜಗಕಿಂದು.

POEM 56 - ನಿಲ್ಲುವುದೆಂದಿಗೆ?

ನಿಲ್ಲುವುದೆಂದಿಗೆ? 
ಅಂದು ಇಟಲಿಯ 
ಅಗೋರ
ಮತ್ತೆ ಇಂಗ್ಲೆಂಡ್ ನ 
ಜೋನ್ ಆಫ್ ಆರ್ಕ್
ಇಂದು ಮತ್ತೆ ಅಫ್ಘಾನಿಸ್ತಾನದ 
ಹೆಣ್ಣುಮಗಳು ಫರ್ಕುಂಡಾ,
ಧರ್ಮದ ಹೆಸರಿನಲ್ಲಿ
ಸ್ತ್ರೀಯರ ಮಾರಣಹೋಮ
ನಿಲ್ಲುವುದೆಂದಿಗೆ?

ಸತ್ಯವನ್ನು ಹೇಳಿದರೆ
ತಲೆದಂಡವೇ?
ಸತ್ಯವ ಪ್ರತಿಪಾದಿಸಿದ
ಜ್ಞಾನವ ಹರಡಿದ
ಅಗೋರಳಿಗೆ ದೊರೆತದ್ದು
ಅಪಮಾನಕರ ಸಾವು.

ಪುರುಷಪ್ರಧಾನ ಧೋರಣೆಯ
ಪ್ರಶ್ನಿಸಿದರೆ ಪಾಖಂಡಿ ಶಿಕ್ಷೆಯೇ?
ಪುರುಷನಂತೆ ರಣರಂಗದಲಿ
ಧೀರಳಾಗಿ ಹೋರಾಡಿದ 
ಜೋನ್ ಗೆ ಸಿಕ್ಕಿದ್ದು
ಬೆಂಕಿಯಲ್ಲಿ ಬೇಯುವಿಕೆ.

ಮೌಡ್ಯವ ವಿರೋಧಿಸಿದರೆ
ಮರಣದಂಡನೆಯೇ?
ಮೌಢ್ಯವ ಜನರಲ್ಲಿ
ತುಂಬುತ್ತಿರುವರ ವಿರೋಧಿಸಿದ
ಫರ್ಕುಂಡಾ ಪಡೆದದ್ದು
ಜೀವಂತ ದಹನ.

ಇದು ನಿಜದ ನ್ಯಾಯವೇ?
ಇದು ನಿಜದ ಧರ್ಮವೇ?

ಈ ಮಾರಣಹೋಮ
ನಿಲ್ಲುವುದೆಂದಿಗೆ?
ಸ್ತ್ರೀ ಸಮಾನತೆ
ಮೂಡುವುದೆಂದಿಗೆ?
ಸ್ತ್ರೀ ಸ್ವಾತಂತ್ರ್ಯ
ಬರುವುದೆಂದಿಗೆ?

POEM 55 - ಮೌನ

ಮೌನ 
ಮೌನ ಬಂಗಾರ ಮಾತು ಬೆಳ್ಳಿ
ಹೇಳಿದವರಾರೋ ನಾ ಕಾಣೆ?

ಮೌನ ಜಗಳವ ಸೃಷ್ಟಿಸದಿರಬಹುದು
ಸಾಮರಸ್ಯವ ಬೆಳೆಸುವುದೇ? 
ಸಮಸ್ಯೆಗಳನ್ನು ಹೆಚ್ಚಿಸದಿರಬಹುದು
ಪರಿಷ್ಕಾರ ನೀಡುವುದೇ?
ಸಂಬಂಧಗಳ ಹದಗೆಡಿಸದಿರಬಹುದು
ಉತ್ತಮಗೊಳಿಸುವುದೇ?
ಕೋಪವ ಜಾಸ್ತಿ ಮಾಡದಿರಬಹುದು
ಕಡಿಮೆ ಮಾಡುವುದೇ?
ದುಃಖವ ಉಂಟುಮಾಡದಿರಬಹುದು
ನಗುವ ಹರಡುವುದೇ?
ದ್ವೇಷವ ಬೆಳೆಸದಿರಬಹುದು, 
ಪ್ರೀತಿಯ ಸೃಜಿಸುವುದೇ?
ಹಗೆತನ ಹರಡದಿರಬಹುದು
ಸ್ನೇಹವ ಬೆಳೆಸುವುದೇ?

ಮೌನ ಬಂಗಾರ ಮಾತು ಬೆಳ್ಳಿ
ಹೇಳಿದವರಾರೋ ನಾ ಕಾಣೆ!!

POEM 52 - ನಿನಗಿದೊ, ನನದೊಂದು ನಮನ

ನಿನಗಿದೊ, ನನದೊಂದು ನಮನ
ಜೀವ ಕೊಟ್ಟ ತಾಯ್ತಂದೆಯರ
ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವ
ಅಂದು-ಇಂದೂ ಆರೈಕೆ 
ಮಾಡುತ್ತಿರುವ, ಮುದ್ದಿನ ಮಗಳೇ
ನಿನಗಿದೊ, ನನದೊಂದು ನಮನ

ಕೈಹಿಡಿದು ಪತಿಯೊಂದಿಗೆ
ಕೊನೆತನಕ ಜೊತೆಗಿರುವ
ಕಷ್ಟಸುಖಗಳ ಒಟ್ಟಾಗಿ ಅನುಭವಿಸುವ
ಛಲ ತೊಟ್ಟ ಸತಿಯೇ
ನಿನಗಿದೊ, ನನದೊಂದು ನಮನ

ಮುದ್ದಾದ ಮಗುವನ್ನು
ಮಮತೆಯಿಂದ ಬೆಳೆಸಿ
ಮಗಳಂತಲ್ಲದೇ ಗೆಳತಿಯಂತೆ
ದಾರಿ ತೋರುತ್ತಿರುವ ತಾಯೇ
ನಿನಗಿದೊ, ನನದೊಂದು ನಮನ

ಗೆಳೆತನದ ನಿಜ ಅರ್ಥ ಬಲ್ಲ
ಎಲ್ಲವ ಹಂಚಿಕೊಳ್ಳಬಲ್ಲ
ಯಾರೇನೇ ಅಂದರೂ ಸ್ನೇಹವ 
ನಿಭಾಯಿಸಬಲ್ಲ ಸಖಿಯೇ
ನಿನಗಿದೊ, ನನದೊಂದು ನಮನ

ಎಂತಹ ಸಮಯದಲೂ
ಮಾಸದ ನಗು ಹೊತ್ತು 
ಪಡೆದದ್ದಕ್ಕೆ ಪ್ರತಿಯಾಗಿ
ಸಮಾಜಕ್ಕೆ ಸೇವೆ ಸಲಿಸುತ್ತಿರುವ
ನಿನಗಿದೊ, ನನದೊಂದು ನಮನ

ಅಕ್ಕರೆಯ ಮಗಳಾಗಿ
ಒಲುಮೆಯ ಸತಿಯಾಗಿ
ಮಮತೆಯ ಮಾತೆಯಾಗಿ
ಆತ್ಮೀಯ ಗೆಳತಿಯಾಗಿ
ಸಮಾಜಮುಖಿಯಾಗಿರುವ
ನಿನಗಿದೊ, ನನದೊಂದು ನಮನ

Tuesday, 5 May 2015

POEM 54 - ವಯಸ್ಸಿನ ಅಂತರ

ವಯಸ್ಸಿನ ಅಂತರ

ವಯಸ್ಸಿನಲ್ಲಿ ಅಂತರವಿದ್ದರೆ
ಸ್ನೇಹಿತರಾಗಬಾರದೇ?
ಅಪ್ಪನ ಜೊತೆ ಮಕ್ಕಳು
ಗೆಳೆಯರಂತಿರಬಾರದೇ?
ಅಮ್ಮ ಮಕ್ಕಳ ಜೊತೆ
ಐಸ್ ಕ್ರೀಂ ತಿನ್ನಬಾರದೇ?
ವಯಸ್ಸಿನ ಅಂತರ
ನನಗೆಂದೂ ಅರ್ಥವಾಗಲೇ ಇಲ್ಲ.
ಮಗುವೊಂದಿಗೆ ಮಗುವಾಗಿ
ನಾನು ಬೆರೆಯಬಲ್ಲೆ,
ಹುಡುಗರೊಂದಿಗೆ ಸೇರಿ
ಗೋಲಿ ಆಡಬಲ್ಲೆ
ಹದಿಹರೆಯದವರೊಂದಿಗೆ
ಹರಟೆ ಹೊಡೆಯಬಲ್ಲೆ
ಓರಗೆಯವರೊಂದಿಗೆ
ಸಮಯ ಕಳೆಯಬಲ್ಲೆ
ಹಿರಿಯರ ಕಷ್ಟಸುಖ
ಕೇಳಿ ಸಂತೈಸಬಲ್ಲೆ.
ವೃದ್ಧರ ಜೊತೆ ಸೇರಿ
ಹಳೆ ಕಥೆಗಳ ಕೇಳಬಲ್ಲೆ
ಹಾಗಿದ್ದರೆ,
ವಯಸ್ಸಿನ ಅಂತರ,
ಅದೇನೆಂದು ಹೇಳುವಿರಾ?

ಯಾರಾದರೂ!

POEM - 53 - ಆಕಾಶಕ್ಕೆ ಏಣಿ ಹಾಕಬಾರದೇಕೆ?

ಆಕಾಶಕ್ಕೆ ಏಣಿ ಹಾಕಬಾರದೇಕೆ?

ಸಿಗದು ಎಂದು
ಗೊತ್ತಿದ್ದಾಗಲೂ
ಕೈಚಾಚುವುದು ತರವೇ?
ಎಟುಕದು ಎಂದು
ತಿಳಿದಾಗಲೂ
ಆಶಿಸುವುದು ಸರಿಯೇ?
ಆದರೂ ಮನ
ಯಾವಾಗಲೂ ಸಿಗದನ್ನೆ
ಹುಡುಕುತ್ತದೇಕೆ?
ಇರುವುದೆಲ್ಲವ ಬಿಟ್ಟು
ಇರದುದದೆಡೆಗೆ
ತುಡಿಯುತ್ತದೇಕೆ?
ಎಟುಕುವುದನ್ನೇ
ಆಶಿಸಬೇಕೇ, ಆಕಾಶಕ್ಕೆ
ಏಣಿ ಹಾಕಬಾರದೇಕೆ?
ಜೀವನದ ಸಾಧನೆಗೆ
ಇತಿಮಿತಿಯ ಚೌಕಟ್ಟನ್ನು
ನಿರ್ಮಿಸುವುದೇಕೆ?
ಸೋಲಿನ ಭಯವನ್ನು
ಮೂಡಿಸುತ ಮನಕೆ
ಹಿಂದೆ ದೂಡುವುದೇಕೆ?
ಕೆಳಗೆ ಬಿದ್ದರೂ ಸರಿಯೇ,
ಮತ್ತೆ ಎದ್ದು ನಿಲ್ಲೆಂದು
ಪ್ರೇರೇಪಿಸಬಾರದೇಕೆ?
ಬೂದಿಯಿಂದ ಮೇಲೆದ್ದ
ಫೀನಿಕ್ಸ್ ಪಕ್ಷಿಯಂತೆ
ಏಳೆಂದು ಹೇಳಬಾರದೇಕೆ?