ವಾತ್ಸಲ್ಯಕ್ಕೇಕೆ ಸಂಕೋಲೆ?
ಪ್ರೀತಿಗೇಕಿಷ್ಟು ಅಡ್ಡಿ
ನಾ ಮಾಡುತ್ತಿರುವೆ ?
ಮಮತೆಗೇಕಿಷ್ಟು
ಕಡಿವಾಣ ಹಾಕುತ್ತಿರುವೆ?
ವಾತ್ಸಲ್ಯಕ್ಕೆ ಬೇಡಿ
ತೊಡಿಸುತ್ತಿರುವೆನೇಕೆ?
ನಾ ಹೆತ್ತ ಶಿಶು
ಇತರರ ಪ್ರೀತಿಸಬಾರದೇ?
ನಾ ಬೆಳೆಸಿದ ಕೂಸು
ಇತರರ ಹಚ್ಚಿಕೊಳ್ಳಬಾರದೇ?
ನಾ ಸಾಕಿದ ಕಂದ
ನನ್ನೊಬ್ಬಳಿಗೆ ಮೀಸಲೆಂದೇ?
ನಾ ಬೆಳೆಸಿದ ಮಗು
ನನ್ನನ್ನೇ ನೋಡಿಕೊಳ್ಳಬೇಕೆಂದೇ?
ನಾ ಕೊಟ್ಟ ಪ್ರೀತಿ
ನನಗೇ ಸಿಗಬೇಕೆಂದೇ?
ಹಂಚಿಬಿಟ್ಟರೆ
ಖಾಲಿಯಾಗುತ್ತದೆಂದೇ?
ಇತರರ ಮೋಹದಲಿ
ನನ್ನ ಮರೆಯುತ್ತದೆಂದೇ?
ಇತರರ ಸ್ನೇಹದಲಿ
ನನ್ನ ಕೈಬಿಡುತ್ತದೆಂದೇ?
ಇತರರನ್ನೇ ತನ್ನವರೆಂದು
ಭಾವಿಸುವ ಕಂದ
ನನ್ನ ಮರೆಯುವುದೇ?
ಪರರ ಬಗ್ಗೆಯೂ
ಕಾಳಜಿ ವಹಿಸುವ ಕಂದ
ನನ್ನ ತೊರೆಯುವುದೇ?
ಇನ್ನೊಬ್ಬರ ಕಷ್ಟಕ್ಕೆ
ಮರುಗುವ ಕಂದ
ನನ್ನ ಸರಿಸುವುದೇ?
ವಿಶ್ವವೇ ನಿನದೆಂದು
ಹೇಳಹೊರಟಿರುವೆ
ಎಲ್ಲ ನಿನ್ನವರೆಂದು
ಸಾರಹೊರಟಿರುವೆ,
ಅಡ್ಡಿ ಪಡಿಸುವುದಿಲ್ಲ
ನೀ ಬಾರದಿರು ಹಿಂದೆ
ಬೇಡಿ ತೊಡಿಸುವುದಿಲ್ಲ
ಸಾಗಿ ಬಿಡು ಮುಂದೆ.
No comments:
Post a Comment