Sunday, 5 February 2017

ಪುಟ್ಕಥೆ - 71 -80


ಪುಟ್ಕಥೆ - 71
ದೇವಸ್ಥಾನಕ್ಕೆ ಹೊರಟು ನಿಂತ ಗೆಳತಿಯನ್ನು ಆಕೆ ಕೇಳಿದಳು, "ನಾನ್ಹೆಚ್ಚೊ, ದೇವರು ಹೆಚ್ಚೊ?"
"ನೀನೇ ಹೆಚ್ಚು" ಆಸ್ಪತ್ರೆಯಲ್ಲಿಯೇ ಉಳಿದಳು ಗೆಳತಿ!!

ಪುಟ್ಕಥೆ -  72
ಬದುಕಿನಲ್ಲಿ ಸೋತು ಸುಣ್ಣವಾಗಿದ್ದ ದಂಪತಿಗಳು ಮಗುವೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳಲು ನದಿಯ ಬಳಿ ಹೋದರು. 
8 ವರ್ಷದ ಮಗು ಕೇಳಿತು "ಬದುಕುವುದು ಅಷ್ಟು ಕಷ್ಟವೇನಮ್ಮ?" 
ಈಗ ಆ ಮಗು ಮನಃಶಾಸ್ತ್ರಜ್ಞೆಯಾಗಿದೆ! !

ಪುಟ್ಕಥೆ - 73
ಅಮ್ಮನೇ ಸರ್ವಸ್ವ ಎಂದುಕೊಂಡವಳು ಇದ್ದಕಿದ್ದಂತೆ ಅಮ್ಮನನ್ನು ಕಳೆದುಕೊಂಡಳು.
"ದೇವರೇ ಅಮ್ಮನ ಬದಲು ನನ್ನೇಕೆ ಕರೆದೊಯ್ಯಲಿಲ್ಲ? " ಗೋಳಾಡಿದಳು.
ರಾತ್ರಿ ಕನಸಲ್ಲಿ ಬಂದ ಅಮ್ಮ ಕೇಳಿದಳು "ಆ ರೀತಿಯಾಗಿದ್ದರೆ ನನ್ನ ಪರಿಸ್ಥಿತಿ ಏನಾಗಿರುತ್ತಿತ್ತು, ಊಹಿಸಿರುವೆಯಾ ಕಂದ?!!"

 ಪುಟ್ಕಥೆ - 74
ಬೆಳಗಿನಿಂದಲೂ ಕ್ಯಾನ್ಸರ್ ವಾರ್ಡ್ ನಲ್ಲಿದ್ದ ಎಲ್ಲರಿಗೂ ಸಾಂತ್ವನ ಹೇಳುತ್ತಿದ್ದ ಆಕೆಯ ಬಗ್ಗೆ ಎಲ್ಲರಿಗೂ ಗೌರವ ಮೂಡಿತು. ಒಬ್ಬಾಕೆ ಕೇಳಿಯೇ ಬಿಟ್ಟಳು, "ನೀವು ಹೊಸ ಡಾಕ್ಟರಾ?"
ನಗುತ್ತಾ ಉತ್ತರಿಸಿದಳಾಕೆ
"ಇಲ್ಲಮ್ಮ ನಾಳೆ ನನಗೆ ಬ್ರೆಸ್ಟ್ ಆಪರೇಷನ್ ಇದೆ!"

ಪುಟ್ಕಥೆ - 75
ಮುಕ್ಕಾದ ಆ ಶಿಲೆ ಶಿಲ್ಪಿಯನ್ನು ಕೇಳಿತು  "ನನ್ನನ್ನು ಬಿಸುಟಿದ್ದು ಸರಿಯೇ?" "ಮುಕ್ಕಾದ ಮೇಲೆ ಉಪಯೋಗಿಸಲಾಗುವುದೆ?" ಪ್ರಶ್ನಿಸಿದ.
"ದೊಡ್ಡ ಶಿಲ್ಪವಾಗದಿರಬಹುದು, ಯಾವ ಶಿಲ್ಪವೂ ಆಗಲಾರೆನೆ?" ದೀನವಾಗಿ ಕೇಳಿತು.
ಕನಸಿನಿಂದ ಧಿಗ್ಗನೆಂದು ಕುಳಿತಳಾ ಶಿಕ್ಷಕಿ. ಹಿಂದಿನ ದಿನವೇ ಮಗುವೊಂದಕ್ಕೆ ಪಾಠ ಹೇಳಿಕೊಡಲು ನಿರಾಕರಿಸಿದ್ದಳು! !

ಪುಟ್ಕಥೆ - 76
"ಪ್ರೀತಿಗೆ ಇಷ್ಟೇಕೆ ಬರಗೆಟ್ಟು ಕುಳಿತಿರುವೆ?" ಕೇಳಿದಳಾಕೆ.
"ಬರಪೀಡಿತ ಭೂಮಿಯಲ್ಲಿ ಹಸಿರ ಚಿಗುರಿಸಲು ಸಾಧ್ಯವಾಗುವುದು ಮಳೆಗೆ ಮಾತ್ರವಲ್ಲವೇ?" ಉತ್ತರಿಸಿದಳೀಕೆ. 

ಪುಟ್ಕಥೆ - 77
"ಸನ್ಮಾನ ಸ್ವೀಕರಿಸಿ ಜನರಿಂದ ದೂರವಾಗಬೇಡ ಎಂದಿದ್ದಾಳೆ ನನ್ನವ್ವ" ಸಾಧನೆಗೈದಿದ್ದ ಶಿಕ್ಷಕಿ  ನಿರಾಕರಿಸಿದಳು.  ಆಹ್ವಾನಿಸಿದ್ದವರು ಆಕೆಯ ಶಿಕ್ಷಕರು. "ಅವ್ವ ಹೆಚ್ಚೊ, ಗುರುಗಳು ಹೆಚ್ಚೊ?" ಇಕ್ಕಟ್ಟಿನ ಪ್ರಶ್ನೆ ಮುಂದಿಟ್ಟರು. 
"ಗುರುವನ್ನು ತೋರಿದವಳು ಅವ್ವನೇ ಸರ್!" 

ಪುಟ್ಕಥೆ - 78
"ಜನರಲ್ಲಿ ಎಷ್ಟೊಂದು ಮಾನವೀಯತೆ, ಬರೀ 500 ರೂಗಳ ನೋಟನ್ನೇ ಹಾಕಿದ್ದಾರೆ" ಕೇಳಿದೆ ಭಿಕ್ಷುಕನನ್ನು.
"ಸರ್, ಮಾನವೀಯತೆ ನನಗಿದೆ. ಊಟ ಇಲ್ಲದೆ 500 ರೂಪಾಯಿ ನೋಟು ಇಟ್ಕೊಂಡು ಪರದಾಡ್ತಾ ಇದ್ದರು. ನಾನು ಅವರಿಗೆ ಚಿಲ್ಲರೆ ಕೊಟ್ಟಿದ್ದೇನೆ!!"

ಪುಟ್ಕಥೆ - 79
"ಡಿಜಿಟಲ್ ಕಾರ್ಡ್ ಬಗ್ಗೆ ನಿಮ್ಮ ಅಭಿಪ್ರಾಯವೇನು?" ಪ್ರಶ್ನಿಸಿದ ಪತ್ರಕರ್ತ ಒಬ್ಬ ಹಿರಿಯರನ್ನು.
"ಗಂಜಿ ಕುಡಿಯೋನಿಗೆ ಮೀಸೆ ತಿರುವೋನೊಬ್ಬ ಅನ್ನೋ ಗಾದೆ ಕೇಳಿದ್ದೀಯಾ?" ಮರುಪ್ರಶ್ನಿಸಿದರಾತ!!

ಪುಟ್ಕಥೆ - 80

ಅಕ್ಕನ ಮಗಳು "ಚಿಕ್ಕಮ್ಮ ಅಕ್ಷರ ಬರೆದುಕೊಡಿ " ಸ್ಲೇಟ್ ಹಿಡಿದು ಬಂದಳು. ಮಾಡಿದ ತಪ್ಪನ್ನು ತಿದ್ದಿಕೊಳ್ಳುವುದು ಹೇಗೆಂದು ತಿಳಿಯದೆ ಕೊರಗುತ್ತಿದ್ದ ನಾನು ಅದೇ ಜ್ಞಾನದಲ್ಲಿ ತಪ್ಪು ಬರೆದೆ. "ಅಳಿಸಿಬಿಡಿ" ಎಂದಳು. "ಹೋಗುತ್ತಿಲ್ಲವಲ್ಲ?" ಎಂದಿದ್ದಕ್ಕೆ "ನೀರು ಹಾಕಿ ಚೆನ್ನಾಗಿ ಒರೆಸಬೇಕು ಚಿಕ್ಕಮ್ಮ, ಆಗ, ಅದು ಹೊಸ ಸ್ಲೇಟ್ ಆಗಿಬಿಡುತ್ತದೆ" ಸಮಸ್ಯೆಗೆ ಪರಿಹಾರ ನೀಡಿದಳು!!

ಪುಟ್ಕಥೆ : 51 - 60

ಪುಟ್ಕಥೆ - 51

ಆತ ಈಕೆಯ ಮೈಮುಟ್ಟಿದ್ದು ಆಕಸ್ಮಿಕವಾಗಿರಲಿಲ್ಲ. ಅವನ ಕೈತಿರುಚಿ ಹೊಡೆದಳು. ಅಲ್ಲಿ ಹೂ ಹಣ್ಣು ಮಾರುವ ಹೆಣ್ಣುಮಕ್ಕಳು ಸೇರಿಕೊಂಡರು. ನಂತರ ಕೈಮುಗಿದು ಹೇಳಿದರು, "ಇಷ್ಟು ದಿನ ಧೈರ್ಯ ಇರಲಿಲ್ಲ ಕಣಕ್ಕಾ!!"

ಪುಟ್ಕಥೆ - 52

"ನನ್ನಮ್ಮನ ಮೇಲೆ ನಿಮಗೆ ಕೋಪ ಇರಬಹುದು, ಆದರೆ ನಾನೇನು ಮಾಡಿದ್ದೇನಜ್ಜಿ?"
"ನಿನ್ನನ್ನು ಕಂಡಾಗಲೆಲ್ಲ ನಿಮ್ಮ ಅಮ್ಮಾನೇ ನೆನಪು ಬರುತ್ತಾಳೆ."
"ಅದ್ಯಾಕಜ್ಜಿ ನಿಮಗೆ ನಿಮ್ಮ ಮಗನ ನೆನಪು ಬರುವುದಿಲ್ಲ,  ಎಲ್ಲರೂ ನಾನು ಅಪ್ಪನಂತೆ ಅಂತಾರೆ!!"


ಪುಟ್ಕಥೆ - 53

ಆಕೆಯನ್ನು ಮಕ್ಕಳ್ಯಾರೂ ನೋಡಿಕೊಳ್ಳಲಿಲ್ಲ. ಅವಳು ಯಾರನ್ನೂ ದೂರಲೂ ಇಲ್ಲ. "ನಾನು ನಮ್ಮ ಅಪ್ಪ ಅಮ್ಮನನ್ನು ನೋಡಿಕೊಂಡಿದ್ದರೆ ನನಗೀ ಗತಿ ಬರುತ್ತಿತ್ತೆ?" ತನ್ನನ್ನೇ ತಾನು ದೂರಿಕೊಳ್ಳುತ್ತಿದ್ದಳು!!


ಪುಟ್ಕಥೆ - 54

೧೦ ವರ್ಷದ ಬಾಲೆ ಚರ್ಚಾಸ್ಪರ್ಧೆಯಲ್ಲಿ ಮಾತನಾಡುತ್ತಾ ಮಧ್ಯದಲ್ಲಿ ನಿಲ್ಲಿಸಿಬಿಟ್ಟಳು.  ತೀರ್ಪುಗಾರರು "ಮುಗಿಯಿತೇನಮ್ಮ? ಇನ್ನೂ ಸಮಯವಿದೆ" ಎಂದರು.
"ಗೊತ್ತು ಸರ್, ನೀವು ಅಲ್ಲಿ ಮಾತನಾಡುವುದನ್ನು ನಿಲ್ಲಿಸಿದರೆ ನಾನು ಶುರು ಮಾಡುವೆ" ದಿಟ್ಟವಾಗಿ ಉತ್ತರಿಸಿದಳು.


ಪುಟ್ಕಥೆ - 55

ಮಿಲಿಟರಿ ಆಫೀಸರ್ ಶಾಲೆಯ ಎಚ್ ಎಮ್ ಕಾಲಿಗೆ ನಮಸ್ಕರಿಸಿ ಸೀರೆಯ ಕವರನ್ನು ಅವರತ್ತ ಚಾಚುತ್ತಾ ಹೇಳಿದ, "ಸಿಸ್ಟರ್ ೧ನೇ ತರಗತಿಯಲ್ಲಿದ್ದಾಗ ನಾನೊಮ್ಮೆ ಆಳುತ್ತಿದ್ದೆ. ನೀವು ಥೇಟ್ ನಮ್ಮಮ್ಮನಂತೆ ಸಮಾಧಾನ ಮಾಡಿದ್ದಿರಿ. ಅಂದು ನಿಮ್ಮ ಸೀರೆಯಲ್ಲಿ ಕಣ್ಣು ಮೂಗು ಎಲ್ಲಾ ಒರೆಸಿದ್ದೆ. ಅದಕ್ಕೆ....!!"


ಪುಟ್ಕಥೆ - 56

"ನಿನ್ನ ಪ್ರಸ್ತಾಪವನ್ನು ನಾನು ಒಪ್ಪಲಾಗುವುದಿಲ್ಲ,  ನಾವಿಬ್ಬರೂ ಹೀಗೆಯೇ ಸ್ನೇಹಿತರಾಗಿ ಉಳಿಯೋಣ" ಎಂದ ಆತ.
ಅದನ್ನು ನಿರಾಕರಿಸುತ್ತಾ ಹೇಳಿದಳಾಕೆ
" ನನ್ನ ಮನಸ್ಸಿನಲ್ಲಿ ಪ್ರೀತಿಯ ಭಾವನೆ ಬೆಳೆಯಲಾರಂಭಿಸಿದಾಗಲೇ ನೀನದನ್ನು ನಿರಾಕರಿಸಿದ್ದರೆ, ಅದು ಬೆಳೆಯಲು ಆಸ್ಪದ ಕೊಡದೇ ಇದ್ದಿದ್ದರೆ ಒಪ್ಪಬಹುದಿತ್ತು,  ಈಗಲ್ಲ."


ಪುಟ್ಕಥೆ - 57

ಅವನಂತಹ ಗಂಡ ಸಿಗಬೇಕೆಂದು ಎಲ್ಲರೂ ಆಶಿಸಿದರು. ಆದರೆ ಅವನೊಂದಿಗೆ ಬಾಳನ್ನು ಹಂಚಿಕೊಳ್ಳಲು ಯಾರೂ ತಯಾರಿರಲಿಲ್ಲ!!


ಪುಟ್ಕಥೆ - 58

ಸಾಯಲು ಹೊರಟಳು ಆಕೆ, ಆದರೆ ದಾರಿ ಸುಲಭವಾಗಿರಲಿಲ್ಲ. ಇದು ಬದುಕಿಗಿಂತ ಕಷ್ಟವಾಗಿದೆಯಲ್ಲಾ, ಹಾಗಿದ್ದರೆ ಬದುಕಿಯೇ ಬಿಡೋಣ ಎಂದು ನಿರ್ಧರಿಸಿದಳು.


ಪುಟ್ಕಥೆ - 59


ಬಿಸಿ ಗಂಜಿಯಲ್ಲಿ ಬಿದ್ದ ಮಗುವಿನ ಬಲ ಭಾಗ ಸುಟ್ಟುಹೋಯಿತು. ಗಂಡ ಹೇಳಿದ "ಈ ಕುರೂಪಿ ಬೇಕಾ, ನಾನು ಬೇಕಾ ನಿರ್ಧರಿಸಿಕೊ" ಎಂದ. ಅವಳು ಯಾವುದನ್ನು ಆರಿಸಿಕೊಂಡಳು ಎಂದು ಹೇಳಬೇಕೆ!!!


ಪುಟ್ಕಥೆ - 60

"ತೆಗೆದುಬಿಡು ಅದನ್ನು, ಅನಿಷ್ಟವದು" ಗಂಡ ಹೆಂಡತಿಗೆ ದಬಾಯಿಸುತ್ತಿದ್ದ. ಅವನ ತಾಯಿ ಹೇಳಿದಳು, "ನೀನು ಇಂತಹ ಅಯೋಗ್ಯನಾಗುತ್ತೀಯ ಎಂದು ನನಗೆ ಗೊತ್ತಿದ್ದರೆ, ನಾನು ಆ ಕೆಲಸ ೨೫ ವರ್ಷಗಳ ಹಿಂದೆಯೇ ಮಾಡುತ್ತಿದ್ದೆ!!"



ಪುಟ್ಕಥೆ : 61 - 70

ಪುಟ್ಕಥೆ - 61
ಹೊರಗಡೆ ಎರಡೂ ಧರ್ಮದವರು ಮಚ್ಚು ಹಿಡಿದಿದ್ದರು, ಜೀವ ತೆಗೆಯುವುದು ಅವರ ಗುರಿಯಾಗಿತ್ತು. 
ಆಸ್ಪತ್ರೆಯಲ್ಲಿಯೂ ಎರಡೂ ಧರ್ಮದವರು ಚಾಕು ಹಿಡಿದಿದ್ದರು; ಜೀವ ಉಳಿಸುವುದು ಅವರ ಗುರಿಯಾಗಿತ್ತು!!

ಪುಟ್ಕಥೆ - 62
ಪ್ರೀತಿಸಿದವ ಹೇಳಿದ, "ನನಗಾಗಿ ನಿನ್ನನ್ನು,  ಮನೆಯವರಿಗಾಗಿ ಅವಳನ್ನು ಮದುವೆಯಾಗುತ್ತೇನೆ." ತಕ್ಷಣವೇ ಅವನ ಕೆನ್ನೆ ಫಳೀರ್ ಎಂದಿತು, "ಇದು ಆ ಹುಡುಗಿಯ ಪರವಾಗಿ" ಎನ್ನುತ್ತಾ ಹೊರನಡೆದಳು. 

ಪುಟ್ಕಥೆ - 63
ಮಾತು ಮೌನದ ನಡುವೆ ಸ್ನೇಹ ಬೆಳೆಯಿತು. "ನಾನೇ ಚೆಂದ ಎಂದುಕೊಂಡಿದ್ದೆ, ನೀನು ಇಷ್ಟೊಂದು ಚೆಂದ ಎಂದು ಈಗಲೇ ತಿಳಿದಿದ್ದು" ಪರಸ್ಪರ ಹೇಳಿಕೊಂಡವು.


ಪುಟ್ಕಥೆ - 64

ಸಾಯಲು ಹೊರಟವಳು ಆ ಪುಸ್ತಕವನ್ನೇಕೆ ಓದಿದಳೊ? 
ಅವಳಿಗೆ ತಾನೇ ಏನು ಗೊತ್ತಿತ್ತು, ಅದರ ಪ್ರಭಾವ!!


ಪುಟ್ಕಥೆ - 65

ಬದುಕಿನ ಬವಣೆ ತಾಳದೆ ಬಾಳನ್ನು ಮುಗಿಸಬೇಕೆಂದುಕೊಂಡಳವಳು. ಎಂದೋ ತಂದ ಮಾತ್ರೆಗಾಗಿನ ಹುಡುಕಾಟದಲ್ಲಿ ಸಿಕ್ಕಿದ ಪುಸ್ತಕವೊಂದು ಅವಳ ನಿರ್ಧಾರವನ್ನು ಬದಲಿಸಿತು!!


ಪುಟ್ಕಥೆ - 66

ಓದಲು ಇಷ್ಟವಿಲ್ಲದೆ ಹುಡುಗನೊಬ್ಬ ಪುಸ್ತಕಗಳನ್ನು ಬಿಸಾಡುತ್ತಿದ್ದ. ಚಿಂದಿ ಆಯುತ್ತಿದ್ದ ಹುಡುಗ "ಕಡಲೆಯಿದ್ದವರಿಗೆ ಹಲ್ಲಿಲ್ಲ" ಎಂದು ಗೊಣಗುತ್ತಿದ್ದ! !


ಪುಟ್ಕಥೆ - 67

ಗಿರಗಿಟ್ಟಲೆಯಲ್ಲಿ ಮೇಲೆ ಹೋದ ಸೀಟು ಕೆಳಗಿದ್ದ ಸೀಟನ್ನು ಕಂಡು ಜೋರಾಗಿ ನಕ್ಕಿತು. ಆದರೆ ಅದು ಕೆಲವು ಕ್ಷಣದವರೆಗೆ ಮಾತ್ರ!!


ಪುಟ್ಕಥೆ - 68

ನೋವಿನಿಂದ ಆಕೆ ಅಮ್ಮನಿಗೆ ಹೇಳಿದಳು, "ಅಲ್ಲಮ್ಮ, ನೆನ್ನೆವರೆಗೆ ಅಷ್ಟು ಆತ್ಮೀಯಳಾಗಿದ್ದವಳು ಇಂದು ಮಾತಾಡೋದೂ ಇಲ್ಲ ಅಂದ್ರೆ, ಇದನ್ನ ಏನಂತಾರೆ?"
ಶಾಂತವಾಗಿ ತಾಯಿ ಉತ್ತರಿಸಿದಳು, "ಕಂದ, ಇದೇ ಬದುಕು."

ಪುಟ್ಕಥೆ - 69
ತನಗೆ ಬೇಕಿರುವುದನ್ನು ಪಡೆಯಲು ಉಪವಾಸ ಮಾಡಿದಳು, ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ. ಮನೆಯವರನ್ನು ಉಪವಾಸ ಹಾಕಿದಳು, ಅಷ್ಟೇ, ಅವಳು ಕೇಳಿದ್ದೆಲ್ಲ ಸಿಕ್ಕಿತು!!

ಪುಟ್ಕಥೆ - 70
ಆಕ್ಸಿಡೆಂಟ್ ನಲ್ಲಿ ಮಗನನ್ನು ಕಳೆದುಕೊಂಡು ಸಾಯಬೇಕೆಂದುಕೊಂಡವಳು ಅವನ ಡೈರಿಯಲ್ಲಿ ಓದಿದ್ದು "ಸಮಾಜದಿಂದ ಇಷ್ಟೊಂದು ಪಡೆದಿರುವೆ, ಕಿಂಚಿತ್ತಾದರೂ ಹಿಂದಿರುಗಿಸಬೇಕಲ್ಲವೇ."

ಈಗವಳು ೨೦೦ ಮಕ್ಕಳ ತಾಯಿ!!


ಪುಟ್ಕಥೆ : 41 - 50

ಪುಟ್ಕಥೆ - 41
ಬಸ್ ನಲ್ಲಿ ತುಂಬಾ ಹೊತ್ತಿಂದ ಹೆಣ್ಣುಮಕ್ಕಳ ಬಗ್ಗೆ ಕೆಟ್ಟ ಮಾತನಾಡುತ್ತಿದ್ದನಾತ. ಒಂದು ದೊಡ್ಡ ಪಿನ್ ಚುಚ್ಚಿದಳೀಕೆ. ಮತ್ತೆ ತುಟಿಪಿಟಿಕ್ ಎಂದಿದ್ದರೆ ಕೇಳಿ!


ಪುಟ್ಕಥೆ - 42
ಆಕೆ ಮಗನ ಸ್ನೇಹಿತರೆಲ್ಲರಿಗೂ ಅಮ್ಮನಂತೆಯೇ. ಮಗನನ್ನು ಬೇರೆ ದೇಶಕ್ಕೆ ಕಳಿಸುವಾಗ ಬೇರೆ ಜನ, ಬೇರೆ ರೀತಿ, ಗಾಬರಿಯಾದರು. ಸ್ವಲ್ಪ ದಿನವಾದ ನಂತರ ಮಗ ಫೋನ್ ಮಾಡಿದ "ಅಮ್ಮ ಎಲ್ಲ ಅಮ್ಮಂದಿರೂ ಒಂದೇ ತರಹ ಇರ್ತಾರಾ! !"

ಪುಟ್ಕಥೆ - 43
ಆತ ಸತ್ತ, ಮಕ್ಕಳ್ಯಾರೂ ಬರಲಿಲ್ಲ. ಆದರೆ ಊರಿಗೆ ಊರೇ ಅಲ್ಲಿ ನೆರೆದಿತ್ತು! 

ಪುಟ್ಕಥೆ - 44
ಲಾಟರಿ ಹೊಡೆಯಿತು, ಸಿಕ್ಕಾಪಟ್ಟೆ ಬಂಧುಮಿತ್ರರಾದರು.
ಅವನು ಲಾಟರಿ ಹೊಡೆಯಲಾರಂಭಿಸಿದ,  
ಎಲ್ಲರೂ ಸರಿದುಹೋದರು! !

ಪುಟ್ಕಥೆ - 45

ಹಾಸಿಗೆ ಹಿಡಿದ ಅತ್ತೆಯ ಸೇವೆ ಮಾಡಬೇಕಾಗಿ ಬಂದಾಗ "ಇದ್ಯಾವ ಕರ್ಮ ನನಗೆ" ತಿರಸ್ಕರಿಸಿದಳಾಕೆ. ೨೫ ವರ್ಷಗಳ ನಂತರ ತಾನು ಹಾಸಿಗೆ ಹಿಡಿದಾಗ, ಯಾರೂ ನೋಡುವವರಿಲ್ಲದಾಗ ಅದನ್ನೇ ಪುನರುಚ್ಚಸಿದಳಾಕೆ!!

ಪುಟ್ಕಥೆ - 46
ಹೊಸದಾಗಿ ಬಂದ ಟೀಚರ್ ಅನ್ಮು ಆಡಿಕೊಂಡವು ಮಕ್ಕಳು. ಆ ಮಕ್ಕಳಿಗೇ ಪಾಠ ಮಾಡಲು ಹೇಳಿದಾಗ  ಭಯದಿಂದ ಅವರು ಬಾಯ್ತೆರೆಯಲಿಲ್ಲ. ನಗುತ್ತಾ ಹೇಳಿದಳಾಕೆ, "ನನಗೂ ಹೀಗೆ ಆಗ್ತಾ ಇತ್ತು, ನಾಳೆಗೆ ಅಭ್ಯಾಸ ಆಗಿರುತ್ತೆ, ಹೀಗಾಗೋಲ್ಲ." ಈಗ ಆಕೆ ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕಿ!!

ಪುಟ್ಕಥೆ - 47
ಹೊಸದಾಗಿ ಬಂದ ಟೀಚರ್ ಅನ್ಮು ಆಡಿಕೊಂಡವು ಮಕ್ಕಳು. ಆ ಮಕ್ಕಳಿಗೇ ಪಾಠ ಮಾಡಲು ಹೇಳಿ, ಅವರು ಭಯಪಟ್ಟಾಗ ಅವಮಾನ ಮಾಡಿದಳಾ ಶಿಕ್ಷಕಿ. ಅವಳೆಂದೂ ಟೀಚರ್ ಆಗಲೇ ಇಲ್ಲ!

ಪುಟ್ಕಥೆ - 48
"ಬದುಕಿನುದ್ದಕ್ಕೂ ಯಾಕಮ್ಮ ಅಪ್ಪನಿಗೆ ಸೋಲುತ್ತಲೇ ಬಂದೆ?" ಮಕ್ಕಳು ಕೇಳಿದ ಪ್ರಶ್ನೆಗೆ ಆ ತಾಯಿ "ನಿಮ್ಮನ್ನು ಬದುಕಿನಲ್ಲಿ ಸೋಲಲು ಬಿಡಬಾರದೆಂದು" ಎಂದಳು!!

ಪುಟ್ಕಥೆ - 49
'ಹೆಣ್ಣಿಗೆ ಹೆಣ್ಣೆ ಶತ್ರು' ಎಂಬ ವಿಷಯದ ಬಗೆಗಿನ ಚರ್ಚಾಸ್ಪರ್ಧೆಯಲ್ಲಿ ತಾನು ವಿಷಯದ ಪರವಾಗಿ ಮಾತನಾಡುತ್ತೇನೆಂದಳು ಆಕೆ.
"ಅಲ್ಲವೇ ಜನ್ಮ ಕೊಟ್ಟ ತಾಯಿ ಹೆಣ್ಣು, ನಿನ್ನ ಸಾಕಿದ ಅಕ್ಕ ಹೆಣ್ಣು,  ಆಸ್ಪತ್ರೆಯಲ್ಲಿದ್ದಾಗ ನೋಡಿಕೊಂಡ ನಾದಿನಿ ಹೆಣ್ಣು, ಈಗ ನಿನ್ನನ್ನಿಲ್ಲಿ ಬಿಡಲು ಬಂದಿರುವ ನಾನು ಹೆಣ್ಣು,, ಅಂಥಾದ್ದರಲ್ಲಿ ....." ಎಂದಳೀಕೆ! !


ಪುಟ್ಕಥೆ - 50
ಪ್ರೀತಿಸಿದ ಇಬ್ಬರು ಬೇರೆಬೇರೆ ಧರ್ಮದವರು ಬೇರೆಯಾದರು, ಧರ್ಮಗಳ ನಡುವೆ ಘರ್ಷಣೆಯಾಗಬಹುದೆಂದು. ಅದನ್ನು ಕಂಡ ಧರ್ಮಗಳು ಪರಸ್ಪರ ಮುಖ ನೋಡಿಕೊಳ್ಳುತ್ತಾ  ನಕ್ಕವು!!



ಪುಟ್ಕಥೆ : 30 - 40

ಪುಟ್ಕಥೆ - 31
"ಏನೇ ಗಂಡುಬೀರಿ, ಇವತ್ತು ಲಂಗ ಹಾಕ್ಕೊಂಡು ಬಂದುಬಿಟ್ಟಿದ್ದೀಯ?" ಯಾವಾಗಲೂ ಛೇಡಿಸುತ್ತಿದ್ದ ಪಕ್ಕದ್ಮನೆಯಾತ ಅಂದೂ ಛೇಡಿಸಿದ.
"ಈ ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡಿ ಅಂಕಲ್" ಕೂಲಾಗಿ ಹೇಳಿ ಎಳ್ಳುಬೆಲ್ಲದ ಪ್ಯಾಕೆಟ್ ಕೈಗಿತ್ತಳು!!


ಪುಟ್ಕಥೆ - 32
ಹೊಸವರ್ಷದ ಪಾರ್ಟಿಯಿಂದ ತಡವಾಗಿ ಬಂದ ಮಗಳನ್ನು ಅಮ್ಮ ಅಪ್ಪ ತರಾಟೆಗೆ ತೆಗೆದುಕೊಂಡರು.
"ನಮ್ಮದು ಸ್ವತಂತ್ರ ದೇಶವಲ್ಲವೇ? " ಕೇಳಿದಳು ಮಗಳು.
"ಹೌದು, ಅದಕ್ಕೂ, ಇದಕ್ಕೂ ಸಂಬಂಧವೇನು?" ರೇಗಿದರು.
"ಸ್ವಾತಂತ್ರ್ಯ ಬಂದಾಗ ಮಧ್ಯರಾತ್ರಿಯಲ್ಲಿ ಯುವತಿಯರು ನಿರ್ಭಯವಾಗಿ ಓಡಾಡಬಹುದು ಎಂದು ಗಾಂಧೀಜಿಯವರು ಹೇಳಿದ್ದರಲ್ಲ" ಉತ್ತರಿಸಿದಳು ಮಗಳು.


ಪುಟ್ಕಥೆ - 33
"ಏನ್ ಮಹಾ ಮಕ್ಕಳನ್ನು ನೋಡಿಕೊಳ್ಳೋದು?" ಗಂಡ ವಾದಿಸುತ್ತಿದ್ದ. 
೩ ವರ್ಷದ ಮಗಳು ಪ್ರಶ್ನೆಯೊಂದಿಗೆ ಬಂದಾಗ ಅಪ್ಪನತ್ತ ತೋರಿಸಿ ಎದ್ದು ರೂಮಿಗೆ ಹೋದಳು.
ಅರ್ಧ ಘಂಟೆಯಾದ ನಂತರ "ಮಹರಾಯಿತಿ ನೀನೇ ಗ್ರೇಟ್, ನಾನು ಕಾಫಿ ಕುಡೀಬೇಕು,  ತಲೆ ಸಿಡೀತಿದೆ" ಕೈಮುಗಿದು ಹೇಳಿದ ಪತಿ!!

ಪುಟ್ಕಥೆ - 34
"ಒಂದು ದಿನ ಊಟ ಬಡಿಸದಿದ್ದಕ್ಕೆ ಇಷ್ಟು ಕೋಪ ಮಾಡಿಕೊಳ್ಳುತ್ತಿರುವಿರಲ್ಲ,  ೨೦ ವರ್ಷಗಳಿಂದ ಒಂದು ದಿನವಾದರೂ ನನ್ನನ್ನು ಊಟ ಮಾಡಿದೆಯಾ ಎಂದು ಕೇಳಿದಿರಾ? " ರೋಸಿ ಹೋದ ಹೆಣ್ಣುಮಗಳ ಪ್ರಶ್ನೆ! !


ಪುಟ್ಕಥೆ - 35
ಶಿಕ್ಷಕರ ಭವನದ ಉದ್ಘಾಟನಾ ದಿನದಿಂದೇ ಕುಸಿದ ಕಟ್ಟಡದಡಿ ಸಿಲುಕಿದ ಹಲವಾರು ಶಿಕ್ಷಕರ ಮನಸ್ಸಿನಲ್ಲಿ ಬಂದಿದ್ದು "ಮಾಡಿದ್ದುಣ್ಣೊ ಮಹರಾಯ!"


ಪುಟ್ಕಥೆ - 36
ಕನ್ನಡಕ್ಕಾಗಿ ಹೋರಾಟ ಮಾಡುತ್ತಿದ್ದವನೊಬ್ಬನ ಭಾಷಣ ಈ ರೀತಿ ಇತ್ತು "ಖನ್ನಡಕ್ಕಾಗಿ ನನ್ನ ಝೀವ ಬೇಕಾದ್ರೂ ಕೊಡ್ತೀನಿ. ನಾನು ಉಟ್ಟು ಓರಾಟಗಾರ.......!!"

ಪುಟ್ಕಥೆ - 37
"ನಗರದಲ್ಲಿ ಮತ್ತೊಂದು ಅತ್ಯಾಚಾರ" ಟಿವಿಯಲ್ಲಿ ಸುದ್ದಿ ಕೇಳುತ್ತಿದ್ದಂತೆ ಮಾತನಾಡತೊಡಗಿದನೊಬ್ಬ
"ಈ ಹೆಣ್ಣು ಮಕ್ಕಳು ಅದ್ಯಾಕೆ ಹಾಗೆ ಕೆಟ್ಟದಾಗಿ ಬಟ್ಟೆ ಧರಿಸುತ್ತಾರೋ, ಹೊತ್ತಾದ ಮೇಲೆ ತಿರುಗುತ್ತಾರೋ ನಾ ಕಾಣೆ." 
ಟಿವಿಯಲ್ಲಿ ವಾರ್ತೆ ಮುಂದುವರೆಯಿತು, "ಮನೆಯಲ್ಲಿ ಆಡಿಕೊಂಡಿದ್ದ ಮೂರು ವರ್ಷದ ಮಗುವಿನ ಮೇಲೆ ಅತ್ಯಾಚಾರ!!"


ಪುಟ್ಕಥೆ - 38
"ಸ್ನೇಹಿತರು, ಸ್ನೇಹಿತರು ಅಂತ ಮೂರು ಹೊತ್ತು ತಿರುಗುತ್ತಿದ್ದೀಯ, ನೋಡೋಣ ಕಷ್ಟ ಎಂದಾಗ ಯಾರು ಬರುತ್ತಾರೊ" ಮೂದಲಿಸುತ್ತಿದ್ದ ತಂದೆ, ಮಗ ಆಸ್ಪತ್ರೆಯಲ್ಲಿದ್ದಾಗ ಬಂದ ಸ್ನೇಹಿತರನ್ನು ಕಂಡು ದಂಗಾದರು!!


ಪುಟ್ಕಥೆ - 39
"ಏನ್ರಿ, ನಿಮ್ಮ ಪತಿಯ ಬಗ್ಗೆ ಬಹಳ ಕೊಚ್ಚಿಕೊಳ್ತಾ ಇದ್ರಿ, ಇವತ್ತು ಯಾರೋ ಹುಡುಗಿಯನ್ನು ಬೈಕ್ ನಲ್ಲಿ ಕೂರಿಸಿಕೊಂಡು ಹೋಗ್ತಾ ಇದ್ರು ಗೊತ್ತಾ?" ವ್ಯಂಗ್ಯವಾಡಿದರು ಆಕೆ.
"ಆಕೆ ಇದೇ ಡ್ರೆಸ್ ಹಾಕಿದ್ದರು ತಾನೇ?" ನಗುತ್ತಲೇ ಒಳಗಿನಿಂದ ತಂದ ಚೂಡಿದಾರ್ ತೋರಿಸಿದರು!!


ಪುಟ್ಕಥೆ - 40
ಬುದ್ಧಿವಂತನೆನಿಸಿಕೊಂಡ ಮೊಮ್ಮಗ ತಾತ ಕೆಮ್ಮುತ್ತಿದ್ದಾಗ,  ಅವರಿಗೆ ಗೂಗಲ್, ಯೂಟ್ಯೂಬ್ ಗಳ ಮೂಲಕ ಹೇಗೆ ಕಾಳಜಿ ವಹಿಸಬೇಕು ಎನ್ನುವ ಬಗ್ಗೆ ಮಾಹಿತಿ ನೀಡಿದ.
ದಡ್ಡ ಮೊಮ್ಮಗ ಕಷಾಯ ಮಾಡಿಕೊಂಡು ಬಂದು ತಾತನ ಮುಂದೆ ಹಿಡಿದ!!

ಪುಟ್ಕಥೆ : 21-30

ಪುಟ್ಕಥೆ - 21
ತನ್ನ ಗಂಡನನ್ನು ಬದಲಾಯಿಸಬೇಕೆಂದು ಅವಳು ಬಹಳ ಪ್ರಯತ್ನ ಪಟ್ಟಳು. 
ಆದರೆ ಮನುಷ್ಯರನ್ನು ಮಾತ್ರ ಬದಲಾಯಿಸಲು ಸಾಧ್ಯ ಎನ್ನುವುದನ್ನು ಆಕೆ ಮರೆತುಬಿಟ್ಟಿದ್ದಳು! !

ಪುಟ್ಕಥೆ - 22
"ಗಂಡನ ಮನೆ ಬಿಟ್ಟು ಬಂದು ನಮಗೆ ಅವಮಾನ ಮಾಡಿಬಿಟ್ಟೆ,  ನಿನ್ನಂಥ ಮಗಳು ಯಾಕಾದರೂ ಹುಟ್ಟಿದಳೋ? " ಗೋಳಾಡಿದರು ಅಪ್ಪ ಅಮ್ಮ. 
"ಅಂತಹ ಲಂಪಟ ಗಂಡನಿಗೆ ಮದುವೆ ಮಾಡಿದರೂ ನಾನು ನಿಮ್ಮಂತೆ ಗೋಳಾಡಿದೆನೇ?" ಶಾಂತವಾಗಿ ಕೇಳಿದಳು ಮಗಳು!!

ಪುಟ್ಕಥೆ - 23
"ನನ್ನ ವಶವಾಗು, ಇಲ್ಲ ಸಾಯಿ" ಅವಳ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿಕಡ್ಡಿ ಹಿಡಿದು ನಿಂತ.
ಅವನನ್ನು ಗಟ್ಟಿಯಾಗಿ ಹಿಡಿದು ನಿಂತು ಹೇಳಿದಳು,  "ನನ್ನನ್ನು ಬಿಡು, ಇಲ್ಲವಾದರೆ ನನ್ನೊಂದಿಗೆ ಭಸ್ಮವಾಗು!!"

ಪುಟ್ಕಥೆ - 24
ಮಕ್ಕಳು ಓದದಿದ್ದಾಗ ಹೊಡೆಯುತ್ತಿದ್ದಳಾಕೆ.  ಅದನ್ನು ಕಂಡ ಎಸ್ ಎಸ್ ಎಲ್ ಸಿ ದಾಟದ ಆಕೆಗೆ, ಅವಳ ತಾಯಿ ಹೇಳಿದರು,  "ನಾನೂ ಇದೇ ತಪ್ಪನ್ನಲ್ಲವೇ ಮಾಡಿದ್ದು??!!"

ಪುಟ್ಕಥೆ - 25
"ಯಾಕಮ್ಮ ಇಂತಹ ಹೇಳಿಕೆ ಕೊಟ್ಟೆ, ಆ ಪಾಪಿಗಳೇ ನಿನಗೆ ವಿಷ ಕೊಟ್ಟಿದೆಂದು ಇಡೀ ಹಳ್ಳಿಗೆ ಗೊತ್ತು?" ಅಳುತ್ತಾ ಕೇಳಿದ ತಂದೆ ಸಾವಿನ ದವಡೆಯಲ್ಲಿದ್ದ ಮಗಳನ್ನು.
"ನಾನೇನು ಮಾಡಲಪ್ಪ, ನನ್ನ ಮಗುವನ್ನು ಕೊಲ್ಲುತ್ತೇವೆಂದು ಬೆದರಿಸಿದರೆ .......?"

ಪುಟ್ಕಥೆ - 26
"ಮನೆ ಮರ್ಯಾದೆ ಎಂದು ನಾವವಳನ್ನು ವಾಪಸ್ಸು ಕಳಿಸಬಾರದಿತ್ತು" ಹೆಣದ ಮೇಲೆ ಬಿದ್ದು ಗೋಳಾಡುತ್ತಿದ್ದರು ಆ ತಾಯ್ತಂದೆಯರು! !

ಪುಟ್ಕಥೆ - 27
"ಅಮ್ಮ ದೇವರೇನು ತಪ್ಪು ಮಾಡಿದ ಎಂದು ಈ ಕೋಣೆಯಲ್ಲಿ ಕೂಡಿಹಾಕಿದ್ದೀರಿ,  ನನ್ನನ್ನು ಕೂಡಿಹಾಕಿದಂತೆ?" ಕಂದನೊಬ್ಬನ ಅಮಾಯಕ ಪ್ರಶ್ನೆ!!

ಪುಟ್ಕಥೆ - 28
ಅಲ್ಲೊಬ್ಬ ಕೋತಿಯನ್ನು ಹೊಡೆದ. ಪ್ರಾಯಶ್ಚಿತ್ತವಾಗಿ ಮಣ್ಣುಮಾಡಿ ಕುಂಕುಮ ಇಟ್ಟ. ಅಷ್ಟೇ ಮಾರನೇ ದಿನದಿಂದಲೇ ಅಲ್ಲಿ ಜನಜಾತ್ರೆ ಆರಂಭವಾಯಿತು!!

ಪುಟ್ಕಥೆ - 29
"ಪ್ಲಾಸ್ಟಿಕ್ ನ ಸಂಪೂರ್ಣ ನಿಷೇಧ"ದ ಬಗೆಗಿನ ಚರ್ಚಾಕೂಟದ ನಂತರ ಅಲ್ಲಿ ಊಟ ಕೊಟ್ಟದ್ದು ಪ್ಲಾಸ್ಟಿಕ್ ತಟ್ಟೆಯಲ್ಲಿ!!
ಪುಟ್ಕಥೆ - 30
ಕಾಲೇಜಿನ ಸ್ವಾಗತ ಸಮಾರಂಭದಲ್ಲಿ ವಿದ್ಯಾರ್ಥಿಗಳ ಮಾತು. "ಗುರುವೃಂದದವರೇ, ನಮ್ಮದೊಂದು ಸಣ್ಣ ಕೋರಿಕೆ. ನಮಗೊಂದಿಷ್ಟು ಪ್ರೀತಿಯಿಂದ ಪಾಠ ಮಾಡಿ."
ನಿಜಕ್ಕೂ ಅದು ಸಣ್ಣಕೋರಿಕೆಯೇ!!