Sunday, 3 May 2015

POEM - 4 - beleyuva pairu moLakeyalli

ಬೆಳೆಯುವ ಪೈರು ಮೊಳಕೆಯಲ್ಲೇ 
ಅಕ್ಕ ನಾಗಮ್ಮನಿಗೆ
ಉಪನಯನವಾಗದಿದ್ದರೆ
ತನಗೂ ಬೇಡವೆಂದು
ಹಟ ಹಿಡಿದ ಬಾಲಕ
ಮುಂದೊಂದು ದಿನ
ಸ್ತ್ರೀ ವಿಮೋಚನೆಯ
ಹರಿಕಾರರಾಗುವನೆಂದು
ಅರಿತಿದ್ದವರು ಯಾರು?

ಮಡಿ ಮೈಲಿಗೆಯ
ವಿರೋಧಿಸಿದ ಹುಡುಗ,
ಅಂತರಂಗ ಶುದ್ಧಿಯಿರದ
ಬಹಿರಂಗ ಶುದ್ಧಿಗರ್ಥವಿಲ್ಲವೆಂದು
ತೋರುವ ಮಟ್ಟಕ್ಕೇರುವನೆಂದು
ತಿಳಿದಿದ್ದವರು ಯಾರು?

ಜಾತಿ ಶೋಷಣೆಯನು
ಪ್ರಶ್ನಿಸಿದ ಹರೆಯದವ
ಜಾತಿವ್ಯವಸ್ಥೆಯ ವಿರುದ್ಧವೇ
ಹೋರಾಡಿ, ಅದಕಾಗಿ
ಜೀವವನೇ ಕೊಡುವನೆಂದು 
ಕಂಡಿದ್ದವರು ಯಾರು?

ಪೂಜೆಯೇ ವೃತ್ತಿಯಾದ
ಕುಟುಂಬದಲಿ ಜನಿಸಿದರೂ
ದುಡಿಯದೇ ಕೈಕಟ್ಟಿ
ಕೂತುಣ್ಣಬಾರದಾರೂ,
ಕಾಯಕವೇ ಕೈಲಾಸದ
ತತ್ವ ಜಗಕೆ ಸಾರಿ
ನುಡಿದಂತೆ ನಡೆಯುವನೆಂದು
ನೋಡಿದ್ದವರು ಯಾರು?

ಸಾಹಿತ್ಯ, ಭಾಷೆ, ಜ್ಞಾನ 
ಮೇಲ್ಜಾತಿಯವರ ಸೊತ್ತೇಕೆ
ಎಂದು ಕೇಳಿದ ಬಾಲಕ
ಬರೆಯವುದೆಲ್ಲರ ಹಕ್ಕೆಂದು
ಎಲ್ಲರಿಗೂ ಅದು ಸಾಧ್ಯವೆಂದು
ವಚನಗಳ ರೀತಿಯಲಿ
ಅನುಭವ ಮಂಟಪದಲಿ
ಸಾಬೀತುಗೊಳಿಸುವನೆಂದು
ಗ್ರಹಿಸಿದ್ದವರು ಯಾರು?

ಇವ ನಮ್ಮವ ಅವ ನಮ್ಮವನಲ್ಲ
ಎಂಬುದನೇ ಪ್ರಶ್ನಿಸಿದಾತ
ಜಗವೇ ತನ್ನದೆಂದು
ಎಲ್ಲರೂ ತನ್ನವರೆಂದು
ಎಲ್ಲರನೂ ತನ್ನತ್ತ ಸೆಳೆದು
ವಿಶ್ವಮಾನವನಾಗಿ ಬೆಳೆದು
ಜಗಜ್ಯೋತಿ ಬಸವಣ್ಣನಾಗಿ
ಶತಮಾನಗಳುರುಳಿದರಿಂದೂ
ಜನಮನದಲ್ಲುಳಿಯುವರೆಂದು
ಊಹಿಸಿದ್ದವರು ಯಾರು?
         - ಸುಧಾ ಜಿ



No comments:

Post a Comment