Sunday, 3 May 2015

POEM 44 - ಯಾರು ಹೆಚ್ಚು?

ಯಾರು ಹೆಚ್ಚು?
ಇಬ್ಬರಲಿ ಮಹತ್ವ ನೀಡಲಿ
ನಾ ಯಾರಿಗೆ?
ಹೆತ್ತಮ್ಮ ದೇವಕಿಗೆ?
ಸಾಕಿದಾ ಯಶೋದೆಗೆ?
ಪ್ರಶ್ನೆ ಮೂಡಿತು ಕೃಷ್ಣಗೆ.
ಬೆಲೆಕೊಡಲಿ
ನಾ ಯಾರ ಮಾತಿಗೆ?
ಹೆತ್ತಮ್ಮ ಕುಂತಿಗೆ?
ಸಾಕಿದಾ ರಾಧೆಗೆ?
ಕಾಡಿತು ಪ್ರಶ್ನೆ ಕರ್ಣಗೆ.
ನವಮಾಸ ಹೊತ್ತು
ಪ್ರಾಣ ಪಣಕ್ಕಿಟ್ಟು
ಜೀವ ಕೊಟ್ಟ ತಾಯಿ ಹೆಚ್ಚೊ?
ಹಗಲಿರುಳು ಜೊತೆಗಿದ್ದು
ಪ್ರಾಣ ಒತ್ತೆಯಿಟ್ಟು
ಬದುಕು ಕೊಟ್ಟ ಮಾತೆ ಹೆಚ್ಚೊ?
ಹೆಚ್ಚು ಕಡಿಮೆಯ ವಾದ
ಬರುವುದೇಕೆ?
ಇಬ್ಬರಲಿ ಒಬ್ಬರನು
ಆಯ್ಕೆ ಮಾಡಿಕೊಳುವ
ಪದ್ಧತಿಯದೇಕೆ?
ಎರಡು ಕಣ್ಣುಗಳಲಿ
ಯಾವುದು ಹೆಚ್ಚು?
ಎರಡು ಕೈಗಳಲಿ
ಯಾವುದು ಮೆಚ್ಚು?
ಕಂಗಳೆರಡಿರಲು
ನೋಟ ಸುಂದರ,
ಕೈಗಳೆರಡಿರಲು

ಜೀವನ ಹಗುರ.

No comments:

Post a Comment