ಮಗುವಿನ ಭಯಗಳು
ಅಮ್ಮ ಸೀರೆಯ ಮರೆಯಲ್ಲಿ
ಮುಚ್ಚಿಟ್ಟುಕೊ ನನ್ನ,
ಗುಮ್ಮ ಬರುತ್ತಾನೆ, ಎತ್ತೊಯ್ಯುತ್ತಾನೆ;
ಕರಕೊಂಡು ನನ್ನನ್ನು
ಕಣ್ಮರೆಯಾಗುತ್ತಾನೆ.
ಅಮ್ಮ ಸೀರೆಯ ಮರೆಯಲ್ಲಿ
ಬಚ್ಚಿಟ್ಟುಕೊ ನನ್ನ
ಕಳ್ಳ ಬರುತ್ತಾನೆ, ಕದ್ದೊಯ್ಯುತ್ತಾನೆ
ಸಂತೆಯಲಿ ನನ್ನನ್ನು
ಮಾರಿಬಿಡುತ್ತಾನೆ.
ಅಮ್ಮ ಸೀರೆಯ ಮರೆಯಲ್ಲಿ
ಮುಚ್ವಿಟ್ಟುಕೊ ನನ್ನ
ಟೀಚರ್ ಬರುತ್ತಾರೆ, ಒದ್ದೊಯ್ಯುತ್ತಾರೆ;
ಶಾಲೆಯೆಂಬ ಜೈಲಿನಲಿ
ಕೂಡಿಹಾಕುತ್ತಾರೆ,
ಹೊಡೀತಾರೆ, ಬೈತಾರೆ
ರಾಶಿ ಕೆಲಸ ಕೊಡ್ತಾರೆ,
ಕೈ ನೋಯೊವಷ್ಟು ಬರಿಸ್ತಾರೆ
ಕಣ್ ನೋವಾಗೋಷ್ಟು ಓದಿಸ್ತಾರೆ,
ಮಾಡದೆ ಹೋದ್ರೆ ಮಂಡಿಕಾಲು,
ಗೋಡೆಕುರ್ಚಿ
ಹಾಕಿಸ್ತಾರೆ,
ಕೈಮುರಿಯೋ ಹಾಗೆ ಹೊಡೀತಾರೆ
ಕಾಲ್ ಮುರಿಯೊ ಹಾಗೆ
ಓಡಿಸ್ತಾರೆ,
ಎಲ್ರ ಮುಂದೆ ಹೀಯಾಳ್ಸತಾರೆ
ಮನ ನೋಯೊ ಹಾಗೆ
ನಡ್ಕೋತಾರೆ,
ಅದಕೆ ನನ್ನ ಮುಚ್ಚಿಟ್ಟುಕೊ
ಅಮ್ಮ
ನಾ ನಿನ್ನ ಮುದ್ದು
ಕಂದಮ್ಮ!
No comments:
Post a Comment