Sunday, 3 May 2015

POEM 35 - ಹೆಸರು?

ಹೆಸರು?

ನೋಡಿದೆ ನಾನವಳ
ಗೆಳತಿಯ ಮನೆಯಲ್ಲಿ,
ಹಿಂದೆಯೂ ಅವಳ
ನಾ ನೋಡಿದ್ದು ಅಲ್ಲಿಯೇ.
ಆಗವಳು ಅಂಬೆಗಾಲಿಟ್ಟು
ಹತ್ತಿರಕ್ಕೆ ಬರುತಿದ್ದ ಕಂದ,
ಈಗ ಹಾಯ್ ಆಂಟಿ
ಎನ್ನುವ ೨೦ರ ಯುವತಿ.
ಹಿಂದೆ ಇದ್ದ
ಪ್ರೀತಿಯ ಎಳೆ
ಕಳಚಿರಲಿಲ್ಲ,
ಮತ್ತೆ ಆರಂಭ
ಸಂಬಂಧದ
ಹೊಸ ಅಧ್ಯಾಯ.
ಮಗಳಾಗಿ ಬಂದಳು
ಮನಕೆ ಹತ್ತಿರವಾದಳು.
ನೋವ ಹಂಚಿಕೊಳ್ಳುತ್ತಾ
ಜೀವ ಗೆಳತಿಯಾದಳು.
ನನ್ನೊಳಗೆ ಇದ್ದ,
ನನಗೇ ಅರಿವಿಲ್ಲದಾ
ಸಾಮರ್ಥ್ಯವ ಗುರುತಿಸಿ
ಪ್ರೋತ್ಸಾಹಿಸಿ ಗುರುವಾದಳು.
ಏನನ್ನಬೇಕು ನಾನೀಗ
ಅವಳನ್ನು?
ಮಗಳೆನಲೇ?
ಗೆಳತಿಯೆನಲೇ?
ಅಥವಾ ಗುರುವೆನಲೇ?
ಮೂರು ಸೇರಿ ಏನೆನಲಿ?
ಸಂಬಂಧಕ್ಕೊಂದು
ಹೆಸರಿದೆಯೇ?

ಹೊಸ ಹೆಸರನಿಡಬೇಕೇ!

No comments:

Post a Comment