Sunday, 3 May 2015

POEM 51- ಬದಲಾವಣೆ

ಬದಲಾವಣೆ

ಮನೆ ಬದಲಿಸಬೇಕಿತ್ತು!
ಅದೇನು ಮಹಾ ಕೆಲಸ
ಎಂದುಕೊಂಡೆ ನಾನು.
ಎರಡು ದಿನ ಸಾಕು,
ಎಲ್ಲವನ್ನು ಒಂದೆಡೆ ಕಟ್ಟಿಟ್ಟು
ಟೆಂಪೊದಲಿ ಎತ್ತಿಟ್ಟರೆ,
ಮುಗೀತು  ಕೆಲಸವೆಂದು.
ಸಹಾಯಕ್ಕೆ ಬೇಕಾದಷ್ಟು
ಜನರಿದ್ದಾರೆ, ಸ್ನೇಹಿತರಿದ್ದಾರೆ
ಚಿಂತೆಗೆ ತಾಣವೇ ಇಲ್ಲವೆಂದು.
ಇಲ್ಲವೇ ಎಲ್ಲಾ ಕೆಲಸವನು
ಮೂವರ್ಸ್, ಪ್ಯಾಕರ್ಸ್ ಗೆ
ಕೊಟ್ಟು ನಿಶ್ಚಿಂತಳಾಗಿರಬಹುದೆಂದು.
ಜೋಡಿಸಲು ಕುಳಿತಾಗ ತಿಳಿಯಿತು,
ಇದು ನಾನಂದುಕೊಂಡಷ್ಟು
ಸರಳವಲ್ಲವೆಂದು.
ರಾಶಿ ರಾಶಿ ವಸ್ತುಗಳ ಕಂಡು
ಡೋಲಾಯಮಾನ ಸ್ಥಿತಿ,
ಇದನು ಒಯ್ಯಬೇಕೇ?
ಅದು ಬೇಕೇ ಬೇಡವೇ?
ಇವೆಲ್ಲಾ ನಾನೇ ಕೊಂಡುಕೊಂಡಿದ್ದೇ?
ಅನುಮಾನ! ಯಾವಾಗ? ಗೊತ್ತಿಲ್ಲ!
ಕೆಲವು ಯಾತಕ್ಕೆ ಬಳಸಬೇಕು
ಅರ್ಥವಾಗುತ್ತಿಲ್ಲ.
ಮುಂದೆ ಬೇಕಾಗಬಹುದೆಂದು ಇಟ್ಟಿದ್ದು,
ಎಂದೂ ಬಳಸಿರಲಿಲ್ಲ.
ಮತ್ತೆ ಬೇಕಾಗಬಹುದಾ? ಗೊತ್ತಿಲ್ಲ.
ಸ್ನೇಹಿತರು ಕೊಟ್ಟದ್ದು,
ಆತ್ಮೀಯರಿತ್ತದ್ದು ಎಂದು
ಬೇಕಿರಲಿ,ಬೇಡದಿರಲಿ,
ಪೇರಿಸಿದ್ದೇ ಪೇರಿಸಿದ್ದು.
ಈಗ ತಿಳಿಯುತ್ತಿದೆ ಅದರ ಕಷ್ಟ.
ಮನೆಗೇ ಹೀಗಾದರೆ
ಮನದ ಕಥೆಯೇನು?
ಎಲ್ಲವನ್ನು ಹೀಗೆಯೇ
ಸೇರಿಸುತ್ತಾ ಹೋದರೆ
ಎಂದೋ ಒಂದು ದಿನ
ನಾವೇ ಅದರಲ್ಲಿ ಕಳೆದುಹೋಗುವುದಿಲ್ಲವೇನು?
ದಿನನಿತ್ಯವಲ್ಲದಿದ್ದರೂ
ವಾರಕ್ಕೊಮ್ಮೆಯಾದರೂ
ಸೇರಿಸಿಕೊಂಡಿರುವ
ಎಲ್ಲಾ ವಿಚಾರಗಳ,
ಭಾವನೆಗಳ, ಅಭಿಪ್ರಾಯಗಳ
ಭಿನ್ನತೆಗಳ, ನೋವುಗಳ
ಪರಿಶೀಲಿಸಿ, ಶೋಧಿಸಿ,
ಬೇಕಿರುವಷ್ಟನ್ನು ಮಾತ್ರ ಉಳಿಸಿಕೊಂಡರೆ

ಮನವೆಷ್ಟು ಹಗುರ, ಬದುಕೆಷ್ಟು ಸುಂದರ!!

No comments:

Post a Comment