Wednesday, 30 March 2016

POEM - 92 - ವಿವೇಕಾನಂದರಿಗೊಂದು ಪ್ರಶ್ನೆ

ವಿವೇಕಾನಂದರಿಗೊಂದು ಪ್ರಶ್ನೆ

ಅರಿತುಕೊಂಡಿರುವೆವೆ 
ನಿಮ್ಮ ಮನದ ಮಾತನ್ನು
ನಿಜವಾಗಿ ನಾವು?
ಆಚರಿಸುತ್ತಿರುವೆವೆ
ನಿಮ್ಮ ಜಯಂತಿಯನ್ನು
ಸರಿಯಾಗಿ ನಾವು?

ಯುವಜನತೆಗೆ ಸಾರಿದಿರಿ
ಉಕ್ಕಿನ ನರಗಳು
ಕಬ್ಬಿಣದ ಸ್ನಾಯುಗಳು
ನಿಮ್ಮದಾಗಲೆಂದು
ಅದಕಾಗಿಯೇ ಹೋಗಿರಿ
ಫುಟ್ ಬಾಲ್ ಮೈದಾನಕೆಂದು.

ಬ್ರಿಟಿಷರ ದೌರ್ಜನ್ಯಗಳ
ಮೆಟ್ಟಿನಿಲ್ಲಬಹುದೆಂದು
ಪರಾಧೀನತೆಯಿಂದ
ಮುಕ್ತರಾಗಬಹುದೆಂದು
ರೂಪಿಸಿದಿರಿ ನೂರಾರು
ಕ್ರಾಂತಿಕಾರಿಗಳ ನೀವಂದು.

ರಾರಾಜಿಸುತ್ತಿವೆ ಎಲ್ಲೆಡೆ 
ನಿಮ್ಮ ಫೋಟೊಗಳಿಂದು
ಬಟ್ಟೆ, ಕಾರ್ ಗಳ ಮೇಲೆ
ಹಾಕಿಕೊಂಡು ಯುವಕರಿಂದು
ದೇಹಶಕ್ತಿ ನಶಿಸಿಕೊಂಡು
ಹೋಗುತಿಹರು ಬಾರ್ ಗೆಂದು.

ನೀವಂದು ಧಿಕ್ಕರಿಸಿದಿರಿ
ಹಸಿದ ಹೊಟ್ಟೆಗೆ ಅನ್ನ
ನೀಡದ ಧರ್ಮ ಬೇಡೆಂದು. 
ಧರ್ಮಸಂಕೇತವಾಗಿಸಿ
ನಿಮ್ಮನ್ನು, ಆಟವಾಡುತಿಹರು
ರಾಜಕಾರಣಿಗಳು ಇಂದು.

ಅಂದು ನೀವ್ ಸಾರಿದಿರಿ
ಎಲ್ಲ ಧರ್ಮಗಳ ತಿರುಳು
ಮಾನವತೆಯ ಉದ್ಧಾರ
ಧರ್ಮಗಳ ನಡುವೆ
ಹೊಡೆದಾಟ ಬೇಡೆಂದು
ಜನರ ಐಕ್ಯತೆಗಾಗಿ 
ದುಡಿದಿರಿ ನೀವಂದು.

ಮಾಡುತ್ತ ನಿಮ್ಮದೇ
ನಾಮಸ್ಮರಣೆಯನು
ಜನಗಳ ವಿಂಗಡಿಸುತಿಹರು
ಕೋಮುಗಳಾಗಿ ಇಂದು.
ಉದ್ರೇಕಿಸುತಿಹರು
ಬಡಿದಾಡಿಕೊಳಿರೆಂದು.

ನಿಮ್ಮ ನೆನಪಿನಲಿಂದು
ಎಲ್ಲೆಲ್ಲೂ ಫೋಟೋಗಳು
ಹಾರಗಳ ಹಾಕಿ
ಭಾಷಣದಲಿ ಮುಳುಗಿ
ದೇಶದ ಜನತೆಯ
ಹಾದಿ ತಪ್ಪಿಸುತಿಹರಿಂದು.

ದೇಶದೆಲ್ಲೆಡೆ ತುಂಬಿದೆ
ನೂರಾರು ಸಮಸ್ಯೆಗಳು
ಕೋಮುಗಲಭೆ,  ಜಾತೀಯತೆ
ನಿರುದ್ಯೋಗ,  ಅನಕ್ಷರತೆ,
ದೌರ್ಜನ್ಯ, ಬಡತನ
ಸ್ತ್ರೀಯರಿಗೆ ಅಪಮಾನ.

ಇದೇ ಏನು ನೀವು
ಕನಸು ಕಂಡ ಭಾರತ?
ಇಂತಹ ದೇಶಕೇನು
ಶ್ರಮಿಸಿದಿರಿ ಸಂತತ?
ಇದಕ್ಕಾಗಿಯೇ ಏನು
ದುಡಿದಿರಿ ಅನವರತ?

TRANSLATED POEM - 9 - ದೇವಾಲಯಕೆ ಹೋಗದಿರಿ ನೀವು

Go not to the temple  ~ by Rabindranath Tagore: 

Go not to the temple to put flowers upon the feet of God,
First fill your own house with the Fragrance of love and kindness. 

Go not to the temple to light candles before the altar of God,
First remove the darkness of sin , pride and ego, 
from your heart...

Go not to the temple to bow down your head in prayer,
First learn to bow in humility before your fellowmen.
And apologise to those you have wronged. 

Go not to the temple to pray on bended knees,
First bend down to lift someone who is down-trodden.
And strengthen the young ones.  
Not crush them.

Go not to the temple to ask for forgiveness for your sins,
First forgive from your heart those who have hurt  you!

ದೇವಾಲಯಕೆ  ಹೋಗದಿರಿ ನೀವು  

ದೇಗುಲಕೆ ಹೋಗದಿರಿ ನೀವು 
ದೇವರಿಗೆ ಹೂಗಳ ಸಮರ್ಪಿಸಲು,
ನಿಮ್ಮ ಮನೆಯಲ್ಲಿ
ಕರುಣೆ ಪ್ರೀತಿಯ ಸುಗಂಧವ
ತುಂಬಿರಿ ಮೊದಲು

ಗುಡಿಗೆ ಹೋಗದಿರಿ ನೀವು
ದೇವರ ಮುಂದೆ ದೀಪ ಹೊತ್ತಿಸಲು 
ನಿಮ್ಮ ಮನದಿಂದ
ಪಾಪ, ಅಹಂ, ಜಂಬದ 
ನಿಶೆಯ ತೊಲಗಿಸಿರಿ ಮೊದಲು

ದೇವಸ್ಥಾನಕೆ ಹೋಗದಿರಿ ನೀವು
ತಲೆ ಬಾಗಿಸಿ ಪ್ರಾರ್ಥಿಸಲು
ಕಲಿಯಿರಿ ಸಹಚರರ ಮುಂದೆ 
ವಿನಯದಿಂದ ತಲೆ ಬಾಗಲು
ನೀವು ತಪ್ಪೆಸಗಿರುವವರ 
ಕ್ಷಮೆ ಕೇಳಿರಿ ಮೊದಲು

ಮಂದಿರಕ್ಕೆ ಹೋಗದಿರಿ ನೀವು 
ಮೊಳಕಾಲೂರಿ ದೇವರ ಪ್ರಾರ್ಥಿಸಲು
ಬಾಗಿರಿ ತುಳಿತಕ್ಕೊಳಗಾದವರ ಮೇಲೆತ್ತಲು 
ಚಿಕ್ಕವರ ತುಳಿಯದೆ 
ಸದೃಢಗೊಳಿಸಿರಿ ಮೊದಲು

ದೇಗುಲಕ್ಕೆ ಹೋಗದಿರಿ ನೀವು
ಪಾಪಗಳಿಗೆ ಕ್ಷಮೆ ಯಾಚಿಸಲು
ತುಂಬು ಮನದಿ 
ನಿಮ್ಮ ನೋಯಿಸಿದವರ 
ಕ್ಷಮಿಸಿರಿ ಮೊದಲು
        - ಸುಧಾ ಜಿ

POEM - 91 - ಸಂಕ್ರಾಂತಿ


ಸಂಕ್ರಾಂತಿ 

ಎಳ್ಳು ಬೆಲ್ಲ
ಕಬ್ಬು ಕೊಬ್ಬರಿ
ಎಲ್ಲರಿಗೂ ಹಂಚುತ್ತಾ
ಒಳ್ಳೆಯ ಮಾತನಾಡುತ್ತಾ 
ಮುನಿಸು ದ್ವೇಷ
ಕೋಪ ಕದನ
ಪಕ್ಕಕ್ಕೆ ಸರಿಸುತ್ತ
ನಗುನಗುತ ಓಡಾಡುತ್ತ
ಸ್ನೇಹ ಪ್ರೀತಿ
ಮಾತು ಮಮತೆ
ಎಲ್ಲರಲು ಹರಡುತ್ತ
ಸಂಬಂಧವನು ಬೆಳೆಸುತ್ತಾ
ಈ ಸಂಕ್ರಾಂತಿಯನು 
ಆಚರಿಸುವ
ಅದರ ನಿಜ ಸಾರವನು 
ಪ್ರಚುರಿಸುವ.

POEM - 90 - ಚೌಪದಿಗಳು

ಚೌಪದಿಗಳು 

ಚೌಪದಿ - ೧
ಅಳೆಯಲಾದೀತೇ ದುಡ್ಡಿನಿಂದೆಲ್ಲವನು,
ಪ್ರೀತಿ,  ಸ್ನೇಹ, ವಾತ್ಸಲ್ಯವನು?
ಪಡೆಯಲಾದೀತೇ ಹಣದಿಂದೆಲ್ಲವನು?
ಮಮತೆ, ನಂಬಿಕೆ, ಸಾಂತ್ವನವನು?

ಚೌಪದಿ - ೨
ಶ್ರಮಸಂಸ್ಕೃತಿ ಅದ್ಭುತ
ಆಗುವನು ವ್ಯಕ್ತಿ ವಿನೀತ,
ಎಲ್ಲರ ಬೆಳವಣಿಗೆ ತ್ವರಿತ
ಸಮಾಜವಾಗುವುದು ಶ್ರೀಮಂತ

ಚೌಪದಿ - ೩

ಕಾಣುವುದು ಹಲ್ಲುಗಳೆಂದು
ಮುಖಮುಚ್ಚಿ ನಗುವೆಯೇಕೆ?
ನಿಷ್ಕಲ್ಮಶ ಮನದ ಭಾವ
ತೋರ್ಪಡಿಸಲು ಸಂಕೋಚವೇಕೆ? 

ಚೌಪದಿ - ೪
ಸಹಿಸಿಯೂ ಅಷ್ಟೆಲ್ಲಾ ಕಷ್ಟವನು ಗೆಳತಿ
ಉಳಿಸಿಕೊಂಡಿರುವರು ಹೇಗೆ ಜೀವನಪ್ರೀತಿ?
ವಿಸ್ಮಯವೇ ನನಗೆ ನಿನ್ನ ಬದುಕಿನ ರೀತಿ
ಅದಕೆ ನಿನ್ನ ಕಂಡರೆ ಅಷ್ಟೊಂದು ಪ್ರೀತಿ.

POEM 89 - ಗಣರಾಜ್ಯೋತ್ಸವ

ಗಣರಾಜ್ಯೋತ್ಸವ  

ಬ್ರಿಟಿಷರ ಅಧಿಪತ್ಯಕೆ
ಸಾಮ್ರಾಜ್ಯಶಾಹಿ ಆಡಳಿತಕೆ
ಮಹಾರಾಜರ ಪದ್ಧತಿಗೆ
ಅಂತ್ಯ ಹಾಡಿದ ದಿನವಿದು.

ಪ್ರಜೆಗಳೇ ಪ್ರಭುಗಳೆಂದು
ಸಂವಿಧಾನ ಶ್ರೇಷ್ಠವೆಂದು
ಜನ ಸಾರ್ವಭೌಮರೆಂದು
ಜಗಕೆ ಸಾರಿದ ದಿನವಿದು.

ವಂಶಾಧಿಕಾರ ಇಲ್ಲವೆಂದು
ಚುನಾವಣೆಯೇ ಮುಖ್ಯವೆಂದು
ಎಲ್ಲ ಸ್ಥಾನ ಎಲ್ಲರಿಗೆಂದು
ಘೋಷ ಎದ್ದ ದಿನವಿದು

ಎಲ್ಲರೂ ಸಮಾನರೆಂದು
ಜಾತಿ ಧರ್ಮ ಬೇಡವೆಂದು
ಎಲ್ಲರೂ ಸೋದರರೆಂದು
ಪ್ರಕಟಪಡಿಸಿದ ದಿನವಿದು

ಎಲ್ಲರೂ ಸ್ವತಂತ್ರರೆಂದು
ಆತ್ಮಗೌರವ ಉಂಟು ಎಂದು
ನ್ಯಾಯವೆಲ್ಲರ ಪಾಲೆಂದು
ಸಾರಿ ಹೇಳಿದ ದಿನವಿದು.

ದೇಶದ ಐಕ್ಯತೆಗೆಂದು
ಎಲ್ಲರ ಸಮೃದ್ಧಿಗೆಂದು
ಒಗ್ಗೂಡಿ ನಡೆಯೋಣವೆಂದು
ಕಂಕಣ ತೊಟ್ಟ ದಿನವಿದು.

ಎಲ್ಲ ಧೀರ ಯೋಧರಂದು
ಮಾಡಿದ ಬಲಿದಾನವಿಂದು
ನಾವು ನೆನಪಿಸಿಕೊಂಡು
ಸಾಗೋಣ ದೇಶ ಕಟ್ಟಲೆಂದು.

POEM - 88 - ಎದ್ದೇಳು ಗೆಳತಿ ಫೀನಿಕ್ಸ್ ಪಕ್ಷಿಯಂತೆ!

ಎದ್ದೇಳು ಗೆಳತಿ ಫೀನಿಕ್ಸ್ ಪಕ್ಷಿಯಂತೆ!

ಗೆಳತಿ ಹೇಳಿದೆ ನೀನು
ವಿವಾಹವಾದ ಮೇಲೆ
ಬದಲಿಸಿದೆ ಹೆಸರನ್ನು
ಮರೆತೆ ಗೆಳತಿಯರನ್ನು
ದೂರಸರಿಸಿದೆ ತಾಯ್ತಂದೆಯರನ್ನು
ತೊರೆದೆ ಆಸೆಆಕಾಂಕ್ಷೆಗಳನ್ನು
ಕಳೆದುಕೊಂಡೆ ಅಸ್ತಿತ್ವವನ್ನೇ ಎಂದು.

ಕೇಳುತ್ತಿರುವೆ ನಾ ಗೆಳತಿ
ಅನ್ಯಮಾರ್ಗವಿರಲಿಲ್ಲವೇ ಸಖಿ?

ಅಂಗೀಕರಿಸಿದೆ ಏಕೆ ಬದಲಿಸಲು ಹೆಸರ?
ಒಪ್ಪಿದೆ ಏಕೆ ಮರೆಯಲು ಗೆಳತಿಯರ?
ಅನುಮೋದಿಸಿದ್ದೇಕೆ ಸರಿಸಲು ಹೆತ್ತವರ?
ಸಮ್ಮತಿಸಿದ್ದೇಕೆ ತೊರೆಯಲು ಮನಸಿನಾಸೆಗಳ?
ಕಳೆದುಕೊಳ್ಳುತ್ತಿರುವಾಗ ಅಸ್ತಿತ್ವವನ್ನೇ
ಮೌನವಾಗಿ ತಳ್ಳಿದ್ದೇಕೆ ಭಾವನೆಗಳನ್ನೇ?

 ಗೆಳತಿ ಕಾಲ ಮಿಂಚಿಲ್ಲವಿನ್ನೂ
ಗೋರಿಗೆ ಕಾಲಿಡುವ ಮುನ್ನ
ಮತ್ತೆ ಎದ್ದುನಿಲ್ಲುವ ಅವಕಾಶವಿದೆ
ಇನ್ನೂ ಸಾಧಿಸಲು ಸಮಯವಿದೆ
ಉಳಿಸಿಕೊಳ್ಳಲು ಹೆಸರ
ಆರಿಸಿಕೊಳ್ಳಲು ಗೆಳತಿಯರ
ನೋಡಿಕೊಳ್ಳಲು ತಾಯ್ತಂದೆಯರ
ಕೈಗೊಳ್ಳಲೊಂದು ವೃತ್ತಿಯ
ಕೈಬಿಡದಿರಲು ಆಸೆಯ
ಮರು ಸ್ಥಾಪಿಸಲು ಮರೆತ ಅಸ್ತಿತ್ವವ
ಬೆಳೆಸಿಕೊಳ್ಳಲು ನಮ್ಮ ವ್ಯಕ್ತಿತ್ವವ

ಎದ್ದೇಳು ಗೆಳತಿ
ಫೀನಿಕ್ಸ್ ಪಕ್ಷಿಯಂತೆ!!

             

POEM - 87 - ಮಹಿಳಾ ದಿನದ ಆಚರಣೆ

ಮಹಿಳಾ ದಿನದ ಆಚರಣೆ 

ಮಹಿಳಾ ದಿನದಂದು
ಕೇಳಿದರು ನಮ್ಮನ್ನು
ನಿಮಗೇಕೆ ಈ ದಿನ?
ಶಿಕ್ಷಣವಿದೆ, ಉದ್ಯೋಗವಿದೆ
ಸುಖೀ ಕುಟುಂಬವಿದೆ
ಮತ್ತೇಕೆ ಈ ಆಚರಣೆ?
ಇನ್ನೇಕೆ ಈ ಪ್ರತಿಭಟನೆ?

ಉತ್ತರಿಸಿದಳು ಒಬ್ಬಾಕೆ
ನಮ್ಮೆಲ್ಲರ ಪ್ರತಿನಿಧಿಯಾಗಿ
ನಿಜ, ನೀವು ಹೇಳುತ್ತಿರುವುದು
ಅಕ್ಕರೆಯ ತಂದೆ ಕೊಡಿಸಿದ ಶಿಕ್ಷಣ
ಸ್ವಸಾಮರ್ಥ್ಯದಿಂದ ಪಡೆದ ಉದ್ಯೋಗ
ಪ್ರೀತಿಯಿಂದ ಗೌರವಿಸುವ ಸಂಗಾತಿ
ಮಮತೆದಿಂದ ಕಾಣುವ ಸ್ನೇಹಿತರು
ಎಲ್ಲವೂ, ಎಲ್ಲರೂ ಇದ್ದಾರೆ ನಿಜ;

ಆದರೂ ಸಮಾಜದಲ್ಲಿ ನಮಗೆ ನಿಜ ಸಮಾನತೆ ಇದೆಯೇ?
ನಾವೇ ನಿರ್ಧಾರಗಳನ್ನು ಕೈಗೊಳ್ಳುವ ಹಕ್ಕಿದೆಯೇ?
ಆಕಾಶಕ್ಕೇರುವ ಕನಸುಗಳ ನನಸಾಗಿಸಲು ಆಗಿದೆಯೇ?
ವಿಭಿನ್ನ ರಂಗಗಳಲ್ಲಿ ಸಾಮರ್ಥ್ಯ ತೋರಿಸುವ ಅವಕಾಶವಿದೆಯೇ?
ನಿರ್ಭಯವಾಗಿ ಹೊರಗಡೆ ಓಡಾಡುವ ವಾತಾವರಣವಿದೆಯೇ?
ಕಛೇರಿಯಲಿ ವಕ್ರನೋಟಗಳ ಹಾವಳಿಯಿಂದ ಮುಕ್ತಿಯಿದೆಯೇ?
ಬೀದಿಕಾಮಣ್ಣರ ಕಾಟದಿಂದ ವಿಮುಕ್ತಿಯಿದೆಯೇ? 

ಇಷ್ಟು ಮಾತ್ರವಲ್ಲ
ಈ ದಿನದ ಆಚರಣೆಗೆ
ಇದೆ ಇನ್ನೊಂದು ದೊಡ್ಡ ಕಾರಣ -

ನಮಗಿರುವುದೆಲ್ಲವೂ
ನಮ್ಮೆಲ್ಲ ಸೋದರಿಯರಿಗೆ ಸಿಕ್ಕಿದೆಯೇ?
ಶಿಕ್ಷಣ, ಕೆಲಸ, ಸ್ಥಾನಮಾನ ದೊರೆತಿದೆಯೇ?
ಕುಡುಕ ಗಂಡನಿಂದ, ಅವನ ಹೊಡೆತಗಳಿಂದ ಮುಕ್ತಿ ಪಡೆದಿರುವಳೇ?
ಕೌಟುಂಬಿಕ ಹಿಂಸೆ, ವರದಕ್ಷಿಣೆ ಸಾವು ನಿಂತಿದೆಯೇ?
ಸಮಾನ ಕೆಲಸಕ್ಕೆ ಸಮಾನ ವೇತನ ಪಡೆಯುತಿಹಳೇ?
ತನ್ನ ದೇಹದ ಮೇಲೆ ಸಂಪೂರ್ಣ ಹಕ್ಕಿದೆಯೇ?
ಹೆಣ್ಣುಭ್ರೂಣವೆಂದಾಗ ಉಳಿಸಿಕೊಳ್ಳುವ ಅಧಿಕಾವಿದೆಯೇ?

ಅವರಿಗಾಗಿ ದನಿ ಎತ್ತದಿದ್ದರೆ
ನಮ್ಮ ಶಿಕ್ಷಣದ ಉಪಯೋಗವೇನು ?
ಅವರಿಗಿಲ್ಲದ್ದು ನಮಗೆ ದೊರೆತರೆ 
ಸಮಾಜಕ್ಕೆ ಪ್ರಯೋಜನವೇನು?
ಬೆಸೆದಿದೆ ನಮ್ಮೆಲ್ಲರ ಬಾಳು 
ಒಂದೇ ವಸ್ತ್ರದ ಎಳೆಗಳ ತೆರದಿ
ವಿಮುಕ್ತಿ ದೊರೆವುದು ಕೇಳು
ಎಲ್ಲರಿಗೂ, ಒಟ್ಟಿಗೆ, ಒಂದೇ ಸಮಯದಿ
ಬಟ್ಟೆಯ ಪ್ರತಿ ನೂಲು
ಗಟ್ಟಿಗೊಳ್ಳಲೇಬೇಕು 
ಅದುವರೆಗೂ ಹೋರಾಟ
ಸಾಗುತ್ತಿರಲೇಬೇಕು! !
             

POEM - 86 - ಇತಿಹಾಸದ ತಿರುಚುವಿಕೆ

ಇತಿಹಾಸದ ತಿರುಚುವಿಕೆ

ಮುಸಲ್ಮಾನರು ಯಾರು?
ಶತ್ರುಗಳಲ್ಲವೇ ಅವರು?
ಹೊರದೇಶದವರವರು
ಉಳಿದಿದ್ದಾರಿಲ್ಲೇಕೆ ಅವರು?
ನನ್ನ ಪ್ರಶ್ನೆ ಕೇಳಿದ
೧೦ ವರ್ಷದ ಕಂದ
ಏನು ಹೇಳಬೇಕು?
ಹೇಗೆ ಉತ್ತರಿಸಬೇಕು? 
ಮನ ಆಘಾತಕ್ಕೊಳಗಾಯಿತು
ಸುಧಾರಿಸಲು ಸಮಯವಾಯಿತು.
ಈ ಮಾತ ಹೇಳಿದವರು ಯಾರು?
ಇಂತಹುದು ತಲೆಗೆ ತುಂಬಿದವರಾರು?
ನಮ್ಮ ಸಮಾಜದ ಟೀಚರ್,
ದಂಗುಬಡಿಸಿತು ಬಂದ ಉತ್ತರ.
ದಾರಿ ತೋರಬೇಕಾದ ಗುರುವೇ
ಹಳಿ ತಪ್ಪಿಸುವುದು ತರವೇ? 

ಕಂದ ಹಮೀದಣ್ಣ ಅಣ್ಣನಲ್ಲವಾ? 
ಅಸ್ಲಾಂ ಚಾಚಾ ಪ್ರೀತಿಪಾತ್ರರಲ್ಲವಾ?
ಫಾತಿಮಾ ಚಾಚಿ ಬೇಡವಾ?
ಅಶ್ಫಾಕ್ ಜೊತೆ ಆಟವಾಡುವುದಿಲ್ಲವಾ?
ಅಯ್ಯೋ ಅವರೆಲ್ಲ ಬೇಕು ನನಗೆ
ಕೇಳುತ್ತಿರುವಿರಿ ಏಕೆ ಹೀಗೆ?
ನಾ ಕೇಳುತ್ತಿರುವುದು
ಮುಸಲ್ಮಾನರ ಬಗ್ಗೆ

ಕಂದ ಇವರೆಲ್ಲರೂ ಮುಸಲ್ಮಾನರೇ
ಆದರೆ ನಮ್ಮವರೇ ಅಲ್ಲವೇ?

ನನ್ನ ಜೊತೆ ದಿನನಿತ್ಯ ಆಟವಾಡುವ
ಅಶ್ಫಾಕ್ ಹೊರಗಿನವನು ಹೇಗೆ?
ಅಂಗಡಿಗೆ ಹೋದಾಗ ಮಿಠಾಯಿ ಕೊಡುವ 
ಕರೀಂ ಚಾಚಾ ಶತ್ರು ಹೇಗೆ?
ನನಗುಣಿಸುವ ಫಾತಿಮಾ ಚಾಚಿ
ದೂರದವಳು ಹೇಗೆ?
ಸೈಕಲ್ ಕಲಿಸಿದ ಹಮೀದಣ್ಣ
ಬೇರೆಯವನಾಗುವ ಹೇಗೆ?

ಹಾಗಾದರೆ ಇದೆಲ್ಲ ಏನಮ್ಮ?
ಹೀಗೆಲ್ಲ ಹೇಳುವರು ಏಕಮ್ಮ?

ಇತಿಹಾಸದ ತಿರುಚುವಿಕೆ ಬಗ್ಗೆ
ಏನೆಂದು ಹೇಳಲಿ ನಾ ಕಂದನಿಗೆ?
ದ್ವೇಷಪೂರ್ಣ ರಾಜಕೀಯ
ಅವನಿಗರ್ಥವಾಗುವುದು ಹೇಗೆ?
ಸಾಮರಸ್ಯ ಕದಕಿ
ಸಂಬಂಧ ಹೊಸಕಿ  
ನಂಬಿಕೆಯ ಹದಗೆಡಿಸಿ
ಸುಂದರ ಬಾಳ ನಶಿಸಿ
ಜನರ ಗೋರಿಗಳ ಮೇಲೆ
ಮಹಲು ಕಟ್ಟುತ್ತಿರುವವರ 
ಧರ್ಮದ ಹೆಸರಿನಲಿ
ಕಲಹಗಳ ಹುಟ್ಟಿಸುತಿರುವರ
ನೀಚತನ ತಿಳಿಸುವುದು ಹೇಗೆ?
ದುಷ್ಟತೆಯ ಅರಿವಾಗಿಸುವುದು ಹೇಗೆ?

ಕಂದ ತಿಳಿಯುವುದು ಎಲ್ಲ
ನೀ ಸ್ವಲ್ಪ ದೊಡ್ಡವನಾದ ಮೇಲೆ
ಕೋಮುದ್ವೇಷದ ಹಿಂದಿರುವೆಲ್ಲ
ನಿಜಕಾರಣಗಳ ಸರಮಾಲೆ 

ದೂಡು ಧರ್ಮಜಾತಿಗಳೆಲ್ಲವ ಪಕ್ಕಕ್ಕೆ 
ತಲೆಬಾಗು ಸದಾ ನೀ ಸ್ನೇಹಕ್ಕೆ
ಬೆಲೆ ಬೇಡ ವ್ಯಕ್ತಿಯ ಜಾತಿಧರ್ಮಕ್ಕೆ
ಗೌರವ ನೀಡು ಅವರ ವ್ಯಕ್ತಿತ್ವಕ್ಕೆ

POEM 85 - ಮಾನವೀಯತೆ ಎಲ್ಲಿ?

ಮಾನವೀಯತೆ ಎಲ್ಲಿ?

ಜೋರಾದ ಸದ್ದು ಕೇಳಿಬಂದಿತ್ತು
ಆರ್ತನಾದ ಕಿವಿಗಪ್ಪಳಿಸಿತ್ತು 
ದನಿ ಬಂದೆಡೆ ಕಣ್ಣು ನೋಡಿತ್ತು
ಕಂಡ ದೃಶ್ಯ ಕರುಳ ಕಿವುಚುವಂತಿತ್ತು
ಲಾರಿಯೊಂದು ವ್ಯಕ್ತಿ ಮೇಲೆ ಹಾಯ್ದಿತ್ತು
ದೇಹ ಎರಡು ಭಾಗವಾಗಿತ್ತು
ವಿಚಿತ್ರವೆಂದರೆ ವ್ಯಕ್ತಿಯಲಿ ಜೀವವಿತ್ತು 
ರಕ್ತ ಸುರಿದರೂ ದನಿ ಮಾತನಾಡುತಿತ್ತು
ನೆರವಿಗಾಗಿ ಎಲ್ಲರ ಯಾಚಿಸುತಿತ್ತು
ದೀನವಾಗಿ ನೆರೆದವರ ಬೇಡುತಿತ್ತು
ನೆರೆದ ಜನ ಮೂಕಪ್ರೇಕ್ಷಕರಾಗಿತ್ತು
ನೆರವೀಯದ ಮನ ಕಲ್ಲಾಗಿತ್ತು 

ನನ್ನೊಳಗಿನ ಪತ್ರಕರ್ತ ಪ್ರಜ್ಞೆ ಎದ್ದಿತ್ತು
ಮರುದಿನದ ಸುದ್ದಿ ಕಣ್ಮುಂದೆ ಇತ್ತು 
ಬ್ಯಾಗಿನಿಂದ ಕ್ಯಾಮರಾ ಹೊರಬಂತು 
ವೀಡಿಯೊ ಚಿತ್ರೀಕರಣ ಆರಂಭವಾಯ್ತು
ವ್ಯಕ್ತಿಯ ನಿಕಟ ಚಹರೆ ಬೇಕೆನಿಸಿತು 
ಜೂಮ್ ಲೆನ್ಸ್ ಹಾಕಿ ತೆಗೆಯಲಾರಂಬಿಸಿತು 
ಸಾಯುತ್ತಿದ್ದ ವ್ಯಕ್ತಿ ಕರೆದಂತೆ ಭಾಸವಾಯ್ತು
ಕೊನೆ ಶಾಟ್ ತೆಗೆಯುವುದು ಥ್ರಿಲ್ ಎನಿಸಿತು
ಹತ್ತಿರಕೆ ಹೋದಾಗ ಆ ಜೀವ ಬೇಡಿತು
ಕೊನೆಯಾಸೆಯನು ಶೂಟ್ ಮಾಡೆಂದಿತು 
ನನ್ನ ಕಣ್ಣು, ದಾನ ಕೊಡುತೇನೆಂದಿತು

ಕೇಳುತ್ತಿದ್ದಂತೆ ಕ್ಯಾಮರಾ ಕೆಳಜಾರಿತು
ನಾಚಿಕೆಯಿಂದ ತಲೆ ತಗ್ಗಿತ್ತು 
ಕಣ್ಣಿಂದ ಕಂಬನಿ ಸುರಿಯತೊಡಗಿತು
ಅವನಲ್ಲಿದ್ದ  ಮಾನವೀಯತೆಯ ತಂತು 
ನನ್ನಲ್ಲಿ ಮರೆಯಾಯಿತೇಕೆ?  ಪ್ರಶ್ನೆ ಮೂಡಿತು!!

Monday, 14 March 2016

Translated Poem - 9 - ಜೀವಜಾಲ

ಜೀವಜಾಲ

ಇದು 150 ವರ್ಷಗಳ ಹಿಂದೆ, ರೆಡ್ ಇಂಡಿಯನ್‍ರಲ್ಲಿ ಬಹಳ ವಿವೇಕಿ ಮತ್ತು ಅಗಾಧವಾಗಿ ಗೌರವಿಸಲ್ಪಡುತ್ತಿದ್ದ ಮುಖ್ಯಸ್ಥ ಚೀಫ್  ಸಿಯಾಟೆಲ್ ವಾಷಿಂಗ್ಟನ್ ನಲ್ಲಿ ಸರ್ಕಾರ ಅವರ ಜಮೀನನ್ನು ಕೊಂಡುಕೊಳ್ಳಬೇಕೆಂದಾಗ ಸರ್ಕಾರವನ್ನು ಉದ್ದೇಶಿಸಿ ಮಾಡಿದ ಭಾಷಣ. ಪರಿಸರದ ಬಗ್ಗೆ ಮಾಡಿರುವ ಎಲ್ಲ ಭಾಷಣಗಳಲ್ಲಿ ಅತ್ಯಂತ ಸ್ಪಷ್ಟ, ಪರಿಣಾಮಕಾರಿಯಾದ ಭಾಷಣ ಎನಿಸಲ್ಪಟ್ಟಿದೆ.
ಇಂದು ಪರಿಸರದ ದಿನದಂದು ಇದನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಬಯಸಿ ಇದನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ.
ಭಾಷಣ ನಿಮ್ಮ ಮನಮುಟ್ಟಿದರೆ, ಆ ಕೀರ್ತಿ ಭಾಷಣಕಾರರಾದ ಚೀ¥sóï ಸಿಯಾಟೆಲ್‍ರವರಿಗೆ ಸೇರಬೇಕಾದದ್ದು. ಲೇಖನ ಚೆನ್ನಾಗಿಲ್ಲವೆನಿಸಿದರೆ ಅದು ಅನುವಾದಕರ ಸಂಪೂರ್ಣ ಹೊಣೆಯಾಗಿರುತ್ತದೆ. ಆದ್ದರಿಂದ ಇಂಗ್ಲಿಷ್, ಕನ್ನಡ ಎರಡನ್ನೂ ಕಳಿಸುತ್ತಿದ್ದೇನೆ.
ದಯವಿಟ್ಟು ತಮ್ಮ ಅಭಿಪ್ರಾಯ ಸಲಹೆಗಳನ್ನು ತಿಳಿಸಿ. ಉತ್ತಮವಾಗಿದೆ ಎನಿಸಿದರೆ ನಿಮ್ಮ ಸ್ನೇಹಿತರಿಗೆ ಕಳಿಸಿಕೊಡಿ.
ಅವರು ಹೇಳಿರುವಂತೆ, ನಮಗೆ ಸಾಧ್ಯವಾದಷ್ಟು ಮಟ್ಟಿಗೆ ಆಚರಿಸಿದರೆ ಈ ಪರಿಸರದ ದಿನ ಆಚರಣೆಗೆ ಅರ್ಥ ಬರುತ್ತದೆ.

ಜೀವಜಾಲ

ಆಕಾಶವನ್ಹೇಗೆ ಕೊಂಡುಕೊಳ್ಳುವಿರಿ? ಸಿಯಾಟೆಲ್ ಮುಖ್ಯಸ್ಥ ಆರಂಭಿಸಿದರು.
ಗಾಳಿ, ಮಳೆಯನ್ಹೇಗೆ ನಿಮ್ಮದಾಗಿಸಿಕೊಳ್ಳುವಿರಿ?

ಹೇಳಿದ್ದರು ಅಮ್ಮ ನನಗೆ,
ಈ ಭೂಮಿಯ ಪ್ರತಿಯೊಂದು ಭಾಗವೂ ನಮ್ಮವರಿಗೆ ಪವಿತ್ರವೆಂದು.
ಪ್ರತಿಯೊಂದು ಮರ, ಪ್ರತಿಯೊಂದು ಸಮುದ್ರ ತೀರ,
ಕಗ್ಗತ್ತಲ ಕಾಡಿನ ಪ್ರತಿ ಮಂಜು,
ಪ್ರತಿ ಹುಲ್ಲುಗಾವಲು ಮತ್ತು ಸುತ್ತ ಗುಂಯ್‍ಗುಡುವ ಕೀಟ,
ಎಲ್ಲವೂ ನನ್ನ ಜನರ ನೆನಪಿನಲ್ಲಿ ಪವಿತ್ರವೆಂದು.

ಅಪ್ಪ ಹೇಳಿದ್ದರು ನನಗೆ,
ಮರಗಳಲ್ಲಿ ಹರಿವ ಜೀವರಸದ ಬಗ್ಗೆ ಗೊತ್ತು ನನಗೆ,
ನನ್ನದೇ ರಕ್ತನಾಳಗಳಲ್ಲಿ ಹರಿವ ರಕ್ತದ ಅರಿವಿರುವಂತೆ.
ಭೂಮಿಯೊಳಗೊಂದು ಭಾಗ ನಾವು, ನಮ್ಮೊಳಗೊಂದು ಭಾಗವದು.
ಸುವಾಸನೆಭರಿತ ಹೂಗಳು ನಮ್ಮ  ಅಕ್ಕತಂಗಿಯರು
ಕರಡಿ ಜಿಂಕೆ, ಹದ್ದುಗಳು ನಮ್ಮ ಅಣ್ಣತಮ್ಮಂದಿರು.
ಕಲ್ಲು, ಕಣಿವೆ, ಹುಲ್ಲುಗಾವಲು,
ಕುದುರೆಮರಿಗಳು – ಎಲ್ಲವೂ ಒಂದೇ ಕುಟುಂಬದವರು.

ನನ್ನ ಪೂರ್ವಜರ ದನಿ ಹೇಳಿತು ನನಗೆ,
ತೊರೆಗಳಲ್ಲಿ, ನದಿಗಳಲ್ಲಿ ಹೊಳೆವ ಹರಿವ ನೀರು
ನೀರು ಮಾತ್ರವಲ್ಲವದು, ನಿನ್ನ ಮುತ್ತಾತನ ತಾತನ ರಕ್ತವೆಂದು.
ಸರೋವರಗಳ ಸ್ವಚ್ಛ ಜಲದಿ ಕಾಣುವ ಅಸ್ಪಷ್ಟ ಛಾಯೆ
ನಮ್ಮ ಜನರ ಜೀವನದ ನೆನಪುಗಳ ಸಾರುತ್ತವೆಂದು.

ನೀರಿನ ಝುಳುಝುಳು ನಿನ್ನ ಮುತ್ತಜ್ಜಿಯ ಅಜ್ಜಿಯ ದನಿಯೆಂದು,
ನದಿಗಳು ನಮ್ಮ ಸೋದರರೆಂದು, ನಮ್ಮ ದಾಹ ತಣಿಸುತ್ತವೆ
ನಮ್ಮ ದೋಣಿಗಳ ತೇಲಿಸುತ್ತವೆ, ಮಕ್ಕಳನ್ನು ಪೆÇೀಷಿಸುತ್ತವೆ.
ನಿನ್ನ ಸೋದರನಿಗೆ ನೀ ನೀಡುವ ಪ್ರೀತಿಯನ್ನೇ ನದಿಗಳಿಗೂ ನೀಡಬೇಕೆಂದು.

ನನ್ನಜ್ಜನ ದನಿ ಹೇಳಿತು ನನಗೆ
ಗಾಳಿ ಅತ್ಯಮೂಲ್ಯ, ತನ್ನ ಚೇತನವನ್ನದು, 
ಅದು ಬೆಂಬಲಿಸುವ ಎಲ್ಲ ಜೀವರಾಶಿಯೊಂದಿಗೆ ಹಂಚಿಕೊಳ್ಳುತ್ತದೆ.
ನಮಗೆ ಮೊದಲ ಉಸಿರನ್ನು ನೀಡುವ ಗಾಳಿಯೇ 
ನಮ್ಮ ಕೊನೆಯುಸಿರನ್ನೂ ಸ್ವೀಕರಿಸುತ್ತದೆ.
ಭೂಮಿ ಮತ್ತು ಗಾಳಿಯನ್ನು ದೂರವಿಡಬೇಕು, ಪವಿತ್ರವಾಗಿಡಬೇಕು,
ಹೂಗಿಡಗಳ ತೋಟದಿಂದ ಸಿಹಿಯಾಗಿರುವ
ಗಾಳಿಯ ಸವಿಯಲು ಹೋಗುವಂತಹ ಸ್ಥಳದಂತೆ.

ಕೊನೆಯ ರೆಡ್ ಸ್ತ್ರೀ-ಪುರುಷ ಮರೆಯಾದಾಗಲೂ,
ಅವರ ನೆನಪು ಕೇವಲ ಹುಲ್ಲುಗಾವಲನ್ನು ದಾಟುವ ಮೋಡಗಳ ನೆರಳಿನಂತಾದಾಗಲೂ, 
ಆಗಲೂ ಈ ತೀರಗಳು, ಕಾಡುಗಳು ಇನ್ನೂ ಇರುತ್ತವೆಯೇ?
ನನ್ನ ಜನರ ಚೇತನ ಇನ್ನೂ ಇರುತ್ತದೆಯೇ?
ನನ್ನ ಪೂರ್ವಜರು ಹೇಳಿದರು, ಇದು ನಮಗೆ ಗೊತ್ತು:
ಭೂಮಿ ನಮಗೆ ಸೇರಿದ್ದಲ್ಲ. ನಾವು ಭೂಮಿಗೆ ಸೇರಿದವರು.

ನನ್ನ ಅಜ್ಜಿಯ ದನಿ ಹೇಳಿತು,
ನಿನಗೆ ಕಲಿಸಿದ್ದನ್ನು ನಿನ್ನ ಮಕ್ಕಳಿಗೆ ಕಲಿಸು.
ಭೂಮಿ ನಮ್ಮ ತಾಯಿ.
ಭೂಮಿಗೆ ಏನಾಗುತ್ತದೋ ಅದು ಅವಳ ಮಕ್ಕಳಿಗೂ ಆಗುತ್ತದೆ.

ನನ್ನ ದನಿ ಕೇಳಿ ಮತ್ತು ನನ್ನ ಪೂರ್ವಜರ ದನಿ ಕೇಳಿ,
ಸಿಯಾಟೆಲ್ ಮುಖ್ಯಸ್ಥ ಹೇಳಿದರು:
ನಿಮ್ಮ ಜನರ ಹಣೆಬರಹ ನಮಗೆ ನಿಗೂಢ
ಎಲ್ಲಾ ಕಾಡೆಮ್ಮೆಗಳನ್ನು ಕಡಿದರೆ ಪರಿಣಾಮ ಏನಾಗುವುದು?
ಎಲ್ಲಾ ಕುದುರೆಗಳನ್ನು ಪಳಗಿಸಿದರೆ ಫಲಿತಾಂಶ ಏನಾಗುವುದು?
ಕಾಡಿನ ನಿಗೂಢ ಮೂಲೆಮೂಲೆಗಳಲ್ಲೂ ಮನುಷ್ಯನ ವಾಸನೆ
ಪಸರಿಸಿದರೆ ವಾತಾವರಣ ಏನಾಗುವುದು?

ಬೆಟ್ಟಗಳ ನೋಟ, ಮಾತನಾಡುವ ಕಂಬಿಗಳಿಂದ ಆವರಿಸಿದರೆ,
ಪೆÇದೆಗಳು ಎಲ್ಲಿರುತ್ತವೆ? ಹಾಳಾಗುತ್ತವೆ.
ಹದ್ದುಗಳು ಎಲ್ಲಿರುತ್ತವೆ? ಹಾರಿಹೋಗುತ್ತವೆ
ವೇಗವಾಗಿ ಓಡುವ ಮರಿಕುದುರೆ ಮತ್ತು ಬೇಟೆಗೆ
ವಿದಾಯ ಹೇಳಿದಾಗ ಏನಾಗುವುದು?
ಬದುಕಿನ ಅಂತ್ಯವದು, ಉಳಿವಿನ ಆರಂಭವದು.

ಇದು ನಮಗೆಲ್ಲ ಗೊತ್ತು: ನಮ್ಮ ರಕ್ತ ನಮ್ಮನ್ನು ಒಂದುಗೂಡಿಸಿದಂತೆ 
ಎಲ್ಲವೂ ಸಂಬಂಧಿತವೆಂದು ನಮಗೆ ಗೊತ್ತು.
ಜೀವಜಾಲವನ್ನು ನಾವು ನೂಲಲಿಲ್ಲ, 
ನಾವದರಲ್ಲೊಂದು ಎಳೆಯಷ್ಟೇ.
ಆ ಜಾಲಕ್ಕೆ ನಾವೇನು ಮಾಡುತ್ತೇವೋ, ಅದು ನಮಗೇ ನಾವು ಮಾಡಿಕೊಳ್ಳುತ್ತೇವೆ.

ಈ ಭೂಮಿಯನ್ನು ನಾವು ಪ್ರೀತಿಸುತ್ತೇವೆ, ನವಜಾತ ಶಿಶು ತನ್ನಮ್ಮನ ಎದೆಬಡಿತವನ್ನು ಪ್ರೀತಿಸುವಂತೆ.
ನಾವು ನಿಮಗೆ ಭೂಮಿಯನ್ನು ಮಾರಿದರೆ, ನಾವು ಜತನಗೊಳಿಸಿದಂತೆ ನೀವೂ ಕಾಳಜಿ ವಹಿಸಿ.
ನೀವು ಪಡೆದಾಗ ಈ ಭೂಮಿ ಹೇಗಿತ್ತು ಎಂಬುದ ನಿಮ್ಮ ಸ್ಮೃತಿಪಟಲದಿಂದ ಅಳಿಸದಿರಿ.

ಭೂಮಿ, ಗಾಳಿ, ನದಿಗಳನ್ನು ರಕ್ಷಿಸಿ, ನಿಮ್ಮ ಮಕ್ಕಳ ಮಕ್ಕಳಿಗಾಗಿ.
ಪ್ರೀತಿಸಿ ಅದನ್ನು, ನಾವದನ್ನು ಪ್ರೀತಿಸಿದಂತೆ.

ಮಕ್ಕಳಿಗಾಗಿ - 1 - ಕಾಗೆಯ ಬುದ್ಧಿವಂತಿಕೆ

ಕಾಗೆಯ ಬುದ್ಧಿವಂತಿಕೆ

ಕಾಡಲ್ಲೊಂದು ನರಿಯಿತ್ತು
ಎಲ್ಲರ ಮೋಸ ಮಾಡುತ್ತಿತ್ತು
ಕೆಟ್ಟ ಹೆಸರ ಗಳಿಸಿತ್ತು
ಆದರೂ ವಂಚನೆ ಸಾಗಿತ್ತು.

ನರಿಯು ಒಮ್ಮೆ ಮಲಗಿತ್ತು
ಅಲ್ಲಿಗೆ ಕಾಗೆಯು ಬಂದಿತ್ತು
ಬಾಯಲಿ ರೊಟ್ಟಿಯ ಚೂರಿತ್ತು
ಅದರ ಮುಖದಲ್ಲಿ ಖುಷಿಯಿತ್ತು.

ನರಿಯ ಹೊಟ್ಟೆ ಉರಿದಿತ್ತು
ಕಸಿಯಲು ರೊಟ್ಟಿಯ ಹೊರಟಿತ್ತು
ಒಂದು ಸಂಚು ಹೂಡಿತ್ತು
ಕಾಗೆಯ ಬಳಿಗೆ ನಡೆದಿತ್ತು.

ಕಾಗೆಯ ಅದು ಹೊಗಳಿತ್ತು
ಸುಂದರ ನೀನು ಎಂದಿತ್ತು
ಕೋಗಿಲೆ ಕಂಠ ಅಂದಿತ್ತು
ಹಾಡನು ಹಾಡೆಂದು ಕೇಳಿತ್ತು.

ಕಾಗೆಯು ಬುದ್ಧಿ ಓಡಿಸಿತ್ತು
ಕಾಲಲಿ ರೊಟ್ಟಿಯ ಹಿಡಿದಿತ್ತು
ತನ್ನಯ ಕಂಠದಿ ಹಾಡಿತ್ತು
ನರಿಯ ಮುಖದಿ ಪೆಚ್ಚಿತ್ತು.

ನರಿಯು ಉಪಾಯ ಮಾಡಿತ್ತು
ನರ್ತಿಸಿ ಹಾಡು ಎಂದಿತ್ತು
ಕಾಗೆಗೆ ಪೊಟರೆಯು ಸಿಕ್ಕಿತ್ತು
ಅದರಲಿ ರೊಟ್ಟಿಯ ಹಾಕಿತ್ತು.


ಕಾಗೆಯು ಹಾಡುತ ಕುಣಿದಿತ್ತು
ನರಿಯ ಮೋರೆ ಸೊರಗಿತ್ತು
ಅದರ ಉಪಾಯ ಸೋತಿತ್ತು
ಅಲ್ಲಿಂದೋಡಲು ತಯಾರಿತ್ತು.

ಕಾಗೆಯು ನರಿಗೆ ಹೇಳಿತ್ತು
ಬರುವರು ಗೆಳೆಯರು ಎಂದಿತ್ತು
ದೂರದಿ ಬೌ ಬೌ ಕೇಳಿತ್ತು
ನರಿಯು ಅಲ್ಲಿಂದ ಓಡಿಹೋಯ್ತು