ಸಸ್ಯಶಾಸ್ತ್ರಜ್ಞೆಯೊಂದಿಗಿನ
ಮಾತುಕತೆ
- ಸುಧಾ ಜಿ
ಸಿಹಿತಿಂಡಿಯೆಂದರೆ ಪಂಚಪ್ರಾಣ ನನಗೆ. ನಾನು ಚಿಕ್ಕವಳಿದ್ದಾಗ ಮನೆಯಲ್ಲಿ ಅಮ್ಮ
ತರಾವರಿ ಸಿಹಿತಿಂಡಿಗಳನ್ನು ಮಾಡುತ್ತಿದ್ದರು. ಕೆಲವೊಮ್ಮೆ ಮನೆಯಲ್ಲಿ ಯಾವುದೇ ಸಿಹಿತಿಂಡಿ
ಇಲ್ಲದಿದ್ದಾಗ ಸಕ್ಕರೆ-ತುಪ್ಪ ಬೆರೆಸಿ ಅಥವಾ ಕಡಲೆಪಪ್ಪು - ಸಕ್ಕರೆ ಸೇರಿಸಿ ತಿನ್ನುತ್ತಿದ್ದೆ.
ಒಂದು ದಿನ ಬೆಳಿಗ್ಗೆ, ಇದನ್ನೆಲ್ಲಾ
ನೆನಪಿಸಿಕೊಂಡು ಟೀ ಕುಡಿಯುತ್ತಾ ಕುಳಿತಿದ್ದ ನನಗೆ, ಇದ್ದಕ್ಕಿದ್ದಂತೆ ಒಂದು ಪ್ರಶ್ನೆ ಬಂದಿತು - ಒಂದು ವೇಳೆ ಸಕ್ಕರೆಯೇ
ಇಲ್ಲದಿದ್ದಿದ್ದರೆ, ನಮ್ಮ ಚಹಾ, ಕಾಫಿ, ಜ್ಯೂಸ್, ತಿಂಡಿಗಳು ಹೇಗಿರುತ್ತಿದ್ದವು? ಆಗ ನೆನಪಿಗೆ ಬಂದವರು ಇಷ್ಟು
ಸಿಹಿಯಾದ ಸಕ್ಕರೆಗೆ ಕಾರಣರಾದ ಭಾರತದ ಮೊದಲ ಸಸ್ಯಶಾಸ್ತ್ರಜ್ಞೆ, ಮಹಿಳಾ ಪಿಎಚ್ ಡಿ ಪದವೀಧರೆ ಡಾ.
ಜಾನಕಿ ಅಮ್ಮಾಳ್. ಏಕೆಂದರೆ ಭಾರತದಲ್ಲಿ ಇಷ್ಟು ಸಿಹಿಯಾದ ಕಬ್ಬಿನ ತಳಿಯನ್ನು ಬೆಳೆಸಲು
ಕಾರಣಕರ್ತರು ಅವರು.

ಸರಿ ಅವರ ಬಗ್ಗೆ ಬರೆಯಬೇಕೆಂದುಕೊಂಡೆ, ಏಕೆಂದರೆ ಅವರ ಬಗ್ಗೆ ನಾನೂ ಶಾಲೆಯಲ್ಲಾಗಲೀ ಅಥವಾ ಕಾಲೇಜಿನಲ್ಲಾಗಲಿ ಏನೂ
ಓದಿರಲಿಲ್ಲ. ಅವರ ಬಗ್ಗೆ ಶೈಕ್ಷಣಿಕ ವಲಯದಲ್ಲಿ, ಅದೂ ಸಸ್ಯಶಾಸ್ತ್ರದ ಬಗ್ಗೆ ಆಸಕ್ತಿ ಇದ್ದವರಿಗೆ ಬಿಟ್ಟರೆ ಬೇರೆಯವರಿಗೆ
ಹೆಚ್ಚೇನೂ ತಿಳಿದಿರಲಿಲ್ಲ. ಹೇಗೆ ಬರೆಯುವುದು? ಹಲವಾರು ವೆಬ್ ಸೈಟ್ ಗಳಲ್ಲಿ ನೋಡಿದ್ದೆನಾದರೂ ಅದು ಪೂರ್ಣ ಎನಿಸಲಿಲ್ಲ. ಅವರು
ಬದುಕಿದ್ದರೆ ಒಂದು ಸಂದರ್ಶನವನ್ನಾದರೂ ಮಾಡಬಹುದಿತ್ತೆಂದುಕೊಂಡು. ಆದರೆ ಅವರು ಫ಼ೆಬ್ರವರಿ 7, 1984 ರಲ್ಲಿ
ಚೆನ್ನೈ ನಲ್ಲಿ ತಮ್ಮ ಸಂಶೋಧನಾ ಲ್ಯಾಬ್ ನಲ್ಲಿ ಕೆಲಸ ಮಾಡುತ್ತಿರುವಾಗಲೇ ತೀರಿಕೊಂಡಿದ್ದರು; ಆಗವರಿಗೆ 87
ವರ್ಷಗಳು. ಸಾಯುವ ಕೊನೆ ಕ್ಷಣದವರೆಗೂ ಕೆಲಸ ಮಾಡುತ್ತಿದ್ದ ಆಕೆಯ ಉತ್ಸಾಹ, ಕಾರ್ಯನಿಷ್ಟೆ
ಎಂತಹುದ್ದಿರಬಹುದೆಂದು ಊಹಿಸಿಕೊಳ್ಳುವ ಪ್ರಯತ್ನದಲ್ಲಿದ್ದೆ.
ಇದ್ದಕ್ಕಿದ್ದಂತೆ ನನ್ನ ಮುಂದೆ ಯಾರೋ ಕೂತಂತೆನಿಸಿತು. ಕಣ್ಣರಳಿಸಿ ನೋಡಿದರೆ
ಸಾಕ್ಷಾತ್ ಜಾನಕಿ ಅಮ್ಮಾಳ್. ಬಹಳ ಎತ್ತರವಾಗಿದ್ದರು. ತಮ್ಮ ಉದ್ದ ಕೂದಲನ್ನು ಗಂಟು
ಹಾಕಿಕೊಂಡಿದ್ದರು. ಹಳದಿ ಬಣ್ಣದ ರೇಷ್ಮೆ ಸೀರೆಯೊಂದಿಗೆ ಉದ್ದದ ಅದೇ ಬಣ್ಣದ ಸಡಿಲವಾದ ಬ್ಲೌಸ್ಅನ್ನು
ಹಾಕಿಕೊಂಡಿದ್ದರು. ಅವರನ್ನು ನೋಡಿದರೆ ಬೌದ್ಧ ಸನ್ಯಾಸಿನಿಯಂತಿದ್ದರು. ಹಸನ್ಮುಖರಾಗಿದ್ದರು.
ಆಶ್ಚರ್ಯದಿಂದ ನೋಡುತ್ತಿದ್ದ ನನ್ನನ್ನುದ್ದೇಶಿಸಿ ಅವರು ನೇರವಾಗಿ ಮಾತಿಗಿಳಿದರು.
"ಬದುಕಿದ್ದಾಗ ನನ್ನ ಬಗ್ಗೆ ನಾನೆಂದೂ ಹೆಚ್ಚು ಮಾತಾಡಲಿಲ್ಲ. ಮಾತಿಗಿಂತ ಕೃತಿ ಉಳಿಯುತ್ತದೆ
ಎಂದು ನಂಬಿದವಳು ನಾನು. ಈಗ ಹೇಳಲೇ?"
ಕೇಳಿದರು.
"ಅದಕ್ಕಿಂತ
ಹೆಚ್ಚಿನ ಸಂತಸದ ವಿಷಯವೇನಿದೆ, ಖಂಡಿತವಾಗಿ
ಹೇಳಿ. ಆದರೆ ನಾನದನ್ನು ಬರೆದುಕೊಳ್ಳುತ್ತಾ ಹೋಗಲೇ?"
"ಖಂಡಿತವಾಗಿ."
"ನಿಮ್ಮ
ಬಗ್ಗೆ ಎಂದೂ ಹೆಚ್ಚು ಮಾತನಾಡದವರು ಇಂದು ಮಾತನಾಡಲು ಸಿದ್ಧರಾದ ಕಾರಣ?" ಕೇಳಿದೆ.
"ನಾನಿದ್ದ
ಪರಿಸ್ಥಿತಿ ಬೇರೆ. ಅಂದು ಪಿತೃಪ್ರಧಾನ ವ್ಯವಸ್ಥೆಯ ಕಾರಣದಿಂದಾಗಿ ಹೆಣ್ಣುಮಕ್ಕಳಿಗೆ ಶಿಕ್ಷಣ
ಕೊಡುತ್ತಿರಲಿಲ್ಲ. ಮದುವೆ, ಅಡುಗೆಮನೆಯಷ್ಟೇ
ಅವರ ಪಾಲಿನದ್ದಾಗಿತ್ತು. ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಟ್ಟರೆ ಅವಳು ವಿಧವೆಯಾಗುತ್ತಾಳೆ ಎಂಬ ನಂಬಿಕೆಯಿತ್ತು.
ಅಂತಹ ವ್ಯವಸ್ಥೆಯಲ್ಲಿ ಹುಟ್ಟಿದ ನಾನೇ ನನ್ನ ಶೈಕ್ಷಣಿಕ, ಸಂಶೋಧನೆಯ ಕನಸನ್ನು ಸಾಕಾರಗೊಳಿಸಿಕೊಳ್ಳಲು ಸಾಧ್ಯವಾದರೆ, ಇಂದಿನ ಹೆಣ್ಮಕ್ಕಳಿಗೆ ಏನು
ಸಮಸ್ಯೆ ಎನ್ನುವುದು ಅರ್ಥವಾಗುತ್ತಿಲ್ಲ. ಸ್ವಾತಂತ್ರ್ಯ ಬಂದು 70
ವರ್ಷಗಳಾದರೂ ಇನ್ನೂ ಪರಿಸ್ಥಿತಿ ತುಂಬಾ ಬದಲಾಯಿಸಿಲ್ಲ. ಅದಕ್ಕೆ ನನ್ನ ಕಥೆಯಿಂದಾದರೂ ಹೆಣ್ಮಕ್ಕಳು
ಸ್ಫೂರ್ತಿಯನ್ನು ಪಡೆಯಲಿ ಎಂಬ ಕಾರಣಕ್ಕೆ ಹೇಳಲು ಇಚ್ಛಿಸುತ್ತೇನೆ."
"ಸರಿ
ಆರಂಭಿಸಿ" ಎಂದು ನಾನು ಬರೆಯಲು ಕುಳಿತೆ.
"ನಾನು
ಹುಟ್ಟಿದ್ದು 1897ರ ನವೆಂಬರ್ 4 ರಂದು, ಅಂದಿನ ಬ್ರಿಟಿಷ್ ಭಾರತದ ಮದ್ರಾಸ್ ಪ್ರೆಸಿಡೆನ್ಸಿಯ ತಲಶೆರಿಯಲ್ಲಿ. (ಈಗದು ಕೇರಳ
ರಾಜ್ಯದ ಕಣ್ಣೂರು ಜಿಲ್ಲೆಯಲ್ಲಿದೆ) ತಂದೆ ದಿವಾನ್ ಬಹಾದ್ದೂರ್ ಇ ಕೆ ಕೃಷ್ಣನ್ ಅಲ್ಲಿನ ಕೋರ್ಟ್
ನಲ್ಲಿ ಸಬ್-ಜಡ್ಜ್ ಆಗಿದ್ದರು. ನನ್ನ ತಾಯಿ ದೇವಿಯಮ್ಮಾಳ್. ಅವರಿಬ್ಬರಿಗೆ ಜನಿಸಿದ 13
ಮಕ್ಕಳಲ್ಲಿ ನಾನು ಹತ್ತನೆಯವಳು. ನನ್ನ ತಾಯಿ ಸಮುದ್ರ ತೀರದ ದೊಡ್ಡ ಮನೆ "ಎಡತ್ತಿಲ್
ಗೃಹ" ದಲ್ಲಿ ಬೆಳೆದವರು. ಮಾತೃಪ್ರಧಾನ ವ್ಯವಸ್ಥೆಯಿದ್ದ ಕುಟುಂಬದಿಂದ ಬಂದ ನನ್ನ
ತಾಯಿಯಿಂದಾಗಿ ನಮಗೆ ಹೆಣ್ಣುಮಕ್ಕಳಿಗೂ ಬೌದ್ಧಿಕವಾಗಿ ಬೆಳೆಯಲು ಮತ್ತು ಕಲೆಗಳ ಕ್ಷೇತ್ರಗಳಲ್ಲಿ
ತೊಡಗಿಸಿಕೊಳ್ಳಲು ಅವಕಾಶವಿತ್ತು. ಹಾಗಾಗಿ ನಮ್ಮೆಲ್ಲರನ್ನೂ ಶಾಲೆಗೆ ಕಳಿಸಿದರು. ನನ್ನ ಪ್ರಾಥಮಿಕ
ಶಿಕ್ಷಣ ತಲಶೆರಿಯ ಸೇಕ್ರೆಡ್ ಹಾರ್ಟ್ ಕಾನ್ವೆಂಟ್ನಲ್ಲಿ ನಡೆಯಿತು. ನಂತರ ಕಾಲೇಜು
ಶಿಕ್ಷಣಕ್ಕಾಗಿ ಮದ್ರಾಸ್ನ ಕ್ವೀನ್ ಮೇರಿಸ್ ಕಾಲೇಜನ್ನು ಸೇರಿಕೊಂಡೆ."
"ಸಾಮಾನ್ಯವಾಗಿ
ಹೆಣ್ಣುಮಕ್ಕಳು ಕಲಾ ವಿಭಾಗವನ್ನು ಅಥವಾ ಕಲೆಗಳನ್ನೊ ಅಭ್ಯಾಸ ಮಾಡುತ್ತಾರೆ. ಆದರೆ ನೀವು ಮಾತ್ರ
ಸಸ್ಯಶಾಸ್ತ್ರವನ್ನು ಆಯ್ಕೆ ಮಾಡಿಕೊಂಡಿರಲ್ಲ?" ಕೇಳಿದೆ.
"ಅಂದಿನ
ದಿನಗಳಲ್ಲಿ ಹೆಣ್ಮಕ್ಕಳು ವಿಜ್ಞಾನ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವುದು ಅಪರೂಪವಾಗಿತ್ತು.
ನನ್ನ ಆಯ್ಕೆಗೆ ಮೊದಲ ಕಾರಣ ನನ್ನ ತಂದೆ. ತಂದೆ ವೃತ್ತಿಯಲ್ಲಿ ಜಡ್ಜ್ ಆಗಿದ್ದರೂ ಸಹ, ಮನೆಯ ಸುತ್ತ ತೋಟವನ್ನು
ಬೆಳೆಸಿದ್ದು ಮಾತ್ರವಲ್ಲದೆ ಅದರ ಬಗ್ಗೆ ಟಿಪ್ಪಣಿಗಳನ್ನು ಬರೆದಿಡುತ್ತಿದ್ದರು. ಬೇರೆಬೇರೆ
ವಿಜ್ಞಾನ ಪಂಡಿತರ ಜೊತೆ ಪತ್ರವ್ಯವಹಾರವನ್ನಿಟ್ಟುಕೊಂಡಿದ್ದರು. ಜೊತೆಗೆ ಮಲಬಾರ್ ಪ್ರಾಂತ್ಯದ
ಪಕ್ಷಿಗಳ ಬಗ್ಗೆ ಎರಡು ಪುಸ್ತಕಗಳನ್ನೂ ಸಹ ಬರೆದಿದ್ದರು. ಅವರಿಂದ ನನಗೆ ಪ್ರಾಕೃತಿಕ ವಿಜ್ಞಾನಗಳ
ಬಗ್ಗೆ, ಅದರಲ್ಲೂ
ಸಸ್ಯಶಾಸ್ತ್ರದ ಬಗ್ಗೆ ಆಸಕ್ತಿ ಬೆಳೆಯಿತು. ಇದರೊಂದಿಗೆ ಕ್ವೀನ್ ಮೇರಿಸ್ ಕಾಲೇಜಿನ ಕೆಲವು
ಅಧ್ಯಾಪಕರೂ ಸಹ ಕಾರಣ. ನಂತರ ನಾನು ಪ್ರೆಸಿಡೆನ್ಸಿ ಕಾಲೇಜಿನಿಂದ 1921 ರಲ್ಲಿ
ಸಸ್ಯಶಾಸ್ತ್ರದಲ್ಲಿ ಆನರ್ಸ್ ಪದವಿ ಪಡೆದೆ. ಅಲ್ಲಿನ ಶಿಕ್ಷಕರಿಂದ ಪ್ರಭಾವಿತಗೊಂಡು
ಸೈಟೊಜೆನಿಟಿಕ್ಸ್ ಬಗ್ಗೆ ಆಸಕ್ತಿ ಬೆಳೆಸಿಕೊಂಡೆ."
"ಅಂದಿನ
ದಿನಗಳಲ್ಲಿ ಹೆಣ್ಣುಮಕ್ಕಳಿಗೆ ಬಹುಬೇಗ ಮದುವೆ ಮಾಡುತ್ತಿದ್ದರೆಂದು ಕೇಳಿದೆ. ನಿಮಗೆ ಆ ರೀತಿ
ಒತ್ತಡಗಳು ಬರಲಿಲ್ಲವೇ? ನೀವು
ಅದನ್ನು ಹೇಗೆ ನಿಭಾಯಿಸಿ ಓದನ್ನು ಮುಂದುವರೆಸಿದಿರಿ?"
"ನಮ್ಮ
ದೇಶದಲ್ಲಿ ಈಗಲೂ ಅಂತಹ ಪರಿಸ್ಥಿತಿ ಇರುವಾಗ ಅಂದು ಇರಲಿಲ್ಲವೆಂದು ಹೇಗೆ ಭಾವಿಸಿದೆ? ನಾನು ಸಹ ಅಂತಹುದೇ
ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ನಿಜ, ನಮ್ಮ ಕುಟುಂಬದಲ್ಲಿ ಮಾತೃಪ್ರಧಾನ ವ್ಯವಸ್ಥೆಯಿದ್ದುದ್ದರಿಂದ ಬಾಲ್ಯವಿವಾಹದ ಮಾತು
ಬರಲಿಲ್ಲ. ಆದರೆ ನನ್ನ ಪದವಿ ಮುಗಿದ ಮೇಲೆ ವಿಮೆನ್ಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ
ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದಾಗ ನನ್ನ ಮಾವನ ಮಗನ ಜೊತೆ ಮದುವೆ ಮಾಡಿಕೊಳ್ಳುವಂತೆ ಮನೆಯವರು
ಒತ್ತಾಯಿಸಲಾರಂಭಿಸಿದರು. ಈ ವಿವಾಹದ ಬಗ್ಗೆ ನಾನು ಚಿಕ್ಕವಳಾಗಿದ್ದಾಗಲೇ ದೊಡ್ಡವರು
ಮಾತನಾಡಿಕೊಂಡಿದ್ದರು. ಆದರೆ ಅದೇ ಸಮಯದಲ್ಲಿ ನನಗೆ ಅಮೇರಿಕಾದ ಪ್ರಸಿದ್ಧ ಮಿಚಿಗನ್
ವಿಶ್ವವಿದ್ಯಾನಿಲಯದಲ್ಲಿ ಬಾರ್ಬೊರ್ ಸ್ಕಾಲರ್ಶಿಪ್ ನೊಂದಿಗೆ ಸ್ನಾತಕೋತ್ತರ ಪದವಿಗೆ ಸೇರಲು
ಆಹ್ವಾನ ಬಂದಿತು. ಪೂರ್ವ ದೇಶಗಳಲ್ಲಿ ಆ ಸ್ಕಾಲರ್ಶಿಪ್ ಪಡೆದ ಮೊದಲ ವ್ಯಕ್ತಿ ನಾನಾಗಿದ್ದೆ. ಒಂದು
ರೀತಿ ಸಂದಿಗ್ಧ ಪರಿಸ್ಥಿತಿಯದು. ಹೆಣ್ಣುಮಕ್ಕಳಿಗೆ ಮದುವೆಯೇ ಸರ್ವಸ್ವ, ಆ ವಯಸ್ಸಿನ ಹೆಣ್ಮಕ್ಕಳೆಲ್ಲ
ಮದುವೆಯಾಗಿ ಮಕ್ಕಳನ್ನು ಹೆರಬೇಕೆಂಬುದು, ಅಡಿಗೆಮನೆಗೆ ಸೀಮಿತವಾಗಬೇಕಿತ್ತು ಎಂಬುದು ಎಲ್ಲರ ಅಭಿಪ್ರಾಯವಾಗಿದ್ದ ಸಮಾಜದಲ್ಲಿ
ಬದುಕಿದ ನಾನು, ನನ್ನ
ಕನಸಾದ ಅಧ್ಯಯನ, ಸಂಶೋಧನೆಯನ್ನು
ಆಯ್ಕೆ ಮಾಡಿಕೊಳ್ಳಬೇಕಾದರೆ ಸಾಕಷ್ಟು ನಿದ್ರಾಹೀನ ರಾತ್ರಿಗಳನ್ನು ಕಳೆದೆ. ಕೊನೆಗೆ ವಿವಾಹದ
ಪ್ರಸ್ತಾಪವನ್ನು ನಿರಾಕರಿಸಿ ಅಧ್ಯಯನವನ್ನೇ ಆಯ್ಕೆ ಮಾಡಿಕೊಂಡು ಅಮೇರಿಕಾಗೆ ಹೋಗಲು
ನಿರ್ಧರಿಸಿದೆ."
"ಮನೆಯವರ
ಪ್ರತಿಕ್ರಿಯೆ ಹೇಗಿತ್ತು?"
"ಖಂಡಿತವಾಗಿಯೂ
ಅವರಿಗೆ ಖುಷಿಯಿರಲಿಲ್ಲ. ಜೊತೆಗೆ ಅಂದಿನ ದಿನಗಳಲ್ಲಿ ಪುರುಷರೇ ಸಮುದ್ರವನ್ನು ದಾಟಿದರೆ
ಬಹಿಷ್ಕಾರ ಹಾಕಲಾಗುತ್ತಿತ್ತು. ಅಂತಹುದರಲ್ಲಿ ನಾನು ವಿವಾಹ ಮಾಡಿಕೊಳ್ಳಲು ನಿರಾಕರಿಸಿ, ಕಾಣದ ದೇಶಕ್ಕೆ ಕಡಲನ್ನು ದಾಟಿ
ಹೋಗಿ, ಅಲ್ಲಿ
ಒಂಟಿಯಾಗಿ ಹೇಗೆ ಬದುಕುತ್ತೇನೆ ಎಂಬುದನ್ನೇ ಊಹಿಸಿಕೊಳ್ಳಲಾಗದ ಸ್ಥಿತಿ ಅವರದ್ದು. ತಕ್ಷಣವೇ ಏನೂ
ಒಪ್ಪಿಕೊಳ್ಳಲಿಲ್ಲ. ಆದರೆ ನಾನು ಹಠ ಹಿಡಿದು ಕುಳಿತಾಗ, ಅವರಿಗೆ ಇಲ್ಲವೆನ್ನಲಾಗಲಿಲ್ಲ. ಜೊತೆಯಲ್ಲಿ ನಮ್ಮ ಮನೆಯಲ್ಲಿ ಹೆಣ್ಮಕ್ಕಳಿಗೆ
ಸ್ವಲ್ಪ ಮಟ್ಟಿಗೆ ಸ್ವಾತಂತ್ರ್ಯವಿತ್ತು."
"ಮುಂದೆ
ನಿಮ್ಮ ಪಯಣ ಅಮೇರಿಕಾದೆಡೆಗೆ. ಅಲ್ಲಿ ನಿಮ್ಮ ಅನುಭವ ಹೇಗಿತ್ತು?"
"ಅಮೇರಿಕಾಗೆ
ನಾನು ತೆರಳಿದಾಗ ತಾರತಮ್ಯಗಳನ್ನೂ ಅಲ್ಲಿಯೂ ಕಂಡೆ. ಪೂರ್ವದಿಂದ ಬಂದವರನ್ನೆಲ್ಲಾ
ಇಮ್ಮಿಗ್ರೆಂಟ್ಸ್ ಸ್ಟೇಟಸ್ ಸ್ಪಷ್ಟವಾಗುವವರೆಗೂ ಎಲ್ಲಿಸ್ ದ್ವೀಪದಲ್ಲಿರಿಸಿದರು. ನನ್ನ ತುಂಬಾ
ಉದ್ದ ಕಪ್ಪು ಕೂದಲು ಮತ್ತು ರೇಷ್ಮೆ ಸೀರೆಯನ್ನು ನೋಡಿದವರು ನಾನು ಭಾರತದ ಯಾವುದೊ ರಾಜ್ಯದ
ರಾಣಿಯಿರಬಹುದೆಂದು ಪರಿಗಣಿಸಿ, ಹೆಚ್ಚು
ಸಮಸ್ಯೆ ಉಂಟುಮಾಡಲಿಲ್ಲ."
"ಓಹ್, ನೀವೇನು ಹೇಳಿದಿರಿ ಆಗ?"
"ನನ್ನನ್ನು
ಪ್ರಶ್ನಿಸಿದಾಗ ನಾನೇನೂ ಆ ಅಂಶವನ್ನು ನಿರಾಕರಿಸಲಿಲ್ಲ!" ನಕ್ಕರಾಕೆ.
"ಮಿಚಿಗನ್ ನಲ್ಲಿ ನನ್ನ ಪ್ರೊಫೆಸರ್ ಗಳು, ಸಹ ವಿದ್ಯಾರ್ಥಿಗಳು ತುಂಬಾ
ಚೆನ್ನಾಗಿಯೇ ಸಹಕರಿಸಿದರು. ವಿಶ್ವವಿದ್ಯಾನಿಲಯದಲ್ಲಿ ಭಾರತಕ್ಕಿಂತ ವಿಭಿನ್ನ
ಪರಿಸ್ಥಿತಿಯಿತ್ತಲ್ಲಿ. ಅವರು ನನ್ನನ್ನು ಸ್ತ್ರೀ ಎಂದು ಪರಿಗಣಿಸಿ ಕಡೆಗಣಿಸಲಿಲ್ಲ. ಬದಲಿಗೆ
ನನ್ನ ವಿದ್ವತ್ತಿಗೆ ಬೆಲೆ ನೀಡಿದರು. ಅಲ್ಲಿದ್ದಾಗ ನನ್ನ ಸಂಶೋಧನೆ ಹೆಚ್ಚು ನಡೆದಿದ್ದ ಗಿಡಗಳ
ಜೀವಕೋಶಶಾಸ್ತ್ರ (ಪ್ಲಾಂಟ್ ಸೈಟಾಲಜಿ) ಯ ಬಗ್ಗೆ, ಅಂದರೆ ಗಿಡಗಳಲ್ಲಿನ ವಂಶವಾಹಿಗಳ ವಿನ್ಯಾಸಗಳು ಮತ್ತು ಸಂಯೋಜನೆಯ ಬಗ್ಗೆ. ಅಲ್ಲಿ
ಕೆಲವು ಭಿನ್ನಜಾತಿಯ ಹೈಬ್ರಿಡ್ ತಳಿಗಳನ್ನು ಬೆಳೆಸುವಲ್ಲಿ ವಿಶೇಷ ಜ್ಞಾನ ಬೆಳೆಸಿಕೊಂಡೆ.
1931 ರಲ್ಲಿ
ನಾನು ಪಿಎಚ್ ಡಿ ಪಡೆದೆ. ನನ್ನ ಮಹಾಪ್ರಬಂಧ "ನಿಕಂಡ್ರಾ ಫೈಸಲಾಯಿಡ್ಸ್(ಬಿಳಿಬುಡ್ಡೆ ಗಿಡ)
ದಲ್ಲಿ ವರ್ಣತಂತುಗಳ ಅಧ್ಯಯನ (ಥೀಸಿಸ್ - ಕ್ರೋಮೋಸೋಮ್ ಸ್ಟಡೀಸ್ ಇನ್ ನಿಕಂಡ್ರಾ ಫೈಸಲಾಯಿಡ್ಸ್) 1932ರಲ್ಲಿ
ಪ್ರಕಟಗೊಂಡಿತು. ಈ ರೀತಿ ಸಸ್ಯಶಾಸ್ತ್ರಕ್ಕೆ ಕೊಡುಗೆಯನ್ನು ನೀಡಿದ್ದೇ ಅಲ್ಲದೆ "ಜಾನಕಿ
ಬ್ರಿಂಜಾಲ್" (ಜಾನಕಿ ಬದನೆಕಾಯಿ) ಎಂಬ ಹೈಬ್ರಿಡ್ ತಳಿಯನ್ನು ಬೆಳೆಸಿದೆ. ನಂತರ ನಾನು
ಭಾರತಕ್ಕೆ ಹಿಂದಿರುಗಿ, 1932 ರಿಂದ 1934 ರವರೆಗೆ
ತಿರುವನಂತಪುರದ ಮಹಾರಾಜ ಕಾಲೇಜಿನಲ್ಲಿ ಸಸ್ಯಶಾಸ್ತ್ರದ ಪ್ರೊಫೆಸರ್ ಆಗಿ
ಕಾರ್ಯನಿರ್ವಹಿಸಿದೆ."
"ಅಲ್ಲಿಯೇ
ನಿಮಗೆ ಕೆಲಸ ಸಿಗುವ ಅವಕಾಶವಿದ್ದರೂ ನೀವು ಭಾರತಕ್ಕೇಕೆ ಹಿಂದಿರುಗಿದಿರಿ?"
"ಭಾರತದಲ್ಲಿ
ಸಂಶೋಧನೆಗೆ ಹೆಚ್ಚು ಅವಕಾಶವಿರಲಿಲ್ಲ. ಜೊತೆಗೆ ನನಗೆ ಮಿಚಿಗನ್ ವಿಶ್ವವಿದ್ಯಾನಿಲಯದಂತಹ ಖ್ಯಾತ
ವಿದ್ಯಾಸಂಸ್ಥೆಯಿಂದ ಆಹ್ವಾನ ಬಂದಾಗ ಅಲ್ಲಿ ಸಂಶೋಧನೆ ಮಾಡಬಹುದು, ಜ್ಞಾನವನ್ನು ಪಡೆಯಬಹುದು, ಸಸ್ಯಶಾಸ್ತ್ರಕ್ಕೆ ನಾನೂ
ಏನಾದರೂ ಕೊಡುಗೆಯನ್ನು ಕೊಡಬಹುದೆಂಬ ವಿಚಾರವಿತ್ತು. ಆದರೆ ಆ ಜ್ಞಾನವನ್ನು ನನ್ನ ದೇಶದ
ಜನರೊಂದಿಗೆ ಹಂಚಿಕೊಳ್ಳಬೇಕೆಂಬ ಬಯಕೆಯಿತ್ತು. ನನ್ನ ದೇಶಕ್ಕಾಗಿ ಕೆಲಸ ಮಾಡಬೇಕೆಂಬ ಆಸೆಯಿತ್ತು.
ಹಾಗಾಗಿ ಹಿಂದಿರುಗಿದೆ."
"ನಂತರ
ನಿಮ್ಮ ಪಯಣ ಎತ್ತಕಡೆಗೆ ಸಾಗಿತು?"
"1930 ರಲ್ಲಿಯೇ
ಭಾರತವು ಸಾಕಷ್ಟು ಕಬ್ಬನ್ನು ಬೆಳೆಯುತ್ತಿತ್ತು. ಆದರೆ ಅದು ದೂರದ ಪೂರ್ವದಲ್ಲಿ ಬೆಳೆಯುತ್ತಿದ್ದ
ಕಬ್ಬಿನಷ್ಟು ಸಿಹಿಯಾಗಿರಲಿಲ್ಲ. ಆದ್ದರಿಂದ ಭಾರತವು ಕಬ್ಬನ್ನು ಜಾವಾ ಮತ್ತಿತರ ದೂರದ ಪೂರ್ವ
ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಿತ್ತು. ಭಾರತದಲ್ಲಿಯೇ ಸಿಹಿಯಾದ ಕಬ್ಬನ್ನು ಉತ್ಪಾದಿಸಿ, ವಿದೇಶಗಳಿಂದ ಸಿಹಿ ಸಕ್ಕರೆಯ
ಆಮದನ್ನು ನಿಲ್ಲಿಸಲು ಸಿ ಎ ಬಾರ್ಬರ್ ಮತ್ತು ಟಿ ಎಸ್ ವೆಂಕಟರಾಮನ್ರವರು ಸೇರಿ
ಕೊಯಮತ್ತೂರಿನಲ್ಲಿ ಕಬ್ಬು ಬೆಳೆಯುವ ಕೇಂದ್ರವನ್ನು ಆರಂಭಿಸಿ ವಿವಿಧ ವಿಧಗಳ ಕಬ್ಬುಗಳ ಮಿಶ್ರ
ತಳಿಯ ಪ್ರಯೋಗಗಳನ್ನು ಕೈಗೊಂಡರು. ಅವರ ಕಾರ್ಯ ಯಶಸ್ವಿಯಾಗಿ ೫ ವರ್ಷಗಳಲ್ಲೇ ಕಬ್ಬಿನ ಉತ್ಪಾದನೆ
ಎರಡರಷ್ಟಾಯಿತು. ಆದರೂ ಸಹ ಕಬ್ಬು ಹೆಚ್ಚು ಸಿಹಿಯಾಗಿರಲಿಲ್ಲ.
ಸೈಟೊಜೆನಿಟಿಕ್ಸ್ ನಲ್ಲಿ ಸಂಶೋಧನೆ ಮಾಡಿ ಪಾಂಡಿತ್ಯ ಪಡೆದದ್ದರಿಂದ ನನ್ನನ್ನು
ಅಲ್ಲಿ ಕೆಲಸ ಮಾಡಲು ಆಹ್ವಾನಿಸಿದರು. ನಾನು 1934ರಲ್ಲಿ
ಕೊಯಮತ್ತೂರಿನ ಶುಗರ್ಕೇನ್ ಬ್ರೀಡಿಂಗ್ ಸ್ಟೇಷನ್ (ಕಬ್ಬು ಬೆಳೆಯುವ ಕೇಂದ್ರ) ಸೇರಿದೆ. ಕಬ್ಬಿನ
ತಳಿಗಳ ಹೆಚ್ಚು ಸಿಹಿಯಾದ ತಳಿಯ ಮಿಶ್ರತಳಿಯನ್ನು ಬೆಳೆಯುವಲ್ಲಿ ಯಶಸ್ವಿಯಾದೆ. ಇಂದು ನೀವು
ಸೇವಿಸುತ್ತಿರುವ ಸಕ್ಕರೆ ಅದೇ. ಅದರ ಜೊತೆಗೆ ಹುಲ್ಲಿನ ಬಗ್ಗೆ ನಾನು ಮಾಡಿದ ಸಂಶೋಧನೆ ಹೊಸ
ಬೆಳಕನ್ನು ನೀಡಿದ ಸಂಶೋಧನೆಯಾಗಿತ್ತು.
1935ರಲ್ಲಿ
ಸರ್ ಸಿವಿ ರಾಮನ್ ಭಾರತೀಯ ಅಕಾಡೆಮಿ ಆಫ಼್ ಸೈನ್ಸಸ್ ಸ್ಥಾಪಿಸಿದರು ಮತ್ತು ನನ್ನನ್ನು ಮೊದಲ
ವರ್ಷದಲ್ಲಿಯೇ ಸಂಶೋಧನಾ ಫ಼ೆಲೊ ಆಗಿ ಆರಿಸಿದರು."
"ಇಷ್ಟೆಲ್ಲಾ
ಉತ್ತಮ ಕೆಲಸ ಮಾಡುತ್ತಿದ್ದ ನೀವು ಮತ್ತೆ ಇಲ್ಲಿಂದ ಹೊರಟುಬಿಟ್ಟಿರಲ್ಲ, ಯಾಕೆ?"
"ಕೊಯಮತ್ತೂರಿನ
ಕೇಂದ್ರದಲ್ಲಿ ನನಗೆ ಹಲವಾರು ಸಮಸ್ಯೆಗಳು ಎದುರಾದವು. ನಾನು ಅವಿವಾಹಿತ ಮಹಿಳೆ ಜೊತೆಗೆ ಹಿಂದುಳಿದ
ಜಾತಿಯವಳು ಎಂಬ ಕಾರಣಕ್ಕೆ ಕೆಲವು ಪುರುಷ ಸಹೋದ್ಯೋಗಿಗಳಿಂದ ಕಿರುಕುಳ ಆರಂಭವಾಯಿತು. ಒಬ್ಬ ಮಹಿಳೆ
ಒಂಟಿಯಾಗಿ ಅಷ್ಟೊಂದು ಸಾಧನೆ ಮಾಡಿದ್ದು ಬಹುಶಃ ಅವರಿಗೆ ಸಹಿಸಲಾಗಲಿಲ್ಲ. ಅದೇ ಸಮಯದಲ್ಲಿಯೇ ನನ್ನ
ಸಂಶೋಧನಾ ಕಾರ್ಯವನ್ನು ಮೆಚ್ಚಿದ ಜಾನ್ ಇನ್ನೆಸ್ ಹಾರ್ಟಿಕಲ್ಚುರಲ್ ಇನ್ಸ್ಟಿಟ್ಯೂಟ್ ನಲ್ಲಿ
ಅಸಿಸ್ಟೆಂಟ್ ಸೈಟಾಲಜಿಸ್ಟ್ (ಸಹಾಯಕ ಜೀವಕೋಶಶಾಸ್ತ್ರಜ್ಞೆ) ಯಾಗಿ ಕೆಲಸ ಮಾಡಲು ಆಹ್ವಾನ
ದೊರೆಯಿತು. ನನ್ನ ಸಾಮರ್ಥ್ಯವನ್ನು ಗುರುತಿಸಿ ಅಂತಹ ಕಡೆ ಕೆಲಸ ಮಾಡಲು ಅವಕಾಶ ಸಿಕ್ಕರೆ ಒಬ್ಬ
ಸಂಶೋಧಕಿಗೆ ಅದಕ್ಕಿಂತ ಹೆಚ್ಚು ಇನ್ನೇನು ಬೇಕು? ಅಲ್ಲಿ 1940 ರಿಂದ 1945ರವರೆಗೆ
ಕೆಲಸ ಮಾಡಿದೆ."
"ಅಲ್ಲಿ
ನಿಮಗೆಂದೂ ಈ ರೀತಿಯ ಸಮಸ್ಯೆಗಳು ಬರಲಿಲ್ಲವೇ?"
"ಇಲ್ಲ.
ಅಲ್ಲಿ ಲಿಂಗಕ್ಕಿಂತ ಹೆಚ್ಚಾಗಿ ಅರ್ಹತೆ, ಸಾಮರ್ಥ್ಯಕ್ಕೆ ಹೆಚ್ಚು ಬೆಲೆಯನ್ನಿತ್ತರು."
"ಆದರೆ
ನೀವು ಹೋದ ಸಮಯದಲ್ಲಿ ಎರಡನೆಯ ಜಾಗತಿಕ ಯುದ್ಧ ನಡೆಯುತ್ತಿತ್ತು. ಜರ್ಮನಿ ಬ್ರಿಟನ್ ಮೇಲೆ
ದಾಳಿಯಾರಂಭಿಸಿತು. ಆಗಲೂ ಕೆಲಸ ಮಾಡುತ್ತಿದ್ದಿರಾ? ಭಯವಾಗುತ್ತಿರಲಿಲ್ಲವೇ?
ದಾಳಿ ಮಾಡಿದ ರಾತ್ರಿ ಮಂಚದಡಿ ಹೋಗಿ ಅವಿತುಕೊಂಡು, ಮರುದಿನ ಯಥಾಪ್ರಕಾರ ಏನೂ
ಆಗದಂತೆ ಮುರಿದ ಗಾಜುಗಳನ್ನೆಲ್ಲಾ ಸ್ವಚ್ಛಗೊಳಿಸಿ ಮತ್ತೆ ಸಂಶೋಧನಾ ಕಾರ್ಯದಲ್ಲಿ
ನಿರತರಾಗಿರುತ್ತಿದ್ದೀರೆಂದು ಕೇಳಿರುವೆ. ನಿಜವೇ? ಹಾಗಿದ್ದರೆ ಬಹಳ ಧೈರ್ಯಸ್ಥೆ ನೀವು!" ಮೆಚ್ಚುಗೆ ವ್ಯಕ್ತಪಡಿಸಿದೆ.
"ಜರ್ಮನ್
ವಿಮಾನಗಳು ಲಂಡನ್ ಮೇಲೆ ರಾತ್ರಿ ಹೊತ್ತು ಬಾಂಬ್ ದಾಳಿ ನಡೆಸುವಾಗ ಮೊದಮೊದಲು
ಆತಂಕವಾಗುತ್ತಿತ್ತು. ನಂತರ ಅದು ಅಭ್ಯಾಸವಾಗಿ ಹೋಯಿತು. ಎಲ್ಲಾ ಕೆಲಸಗಳನ್ನು ಬಿಟ್ಟು ಕೂರಲು
ಸಾಧ್ಯವಿತ್ತೆ? ಜೀವ
ಹೋಗುವುದೇ ನಿಜ ಅಂದಾಗ ಇದ್ದಷ್ಟು ಕಾಲ ಕೆಲಸ ಮಾಡಲೇಬೇಕು ಎಂದು ನಿರ್ಧರಿಸಿದಾಗ ಆ ಆತಂಕ, ಭಯಗಳೆಲ್ಲಾ ಮರೆಯಾಗಿಬಿಟ್ಟವು.
ನಾನು ಸಂಶೋಧನೆಯಲ್ಲಿ ಮುಳುಗಿಹೋದೆ. ಅಲ್ಲಿದ್ದಾಗ ನನ್ನ ಸಂಶೋಧನೆ ಹೆಚ್ಚು ನಡೆದಿದ್ದ ಗಿಡಗಳ (ಪ್ಲಾಂಟ್
ಸೈಟಾಲಜಿ) ಯ ಬಗ್ಗೆ, ಅಂದರೆ
ಗಿಡಗಳಲ್ಲಿನ ವಂಶವಾಹಿಗಳ ವಿನ್ಯಾಸಗಳು ಮತ್ತು ಸಂಯೋಜನೆಯ ಬಗ್ಗೆ. ಅಲ್ಲಿ ಕೆಲವು ಮಿಶ್ರಜಾತಿಯ
ಹೈಬ್ರಿಡ್ ತಳಿಗಳನ್ನು ಬೆಳೆಸುವಲ್ಲಿ ವಿಶೇಷ ಸಂಶೋಧನೆ ಕೈಗೊಂಡು ಯಶಸ್ವಿಯಾದೆ."
"ಹಾಗಿದ್ದರೆ
ನೀವು 1946 ರಲ್ಲಿ ಬ್ರಿಟನ್ ನ ರಾಯಲ್ ಹಾರ್ಟಿಕಲ್ಚುರಲ್ (ತೋಟಗಾರಿಕಾ) ಸೊಸೈಟಿ
ವಿಸ್ಲೆಯಲ್ಲಿ ಸೈಟಾಲಜಿಸ್ಟ್ ಆಗಿ ಕೆಲಸಕ್ಕೆ ಸೇರಿಕೊಂಡಿರಿ. ಆ ನಿರ್ಧಾರ ಕೈಗೊಳ್ಳಲು ಕಾರಣವೇನು?"
"ವಿಶ್ವದ
ಎಲ್ಲೆಡೆಯ ಗಿಡಗಳ ಸಂಗ್ರಹವಿತ್ತಲ್ಲಿ. ಆ ಅವಕಾಶ ಎಷ್ಟು ಸಸ್ಯಶಾಸ್ತ್ರದ ಸಂಶೋಧನಾರ್ಥಿಗಳಿಗೆ
ಸಿಗಲು ಸಾಧ್ಯ. ಹಾಗಾಗಿ ಆ ಜವಾಬ್ದಾರಿಯನ್ನು ಹೊತ್ತುಕೊಂಡೆ. ಜೊತೆಗೆ ರಾಯಲ್ ಸೊಸೈಟಿಯ ಮೊದಲ
ಸಂಬಳಸಹಿತ ಮಹಿಳಾ ಉದ್ಯೋಗಿ ನಾನಾದೆ. ಸಸ್ಯಗಳ ಅನುವಂಶಿಕತೆಯ ಸಂಶೋಧನೆಯಲ್ಲಿ ತೊಡಗಿದ್ದೆ. ಅಲ್ಲಿ
ಗಿಡಗಳ ವರ್ಣತಂತುಗಳ ಸಂಖ್ಯೆಯನ್ನು ದುಪ್ಪಟ್ಟುಗೊಳಿಸುವ, ಅದರ ಮೂಲಕ ಹೆಚ್ಚಿನ ಸಂಖ್ಯೆಯ ಗಿಡಗಳಿಗೆ ಮತ್ತು ವೇಗವಾಗಿ
ಬೆಳೆಯುವ ಗಿಡಗಳಿಗೆ ಕಾರಣವಾಗುವ ಕೊಲ್ಚಿಸಿನೆ ಎಂಬುದರ ಸಸ್ಯಶಾಸ್ತ್ರೀಯ ಉಪಯೋಗಗಳ ಅಧ್ಯಯನ
ಮಾಡಿದೆ. ನನ್ನ ಅಧ್ಯಯನ ಬಹಳಷ್ಟು ಸಸ್ಯಜಾತಿಗಳ ವಿಕಸನದ ಬಗ್ಗೆ ಬೆಳಕನ್ನು ಚೆಲ್ಲಿದವು."
"ನೀವು
ಅಲ್ಲಿನ ತಳಿಶಾಸ್ತ್ರಜ್ಞ (ಜೆನಿಟಿಸಿಸ್ಟ್) ಮತ್ತು ಸುಸಂತಾನಶಾಸ್ತ್ರಜ್ಞ (ಯೂಜೀನಿಸ್ಟ್) ಸಿರಿಲ್
ಡೀನ್ ಡಾರ್ಲಿಂಗ್ಟನ್ ರವರ ಜೊತೆ ಕೆಲಸ ಮಾಡಿದಿರಿ ಎಂದು ಕೇಳಿದ್ದೆ?"
"ಹೌದು, ಅವರು ನನ್ನ ಸಹ ವಿಜ್ಞಾನಿ
ಮಾತ್ರವಲ್ಲ. ನನ್ನ ಮಾರ್ಗದರ್ಶಕರೂ ಆಗಿದ್ದರು. ಡಾರ್ಲಿಂಗ್ಟನ್ರವರು ವರ್ಣತಂತುಗಳು
ಅನುವಂಶೀಯತೆಯ ಮೇಲೆ ಪ್ರಭಾವ ಬೀರುವ ರೀತಿಗಳ ಬಗ್ಗೆ ಸಂಶೋಧನೆ ಮಾಡುತ್ತಿದ್ದರು. ಆದರೆ ಅವರು
ನನ್ನ ಜೊತೆಗೆ ಹೆಚ್ಚು ಗಿಡಗಳ ಬಗ್ಗೆ ಸಂಶೋಧನೆ ಮಾಡಿದರು. 5 ವರ್ಷಗಳು
ಜೊತೆಯಾಗಿ ಕೆಲಸ ಮಾಡಿದ್ದರ ಪರಿಣಾಮವಾಗಿ ನಾವಿಬ್ಬರೂ ಸೇರಿ `ಸಾಗುವಳಿ
ಮಾಡಿದ ಗಿಡಗಳ ವರ್ಣತಂತುಗಳ ನಕ್ಷೆಗಳ ಪುಸ್ತಕ’ (Chromosome Atlas of Cultivated Plants) ಅನ್ನು ಸಿದ್ಧಪಡಿಸಿದೆವು.
(ಇಂದಿಗೂ ಸಹ ಈ ಪುಸ್ತಕ ಗಿಡವಿಜ್ಞಾನಿಗಳಿಗೆ, ಗಿಡಗಳ ಬಗ್ಗೆ ಅಧ್ಯಯನ,
ಸಂಶೋಧನೆ ಮಾಡುವವರಿಗೆ ಮುಖ್ಯ ಪುಸ್ತಕವಾಗಿದೆ) ಇದು ಸುಮಾರು 1 ಲಕ್ಷ
ಗಿಡಗಳ ವರ್ಣತಂತುಗಳ ಲೆಖ್ಖವನ್ನಿಟ್ಟಿದೆ. ಸಸ್ಯಶಾಸ್ತ್ರೀಯ ಗುಂಪುಗಳ ಬೆಳೆಸುವಿಕೆ ಮತ್ತು ಉಗಮದ
ವಿನ್ಯಾಸದ ಬಗ್ಗೆ ದಾಖಲೆಯಾಗಿದೆ."
"ಅಲ್ಲಿ
ನಿಮ್ಮ ಗೌರವಾರ್ಥವಾಗಿ ಒಂದು ಮಿಶ್ರತಳಿಗೆ ನಿಮ್ಮ ಹೆಸರನ್ನು ಇಡಲಾಗಿದೆಯಂತೆ?"
"ಹೌದು.
ನನ್ನೆಲ್ಲಾ ಸಂಶೋಧನೆಗಳಲ್ಲಿ ಮುಖ್ಯವಾದ ಒಂದು ಮ್ಯಾಗ್ನೋಲಿಯ ಗಿಡಕ್ಕೆ ’ಮ್ಯಾಗ್ನೋಲಿಯ ಕೊಬಸ್ ಜಾನಕಿ
ಅಮ್ಮಾಳ್’ ಎಂದು
ನನ್ನ ಹೆಸರನ್ನು ಇಟ್ಟಿದ್ದಾರೆ."
"ಅಲ್ಲಿಂದ
ನೀವು 1950ರಲ್ಲಿ ಭಾರತಕ್ಕೆ ಮರಳಿದಿರಿ. ಆ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು? ಭಾರತ ಸ್ವತಂತ್ರವಾಯಿತು ಮತ್ತು
ಮಹಿಳೆಯರಿಗೆ ಸಮಾನ ಸ್ಥಾನಮಾನ ಕೊಟ್ಟಿತೆಂದೇ?"
"1943ರ ಹಲವಾರು
ಕಡೆಗಳಲ್ಲಿನ ಕ್ಷಾಮದಿಂದಾಗಿ ಮಿಲಿಯಾಂತರ ಜನರು ಸತ್ತಿದ್ದರು. ಭಾರತ ಇನ್ನೂ ಆ ಹೊಡೆತದಿಂದ
ಸುಧಾರಿಸಿಕೊಳ್ಳಲು ಪ್ರಯತ್ನಿಸುತ್ತಿತ್ತು. 1947ರಲ್ಲಿ
ಜವಹರ್ಲಾಲ್ ನೆಹರೂರವರು ಭಾರತದ ಮೊದಲ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ, ನನ್ನನ್ನು ಇಲ್ಲಿಗೆ ಬಂದು
ಬಾಟನಿಕಲ್ ಸೊಸೈಟಿಯನ್ನು (ಜೀವಶಾಸ್ತ್ರ ಕೇಂದ್ರ) ಪುನರ್ ರಚಿಸಲು ಕೇಳಿಕೊಂಡರು."
"ಇಲ್ಲಿನ
ಕೃಷಿಯ ಸಸ್ಯಶಾಸ್ತ್ರದ ಅಡಿಪಾಯವನ್ನು ಭದ್ರಗೊಳಿಸಲು ನೀವು ಅವಶ್ಯವಾಗಿ ಬೇಕು ಎಂಬ ಕಾರಣಕ್ಕೆ
ನೆಹರೂರವರು ನಿಮ್ಮನ್ನು ಕರೆದರೆಂದು ಕೇಳಿದ್ದೇನೆ."
"ನನ್ನ
ದೇಶಕ್ಕೆ ನಾನೇನಾದರೂ ಮಾಡಬೇಕೆಂಬ ತುಡಿತ ಯಾವ ದೇಶವಾಸಿಗೆ ಇರುವುದಿಲ್ಲ. ನಾನು ಲಕ್ನೊದಲ್ಲಿರುವ
ಸೆಂಟ್ರಲ್ ಬಟಾನಿಕಲ್ ಲ್ಯಾಬೊರೇಟರಿ (ಕೇಂದ್ರೀಯ ಸಸ್ಯಶಾಸ್ತ್ರ ಪ್ರಯೋಗಾಲಯ)ಕ್ಕೆ ಸರ್ಕಾರದಿಂದ
ನೇಮಕಗೊಂಡ ಸೂಪರ್ವೈಸರ್ ಆಗಿ ಕಾರ್ಯ ನಿರ್ವಹಿಸಲಾರಂಭಿಸಿದೆ. ನಾನು ಬಟಾನಿಕಲ್ ಸರ್ವೆ ಆಫ಼್
ಇಂಡಿಯಾ (ಬಿಎಸ್ ಐ) ಅನ್ನು ಪುನರ್ ರಚಿಸಬೇಕಿತ್ತು. ಆ ಕಾರ್ಯವನ್ನು ಮಾಡಲು ನಾನು
ಅಂಗೀಕರಿಸಿದೆ."
"ಇಲ್ಲಿನ
ಕೆಲಸ ಹೇಗನಿಸಿತು?"
"ಸರ್ಕಾರ
ಭಾರತದಲ್ಲಿ ಆಹಾರ ಉತ್ಪಾದನೆಗೆ ಜಾರಿಗೊಳಿಸಿದ್ದ ಹಲವಾರು ಯೋಜನೆಗಳು ತೃಪ್ತಿಕರವಾಗಿರಲಿಲ್ಲ. 1940ರಲ್ಲಿ `ಹೆಚ್ಚು
ಆಹಾರ ಬೆಳೆಯಿರಿ’ ಪ್ರಚಾರದಲ್ಲಿ
ಸರ್ಕಾರವು ಆಹಾರವನ್ನು ಬೆಳೆಯಲು 25 ದಶಲಕ್ಷ ಎಕರೆ ಭೂಮಿಯನ್ನು ಮೀಸಲಿಟ್ಟಿತು. ಅದಕ್ಕಾಗಿ
ಕಾಡಿನ ನಾಶ ವ್ಯಾಪಕವಾಗಿ, ಅವೈಜ್ಞಾನಿಕವಾಗಿ
ನಡೆಯಿತು. ಅದು ಆತಂತಕಾರಿಯಾದ ವಿಷಯವಾಗಿತ್ತು."
"ನಿಮ್ಮ
ಅಸಮಾಧಾನವನ್ನು ವ್ಯಕ್ತಪಡಿಸಿ ನೀವು ಡಾರ್ಲಿಂಗ್ಟನ್ ರಿಗೆ ಈ ಬಗ್ಗೆ ಪತ್ರವನ್ನು ಬರೆದಿದ್ದಿರಂತೆ?"
"ಕಾಡುಗಳ
ನಾಶವು ಭಾರತದ ಸ್ಥಳೀಯ ಗಿಡಗಳನ್ನು ನಾಶಮಾಡುತ್ತಿತ್ತು. ಅದು ನಿಜಕ್ಕೂ ಸಹಿಸಲಾಗದ ವಿಷಯ. ನಿನಗೆ
ಗೊತ್ತೇ, ನಾನು
ಮ್ಯಾಗ್ನೋಲಿಯ ಗ್ರಿಫಿತಿ ಎಂಬ ಮರವನ್ನು ಹುಡುಕಿಕೊಂಡು ಅಸ್ಸಾಂನ ಶಿಲ್ಲಾಂಗ್ ನಿಂದ 37 ಮೈಲಿಗಳು
ಹೋದೆ. ನಂತರ ದೊರೆತ ಒಂದೇ ಒಂದು ಮರವನ್ನೂ ಸಹ ಸುಟ್ಟುಹಾಕಲಾಗಿತ್ತು."
"ನೀವು ಏನು
ಕ್ರಮವನ್ನು ಕೈಗೊಂಡಿರಿ?"
"ಆಗ ನಾನು
ನನ್ನ ಕೌಶಲ್ಯಗಳನ್ನು ಬಳಸಿ ಗಿಡಗಳ ವ್ಯಾಪಾರಿ ಬಳಕೆಗಳನ್ನು ಸುಧಾರಿಸುವುದರ ಜೊತೆಗೆ
ಅಪಾಯದಂಚಿನಲ್ಲಿದ್ದ ಸ್ಥಳೀಯ ಸಸ್ಯಗಳನ್ನು ಉಳಿಸಲು ಪ್ರಯತ್ನಗಳನ್ನು ಆರಂಭಿಸಿದೆ. ನನ್ನ ಗುರಿ
ಇನ್ನೊಂದಿತ್ತು - ಇಡೀ ಖಂಡದ ಉದ್ದಗಲದಿಂದ ಸಂಗ್ರಹಿಸಿದ್ದ ಗಿಡಗಳ ಮಾದರಿಗಳನ್ನು ಹರ್ಬೇರಿಯಮ್
(ಒಣಗಿದ ಗಿಡಗಳನ್ನು ಅಧ್ಯಯನ ಮಾಡಲು ರಕ್ಷಿಸಿ ಇಡುವುದು) ಒಂದರಲ್ಲಿ ಇಡುವುದು. ಅದಕ್ಕಾಗಿ ಭಾರತದ
ವಿಜ್ಞಾನಿಗಳೇ ಸರಿ ಎನ್ನುವುದು ನನ್ನ ನಂಬಿಕೆಯಾಗಿತ್ತು. ನಮ್ಮ ದೇಶದ ಹೂಗಳು, ಗಿಡಗಳ ಬಗ್ಗೆ ವ್ಯವಸ್ಥಿತವಾದ ಅಧ್ಯಯನವಾಗಬೇಕಿತ್ತು.
ಆದರೆ ಇಲ್ಲಿಂದ ಸಂಗ್ರಹವಾದದ್ದು ವಿದೇಶಿ ಸಸ್ಯಶಾಸ್ತ್ರಜ್ಞರಾಗಿದ್ದರಿಂದ ಅವೆಲ್ಲವೂ ಯೂರೋಪಿನ
ವಿವಿಧ ತೋಟಗಳಲ್ಲಿ, ಹರ್ಬೇರಿಯಾಗಳಲ್ಲಿವೆ.
ಒಂದು ವೇಳೆ ನಾವು ಭಾರತದ ಗಿಡಮರಗಳ ಬಗ್ಗೆ ಅಧ್ಯಯನ ಮಾಡಬೇಕಾದರೆ ಭಾರತಕ್ಕಿಂತ, ಹೊರಗಡೆಯೇ ಚೆನ್ನಾಗಿ ಕೆಲಸ
ಮಾಡಬಹುದು ಎಂದು ಬರೆದೆ. ಭಾರತದ ಗಿಡಗಳನ್ನು ಉಳಿಸಲು, ಅವುಗಳ ಬಗ್ಗೆ ಇದ್ದ ಸ್ಥಳೀಯ ಜ್ಞಾನವನ್ನು ಒಪ್ಪಿಕೊಳ್ಳುವ ಅವಶ್ಯಕತೆಯನ್ನು
ಕಂಡೆ."
"1955ರಲ್ಲಿ
ಚಿಕಾಗೊದಲ್ಲಿ ನಡೆದ ಅಂತರರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಭಾಗವಹಿಸಲು ಹೋದ ವಿಶ್ವದ ಏಕೈಕ ಮಹಿಳೆ
ನೀವಾಗಿದ್ದಿರಿ. ಅಲ್ಲಿ ಯಾವ ವಿಚಾರವನ್ನು ಮಂಡಿಸಿದಿರಿ?"
"ಆ
ವಿಚಾರಸಂಕಿರಣದಲ್ಲಿ `ಭೂಮಿಯ ಮೇಲ್ಮೈ ಬದಲಾಯಿಸುವಲ್ಲಿ ಮನುಷ್ಯರ ಪಾತ್ರ"
ಎಂಬುದರ ಬಗ್ಗೆ ಚರ್ಚೆ ನಡೆಯಿತು. ಅಲ್ಲಿ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಭೂಮಿಯ ಮೇಲೆ
ನಡೆಸುತ್ತಿರುವ ಅನ್ಯಾಯಗಳ ಬಗ್ಗೆ ಚರ್ಚೆ ನಡೆಯಿತು. ನಾನು ಭಾರತದ ವಾಸ್ತವ ಆರ್ಥಿಕತೆಯ ಬಗ್ಗೆ, ಬುಡಕಟ್ಟು ಸಂಸ್ಕೃತಿಗಳ ಮಹತ್ವ
ಮತ್ತು ಸ್ಥಳೀಯ ಗಿಡಗಳ ಬೆಳೆಸುವಿಕೆಯಲ್ಲಿ ಅವರ ಪಾತ್ರ, ಮಹಿಳೆಯರನ್ನು ಗೌರವಿಸುವ ಭಾರತದ ಮಾತೃಪ್ರಧಾನ ಸಂಸ್ಕೃತಿ, ಮತ್ತು ಧಾನ್ಯಗಳ ವ್ಯಾಪಕ
ಉತ್ಪಾದನೆಯಿಂದಾಗಿ ಅಳಿವಿನಂಚಿನಲ್ಲಿದ್ದ ಗಿಡಗಳ ಬಗ್ಗೆ ಮಾತನಾಡಿದೆ."
"ಅದಾದ
ನಂತರ ನೀವು ಎಲ್ಲೆಲ್ಲಿ ಕೆಲಸ ಮಾಡಿದಿರಿ, ಏನೇನು ಕೆಲಸಗಳನ್ನು ಮಾಡಿದಿರಿ?"
"ಸಸ್ಯಗಳ
ಅನುವಂಶಿಕತೆ, ಸಸ್ಯಶಾಸ್ತ್ರ
ಭೂಗೋಳಶಾಸ್ತ್ರ ಸಂಶೋಧನೆಯಲ್ಲಿ ತೊಡಗಿದೆ. ಬಹಳಷ್ಟು ಹೈಬ್ರಿಡ್ ತಳಿಯ ಬದನೆಕಾಯಿಗಳನ್ನು
ಬೆಳೆಸಿದೆ. ಕೇರಳದಲ್ಲಿ ದೊರೆಯುವ ಔಷಧೀಯ ಗಿಡಮೂಲಿಕೆಗಳ ಸಂರಕ್ಷಣೆಯಲ್ಲಿ ತೊಡಗಿದೆ. ಹೂಬಿಡುವ
ಸಾವಿರಾರು ಸಸ್ಯಗಳ ಸಾವಿರಾರು ಪ್ರಭೇದಗಳಲ್ಲಿ ವರ್ಣತಂತುಗಳ ಬಗ್ಗೆ ಸಂಶೋಧನೆ ನಡೆಸಿದೆ. ಪರಿಸರ
ವಿಜ್ಞಾನ ಮತ್ತು ಜೀವರಾಶಿ ವೈವಿಧ್ಯತೆಯ ಬಗ್ಗೆ ಅಧ್ಯಯನ ಮಾಡಿದೆ."
"ನಿವೃತ್ತಿಯಾದನಂತರ
ಟ್ರಾಂಬೆಯಲ್ಲಿ ಕೆಲಕಾಲ ಅಟಾಮಿಕ್ ರಿಸರ್ಚ್ ಸ್ಟೇಷನ್ ನಲ್ಲಿ ಸೇವೆ ಸಲ್ಲಿಸಿದೆ, ನಂತರ ಮದ್ರಾಸ್
ವಿಶ್ವವಿದ್ಯಾನಿಲಯದ ಸಿ ಎ ಎಸ್ ನಲ್ಲಿ ಎಮಿರಿಟಸ್ ವಿಜ್ಞಾನಿಯಾಗಿ ಕಾರ್ಯನಿರ್ವಹಿಸಿದೆ."
"ನೀವು
ನಿಮ್ಮ ಕೆಲಸವನ್ನು ಬಹಳ ಶಿಸ್ತಿನಿಂದ ಮಾಡುತ್ತಿದ್ದಿರಿ. ನಿವೃತ್ತಿಗೆ ಮುಂಚೆ ಯಾವ ರೀತಿ
ಇದ್ದಿರೊ, ಅದೇ ರೀತಿ
ಕಿರಿಯರಿಗೆ ಹೇಳಿಕೊಡುತ್ತಾ, ನಿಮ್ಮ
ಸಂಶೋಧನೆಯನ್ನು ಅದೇ ಉತ್ಸಾಹದಿಂದ ಮುಂದುವರೆಸಿಕೊಂಡು ಹೋದಿರಿ. ನೀವು ಯಾವಾಗಲೂ
ಕ್ರಿಯಾಶೀಲರಾಗಿರುತ್ತಿದ್ದಿರಿ, ಮೌನವಾಗಿರುತ್ತಿದ್ದಿರಿ, ನಿಮ್ಮ ಸಾಧನೆ, ಮಹಾನತೆಯ ಬಗ್ಗೆ ಯಾವ ರೀತಿಯ
ಅಹಂಕಾರವೂ ಇರಲಿಲ್ಲ, ಅಲ್ಲವೇ?"
ಏನೂ ಮಾತನಾಡದೆ ಮುಗುಳ್ನಕ್ಕರಾಕೆ.
"ನೀವು
ಗಾಂಧಿವಾದಿಗಳಾಗಿದ್ದು, ಯಾವಾಗಲೂ
ಸರಳ ಜೀವನವನ್ನೇ ಬಯಸಿದಿರಿ, ನಿಮ್ಮ
ಅವಶ್ಯಕತೆಗಳನ್ನು ಅತೀ ಕಡಿಮೆ ಎಂದು ಕೇಳಿದ್ದೆ. ಈಗ ನಿಮ್ಮನ್ನು ನೋಡಿದರೆ ಅದು
ಸತ್ಯವೆನಿಸುತ್ತದೆ. ನಿಮ್ಮ ಸರಳತೆ,
ಗಾಂಭೀರ್ಯ, ತೂಕ
ತಪ್ಪದ ಮಾತು, ಇಷ್ಟು
ಸಾಧನೆ ಮಾಡಿಯೂ ಅಹಂಕಾರವಿರದ ನಿಮ್ಮ ವಿನಯತೆ, ಕಂಡು ನಾನು ನಿಜಕ್ಕೂ ಬೆರಗಾಗಿದ್ದೇನೆ."
ಮತ್ತೆ ಅದೇ ಮಗುವಿನಂತಹ ನಗು!
"ನಿಮ್ಮ
ಸರಳತೆಯ ಈ ಘಟನೆಯ ಬಗ್ಗೆ ನಾನು ಕೇಳಲೇ ಬೇಕು. ಕಲ್ಕತ್ತಾದ ಚೌರಂಗಿ ಲೇನ್ ನಲ್ಲಿನ ನಿಮ್ಮ ಬಿಎಸ್
ಐ ಕಛೇರಿಯ ಮುಂದೆ ಬೆಳಿಗ್ಗೆ ಎಲ್ಲರೂ ಬರುವ ಮುನ್ನವೇ ನೀವು ಒಂದು ಪೊರಕೆಯನ್ನಿಡಿದು ಗುಡಿಸಿ
ಸ್ವಚ್ಛಗೊಳಿಸುತ್ತಿದ್ದಿರಿ. ನೀವು ಸಂಶೋಧನೆಯನ್ನು ಎಷ್ಟು ಮುಖ್ಯವೆಂದು ಪರಿಗಣಿಸಿದ್ದಿರೊ, ಇದನ್ನು ಅಷ್ಟೇ ಮುಖ್ಯವೆಂಬಂತೆ
ಪರಿಗಣಿಸಿದ್ದಿರಿ ಎಂದು ಹೇಳುತ್ತಾರೆ. ನಿಜವೇ?"
"ನಮ್ಮ ಮನೆ, ಅದರ ಸುತ್ತಮುತ್ತ
ಗುಡಿಸಿಕೊಳ್ಳುವುದು ಯಾವುದೇ ವ್ಯಕ್ತಿಗೆ ಬಹಳ ಸಹಜವಾದ ಕೆಲಸ. ಇದೂ ಅಷ್ಟೆಯೇ" ಅದೇನೂ
ದೊಡ್ಡದಲ್ಲವೇನೊ ಎಂಬಂತೆ ಅವರ ಮಾತು. ನೆನಪಿರಲಿ ಆಕೆ ಭಾರತದ ಮೊದಲ ಮಹಿಳಾ ಪಿಎಚ್ ಡಿ ಪದವೀಧರೆ. ವಿಶ್ವದ
ಸಸ್ಯಶಾಸ್ತ್ರಜ್ಞರಲ್ಲಿ ಆಕೆಯೂ ಸಹ ಪ್ರಮುಖರು. ಆದರೂ ಎಂತಹ ಸರಳ ನಡೆನುಡಿ!
"ನೀವು
ಪರಿಸರದ ಬಗ್ಗೆ ಮಾತನಾಡಿದಿರಿ ಎಂದು ಕೇಳಿರುವೆ. ಅದರ ಬಗ್ಗೆ ಹೇಳುವಿರಾ?"
"ಒಂದೆಡೆ
ಭಾರತವನ್ನು ಸ್ವಾವಲಂಬಿಯಾಗಿಸುವಲ್ಲಿ ಕೃಷಿಯ ಪಾತ್ರವನ್ನು ಮನದಟ್ಟು ಮಾಡಿಕೊಡುತ್ತಾ, ಇನ್ನೊಂದೆಡೆ ಪರಿಸರದ ಬಗ್ಗೆ
ಅರಿವನ್ನು ಮೂಡಿಸಿದ್ದೇ ಅಲ್ಲದೇ, ಪರಿಸರಕ್ಕೆ
ಹಾನಿ ಮಾಡುವ ಸರ್ಕಾರಗಳ ಯೋಜನೆಗಳ ವಿರುದ್ಧ ದನಿ ಎತ್ತಿದೆ."
"80 ವರ್ಷದ
ಭಾರತದ ಅತ್ಯುತ್ತಮ ಸಸ್ಯಶಾಸ್ತ್ರಜ್ಞೆಯಾದ ನೀವು ಈ ದೇಶದ ಶ್ರೀಮಂತ ವೈವಿಧ್ಯತೆಯನ್ನು ರಕ್ಷಿಸಲು
ದೇಶದ ಜನತೆಗೆ, ಮುಖ್ಯವಾಗಿ
ವೈಜ್ಞಾನಿಕ ಸಮುದಾಯಕ್ಕೆ ಕರೆಯನ್ನಿತ್ತಿರಿ. ಆ ಚಳುವಳಿಯ ಬಗ್ಗೆ ಸ್ವಲ್ಪ ವಿವರಿಸುವಿರಾ?"
"ಭಾರತ
ಸರ್ಕಾರ ಕೇರಳದ ಸೈಲೆಂಟ್ ವ್ಯಾಲಿಯಲ್ಲಿ ವಿದ್ಯುತ್ ಮತ್ತು ಉದ್ಯೋಗಗಳಿಗಾಗಿ ನಿತ್ಯಹರಿದ್ವರ್ಣ
ಉಷ್ಣವಲಯದ ಕಾಡಿನಲ್ಲಿ 8.3 ಚದರ ಕಿಲೋಮೀಟರ್ ಜಾಗವನ್ನು ಆಕ್ರಮಿಸಿಕೊಂಡು ಕುಂತಿಪುಜ಼ಾ
ನದಿಗೆ ಅಡ್ಡಲಾಗಿ ಜಲವಿದ್ಯುತ್ತಿನ ಸ್ಥಾವರವನ್ನು ಕಟ್ಟಲು ನಿರ್ಧರಿಸಿತು. ಅಲ್ಲಿ 1000ಕ್ಕೂ
ಹೆಚ್ಚು ಸ್ಥಳೀಯ ಹೂವಿನ ಸಸ್ಯಗಳಿವೆ,
ಹಲವಾರು ಪ್ರಾಣಿ, ಪಕ್ಷಿಗಳಿವೆ.
ಈ ಯೋಜನೆಯಿಂದಾಗಿ ಆ ಜೀವವೈವಿಧ್ಯಮಯ ಕಾಡು ಜಲಾವೃತ್ತವಾಗಿ ನಾಶವಾಗುತ್ತಿತ್ತು. ಅದು ಭಾರತದ
ಬೆಳವಣಿಗೆಗೆ ಮಾರಕವಾಗಿತ್ತು. ಹಾಗಾಗಿ ನಾನು ಚಳುವಳಿ ಆರಂಭಿಸಿದೆ."
"ನಂತರ
ಏನಾಯಿತು?"
"ಅದನ್ನು
ಕಾರ್ಯಗತಗೊಳ್ಳಲು ನಾವು ಬಿಡಲಿಲ್ಲ. ಆ ಸಮಯದಲ್ಲಿಯೇ ನಾನು ನನ್ನ ವೈಜ್ಞಾನಿಕ ಜ್ಞಾನವನ್ನು
ಬಳಸಿಕೊಂಡು ಸೈಲೆಂಟ್ ವ್ಯಾಲಿಯಲ್ಲಿನ ಗಿಡಗಳ ವರ್ಣತಂತುವಿನ ಸಮೀಕ್ಷೆ ನಡೆಸಿದೆ. ಆದರೆ ನಂತರ
ಜನತಾ ವಿಜ್ಞಾನ ಚಳುವಳಿಯ ಕಾರಣದಿಂದಾಗಿ ಜಲವಿದ್ಯುತ್ ಸ್ಥಾವರ ಸ್ಥಾಪನೆಯ ಯೋಜನೆ ನಿಂತುಹೋಯಿತು.
ಅ ಸ್ಥಳವನ್ನು `ಸೈಲೆಂಟ್ ವ್ಯಾಲಿ ರಾಷ್ಟ್ರೀಯ ಉದ್ಯಾನವನ’ ವೆಂದು ಘೋಷಿಸಲಾಯಿತು."
"ಓಹ್!
ಭಾರತದ ಸ್ಥಳೀಯ ಸಸ್ಯಗಳ ಉಳಿವಿಗಾಗಿ ಪ್ರಬಲ ಪ್ರತಿಪಾದಕರಾದ್ದರಿಂದಲೇ ನಿಮ್ಮನ್ನು `ಪರಿಸರದ
ಬಗೆಗಿನ ಸ್ಥಳೀಯ ದೃಷ್ಟಿಕೋನಗಳ ಆರಂಭಕರ್ತೆ’ ಎಂದು ಪರಿಗಣಿಸಿರುವುದು."
"ಪರಿಸರದ
ಬಗ್ಗೆ ನಾವಿನ್ನೂ ಹೆಚ್ಚು ಗಮನ ಹರಿಸಿಲ್ಲ. ಇದೇ ರೀತಿ ಮುಂದುವರೆದರೆ ನಾವು ನಿಜಕ್ಕೂ ಅಪಾರ ನಷ್ಟ
ಅನುಭವಿಸಬೇಕಾಗುತ್ತದೆ. ನಮ್ಮ ಬದುಕು ಪರಿಸರದೊಂದಿಗೆ ಬೆಸೆದುಕೊಂಡಿದೆ. ಅದನ್ನು ಅರ್ಥಮಾಡಿಕೊಂಡು
ಬದುಕಬೇಕೆ ಹೊರತು ಆ ಕೊಂಡಿಯನ್ನು ಕಳಚಿಕೊಳ್ಳಬಾರದು."
"ಹೌದು
ನೀವು ಹೇಳುತ್ತಿರುವುದು ನಿಜಕ್ಕೂ ಸತ್ಯ. ನಿಮ್ಮ ಮಾತುಗಳನ್ನು ವ್ಯಾಪಕವಾಗಿ ಪ್ರಚಾರ ಮಾಡಲು
ಯತ್ನಿಸುವೆ. ನಿಮ್ಮ ಬಗ್ಗೆ ಇನ್ನೇನಾದರೂ ಹೇಳಿ. ನಿಮಗೆ ಬಂದ ಸನ್ಮಾನಗಳು, ಪದಕಗಳು, ಇತ್ಯಾದಿ."
"ಅದೆಲ್ಲಾ
ಅವಶ್ಯಕ ಇದೆಯೇ?"
"ಖಂಡಿತವಾಗಿಯೂ
ಇದೆ.
"ವೈಜ್ಞಾನಿಕ
ಸಂಶೋಧನೆ ಮತ್ತು ಅನ್ವೇಷಣೆ ಯುವಜನತೆಗೆ ಸ್ಫೂರ್ತಿದಾಯಕವಾದ ಮಾದರಿ. ಆದರೆ ಮಹಿಳೆಯರೇ ಇಲ್ಲದಿದ್ದ
ಕ್ಷೇತ್ರದಲ್ಲಿ ಎಲ್ಲಾ ಅಡೆತಡೆಗಳನ್ನು ಮೀರಿ ನಿಮ್ಮ ವ್ಯಕ್ತಿತ್ವವನ್ನು
ಸಾಬೀತುಪಡಿಸಿಕೊಂಡಿದ್ದೀರಿ. ವಿಜ್ಞಾನ ಕ್ಷೇತ್ರದ ಹೊರತಾಗಿಯೂ ಕೂಡ ನಿಮ್ಮ ಜೀವನಚರಿತ್ರೆ
ಎಲ್ಲರಿಗೂ ಸ್ಪೂರ್ತಿದಾಯಕವಾಗಿರುತ್ತದೆ. ಆಧುನಿಕ ಕಾಲದಲ್ಲಿ, ಸ್ವಾತಂತ್ರ್ಯೋತ್ತರ ಭಾರತದಲ್ಲಿ, ಮಹಿಳಾ ವಿಮೋಚನೆ ಮತ್ತು
ಸಶಕ್ತಿಕರಣದಲ್ಲಿ ನಿಮ್ಮ ಜೀವನ ಮತ್ತು ಸಾಧನೆ ಒಂದು ಅಮೋಘವಾದ ಅಧ್ಯಾಯವಾಗಿರುತ್ತದೆ, ಮಹಿಳೆಯರಿಗೆ
ಮಾರ್ಗದರ್ಶಕವಾಗಿರುತ್ತದೆ."
"ಹೌದೇ?" ಎಂದರೂ ಸಹ
ಅವರು ಅದನ್ನು ಹೇಳುವಂತೆ ಕಾಣಲಿಲ್ಲ. ಕೊನೆಗೆ ನಾನೇ "ಹೋಗಲಿ ನಾನೇ ನಾನು
ತಿಳಿದುಕೊಂಡಿರುವುದನ್ನು ಹೇಳುತ್ತೇನೆ. ಅದು ಸರಿಯೊ ತಪ್ಪೊ ಹೇಳಿಬಿಡಿ."
"ಆಗಬಹುದು."
"ನೀವು
ಓದಿದ ವಿದ್ಯಾಸಂಸ್ಥೆಯಿಂದ ಡಿಎಸ್ಸಿ ಪದವಿ ಪಡೆದ ಕೆಲವೇ ಏಷ್ಯಾದ ಮಹಿಳೆಯರಲ್ಲಿ ನೀವೂ ಒಬ್ಬರು.
ಮಿಚಿಗನ್ ಎಲ್ಎಲ್ಡಿ ಕೊಡುವಾಗ ಹೇಳಿದ್ದು. "ಬಹಳ ತಾಳ್ಮೆ, ತ್ರಾಸದಾಯಕ ಗಮನಿಸುವಿಕೆ, ವಿಷಯದ ಮಂಡನೆಯಲ್ಲಿ ಖಚಿತತೆ
ಇರುವ ಈಕೆ ಮತ್ತು ಈಕೆಯ ತಾಳ್ಮೆಯುಕ್ತ ಪ್ರಯತ್ನಗಳು, ಗಂಭೀರವಾಗಿ ಮತ್ತು ಸಮರ್ಪಣೆಯಿಂದ ಕೆಲಸ ಮಾಡುವ ಎಲ್ಲಾ ವೈಜ್ಞಾನಿಕ ಕೆಲಸಗಾರರಿಗೆ
ಮಾದರಿ. 1977ರಲ್ಲಿ ಭಾರತ ಸರ್ಕಾರ ನಿಮಗೆ ಪದ್ಮಶ್ರೀ ಪ್ರಶಸ್ತಿ ನೀಡಿತು."
"ಹೌದು."
"ನಂತರ
ಇನ್ನೂ ಹಲವಾರು ಅಂಶಗಳಿವೆ. 2018 ರಲ್ಲಿ ನಿಮ್ಮ ಅದ್ಭುತ ವ್ಯಕ್ತಿತ್ವ ಮತ್ತು ಕೊಡುಗೆಯನ್ನು
ಸ್ಮರಿಸುತ್ತಾ ಭಾರತದ ಇಬ್ಬರು ಪ್ಲಾಂಟ್ ಬ್ರೀಡರ್ಸ್ (ಸಸ್ಯ ಬೆಳೆಗಾರರು), ಗಿರಿಜಾ ಮತ್ತು ವಿರು
ವಿರಾರಾಘವನ್ ಹೊಸ ಗುಲಾಬಿಯ ತಳಿಯನ್ನು ಬೆಳೆದು ಅದಕ್ಕೆ ’ಇ ಕೆ ಜಾನಕಿ ಅಮ್ಮಾಳ್’ ಎಂದು ನಿಮ್ಮ ಹೆಸರಿಟ್ಟರು. ಪರಿಸರ ಮತ್ತು ಅರಣ್ಯಾಲಯ ಸಚಿವಾಲಯವು 2000 ದಲ್ಲಿ
ನಿಮ್ಮ ಹೆಸರಿನಲ್ಲಿ ಎರಡು ನ್ಯಾಷನಲ್ ಅವಾರ್ಡ್ ಸ್ಥಾಪಿಸಿತು. ಜಾನಕಿ ಅಮ್ಮಾಳ್ ನ್ಯಾಷನಲ್ ಅವಾರ್ಡ್ ಆನ್
ಪ್ಲಾಂಟ್ ಟ್ಯಾಕ್ಸಾನಮಿ ಮತ್ತು ಜಾನಕಿ ಅಮ್ಮಾಳ್ ನ್ಯಾಷನಲ್ ಅವಾರ್ಡ್ ಆನ್ ಅನಿಮಲ್
ಟ್ಯಾಕ್ಸಾನಮಿ. ಜಮ್ಮು ತಾವಿಯಲ್ಲಿ 25,000 ಕ್ಕೂ ಹೆಚ್ಚು ಸಸ್ಯಗಳ ತಳಿಗಳ
ಹರ್ಬೇರಿಯಂ ಗೆ ನಿಮ್ಮ ಹೆಸರಿಡಲಾಗಿದೆ. ಜಾನ್ ಇನ್ನೆಸ್ ಸೆಂಟರ್ ಅಭಿವೃದ್ಧಿಶೀಲ ರಾಷ್ಟ್ರಗಳ
ಪಿಎಚ್ಡಿ ವಿದ್ಯಾರ್ಥಿಗಳಿಗೆ ನಿಮ್ಮ ಹೆಸರಿನಲ್ಲಿ ಸ್ಕಾಲರ್ಶಿಪ್ ನೀಡುತ್ತಿದೆ."
"ಓಹ್!"
ಆಶ್ಚರ್ಯ ವ್ಯಕ್ತಪಡಿಸಿದರು.
"ಕೊನೆಯದಾಗಿ
ನಮ್ಮ ಪೀಳಿಗೆಗೆ ಏನನ್ನಾದರೂ ಹೇಳುತ್ತೀರಾ, ಪ್ಲೀಸ್?"
"ಹೆಣ್ಣುಮಕ್ಕಳಿಗೆ
ಒಂದು ಮಾತನ್ನು ಹೇಳಬೇಕೆಂದುಕೊಂಡಿದ್ದೇನೆ. 20ನೇ
ಶತಮಾನದ ಆರಂಭದಲ್ಲಿ, ಪಿತೃಪ್ರಧಾನ
ವ್ಯವಸ್ಥೆಯಲ್ಲಿ, ಹೆಣ್ಮಕ್ಕಳನ್ನು
ಶಾಲೆಗೆ ಕಳಿಸುವುದೇ ತಪ್ಪು ಎನ್ನುವ ಕಾಲದಲ್ಲಿ ನಾನು ಇಷ್ಟು ಸಾಧನೆ ಮಾಡಲು ಸಾಧ್ಯವಾಗುವುದಾದರೆ, ನೀವು 21ನೆ
ಶತಮಾನದವರು. ಇನ್ನೆಷ್ಟು ಸಾಧಿಸಲು ಸಾಧ್ಯವಾಗಬಹುದು. ಹೆಣ್ಮಕ್ಕಳು ಯಾರಿಗಿಂತಲೂ ಕಡಿಮೆಯೇನಿಲ್ಲ.
ಮನಸ್ಸು ಮಾಡಿದರೆ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಬಹುದು. ಅಡೆತಡೆಗಳು ಬಂದೇ ಬರುತ್ತದೆ.
ಕುಟುಂಬ, ಸಮಾಜ
ಅಡ್ಡಿ ಪಡಿಸಬಹುದು. ಆದರೆ ನಿಮ್ಮಲ್ಲಿ ಸಾಧಿಸುವ ಛಲವೊಂದಿದ್ದರೆ, ಆ ಅಡೆತಡೆಗಳನ್ನು ಮೀರುವುದು
ಕಷ್ಟವಾಗುವುದಿಲ್ಲ. ನೆನಪಿಡಿ, ನಮ್ಮ
ನಂತರವೂ, ನಮ್ಮ
ಕೆಲಸವೊಂದೇ ಉಳಿಯುವುದು. ಹಾಗಾಗಿ ಎಲ್ಲರೂ ಸಹ ತಮಗಿಷ್ಟವಾದ ಕ್ಷೇತ್ರದಲ್ಲಿ ಸಾಧನೆ ಮಾಡಲು ಕೆಲಸ
ಮಾಡಿದರೆ, ಸಮಾಜಕ್ಕೆ
ಅನುಕೂಲವಾಗುತ್ತದೆ, ಆದರೆ
ಅದಕ್ಕಿಂತ ಹೆಚ್ಚಾಗಿ ನಮ್ಮ ವ್ಯಕ್ತಿತ್ವ ಬೆಳೆಯುತ್ತದೆ. ಮನುಷ್ಯರಾಗಿ ಹುಟ್ಟಿದ ಮೇಲೆ ನಮ್ಮ
ಬದುಕನ್ನು ಸಾರ್ಥಕಗೊಳಿಸಿಕೊಂಡೆವೆಂಬ ಹೆಮ್ಮೆಯಿರುತ್ತದೆ."
ಹೆಮ್ಮೆಯಿಂದ ಅವರ ಮುಖವನ್ನೇ ದಿಟ್ಟಿಸುತ್ತಾ ಅವರು ಮಾತಾಡುವುದನ್ನೇ ಕೇಳುತ್ತಾ
ಕುಳಿತುಬಿಟ್ಟಿದ್ದೆ.
ಎಚ್ಚರವಾದಾಗ ಅವರು ನನ್ನ ಎದುರಿಗಿರಲಿಲ್ಲ, ನನ್ನೊಳಗೇ ಸೇರಿಬಿಟ್ಟಿದ್ದರು!
ಅವರು ನಮಗೆ ಕೊಟ್ಟುಹೋಗಿದ್ದ ಸಿಹಿಯಾದ ಸಕ್ಕರೆಯ ರುಚಿ
ನನ್ನ ನಾಲಿಗೆಯ ಮೇಲಿತ್ತು!
******