ದೀಪದ ಹಬ್ಬ
ಪಟಾಕಿ ಹಬ್ಬವು ಬಂತಮ್ಮ
ಹಬ್ಬವ ನಾವೂ ಮಾಡೋಣ
ಸಿಹಿಯನು ತಿಂದು ದೀಪವ ಹೊತ್ತಿಸಿ
ಡಮಡಮ ಪಟಾಕಿ ಹೊಡೆಯೊಣ.
ಡಮ ಡಮ ಪಟಾಕಿ ಬೇಡ ಮಗು
ಶಬ್ದದಿ ತೊಂದರೆ ಎಲ್ಲರಿಗೂ
ಕಿವಿಗೆ ಕಷ್ಟ ಹೃದಯಕೆ ತೊಂದರೆ
ಡಮಡಮ ಪಟಾಕಿ ಬೇಡ ಮಗು.
ಸುರುಸುರು ಬತ್ತಿಯ ಹಚ್ಚುವೆ ನಾ
ಭೂಚಕ್ರವನೆ ನಾ ತಿರುಗಿಸುವೆ
ಟ್ರೈನು, ಪೆನ್ಸಿಲ್ ಮತಾಪು ಕಡ್ಡಿಯ
ಹಚ್ಚಿ ಖುಷಿಯನು ನಾ ಪಡುವೆ.
ಹೊಗೆಯನು ಹರಡಿ ಕೆಮ್ಮಿಸುವ
ಸುರುಸುರು ಬತ್ತಿಯು ಬೇಡ ಮಗು
ಕಣ್ಣಿಗು ತೊಂದರೆ ಕೈಗೂ ತೊಂದರೆ
ಯಾವ ಪಟಾಕಿಯು ಬೇಡ ಮಗು.
ಹಬ್ಬವೆ ಬೇಡ ಹೋಗಮ್ಮ
ನನಗೆ ಕೋಪ ಬರುತಿದೆಯಮ್ಮ
ನನ್ನ ಗೆಳೆಯರು ಎಲ್ಲರ ಮನೆಯಲಿ
ಸಡಗರ ಸಂಭ್ರಮ ನೋಡಮ್ಮ.
ಈ ದಿನ ದೀಪವ ಹೊತ್ತಿಸು ಬಾ
ಜಗಕೆ ಸಂತಸ ನೀಡುವ ಬಾ
ನಿರಾಶೆಯ ಕತ್ತಲ ಓಡಿಸು ಬಾ
ಅರಿವಿನ ಬೆಳಕ ಮೂಡಿಸು ಬಾ.
ಆಯಿತು ಅಮ್ಮ ಮಾಡುವೆನಮ್ಮ
ನಾನೂ ದೀಪವ ಹೊತ್ತಿಸುವೆ
ಪಟಾಕಿ ಹೊಡೆಯದೆ ಪರಿಸರ ಉಳಿಸಿ
ದೀಪದ ಹಬ್ಬವ ಮಾಡೋಣ.
- ಸುಧಾ ಜಿ