ಸ್ನೇಹ
ಭೇಟಿಯಾಗಲು
ಯತ್ನಿಸಿ ಯತ್ನಿಸಿ,
ಸೋತು ಬೇಸತ್ತು
ನನಗನಿಸಿತ್ತು
ನೀ ಎಷ್ಟೊಂದು ದೂರವೆಂದು
ಹತ್ತಿರವೆನಿಸುತ್ತೀಯಾ
ಆದರೂ ಎಷ್ಟೊಂದು ದೂರವೆಂದು.
ದಿನನಿತ್ಯ ಭೇಟಿಯಾದರೆ
ಗಂಟೆಗಟ್ಟಲೆ ಹರಟಿದರೆ,
ಸಮಯದ ಪರಿವೆಯೇ ಇಲ್ಲದೆ
ಎದುರುಬದುರು ಕೂತಿದ್ದರೆ
ಮಾತ್ರ
ಹತ್ತಿರವೆಂದೇ?
ಒಂದು ನೋಟ
ಒಂದೇ ಒಂದು ಮಾತು,
ಒಬ್ಬರ ಮನದ ಭಾವವ
ಇನ್ನೊಬ್ಬರಿಗೆ ತಲುಪಿಸಲಾದರೆ,
ಒಬ್ಬರ ಮೌನವನ್ನೂ
ಇನ್ನೊಬ್ಬರು ಅರಿಯಲಾದರೆ,
ನೋಡಿಲ್ಲವೆಂಬ ನೋವಿಗೆ
ಮಾತಾಡಿಲ್ಲವೆಂಬ ಭಾವಕ್ಕೆ
ತಾವೇ ಇರುವುದಿಲ್ಲವಲ್ಲವೇ?
ಈಗನಿಸುತ್ತಿದೆ
ನಮ್ಮಿಬ್ಬರ ನಡುವೆ
ದೂರವೇ ಇಲ್ಲವೆಂದು,
ನನ್ನೊಳಗೇ ನೀನಿದ್ದೀಯೆಂದು!
No comments:
Post a Comment