Wednesday, 30 March 2016

POEM 85 - ಮಾನವೀಯತೆ ಎಲ್ಲಿ?

ಮಾನವೀಯತೆ ಎಲ್ಲಿ?

ಜೋರಾದ ಸದ್ದು ಕೇಳಿಬಂದಿತ್ತು
ಆರ್ತನಾದ ಕಿವಿಗಪ್ಪಳಿಸಿತ್ತು 
ದನಿ ಬಂದೆಡೆ ಕಣ್ಣು ನೋಡಿತ್ತು
ಕಂಡ ದೃಶ್ಯ ಕರುಳ ಕಿವುಚುವಂತಿತ್ತು
ಲಾರಿಯೊಂದು ವ್ಯಕ್ತಿ ಮೇಲೆ ಹಾಯ್ದಿತ್ತು
ದೇಹ ಎರಡು ಭಾಗವಾಗಿತ್ತು
ವಿಚಿತ್ರವೆಂದರೆ ವ್ಯಕ್ತಿಯಲಿ ಜೀವವಿತ್ತು 
ರಕ್ತ ಸುರಿದರೂ ದನಿ ಮಾತನಾಡುತಿತ್ತು
ನೆರವಿಗಾಗಿ ಎಲ್ಲರ ಯಾಚಿಸುತಿತ್ತು
ದೀನವಾಗಿ ನೆರೆದವರ ಬೇಡುತಿತ್ತು
ನೆರೆದ ಜನ ಮೂಕಪ್ರೇಕ್ಷಕರಾಗಿತ್ತು
ನೆರವೀಯದ ಮನ ಕಲ್ಲಾಗಿತ್ತು 

ನನ್ನೊಳಗಿನ ಪತ್ರಕರ್ತ ಪ್ರಜ್ಞೆ ಎದ್ದಿತ್ತು
ಮರುದಿನದ ಸುದ್ದಿ ಕಣ್ಮುಂದೆ ಇತ್ತು 
ಬ್ಯಾಗಿನಿಂದ ಕ್ಯಾಮರಾ ಹೊರಬಂತು 
ವೀಡಿಯೊ ಚಿತ್ರೀಕರಣ ಆರಂಭವಾಯ್ತು
ವ್ಯಕ್ತಿಯ ನಿಕಟ ಚಹರೆ ಬೇಕೆನಿಸಿತು 
ಜೂಮ್ ಲೆನ್ಸ್ ಹಾಕಿ ತೆಗೆಯಲಾರಂಬಿಸಿತು 
ಸಾಯುತ್ತಿದ್ದ ವ್ಯಕ್ತಿ ಕರೆದಂತೆ ಭಾಸವಾಯ್ತು
ಕೊನೆ ಶಾಟ್ ತೆಗೆಯುವುದು ಥ್ರಿಲ್ ಎನಿಸಿತು
ಹತ್ತಿರಕೆ ಹೋದಾಗ ಆ ಜೀವ ಬೇಡಿತು
ಕೊನೆಯಾಸೆಯನು ಶೂಟ್ ಮಾಡೆಂದಿತು 
ನನ್ನ ಕಣ್ಣು, ದಾನ ಕೊಡುತೇನೆಂದಿತು

ಕೇಳುತ್ತಿದ್ದಂತೆ ಕ್ಯಾಮರಾ ಕೆಳಜಾರಿತು
ನಾಚಿಕೆಯಿಂದ ತಲೆ ತಗ್ಗಿತ್ತು 
ಕಣ್ಣಿಂದ ಕಂಬನಿ ಸುರಿಯತೊಡಗಿತು
ಅವನಲ್ಲಿದ್ದ  ಮಾನವೀಯತೆಯ ತಂತು 
ನನ್ನಲ್ಲಿ ಮರೆಯಾಯಿತೇಕೆ?  ಪ್ರಶ್ನೆ ಮೂಡಿತು!!

No comments:

Post a Comment