ಪುಟಾಣಿ ಕಥೆ -೧
ಮಚ್ಚನ್ನು ಹಿಡಿದು ಕನ್ನಡ ಕಲಿಯಿರಿ ಇಲ್ಲದಿದ್ದರೆ ಕೊಚ್ಚಿ ಹಾಕುತ್ತೇವೆ ಎನ್ನುತ್ತಿದ್ದರು ದೊಡ್ಡವರು. ಆದರೂ ಯಾರೂ ಕನ್ನಡ ಕಲಿಯಲಿಲ್ಲ.
ಅಲ್ಲೊಬ್ಬ ಕಿರಿಯನಿಗೆ ಇನ್ನೊಬ್ಬ ಕಿರಿಯ ಹೇಳುತ್ತಿದ್ದ - "ನಿನ್ನ ಮಾತು ಸತ್ಯ ಕಣೊ. ನೆನ್ನೆ ಕನ್ನಡ ಪದಗಳನ್ನು ಕಲಿತದ್ದರಿಂದ ಇಂದು ಕಡಲೆಕಾಯಿ ಬುಟ್ಟಿ ಪೂರ್ತಿ ಖಾಲಿಯಾಯಿತು. ನೋಡಿಲ್ಲಿ" ಕೈತುಂಬ ಹಣ ತೋರಿಸಿದ.
ಪುಟಾಣಿ ಕಥೆ - ೨
ಸಾಯಲು ಹೊರಟವನಿಗೆ ಬಾವಿ ಸಿಗಲಿಲ್ಲ.
ಬಾವಿ ತೋಡಲಾರಂಭಿಸಿದ.
ಸುಮಾರು ದಿನಗಳ ನಂತರ ನೀರು ಚಿಮ್ಮಿತು.
ಹಾಗೇ ಅವನಿಗೆ ಬದುಕಿನ ಬಗ್ಗೆ ಪ್ರೀತಿ ಸಹ.
ಪುಟಾಣಿ ಕಥೆ - ೩
ಅಪ್ಪ ಅಮ್ಮನ ಮಾತಿನಿಂದ ಪಾಠ ಕಲಿಯದವನು
ಬದುಕಿನ ಹೊಡೆತಗಳಿಂದ ಪಾಠ ಕಲಿಯಲೇಬೇಕಾಗುತ್ತದೆ
ಎಂಬುದನ್ನು ಅರಿಯುವ ಮುನ್ನವೇ ಅವನು ದೊಡ್ಡವನಾಗಿಬಿಟ್ಟಿದ್ದ..
ಪುಟಾಣಿ ಕಥೆ -೪
ಮುಟ್ಟಿದರೆ ಮುನಿ ಆಕೆ.
ನಾನಿತ್ತದ್ದು ಒಂದು ಹನಿ ಪ್ರೀತಿ.
ಆಕೆ ಅಮೃತದ ಕಲಶವನೇ ಹೊತ್ತು ತಂದಳು.
ಪುಟಾಣಿ ಕಥೆ - ೫
ಇಬ್ಬರ ನಡುವೆ ಮೌನವಿತ್ತು.
ಅಹಂಕಾರವೆಂದುಕೊಂಡಳು ಒಬ್ಬಳು.
ಉದಾಸೀನವೆಂದುಕೊಂಡಳು ಇನ್ನೊಬ್ಬಳು.
ಆಕಸ್ಮಿಕವಾಗಿ ಮಾತನಾಡುವ ಸಂದರ್ಭ ಬಂತು.
ಈಗ ಅವರಿಬ್ಬರೂ ಆತ್ಮೀಯ ಗೆಳತಿಯರು.
ಪುಟಾಣಿ ಕಥೆ - ೬
"ಹುಡುಗನಿಗಾಗಿ ಜೀವ ಕೊಟ್ಟೆ," ಒಂದು ಹುಡುಗಿ ಹೇಳಿದಳು.
"ಬದುಕಲಾಗದೆ ಜೀವ ಕೊಟ್ಟೆ" ಇನ್ನೋರ್ವನ ಉವಾಚ.
"ಒಂದು ಸದುದ್ದೇಶಕ್ಕಾಗಿ ಜೀವ ಕೊಟ್ಟಿದ್ದರೆ ನಮಗಿಂಥಾ ಪರಿಸ್ಥಿತಿ ಬರುತ್ತಿರಲಿಲ್ಲ" ಮರಕ್ಕೆ ತೂಗಾಡುತ್ತಾ ಹೇಳಿತಾ ದೆವ್ವ.
"ಒಂದು ಸದುದ್ದೇಶಕ್ಕಾಗಿ ಜೀವ ಕೊಟ್ಟಿದ್ದರೆ ನಮಗಿಂಥಾ ಪರಿಸ್ಥಿತಿ ಬರುತ್ತಿರಲಿಲ್ಲ" ಮರಕ್ಕೆ ತೂಗಾಡುತ್ತಾ ಹೇಳಿತಾ ದೆವ್ವ.
ಪುಟಾಣಿ ಕಥೆ - ೭
ಅಬ್ಬಾ ಎಷ್ಟೊಂದು ಓದಿಬಿಟ್ಟಿರುವೆ, ಇನ್ನು ಓದುವುದು ಸಾಕೆಂದುಕೊಂಡಳು. ಶಾಲೆಯಿಂದ ಬಂದ ತಕ್ಷಣ ಮಗಳು ಕೇಳಿದ ಪ್ರಶ್ನೆಗೆ ತಲೆಕೆಡಿಸಿಕೊಂಡು ಮತ್ತೆ ಪುಸ್ತಕ ತೆರೆದಳು!
ಪುಟಾಣಿ ಕಥೆ - ೮
ಮಗಳನ್ನು ಓದಿಗಾಗಿ ವಿದೇಶಕ್ಕೆ ಕಳಿಸಿ ಮನೆಗೆ ಬಂದ ತಕ್ಷಣವೇ ಫೋನ್ ಕರೆ. "ಮೇಡಮ್ ಇಂದು ಬಂದು ಎರಡನೇ ಮಗುವನ್ನು ಕರೆದುಕೊಂಡು ಹೋಗಬಹುದು." ಅನಾಥಾಶ್ರಮದ ಕರೆ!
ಪುಟಾಣಿ ಕಥೆ - ೯
ಹೆಣಭಾರ ಹೊತ್ತು ಬದುಕಬಂಡಿ ಸಾಗಿಸಲು ಯತ್ನಿಸುತ್ತಿದ್ದ ತಾಯಿ ಪಕ್ಕದಲ್ಲಿ ನಡೆಯಲಾರಂಭಿಸಿದಳು 6 ವರ್ಷದ ಪುಟ್ಟ ಬಾಲೆ.
"ಒಬ್ಬರು ಜೊತೆಗಿದ್ದರೆ ನಿನಗೆ ಸ್ವಲ್ಪ ಹಾಯೆನಿಸಿತ್ತದೆ, ಅಲ್ಲವೇನಮ್ಮ?"
ಪುಟಾಣಿ ಕಥೆ - ೧೦
ಆಗ ಆ ಮನೆ ತುಂಬ ಮಕ್ಕಳಿದ್ದರು. ಈಗ ಆಕೆ ಒಬ್ಬಂಟಿ.
ಆಗ ಈ ಮನೆಯಲ್ಲಿ ಮಕ್ಕಳಿರಲಿಲ್ಲ. ನಂತರ ಎಲ್ಲೆಲ್ಲಿಂದಲೋ ಬಂದರು. ಈಗ ಆ ಮನೆಯಲ್ಲಿ ಜಾಗವೇ ಇಲ್ಲ!
ಆಗ ಈ ಮನೆಯಲ್ಲಿ ಮಕ್ಕಳಿರಲಿಲ್ಲ. ನಂತರ ಎಲ್ಲೆಲ್ಲಿಂದಲೋ ಬಂದರು. ಈಗ ಆ ಮನೆಯಲ್ಲಿ ಜಾಗವೇ ಇಲ್ಲ!
No comments:
Post a Comment