ಹೀಗೊಂದು ಸಂವಾದ
ತಾಯಿ:
ಹೀಗೆ ಬೆಳೆಸಿದೆನೆ
ನಿನ್ನ ನಾ?
ಸುಳ್ಳು ಹೇಳಲು
ಕಲಿಸಿದೆನೇ ನಾ?
ತಪ್ಪು ಮಾಡಲು
ಹೇಳಿಕೊಟ್ಟೆನಾ?
ಹಾಗೆ
ಬೆಳೆಸಿಲ್ಲವಲ್ಲ ನಿನ್ನ ನಾ!
ಮಗಳು ಮಾತ್ರವೇ
ನನಗೆ ನೀ?
ಪ್ರಾಣಗೆಳತಿಯಲ್ಲವೇ
ನನಗೆ ನೀ?
ಮುಚ್ಚಿಟ್ಟೆ ಏಕೆ
ನೀ ಮಾಡಿದ್ದು?
ಮರೆಮಾಚಿದೆ ಏಕೆ
ನಿನಗನಿಸಿದ್ದು?
ವಂಚಿಸಿದೆಯಲ್ಲ ನೀ
ನನ್ನ?
ಧಿಕ್ಕರಿಸಿದೆಯಲ್ಲ
ಪ್ರೇಮವನ್ನ?
ಮೋಸಮಾಡಿದೆ ಏಕೆ
ಕಂದ?
ಹಾಗಿದ್ದರೆ
ಕಲಿತದ್ದೇನು ನನ್ನಿಂದ?
ಕುಸಿದುಹೋಗಿರುವೆ
ನಾ ನೋವಿನಿಂದ
ವ್ಯಥೆಯಾಗಿದೆ
ನಿನ್ನ ವರ್ತನೆಯಿಂದ
ತತ್ತರಿಸಿದೆ ಮನ
ನಂಬಿಕೆದ್ರೋಹದಿಂದ
ಮಾಡಿದೆ ಏಕೆ ಹೀಗೆ,
ನನ್ನ ಕಂದ?
ಮಗಳು:
ಅಮ್ಮ ಹಾಗೆ ನಾ
ಬೆಳೆದಿರುವೆನಾ?
ಸುಳ್ಳು ಹೇಳಲು
ಕಲಿತಿರುವೆನಾ?
ತಪ್ಪು ನಾನು
ಮಾಡುವೇನಾ?
ಮೋಸದಾಟ ನಾ
ಆಡುವೇನಾ?
ನೀ ನನ್ನ ತಾಯಿ
ಮಾತ್ರವಲ್ಲ
ಜೀವದ ಗೆಳತಿಯೂ
ಹೌದಲ್ಲ!
ಮರೆಮಾಚಲೊಂದು
ಕಾರಣವಿತ್ತು
ಹೇಳದಿರಲೊಂದು
ಔಚಿತ್ಯವಿತ್ತು.
ವಂಚಿಸಲಿಲ್ಲ
ನಾನೆಂದು ನಿನ್ನ
ತಿರಸ್ಕರಿಸಲಿಲ್ಲ
ನಿನ್ನ ವಾತ್ಸಲ್ಯವನ್ನ
ಹೇಳಲಿಲ್ಲ
ನೋವಾಗುವುದು ನಿನಗೆಂದು
ಮಚ್ಚಿಟ್ಟೆ
ಮತ್ತೆಂದೊ ಹೇಳಬಹುದೆಂದು.
ನೊಂದಿರುವೆ ನಿನ್ನ
ನಡವಳಿಕೆಯಿಂದ
ಬೇಯುತ್ತಿರುವೆ
ನಿನ್ನ ವರ್ತನೆಯಿಂದ
ದುಃಖವಾಗಿದೆ ನಿನ್ನ
ಚುಚ್ಚುಮಾತಿನಿಂದ
ಇಷ್ಟು ಮಾತ್ರವೇ
ನನ್ನ ನಿನ್ನ ಬಂಧ?
----***-----
ಮೌನ, ಮುನಿಸು ಸಮಸ್ಯೆಗೆ ಪರಿಹಾರವೇ?
ಕಣ್ಣೀರು, ಕೋಪ ನೆಮ್ಮದಿಯ ನೀಡುವವೇ?
ಒಂದು ಅಪ್ಪುಗೆ,
ಒಂದು ಮುತ್ತು, ಉತ್ತರವಲ್ಲವೇ!
ಸ್ವಲ್ಪ ಮಾತು,
ಹೆಚ್ಚು ಪ್ರೀತಿಯೇ
ಪರಿಹಾರವಲ್ಲವೇ!!
No comments:
Post a Comment