ನಂಬಿಕೆ
“ಅಮ್ಮ ನನ್ನ ಮೇಲೆ ನಿಮಗೆ ನಂಬಿಕೆಯಿಲ್ಲವಾ?” ಮಗಳು ಕೇಳಿದ ಪ್ರಶ್ನೆಗೆ, “ನಿನ್ನ ಮೇಲೆ ನಂಬಿಕೆಯಿದೆ, ಆದರೆ ನಿನ್ನ ಸ್ನೇಹಿತರ ಮೇಲೆ ನಂಬಿಕೆಯಿಲ್ಲ.” ಹೀಗೆಂದು ಹೇಳಿ ಮಗಳನ್ನು ಪಿಕ್‍ನಿಕ್‍ಗೆ ಕಳಿಸಲು ನಿರಾಕರಿಸಿದೆ.
“ಅಮ್ಮ ನನ್ನ ಎಲ್ಲ ಸ್ನೇಹಿತರ ಬಗ್ಗೆ ನಿನಗೆ ಹೇಳಿದ್ದೇನೆ. ನಿನ್ನಿಂದ ಏನನ್ನೂ ಮುಚ್ಚಿಟ್ಟಿಲ್ಲ, ಹಾಗಿದ್ದರೂ ನೀನು ಈ ರೀತಿ ಮಾಡುವುದು ಸರಿಯೇ?”
“ಹೌದು ಕಂದ, ಅದಕ್ಕೇ ಕಳಿಸುತ್ತಿಲ್ಲ. ನಿನ್ನ ಕಾಲೇಜು ಟ್ರಿಪ್ ಆಗಿದ್ದರೆ, ನಿಮ್ಮೊಂದಿಗೆ ನಿಮ್ಮ ಟೀಚರ್ಸ್ ಬಂದಿದ್ದರೆ ಕಳಿಸುತ್ತಿದ್ದೆ. ಆದರೆ ನೀವು ನೀವೇ ಹುಡುಗ-ಹುಡುಗಿಯರು ಹೋಗುವುದು, ಅದೂ ಜೋಡಿಗಳ ಜೊತೆ, ಅದು ನನಗೆ ಇಷ್ಟವಿಲ್ಲ.”
“ಅಮ್ಮ ನಿನ್ನೊಂದಿಗೆ ಎಲ್ಲ ಹಂಚಿಕೊಂಡಿದ್ದೇ ತಪ್ಪಾಯಿತು. ಈಗ ನಾನು ಉಮಳ ಬಗ್ಗೆಯೋ, ಸಂಗೀತಳ ಬಗ್ಗೆಯೋ ಹೇಳಿರದಿದ್ದರೆ, ಆಗ ಕಳಿಸುತ್ತಿದ್ದೆಯಾ?” ಮಗಳ ಮರುಸವಾಲು.
“ಆದರೆ ನಿನಗೆ ಪ್ರೊಪೋಸ್ ಮಾಡಿದವನೂ ಸಹ ಬರುತ್ತಿದ್ದಾನಲ್ಲ. ನೀನು ಇಲ್ಲವೆಆಂದ ಮೇಲೆ ಅವನು ನಿನ್ನಿಷ್ಟ ಎಂದು ಹೇಳಿ ಕೇವಲ ಸ್ನೇಹಿತನಂತೆ ಇದ್ದಾನೆ ಎಂದು ನೀನು ಹೇಳಿದರೂ ನನಗೆ ಹಾಗನಿಸುವುದಿಲ್ಲ. ಮತ್ತೆ ಅಲ್ಲಿ ಏನಾದರೂ ಸಮಸ್ಯೆಯಾದರೆ?”
“ಅಮ್ಮ, ಏನಮ್ಮ ನೀನು. ಅವನ ಬಗ್ಗೆ ಗೊತ್ತಿಲ್ಲವಾ ನಿನಗೆ. ನನ್ನ ಬಗ್ಗೆ ಗೊತ್ತಿಲ್ಲವಾ? ಅವನು ಅಲ್ಲಿ ಒತಾಯ ಮಾಡಿಬಿಟ್ಟರೆ ನಾನು ಕರಗಿಹೋಗಿ ಒಪ್ಪಿಕೊಳುತ್ತೀನಿ ಅಂತಾನಾ. ಒಂದು ಬಾರಿ ಇಲ್ಲ ಅಂದ ಮೇಲೆ ಮತ್ತೆ ಆ ಭಾವನೆ ಹೇಗೆ ಬರುತ್ತೆ, ವಿಚಿತ್ರ ನೀನು.”
“ಅಷ್ಟೆ ಅಲ್ಲ. ಅಲ್ಲಿ ಹೋದ ಮೇಲೆ ನಿನ್ನನ್ನು ಅವರು ಬೇರೆ ಏನಕ್ಕಾದರೂ ಒತ್ತಾಯ ಮಾಡಿದರೆ. ನೀವು ಹುಡುಗ ಹುಡುಗಿಯರು ಈ ವಯಸ್ಸಿನಲ್ಲಿ ಬೀರ್ ಕುಡಿಯುತ್ತೀರಾ. ನೀನು ಕುಡಿಯುವುದಿಲ್ಲ ನನಗೆ ಗೊತ್ತು. ಆದರೆ ಅವರ ಬಗ್ಗೆ ನನಗೆ ಅನುಮಾನವಿದೆ. ಅಲ್ಲಿ ಹೋದಾಗ ನಿನ್ನನ್ನು ಒತ್ತಾಯ ಮಾಡಿದರೆ, ನೀನು ಬೇಡವೆಂದರೂ ಇನ್ನಾವುದರಲ್ಲಾದರೂ ಬೆರೆಸಿ ಕೊಟ್ಟುಬಿಟ್ಟರೆ. ಬೇಡಮ್ಮ, ಸುಮಾರು ಬೇರೆ ಬೇರೆ ವಿಷಯಗಳನ್ನು ಪೇಪರ್‍ನಲ್ಲಿ ಓದಿದ್ದೇನೆ.”
“ತುಂಬಾ ಪೇಪರ್, ಟಿವಿ ನೋಡಿ ಮನಸ್ಸಿನ ತುಂಬಾ ಈ ಅನುಮಾನಾನೇ ತುಂಬಿಕೊಂಡಿದ್ದೀಯಾ. ನನ್ನ ಸ್ನೇಹಿತರು ಅಂತಹವರಲ್ಲಮ್ಮ. ಅವರು ಮನೆಯಲ್ಲೊ, ಹಾಸ್ಟೆಲ್ ನಲ್ಲೊ ಬೀರ್ ಕುಡಿಯಬಹುದು. ಅದು ನನಗೆ ಗೊತ್ತಿಲ್ಲ. ಆದರೆ ನಮ್ಮ ಜೊತೆ ಬಂದಾಗ ಅವರು ಯಾವತ್ತೂ ಆ ರೀತಿ ವರ್ತಿಸಿಲ್ಲ. ಅಮ್ಮ, ಒಂದು ಮಾತು ಹೇಳು. ನಿಮ್ಮ ಅಣ್ಣನ ಮಗ ಕುಡಿಯುತ್ತಾನಲ್ಲ. ನಾವು ಅವರ ಮನೆಗೆ ಹೋಗುತ್ತೇವೆ. ಅವರೂ ನಮ್ಮ ಮನೆಗೆ ಬರುತ್ತಾರೆ. ಮತ್ತೆ ಈ ಮಾತು ನೀನು ಅವನಿಗೆ ಹೇಳೆ ಇಲ್ಲ. ಮೊನ್ನೆ ಅವನೊಂದಿಗೆ ನನ್ನನ್ನು ರೈಲ್ವೆಸ್ಟೇಷನ್‍ಗೆ ಕಳಿಸಿದೆ.”
“ಅದು ಬೇರೆ, ಇದು ಬೇರೆ, ನೀನು ಎಲ್ಲದಕ್ಕೂ ಅಷ್ಟೊಂದು ವಾದ ಮಾಡಬೇಡ. ಆದರೂ ನೀವು ನೀವೇ ಹೋಗುವುದು ಅಷ್ಟೊಂದು ಸೇಫ಼್ ಅಲ್ಲ. ನೀರಿರುವ ಜಾಗ, ರಾತ್ರಿ ಎಲ್ಲಿ ಇಳಿದುಕೊಳ್ಳುವಿರೋ, ದಾರಿಯಲ್ಲಿ ಹೋಗುವಾಗ ಯಾರಾದರೂ ಹಿಂಬಾಲಿಸಿದರೆ, ಇದೆಲ್ಲ ಚಿಂತೆ ನನ್ನನ್ನು ಕಾಡತೊಡಗುತ್ತದೆ. ನೀನು ಬರುವವರೆಗೂ ನಾನು ನೆಮ್ಮದಿಯಿಂದ ಇರಲಾರೆ. ಆದ್ದರಿಂದ ಕಳಿಸುವುದಿಲ್ಲ.” ಖಚಿತವಾಗಿ ಹೇಳಿದೆ.
“ಅಮ್ಮ ಈಗ ನಾನು ಬೆಂಗಳೂರಿಗೆ ಕೆಲಸಕ್ಕೆ ಹೊಗುತ್ತಿಲ್ಲವಾ? ಟ್ಯಾಕ್ಸಿಯಲಿ, ರೈಲಿನಲ್ಲಿ ಒಬ್ಬೊಬ್ಬಳೇ ಹೋಗುತ್ತಿಲ್ಲವಾ. ಬೆಳಿಗ್ಗೆ 5 ಕ್ಕೂ ಹೋಗುತ್ತಿದ್ದೇನೆ. ರಾತ್ರಿ 10ಕ್ಕೂ ಮನೆಗೆ ವಾಪಸ್ ಬರುತ್ತಿದ್ದೇನೆ. ಅಲ್ಲೆಲ್ಲ ಸೇಫ್ ಎಂದು ಹೇಗೆ ಹೇಳಬಲ್ಲೆ?. ನನ್ನ ಜೊತೆ ಅಷ್ಟೊಂದು ಜನ ಬರುವಾಗ, ಅದೂ ಅವರೆಲ್ಲರನ್ನು ನೀನು 4 ವರ್ಷಗಳಿಂದ ನೋಡುತ್ತಿದ್ದೀಯ, ನಮ್ಮ ಮನೆಗೆ ಬಂದಿದ್ದಾರೆ, ಇನ್ನೇನಮ್ಮ ನಿನಗೆ.”
“ಇಲ್ಲ ಪ್ರೀತಿ, ಅದು ಬೇರೆ, ಇದು ಬೇರೆ. ಅದು ಅನಿವಾರ್ಯ. ಇದರ ಅವಶ್ಯಕತೆ ಏನು. ಅನವಶ್ಯಕವಾಗಿ ಅಪಾಯ ತಂದುಕೊಳ್ಳುವುದು ಅವಶ್ಯವೇ? ಜೊತೆಗೆ ನಿನ್ನ ಸ್ನೇಹಿತೆ ಉಮಳ ಬಾಯ್ ಫ್ರೆಂಡ್ ಬೇರೆ ಯಾವುದೋ ಕಾಲೇಜಿನವನು. ಈಗ ಅದೇ ರೀತಿ ಅವನು ತನ್ನ ಸ್ನೇಹಿತರನ್ನೂ ಕರೆ ತರಬಹುದು. ಇದೆಲ್ಲ ಬೇಡ ಪ್ರೀತಿ, ಸರಿಹೋಗುವುದಿಲ್ಲ.”
“ಅಮ್ಮ, ಅವನು ನಮಗೆ 2 ವರ್ಷದಿಂದ ಗೊತ್ತು. ನೀನು ನೋಡಿದ್ದೀಯಲ್ಲ. ಅವನು ಬೇರೆ ಯಾರನ್ನೂ ಕರೆತರಲಾರ. ಅಮ್ಮ ಇಷ್ಟೊಂದು ಅನುಮಾನಗಳು ಅವಶ್ಯವಿದೆಯಾ?”
“ಹೌದಮ್ಮ, ನಿನಗೆ ಈಗ ಅರ್ಥವಾಗುವುದಿಲ್ಲ ನಮ್ಮ ಕಾಳಜಿ. ನಾಳೆ ನೀನೂ ತಾಯಿಯಾಗುತ್ತೀಯ ನೋಡು, ಆಗ ನಿನಗೆ ಅರಿವಾಗುತ್ತದೆ.” ಅದೇ ಹಳೆಯ ಡೈಲಾಗ್ ಹೇಳಿ ಅವಳ ಬಾಯಿ ಮುಚ್ಚಿಸಲೆತ್ನಿಸಿದೆ. ಆದರೆ ಅವಳೋ ಪ್ರಶ್ನೆಗಳ ಕಣಜ.
“ಅಮ್ಮ, ನಾನು ನಿನಗೆ ಹೇಳದೆ, ಬೇರೆ ಏನೋ ಸುಳ್ಳು ಕಾರಣ ನೀಡಿ ಹೋಗಬಹುದಿತ್ತು. ಕಾಲೇಜು ಟ್ರಿಪ್ ಎಂದೇ ಹೇಳಬಹುದಿತ್ತು. ಆದರೆ ಅದೇನೂ ನಾನು ಮಾಡಿಲ್ಲ. ನನ್ನ ಸ್ನೇಹಿತರ ಬಗ್ಗೆ ಸಹ ನಿನಗೆ ಎಲ್ಲ ಸತ್ಯವನ್ನೇ ಹೇಳಿದ್ದೇನೆ. ಜೊತೆಗೆ ನಿನಗೆ ನೀನು ಬೆಳಸಿದ ಮಗಳ ಬಗ್ಗೆ ನಂಬಿಕೆ ಇಲ್ಲವೇ? ಇನ್ನಾವ್ಯತ್ತೂ ನಿನ್ನ ಮೇಲೆ ನನಗೆ ನಂಬಿಕೆಯಿದೆ ಎಂದು ಹೇಳಬೇಡ” ಹೊರಬರಲೆತ್ನಿಸುತ್ತಿದ್ದ ಕಣ್ಣೀರನ್ನು ತಡೆಯಲೆಂಬಂತೆ ರೂಮಿಗೆ ಹೋಗಿಬಿಟ್ಟಳು.
ಆ ಮರುದಿನ ನನಗೆ ಹುಷಾರು ತಪ್ಪಿತು. ಮಗಳು ಟ್ರಿಪ್ ಬಗ್ಗೆ ನನಗೆ ಕೇಳಲೂ ಇಲ್ಲ. ಟಿಕೆಟ್ ಕ್ಯಾನ್ಸಲ್ ಮಾದಿಸಿಕೊಂಡು ಬಂದ ದಿನ ಸ್ವಲ್ಪ ಬೇಜಾರಿನಲ್ಲಿದ್ದಳು. ಸ್ವಲ್ಪ ದಿನ ಮುನಿಸಿತ್ತು, ನೋವಿತ್ತು, ಕೆಲವು ದಿನ ಸರಿಯಾಗಿ ಮಾತನಾಡಲಿಲ್ಲ. ನಾನೂ ಸಹ ಅದು ಕ್ರಮೇಣ ಅದು ಸರಿ ಹೋಗುತ್ತದೆ ಎಂದು ತಲೆ ಕೆಡಿಸಿಕೊಳ್ಳಲಿಲ್ಲ. ಸ್ವಲ್ಪ ದಿನವಾದ ಮೇಲೆ ಮತ್ತೆ ಯಥಾಸ್ಥಿತಿ ಬಂದಿತು ಮನೆಯಲ್ಲಿ,
ಕೆಲಸದ ನಿಂಗಮ್ಮ ಮೂರು ದಿನವಾದರೂ ಬಾರದ್ದರಿಂದ ಅಂದು ಅವಳ ಮೇಲೆ ರೇಗುತ್ತಿದ್ದೆ. ಅವಳು “ಅಕ್ಕ, ಅಮ್ಮನಿಗೆ ತುಂಬಾ ಹುಷಾರಿರಲಿಲ್ಲ. ಅದಕ್ಕೆ ಬರಕ್ಕಾಗಲಿಲ್ಲ” ಎಂದಳು. ನಾನು “ನಿಜಾನಾ?” ಕೇಳಿದೆ.
“ಏನಕ್ಕ ಹೀಗೆ ಕೇಳ್ತಾ ಇದ್ದೀರಾ. ನನ್ನನ್ನು 1 ವರ್ಷದಿಂದ ನೋಡ್ತಾ ಇದ್ದೀರ. ನಾನ್ಯಾವತ್ತಾದರೂ ನಿಮ್ಮ ಹತ್ತಿರ ಸುಳ್ಳು ಹೇಳಿ ರಜ ತಗಂಡಿದ್ದೀನಾ? ನನ್ನ ಮೇಲೆ ನಂಬಿಕೆಯಿಲ್ಲವಾ?”
ಅವಕ್ಕಾದೆ. ನಿಂಗವ್ವ ಹೇಳಿದ್ದು ನಿಜ. ಅವಳು ಇಲ್ಲಿಯವರೆಗೂ ಯಾವುದೇ ರಜ ತೆಗೆದುಕೊಳ್ಳಬೇಕಾದರೂ ನಿಜವಾದ ಕಾರಣವನ್ನೇ ಹೇಳಿದ್ದಾಳೆ. ಮತ್ತೆ ನಾನ್ಯಾಕೆ ಹೀಗೆ ಮಾತನಾಡಿದೆ ಎಂದುಕೊಂಡು, ತಕ್ಷಣವೇ “ಸಾರಿ ನಿಂಗಮ್ಮ, 3 ದಿನ ಬಂದಿಲ್ಲವಲ್ಲ ಅನ್ನೊ ಕೋಪಕ್ಕೆ ಏನೋ ಅಂದುಬಿಟ್ಟೆ, ಸಾರಿ” ಎಂದೆ.
ನಿಂಗಮ್ಮ “ಅಯ್ಯೊ, ಅದೆಲ್ಲ ಏನು ಬೇಡಕ್ಕ, ಸರಿ ಬಿಡಿ, ನಾನು ಕೆಲಸ ಮಾಡಕ್ಕೆ ಹೋಗ್ತೀನಿ. ಒಂದು ಲೋಟ ಕಾಫಿ ಕೊಟ್ಬಿಡಿ” ಎಂದು ಹಿತ್ತಲಿಗೆ ಹೋದಳು.
ಕಾಫಿ ಬೆರೆಸಲು ಅಡಿಗೆ ಮನೆಗೆ ಹೋದಾಗ ಈ ವಾಕ್ಯ ಮತ್ಯಾರದ್ದೊ ಬಾಯಿಂದಲೂ ಕೇಳಿದ್ದೀನಲ್ಲ ಎನಿಸಿತು. ಆಗಲೇ ಧುತ್ತೆಂದು ಬಂದಿದ್ದು ನನ್ನ ಮನದಲ್ಲಿ ಪ್ರೀತಿಯ ಮಾತು. “ನನ್ನ ಮೇಲೆ ನಂಬಿಕೆಯಿಲ್ಲವಾ?” ಮಗಳಾಗಿದ್ದಕ್ಕೆ ನಾನು ಹೇಳಿದ್ದಕ್ಕೆ ಇಲ್ಲವೆಂದು ಹೋದಳಾ? ಅವಳ ಮಾತಿನಲ್ಲಿಯೂ ನಿಂಗಮ್ಮನ ಮಾತಿನಂತೆ ದೃಢತೆ ಎದ್ದು ಕಾಣುತ್ತಿತ್ತು.
ನಿಂಗಮ್ಮನಿಗೆ ಕಾಫಿ ಕೊಟ್ಟು, ನಾನು ಕೈಯಲ್ಲಿ ಕಾಫಿ ಕಪ್ ಹಿಡಿದು ಟಿವಿಯ ಮುಂದೆ ಕೂತೆ. ಆದರೆ ಮನದ ತುಂಬೆಲ್ಲ ಹಲವಾರು ಪ್ರಶ್ನೆಗಳು ಎದ್ದವು.
ಟ್ರಿಪ್‍ಗೆ ಅವಳನ್ನು ಕಳಿಸದಿದ್ದದ್ದು ಸರಿಯೇ ತಪ್ಪೇ, ಪ್ರಶ್ನೆ ಮೂಡಿತು. ನೀರಿನ ಬಗ್ಗೆ ಭಯ, ಎಲ್ಲೆಡೆ ಪೇಪರ್‍ನಲ್ಲಿ ಬರುತ್ತಿದ್ದ - ಪ್ರವಾಸಕ್ಕೆ ಹೋದ ಯುವಕ ಯುವತಿಯರು ನೀರುಪಾಲು. ಹೌದು ನಿಜ, ದೊಡ್ಡವರೊಂದಿಗೆ ಹೋದಾಗ ಅಪಘಾತಗಳು ಕಡಿಮೆ. ಆ ಬಗ್ಗೆ ಅವರು ಹೆಚ್ಚು ಎಚ್ಚರ ವಹಿಸುತ್ತಾರೆ. ಮಕ್ಕಳಂತೆ ಅತೀ ಸಾಹಸಮಯವಾಗಿರುವುದಿಲ್ಲ. ಆದರೂ ದೊಡ್ಡವರೊಂದಿಗೆ ಹೋದಾಗ ರಸ್ತೆ ಅಪಘಾತವೊ, ನೀರಿನಲ್ಲಿ ಮುಳುಗಿರುವುದು ಆಗಿಯೇ ಇಲ್ಲವೇ. ಅವಳಿಗೆ ನಾನು ಎಚ್ಚರಿಕೆ ಕೊಟ್ಟು ಕಳಿಸಬಹುದಿತ್ತಲ್ಲವೇ. ಏಕೆಂದರೆ ಅವಳು ನಾನು ಹೇಳಿದ ಎಚ್ಚರಿಕೆಗಳನ್ನು ಬೇರೆಯ ವಿಷಯದಲ್ಲೂ ಸಹ ಯಾವತ್ತೂ ಮೀರಿರಲಿಲ್ಲ.
ಅವಳ ಸ್ವಭಾವವೇ ಹಾಗಿತ್ತು. ಅವಳಿಗೆ ಅದು ಸರಿ ಎನಿಸಿದರೆ, ಅವಳದನ್ನು ಚಾಚೂತಪ್ಪದೆ ಅನುಸರಿಸುತ್ತಿದ್ದಳು. ಬೇರೆ ವಿಷಯದ ಬಗ್ಗೆ ಹೊಂದಾಣಿಕೆಯಾಗದಿದ್ದರೆ, ಪ್ರಶ್ನೆ ಮಾಡುತ್ತಲೇ, ಇರುತ್ತಿದ್ದಳು, ಆದರೆ ಆಗಲೂ ನಮ್ಮ ಮಾತು ಮೀರುತ್ತಿರಲಿಲ್ಲ. ನನ್ನ ಮಗಳೆಂಬ ಹೆಗ್ಗಳಿಕೆ ಅಲ್ಲ, ಅವಳಷ್ಟು ಸೆನ್ಸಿಬಲ್ ಮಕ್ಕಳನ್ನು ನಾನು ನೊಡಿರುವುದು ಬಹಳ ಕಡಿಮೆ.
ಹಾಗಿದ್ದರೆ ಈ ಕಾರಣ ಸರಿಯಲ್ಲ ಅನಿಸಿತು. ಎಲ್ಲಿ ಉಳಿದುಕೊಳ್ಳುತ್ತಾರೆ. ಎಲ್ಲರೂ ಒಟ್ಟಿಗೆ ಉಳಿದುಕೊಂಡಾಗ ಏನಾಗಬಹುದು, ಈ ಪ್ರಶ್ನೆಗಳು ಸುಳಿದವು. ಅವಳು ಸ್ಪಷ್ಟವಾಗಿ ನಮಗೆ ಎಲ್ಲವನ್ನೂ ಹೇಳಿದ್ದಳು. ಇಲ್ಲಿ ಅವಳೇ ಹೇಳಿದ ಹಾಗೆ ನಮಗೆ ಸುಳ್ಳು ಹೇಳಿ ಹೋಗಬಹುದಿತ್ತು. ನಾವೇನೂ ಅವಳ ಕಾಲೇಜಿಗೆ ಫೋನ್ ಮಾಡಿ ಕೇಳುತ್ತಿರಲಿಲ್ಲ. ಅವಳ ಬಗ್ಗೆ ನಮಗೆ ಅಷ್ಟು ನಂಬಿಕೆ ಇದೆ.
ಅವಳು ಹುಡುಗರ ವಿಷಯವನ್ನೂ ನನ್ನೊಂದಿಗೆ ಮುಚ್ಚಿಟ್ಟಿರಲಿಲ್ಲ. ಅವಳ ಕ್ಲಾಸ್‍ಮೇಟ್ ಸಂತೋಷ್ ಅವಳಿಗೆ ಪ್ರೊಪೋಸ್ ಮಾಡಿದ ವಿಷಯವನ್ನೂ ಸಹ ಅವಳು ನನ್ನ ಹತ್ತಿರ ಬಂದು ಹೇಳಿದ್ದಳು. ನಾನು ಅವಲ ಮೇಲೆ ಮೊದಲಿನಿಂದಲೂ ಎಲ್ಲವನ್ನೂ ನನ್ನ ಬಳಿ ಹೇಳುವ ಸ್ವಾತಂತ್ರ್ಯವನ್ನು ಕೊಟ್ಟಿದ್ದೇನೆ. ಬೆಳೆದಂತೆಲ್ಲ ನಾವು ಅಮ್ಮ-ಮಗಳು ಎನ್ನುವುದಕ್ಕಿಂತ ಜೀವಗೆಳತಿಯರು ಎನ್ನುವಂತಿದ್ದೆವು.
ನಾನೇ ಅವಳಿಗೆ “ಒಪ್ಪಿಕೊಂಡೆಯಾ?” ಎಂದಿದ್ದಕ್ಕೆ "ಇಲ್ಲಮ್ಮ, ಅವನು ನನ್ನ ಒಳ್ಳೆಯ ಫ಼್ರೆಂಡ್ ಅಷ್ಟೇ" ಎಂದಿದ್ದಳು. ಅದಾದ ನಂತರ ಅವಳ ನಡವಳಿಕೆಯಲ್ಲಿ, ಸಂತೋಷ್ ಜೊತೆ ಮಾತುಕತೆಯಲ್ಲಿ ಯಾವುದೇ ಬದಲಾವಣೆಯಿರಲಿಲ್ಲ. ಮತ್ತೆ ನನಗೆ ನನ್ನ ಮಗಳ ಮೇಲೆ ನಂಬಿಕೆ ಇದ್ದಿದ್ದದ್ದರೆ, ಏಕೆ ಕಳಿಸುತ್ತಿರಲಿಲ್ಲ. ಅವಳು ಎಲ್ಲೇ ಹೋಗಿ ಬಂದರೂ ಅವಳು ಅವಳಾಗಿಯೇ ಇರುತ್ತಾಳೆ ಎನ್ನುವುದು ನನಗೆ ಏಕೆ ಹೊಳೆಯಲಿಲ್ಲ.
ಹುಡುಗರು ಜೊತೆಗಿದ್ದರಲ್ಲವೆ ಎಂದು ತಾನೇ ಈ ಪ್ರಶ್ನೆಗಳು. ಆದರೆ ಅದೇ ಗುಂಪಿನಲ್ಲಿ ಅವಳು ಇಲ್ಲೇ ಎಲ್ಲ ಕಡೆ ಓಡಾಡುವಾಗ ನಾನು ಸುಮ್ಮನಿಲ್ಲವೇ? ಹುಡುಗ ಹುಡುಗಿ ಪ್ರೀತಿಸುವುದು ತಪ್ಪು ಎಂದು ನನ್ನ ವಾದವೆಂದೇನೂ ಅಲ್ಲ, ಆದರೆ ಅದಕ್ಕೊಂದು ಸಮಯವಿದೆ ಎಂದು ನಾನು ಪ್ರೀತಿಗೆ ಹಲವಾರು ಬಾರಿ ಹೇಳಿದ್ದೇನೆ. ಅವಳಿಗದು ಅರ್ಥವಾಗಿದೆ. ಫ಼್ರೆಂಡ್ಸ್ ಗೆಲ್ಲ ಜೊತೆಯಿದೆ ಎಂದ ಮಾತ್ರಕ್ಕೆ ಇವಳೂ ಸಹ ಆ ರೀತಿ ಜೊತೆ ಬೇಕೆಂದೋ ಯಾರದ್ದೋ ಹಿಂದೆ ಹೋಗುವಂತಹ ಹುಡುಗಿಯಲ್ಲ. ಒಂದು ದಿನದ ಟ್ರಿಪ್‍ಗೂ ಕಳಿಸಿರಲಿಲ್ಲವೇ. ಮತ್ತೆ 4-6 ದಿನ ಎಂದಾಗ ಹೊರಗಡೆ ಇರಬೇಕೆಂದಾಗ ಈ ವಾದವೇಕೆ? ನನ್ನ ಮಗಳು ಆ ರೀತಿ ಹೊರಗಡೆ ಹೋದ ಮಾತ್ರಕ್ಕೆ ಹಾದಿ ತಪ್ಪುತ್ತಾಳೆಯೇ? ನಾನು ಆ ರೀತಿ ಬೆಳೆಸಿದ್ದೀನಾ? ಅವಳ ವ್ಯಕ್ತಿತ್ವ ಅಂತಹುದೇ?
ಜೊತೆಗೆ ಬರಿ ಹುಡುಗಿಯರೇ ಆಗಿದ್ದರೆ ಕಳಿಸುತ್ತಿರಲಿಲ್ಲವೇ? ಕ್ಲಾಸ್‍ನ ಎಲ್ಲ ಮಕ್ಕಳು ಹೋಗಿದ್ದರೆ ಕಳಿಸುತ್ತಿದ್ದೆನಲ್ಲ, ಮನ ಸಮರ್ಥಿಸಿಕೊಳ್ಳಲು ಪ್ರಯತ್ನಿಸಿತು. ಹುಡುಗರು ಹುಡುಗಿಯರು ಎಂಬ ಭೇದವೇಕೆ? ನನಗೇ ಒಬ್ಬ ಗಂಡು ಮಗನಿದ್ದರೆ ಹೀಗೆಯೇ ಹೇಳುತ್ತಿದ್ದೆನೆ. ಅವನ ಬಗ್ಗೆ ಇಡೀ ಜಗತ್ತಿಗೇ ನಂಬಿಕೆ ಬರುವಂತೆ ಬೆಳೆಸುತ್ತಿರಲಿಲ್ಲವೇ? ಮತ್ತೆ ಬೇರೆ ಮನೆಯ ಗಂಡು ಮಕ್ಕಳನ್ನು ಅನುಮಾನ ಪಡಲು ನನಗೆ ಅಧಿಕಾರ ಏನಿದೆ. ಎಲ್ಲ ಗಂಡು ಮಕ್ಕಳೂ ಸರಿಯಲ್ಲ, ಆದರೆ ಎಲ್ಲರೂ ಕೆಟ್ಟವರೂ ಅಲ್ಲ ತಾನೇ? ಎಷ್ಟೋ ಕಡೆ ಹುಡುಗಿ ಪ್ರೀತಿಸಲಿಲ್ಲ ಎಂದು ಅವಳಿಗೆ ಚಾಕು ಹಾಕಿದ ಎನ್ನುವಂತಹ ಸುದ್ದಿಯನ್ನೆಲ್ಲ ಕೇಳಿದ್ದೇನೆ. ಆದರೆ ಈ ಹುಡುಗ ಸಂತೋಷ್ ಯಾವತ್ತೂ ಅವಳೊಂದಿಗೆ ಕೆಟ್ಟದಾಗಿ ನಡೆದುಕೊಂಡಿಲ್ಲ. ಬದಲಿಗೆ ಏನೇ ಸಮಸ್ಯೆ ಬಂದರೂ ಸಹಾಯಕ್ಕೆ ಬರುತ್ತಾನೆ. ಮತ್ತೇಕೆ ನನಗೆ ಈ ಅನುಮಾನಗಳು. ತಪ್ಪು ದಾರಿ ತುಳಿಯುವ, ತುಳಿಯಲು ಪ್ರೇರೇಪಿಸುವ ಹೆಣ್ಣುಮಕ್ಕಳಿಲ್ಲವೇ? ಒಳ್ಳೆತನ, ಕೆಟ್ಟತನಕ್ಕೆ ಈ ಗಂಡು ಹೆಣ್ಣುಗಳ ವೇಷವೇಕೆ? ತರಗತಿಯ ಎಲ್ಲ ಮಕ್ಕಳು ಹೊಗಿದ್ದರೂ ಅಲ್ಲಿ ಇಂತಹ ಅಪಾಯಗಳು ಅಪಘಾತಗಳು ಇರುವುದಿಲ್ಲ ಎನ್ನುವುದಕ್ಕೆ ಏನು ಗ್ಯಾರಂಟಿ ಇದೆ. ಟೀಚರ್ಸ್‍ಗಳೊಂದಿಗೆ ಹೋದಾಗ, ಶಿಕ್ಷಕರೇ ಕೆಟ್ಟದಾಗಿ ವರ್ತಿಸಿದ ಎಷ್ಟೊಂದು ಘಟನೆಗಳಿಲ್ಲ.
ಹುಡುಗನಾಗಿದ್ದರೆ ಕಳಿಸುತ್ತಿರಲಿಲ್ಲವೇ? ಮತ್ತೆ ಹುಡುಗಿಯಾಗಿದ್ದಕ್ಕೆ ಅವಳಿಗೆ ಈ ಶಿಕ್ಷೆಯೇ? ಜೀವನದ ಬಹಳ ಸುಖ ಸಂತೋಷಗಳನ್ನು ಅವಳು ಕೇವಲ ಹುಡುಗಿಯಾಗಿದ್ದಕ್ಕೆ ಕಳೆದುಕೊಳ್ಳಬೇಕೇ? ಮೊಟ್ಟಮೊದಲ ಬಾರಿಗೆ ನನಗೆ ನಾನು ನನ್ನ ಮಗಳ ವಿಷಯದಲ್ಲಿ ಎಂತಹ ದೊಡ್ಡ ತಪ್ಪು ಮಾಡಿದೆನೆನಿಸಿತು. ನನ್ನ ಬಗ್ಗೆ ನನಗೆ ಬೇಸರವೆನಿಸಿತು.
ಅವಳ ವ್ಯಕ್ತಿತ್ವವನ್ನು ಗಟ್ಟಿಯಾಗಿ ರೂಪಿಸಿದ ಮೇಲೆ, ಸರಿ-ತಪ್ಪುಗಳ ವಿವೇಚನೆಯನ್ನು ಮಾಡಿ ನಿರ್ಧಾರ ಕೈಗೊಳ್ಳಬೇಕೆಂದು ಹೇಳಿಕೊಟ್ಟ ಮೇಲೆ, ಎಲ್ಲವನ್ನೂ ಅವಳು ನನ್ನ ಹತ್ತಿರ ಮುಕ್ತವಾಗಿ ಹಂಚಿಕೊಳ್ಳುತ್ತಿರುವಾಗ ಅವಳಲ್ಲಿ ನಾನು ಪೂರ್ಣ ನಂಬಿಕೆಯಿಡಬೇಕಿತ್ತು. ಜೀವನದಲ್ಲಿ ಎಲ್ಲ ಕ್ಷಣಗಳಲ್ಲಿಯೂ ನಾವು ಅವಳೊಂದಿಗೆ ಇರುತ್ತೇವೆಯೇ? ಇಲ್ಲವಲ್ಲ. ಮತ್ತೆ ಸರಿ ದಾರಿಯನ್ನು ತೋರಿಸಿದ ಮೇಲೆ ಅವರು ಅದೇ ದಾರಿಯಲ್ಲಿ ನಡೆಯುತ್ತಾರೆಂಬ ನಂಬಿಕೆ ಬೇಕಲ್ಲವೇ? ಒಂದು ವೇಳೆ ಆಕಸ್ಮಿಕವಾಗಿ ತಪ್ಪು ದಾರಿ ಹಿಡಿದರೂ, ಎಚ್ಚರಿಸಿದರೆ ಹಿಂತಿರುಗಿ ಬರುವುದಿಲ್ಲವೇ. ಅಡಿಪಾಯ ಭದ್ರವಾಗಿ ಹಾಕಿದ ಮೇಲೆ ಮನೆ ಬೀಳುವ ಸಾಧ್ಯತೆ ಇರುತ್ತದೆಯೇ? ಅವಳ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿದ್ದೇವೆ ಎಂದಾಗ ಅವಳಿಗೂ ಸಹ ಆ ಜವಾಬ್ದಾರಿ ಇರುತ್ತದಲ್ಲವೇ? ಜೊತೆಗೆ ಅವರ ಬದುಕು ಅವರ ಹೊಣೆಗಾರಿಕೆ ಎಂದು ತೋರಿಸಿಕೊಟ್ಟಾಗ ಅದು ಅವರನ್ನೆಂದೂ ದಾರಿ ತಪ್ಪದಂತೆ ಮಾರ್ಗದರ್ಶನ ನೀಡುತ್ತಿರುವುದಲ್ಲವೇ?
ನಮ್ಮ ಬಗ್ಗೆ ಪ್ರೀತಿಗೆ ಪೂರ್ಣ ನಂಬಿಕೆಯಿದೆ. ಹಾಗಾಗಿಯೇ ಅವಳು ನಾವು ಹೇಳಿದ್ದನ್ನು ಪ್ರಶ್ನಿಸಿದರೂ, ಸರಿ ಎನಿಸಿದರೆ ಚಾಚೂ ತಪ್ಪದೆ ಅನುಸರಿಸುತ್ತಾಳೆ. ಅವಳಿಗೆ ಸರಿ-ತಪ್ಪಿನ ಅರಿವಿದೆ, ತನ್ನ ಬದುಕಿನ ಬಗ್ಗೆ ಕಾಳಜಿಯಿದೆ. ಯಾರೊಂದಿಗೂ ಕೆಟ್ಟದಾಗಿ ನಡೆದುಕೊಳ್ಳುವುದಿಲ್ಲ. ತನ್ನ ವ್ಯಕ್ತಿತ್ವಕ್ಕೆ ಕುಂದುಂಟು ಮಾಡಿಕೊಳ್ಳುವ ಕೆಲಸ ಅವಳೆಂದೂ ಮಾಡಿಕೊಳ್ಳಲಾರಳು. ಬದುಕನ್ನು ಅವಳೆಂದೂ ಅಸಡ್ಡೆಯಿಂದ ನೋಡಲಿಲ್ಲ. ಸಮಾಜಕ್ಕೆ ಉಪಯುಕ್ತವಾಗಿ ಬದುಕಬೇಕೆಂದುಕೊಳ್ಳುತ್ತಾಳೆ. ಸಾಧ್ಯವಾದಾಗಲೆಲ್ಲ ಇತರರಿಗೆ ನೆರವು ನೀಡುತ್ತಾಳೆ. ಅಂತಹವರು ಹಾದಿ ತಪ್ಪಲು ಸಾಧ್ಯವೇ? ಮತ್ತೇಕೆ ನನಗೆ ಅನವಶ್ಯಕವಾಗಿ ಈ ಭಯಗಳು. ಈ ಆತಂಕಗಳು. ನನ್ನ ಮಗಳ ವ್ಯಕ್ತಿತ್ವದ ಬಗ್ಗೆ ನನಗೆ ಬಹಳ ಹೆಮ್ಮೆ ಎನಿಸಿತು
ಅವಳು ಕಾಲೇಜಿನಿಂದ ಮನೆಗೆ ಬಂದ ತಕ್ಷಣ “ನಿನ್ನ ಬಗ್ಗೆ ನನಗೆ ಸಂಪೂರ್ಣ ನಂಬಿಕೆಯಿದೆ ಇದೆ ಕಂದ, ಎಲ್ಲ ವಿಷಯಗಳಲ್ಲಿಯೂ, ಎಲ್ಲಾ ಸಮಯದಲ್ಲಿಯೂ” ಎಂದು ಹೇಳಬೇಕೆಂದು ತೀರ್ಮಾನಿಸಿದಾಗ ನನ್ನ ಮನಸ್ಸು ನಿರಾಳವಾಯಿತು.
No comments:
Post a Comment