ಗೆಳೆತನ
ಕಷ್ಟಸುಖಗಳ ಹಂಚಿಕೊಂಡೆ
ಬೆಳೆಯಿತವರಲಿ ಗೆಳೆತನ
ಜನರಿಗಚ್ಚರಿ ಅದನು ಕಂಡೆ
ಸ್ವಭಾವದಲ್ಲಿತ್ತು ಭಿನ್ನತನ
ಹುಟ್ಟಿದೆಲ್ಲೊ, ಬೆಳೆದುದೆಲ್ಲೊ
ಬಂದರವರು ಇಲ್ಲಿಗೆ
ಯಾರೋ ಏನೊ ಅರಿಯದು
ಸ್ನೇಹವಾಯ್ತು ಮೆಲ್ಲಗೆ
ಬೆಳೆಯಿತದು ದಿನವುದಿನವು
ಕೊಂಚಕೊಂಚವಾಗಿಯೇ
ದಿನವು ಹರಟೆ, ದಿನವು ನಗುವು
ಕಾಲ ಕಳೆಯಿತು ಹೀಗೆಯೇ
ಮುನಿಸು ಇತ್ತು ಜಗಳವಿತ್ತು
ಬರುತಲಿತ್ತು ತಪ್ಪರ್ಥವು
ಸ್ನೇಹ ಇತ್ತು ವಿಶ್ವಾಸವಿತ್ತು
ಮರೆಯಾಗುತಿತ್ತು ಎಲ್ಲವು
ಏಕೋ ಏನೋ ಒಂದಿನ
ಬಂದಿತೇನೊ ಅಪಾರ್ಥವು
ಜೋರು ಮಾತು ಆದಿನ
ಮರೆಯಾಯಿತಲ್ಲಿ ಸ್ನೇಹವು
ನಗುವು ಇಲ್ಲ ಖುಷಿಯು ಇಲ್ಲ
ಕವಿದಿದೆ ಬರಿ ಮೌನವು
ನಲಿವು ಇಲ್ಲ ಗೆಲುವು ಇಲ್ಲ
ಬದುಕಲ್ಹೇಗೆ ಸಾಧ್ಯವು ?
ಬಂಧಿಯಾಗೆ ನಾವುಗಳೆಲ್ಲ
ನಮ್ಮ ಅಹಂನ ಕೋಟೆಯಲಿ
ಕತ್ತಲಾಗದೆ ಬದುಕೆಲ್ಲ
ಬೆಳಕಿರುವುದೆ ಈ ಬಾಳಿನಲಿ?
ನಮ್ಮವರೆಂದು ಭಾವಿಸಿ ಅವರ
ಕ್ಷಮಿಸಬಾರದೆ ಒಂದೊಮ್ಮೆ
ಬಿಟ್ಟು ಅಹಂ, ನಾವವರ
ಮಾತಾಡಬಾರದೇ ಈಗೊಮ್ಮೆ?
ಮಾತಾನಾಡಿದರೆ ಮನಬಿಚ್ಚಿ
ಮರೆಯಾಗವೆ ಮನಸ್ತಾಪಗಳು?
ಚರ್ಚಿಸಿದರೆ ಸಿಹಿ ಲೇಪವ ಹಚ್ಚಿ
ಮೂಡದೆ ಮತ್ತೆ ಹೊಸ ಹಗಲು!
No comments:
Post a Comment