ಸ್ವಾತಂತ್ರ್ಯ ಹೋರಾಟಗಾರ್ತಿ ಲೀಲಾ ರಾಯ್
ನಮ್ಮ ದೇಶವನ್ನು ಬ್ರಿಟಿಷರಿಂದ ಮುಕ್ತಿಗೊಳಿಸಲು ಅನೇಕ ಜನರು ತಮ್ಮ ತನು-ಮನ-ಧನವನ್ನು ನಗುನಗುತ್ತಾ ಅರ್ಪಿಸಿದ್ದಾರೆ. ಕೇವಲ ಪುರುಷರೇ ಅಲ್ಲ ಅವರಿಗೆ ಸಮಾನವಾಗಿ ಸ್ತ್ರೀಯರು ಸ್ವಾತಂತ್ರ್ಯ ಹೋರಾಟಗಳಲ್ಲಿ, ತಮ್ಮ ಸುತ್ತಲಿನ ಸಂಪ್ರದಾಯ, ಕಟ್ಟುಪಾಡುಗಳನ್ನು ಕಿತ್ತೊಗೆದು, ತಮ್ಮ ಸಾಮರ್ಥ್ಯವನ್ನು ಇಡೀ ಜಗತ್ತಿಗೆ ತೋರಿಸಿದ್ದಾರೆ. ಇಂತಹ ದಿಟ್ಟ ಮಹಿಳೆಯರಲ್ಲಿ ಲೀಲಾ ರಾಯ್‍ರವರು ಒಬ್ಬರು.
1900 ಅಕ್ಟೋಬರ್ 2ರಂದು ಢಾಕಾದಲ್ಲಿ ಜನಿಸಿದ ಇವರು, ಪ್ರಾಥಮಿಕ ಮತ್ತು ಫ್ರೌಢ ಶಿಕ್ಷಣವನ್ನು ಢಾಕಾದಲ್ಲಿಯೇ ಮುಗಿಸಿ, ನಂತರ ಪದವಿ ಶಿಕ್ಷಣದಲ್ಲಿ, ವಿಶ್ವವಿದ್ಯಾಲಯದಲ್ಲಿಯೇ ಅತಿ ಹೆಚ್ಚು ಅಂಕ ಗಳಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಇಂಗ್ಲಿಷ್ ಭಾಷೆ ಹಾಗೂ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದರು. ಸ್ತ್ರೀ ಶಿಕ್ಷಣವನ್ನು ಬೆಂಬಲಿಸದ ಆಗಿನ ಸಮಾಜದಲ್ಲಿ ಎಂ.ಎ ಮಾಡುವುದೆಂದರೆ ಸುಲಭದ ಮಾತಾಗಿರಲಿಲ್ಲ.
ಒಮ್ಮೆ ಲೀಲಾ ನಾಗ್‍ರವರು (ವಿವಾಹಪೂರ್ವ ಹೆಸರು) ಪದವಿ ವಿದ್ಯಾರ್ಥಿನಿಯಾಗಿದ್ದಾಗ ಅವರ ಪ್ರಾಂಶುಪಾಲರು ಬಾಲ ಗಂಗಾಧರ ತಿಲಕರ ಬಗ್ಗೆ ಕೇವಲವಾಗಿ ಮಾತನಾಡಿದ್ದಕ್ಕೆ ಪ್ರತಿಭಟನೆ ಮಾಡಿದ್ದರು. ಇದರಿಂದ ಅವರು ಚಿಕ್ಕಂದಿನಿಂದಲೇ ಅನ್ಯಾಯವನ್ನು ಎದುರಿಸುವ ಗುಣ ಹೊಂದಿದ್ದರೆಂದು ಗೊತ್ತಾಗುತ್ತದೆ. ವ್ಯಾಸಂಗ ಮಾಡುತ್ತಲೇ ಅನೇಕ ಸಂಘ ಸಂಸ್ಥೆಗಳಿಗೆ ಕಾರ್ಯದರ್ಶಿಯಾಗಿ ಹೋರಾಡಿದ್ದರು. ಇದರಿಂದ ಅನ್ಯಾಯವನ್ನು ಎದುರಿಸುವ ಶಕ್ತಿ, ಧೈರ್ಯ ಹಾಗೂ ವ್ಯಕ್ತಿತ್ವವನ್ನು ಪಡೆದುಕೊಂಡರು. 1923ರಲ್ಲಿ ತಮ್ಮ 12 ಮಂದಿ ಸ್ನೇಹಿತೆಯರನ್ನು ಒಟ್ಟುಗೂಡಿಸಿ ಮಹಿಳೆಯರ ಶಿಕ್ಷಣ ಹಾಗೂ ಅವರ ಅಭಿವೃದ್ಧಿಗಾಗಿ ದೀಪಾಲಿ ಸಂಘವನ್ನು ಸ್ಥಾಪಿಸಿದರು. ಇದರ ನೇತೃತ್ವದಲ್ಲಿ ಢಾಕಾದಲ್ಲಿ ಹೆಣ್ಣು ಮಕ್ಕಳಿಗಾಗಿ ಪ್ರೌಢಶಾಲೆಯನ್ನು ತೆರೆದರು. ಇದು ಢಾಕಾದಲ್ಲಿಯೇ 2ನೇ ಪ್ರೌಢಶಾಲೆಯಾಗಿತ್ತು. ದೀಪಾಲಿ ಸಂಘದ ಆಶ್ರಯದಲ್ಲಿ ವಸ್ತು ಪ್ರದರ್ಶನವನ್ನು ಏರ್ಪಡಿಸುತ್ತಿದ್ದರು. ಅಲ್ಲಿ ಮಹಿಳೆಯರು ತಯಾರಿಸಿದ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟವಾಗುತ್ತಿತ್ತು. ಅಷ್ಟೆ ಅಲ್ಲ ಮಹಿಳೆಯರ ದೈಹಿಕ ಆರೋಗ್ಯಕ್ಕಾಗಿ ಮತ್ತು ಆತ್ಮರಕ್ಷಣೆಗಾಗಿ ದೈಹಿಕ ಶಿಕ್ಷಣ ಕೇಂದ್ರವನ್ನು ಆರಂಭಿಸಿದರು. ಅಲ್ಲಿ ಮಹಿಳೆಯರಿಗೆ ಡ್ರಿಲ್, ಪೆರೇಡ್, ಕತ್ತಿವರಸೆ, ಕೋಲುವರಸೆಗಳನ್ನು ಹೇಳಿಕೊಡಲಾಗುತ್ತಿತ್ತು. ಮನೆಗಳಲ್ಲಿ ಹಾಗೂ ವಿದ್ಯಾರ್ಥಿನಿ ನಿಲಯಗಳಲ್ಲಿ ಇದ್ದ ಕೆಲವು ಹೆಣ್ಣುಮಕ್ಕಳು ಚಳುವಳಿಗಳಲ್ಲಿ ಭಾಗವಹಿಸಲು ಆಗುತ್ತಿರಲ್ಲಿಲ್ಲ. ಆದುದರಿಂದ ಹೆಣ್ಣುಮಕ್ಕಳು ಮನೆ, ವಿದ್ಯಾರ್ಥಿನಿ ನಿಲಯಗಳನ್ನು ಬಿಟ್ಟು ನೆಲೆಯಿಲ್ಲದೆ ಅಲೆಯುವಂತಾಗುತ್ತಿತ್ತು. ಅಂತಹವರಿಗಾಗಿ ಛಾತ್ರಿ ಸಂಘ, ಛಾತ್ರಿ ಭವನ್ ಎಂಬ ಹೆಸರಿನ ವಿದ್ಯಾರ್ಥಿನಿ ನಿಲಯಗಳನ್ನು ಆರಂಭಿಸಿದರು. ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗಾಗಿ ‘ಜಯಶ್ರೀ’ ಎಂಬ ಮಾಸಿಕ ಪತ್ರಿಕೆಯನ್ನು ಹೊರತಂದರು. ತಮ್ಮ ಹೋರಾಟಗಳಲ್ಲಿ 2-3 ಬಾರಿ ಜೈಲು ಶಿಕ್ಷೆಯನ್ನು ಅನುಭವಿಸಿದರು. ಜೈಲಿನಲ್ಲಿಯೂ ಸುಮ್ಮನಿರಲಿಲ್ಲ. ಅಲ್ಲಿ ನಡೆಯುತ್ತಿದ್ದ ಅನ್ಯಾಯದ ವಿರುದ್ಧ ದನಿಯೆತ್ತಿದರು. ನ್ಯಾಯಕ್ಕಾಗಿ ಉಪವಾಸ ಸತ್ಯಾಗ್ರಹಗಳನ್ನು ಮಾಡಿದರು. ಜೈಲಿನಲ್ಲಿದ್ದ ಮಹಿಳೆಯರನ್ನು ಒಟ್ಟುಗೂಡಿಸಿ, ಅವರು ತಮ್ಮ ಶಿಕ್ಷಣವನ್ನು ಮುಂದುವರೆಸುವಂತೆ ಪ್ರೇರೇಪಿಸಿದರು. ತಮ್ಮಂತೆಯೇ ಸ್ವಾತಂತ್ರ್ಯ ಹೋರಾಟಗಾರರು, ಸ್ತ್ರೀಯರ ಅಭಿವೃದ್ಧಿಗಾಗಿ ದುಡಿಯುತ್ತಿದ್ದ ಅನಿಲ್ ರಾಯ್‍ರವರನ್ನು ಮದುವೆಯಾದರು. ನಂತರ ದಂಪತಿಗಳಿಬ್ಬರೂ ಒಟ್ಟಿಗೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಜೊತೆಗೆ ಹೆಣ್ಣು ಮಕ್ಕಳ ಏಳಿಗೆಗಾಗಿ ಶಿಕ್ಷಣ ಕೇಂದ್ರಗಳನ್ನು ತೆರೆದರು. ಸ್ವಾತಂತ್ರ್ಯಾನಂತರ ಸಹ ಪೂರ್ವ ಪಾಕಿಸ್ತಾನದಿಂದ ವಲಸೆ ಬಂದ ಇಸ್ಲಾಂ ಧರ್ಮದ ಅಲೆಮಾರಿ ಮಹಿಳೆಯರಿಗೆ ರಕ್ಷಣೆ ನೀಡಿದರು ಮತ್ತು ಅವರ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡರು. ತಮ್ಮ ಕೊನೆಯುಸಿರಿರುವರೆಗೂ ಮಹಿಳೆಯರ ಏಳಿಗೆಗಾಗಿ ಶ್ರಮಿಸಿದ ಇವರು ತೀವ್ರ ಮೆದುಳಿನ ಆಘಾತದಿಂದ 1968 ಜೂನ್ 12 ರಂದು ನಿಧನರಾದರು.. :::::::::::::::
No comments:
Post a Comment