Sunday, 7 October 2018

ಪುಟ್ಕಥೆ 91 - 100

ಪುಟ್ಕಥೆ - 91
" ಬೆಳಿಗ್ಗೆಯಿಂದಲೂ ಏನು ಹುಡುಕ್ತಾ ಇದ್ದೀಯಮ್ಮ,?" ಕೇಳಿದರು 16 ವರ್ಷದ ಹುಡುಗಿಯನ್ನು ಹಿರಿಯರೊಬ್ಬರು.
"ಸಾಹಿತ್ಯವನ್ನು ಅಂಕಲ್. ನಮ್ಮಮ್ಮ ಹೇಳಿದರು ಇದು ಸಾಹಿತ್ಯ ಸಮ್ಮೇಳನ ಎಂದು."
"ಸಿಗಲಿಲ್ಲವೇನಮ್ಮ? "
"ಇಲ್ಲ ಅಂಕಲ್ ಬರೀ ಸಾಹಿತಿಗಳು ಮಾತ್ರ ಸಿಗ್ತಾ ಇದ್ದಾರೆ!!!"

ಪುಟ್ಕಥೆ - 92
"ಅಪ್ಪ ಅವರಂತೆ ನಾ ನಡೆಯಲಾರೆನೇ? "
"ಏಕಾಗುವುದಿಲ್ಲ ಮಗು, ಮನಸ್ಸು ಮಾಡಿದರೆ ಓಡಬಹುದು."
ಕೆಲವರ್ಷಗಳ ನಂತರ ಗಾಲಿಕುರ್ಚಿ ಓಟದಲ್ಲಿ ಆ ಮಗು ಮೊದಲ ಬಹಮಾನ ಗೆದ್ದಿತು!!

ಪುಟ್ಕಥೆ 93
ಒಂಟಿಯಾದ ಮೇಲೆ ಬದುಕು ಭಾರವೆನಿಸತೊಡಗಿತ್ತವಳಿಗೆ. ಪುಟ್ಟದೊಂದು ಕಂದನ ಭಾರ ಹೊತ್ತ ಮೇಲೆ ಈಗ ಹಗುರೆನಿಸಿದೆ!!

ಪುಟ್ಕಥೆ 94
"ಮಿಸ್ ನೀವು ಹೊಡೆದದ್ದು ಸರಿಯೇ?" ದಿಟ್ಟವಾಗಿ ಪ್ರಶ್ನಿಸಿದಳು ಆ ಪೋರಿ.
"ನೀನು ತಪ್ಪು ಮಾಡಿದೆ, ಅದಕ್ಕೇ ನಾ ಹೊಡೆದೆ" ಸಮರ್ಥಿಸಿಕೊಂಡರು ಶಿಕ್ಷಕರು.
"ತಪ್ಪು ಅಂತ ನನಗೆ ಗೊತ್ತಿದ್ದರೆ ನಾನೇಕೆ ಅದನ್ನು ಮಾಡುತ್ತಿದ್ದೆ!!"

ಪುಟ್ಕಥೆ - 95
"ಮಿಸ್, ನೀವು ಬರೀ ಹೊಡೆದಿದ್ದರೆ ಆ ಬರೆ ಅಳಿಸಿಹೋಗುತ್ತಿತ್ತು, ಆದರೆ ನಿಮ್ಮ ಮಾತು, ಅದರಿಂದ ಮನಸ್ಸಿಗಾದ ನೋವು? ಆದರೂ ಮಿಸ್ ನೀವಂದ್ರೆ ನಂಗಿಷ್ಟ."
ಶಿಕ್ಷಕಿ ನೋವಿನಿಂದ,  ನಾಚಿಕೆಯಿಂದ ತಲೆತಗ್ಗಿಸಿದಳು. 

ಪುಟ್ಕಥೆ - 96
ಮಕ್ಕಳಿಗೆ ಏಟು ಹೊಡೆದ ಮೇಲೆ ಶಿಕ್ಷಕನಿಗೆ ತನ್ನ ತಪ್ಪಿನ  ಅರಿವಾಯಿತು. 
"ಕ್ಷಮಿಸಿ ಬಿಡ್ರೊ,  ತಪ್ಪಾಗೋಯ್ತು,  ಇನ್ನೊಮ್ಮೆ ಹೀಗಾಗದಂತೆ ನೋಡಿಕೊಳ್ತೇನೆ."
"ನಾವೂ ಅದೇ ಅಲ್ವ ಸರ್ ಹೇಳಿದ್ದು?!!"

ಪುಟ್ಕಥೆ - 97
"ಟೀಚರ್ ಈ ಬೆತ್ತದಿಂದ ಇನ್ನೇನೇನು ಉಪಯೋಗವಿದೆ?" ಕೇಳಿದ ಬಾಲಕ.
"ಬಹಳಷ್ಟಿದೆ. ಬುಟ್ಟಿ ಹೆಣೆಯಬಹುದು, ಛೇರ್, ಮಂಚ ಮಾಡಬಹುದು,  ಮನೆ ಕೂಡ ಕಟ್ಟಬಹುದು. "
"ಮತ್ತೇಕೆ ಟೀಚರ್ ನೀವು ಒಂದೇ ಉದ್ದೇಶಕ್ಕೇ ಬಳಸ್ತೀರಾ? !"

ಪುಟ್ಕಥೆ 98
ತಪ್ಪಾಗಿ ಏಟು ತಿಂದ ಆ ಬಾಲಕನನ್ನು ಕಂಡು ಶಿಕ್ಷಕನಿಗೆ ಅಯ್ಯೋ ಎನಿಸಿತು. 
ಬೆತ್ತವನ್ನು ಹುಡುಗನ ಕೈಲಿಟ್ಟು "ಹೊಡೆದುಬಿಡು ಕಂದ" ಎಂದ.
"ನೀವ್ ಮಾಡಿರುವ ತಪ್ಪನ್ನು ನಾನೂ ಮಾಡಲೇ ಸರ್?"

ಪುಟ್ಕಥೆ - 99
ಎಂದೂ ಗಲಾಟೆ ಮಾಡದ ಹುಡುಗ ಅಂದು ಇನ್ನೊಬ್ಬ ಹುಡುಗನಿಗೆ ಹೊಡೆದಿದ್ದ.
"ಯಾಕೋ ಮಗೂ ಹೀಗೆ ಮಾಡ್ದೆ?" ಬಹು ಪ್ರೀತಿಯಿಂದ ಕೇಳಿದಳಾ ಶಿಕ್ಷಕಿ. "ಇದಕ್ಕೆ ಟೀಚರ್,  ನೀವು ಯಾವತ್ತೂ ನನ್ನನ್ನು ಮಗೂ ಎಂದು ಮಾತನಾಡಿಸಿರಲೇ ಇಲ್ಲ. ಆದರೆ ನನಗೆ ನೀವು ಯಾವಾಗಲೂ ಅಮ್ಮನಂತೆ ಕಾಣಿಸುತ್ತಿದ್ದಿರಿ!!"

ಪುಟ್ಕಥೆ - 100
ಇಬ್ಬರೂ ಸಾಹಿತಿಗಳಾಗಬೇಕೆಂದು ಕನಸು ಕಂಡಿದ್ದರು.
ಸಾಹಿತಿಯಾದವ ಆಗದವನನ್ನು ಕೇಳಿದ, 
"ನೀನೇಕೆ ಬರೆಯುವುದನ್ನು ನಿಲ್ಲಿಸಿದೆ?"
"ಬರೆಯುವ ಕೈಗಳಿಗೆ ಬೆನ್ನು ತಟ್ಟುವ ಕೈಗಳು ಬೇಕಲ್ಲವೇ?!"

1 comment: