Sunday, 7 October 2018

ಪುಟ್ಕಥೆ 81 - 90

ಪುಟಾಣಿ ಕಥೆ - 81
ನಗು ಅಳುವಿನ ನಡುವೆ ಯಾರು ಹೆಚ್ಚೆಂಬ ಘರ್ಷಣೆ ನಡೆಯುತ್ತಿತ್ತು. 
ನಗುವ ಮಗುವಿನ ಮುಂದೆ ಅಳು ನಿಂತಿತು. ನಗುತ್ತಿದ್ದ ಮಗು ಬಿಕ್ಕತೊಡಗಿತು.
ಅಳುವ ಮುಂದೆ ಹೋಗಿ ನಗು ನಿಂತಿತು. ಮಗು ಕೇಕೆ ಹಾಕಿ ನಗಲಾರಂಭಿಸಿತು!!

 ಪುಟ್ಕಥೆ - 82
ನಗು ಅಳುವಿನ ನಡುವೆ ಯಾರು ಹೆಚ್ಚೆಂದು ಘರ್ಷಣೆ ಮುಂದುವರೆಯಿತು.
ಅಳು ಹೇಳಿತು "ನೋಡಲ್ಲಿ ಆ ವ್ಯಕ್ತಿ ಅತ್ತು ಎಷ್ಟು ನಿರಾಳವಾಗಿದ್ದಾನೆ."
"ನೋಡಲ್ಲಿ ಆ ವ್ಯಕ್ತಿ ತಾನೂ ನಕ್ಕು, ಇತರರಿಗೂ ನಗು ಹಂಚುತ್ತಿದ್ದಾನೆ " ನಗು ಹೇಳಿತು!!

ಪುಟ್ಕಥೆ - - 83
ನಗು ಅಳುವಿನ ನಡುವೆ ಯಾರು ಹೆಚ್ಚೆಂಬ ಘರ್ಷಣೆ ಮುಂದುವರೆಯಿತು. ಪಟ್ಟು ಬಿಡದ ಅಳು ಹೇಳಿತು, "ಮನುಷ್ಯ ಅಳದಿದ್ದರೆ ಹೃದಯಾಘಾತವಾಗಿ ಬಿಡುತ್ತದೆ.
ನಗುತ್ತಾ ನಗು ಹೇಳಿತು "ನಗದಿದ್ದರೆ ಮನುಷ್ಯ ಇತರರಿಗೂ ಹಾರ್ಟ್ ಅಟಾಕ್ ಬರಿಸಬಲ್ಲ!!"

ಪುಟ್ಕಥೆ - 84
ಬರೆಯುವುದು ಎಂದರೆ ಆ ಪುಟಾಣಿಗೆ ಅಲರ್ಜಿ, ಏನೋ ಒಂದು ನೆವ.
ಒಂದು ದಿನ "ಅಯ್ಯೋ ಈ ಅಕ್ಷರ ನನಗೆ ಗೊತ್ತಿಲ್ಲವಲ್ಲ" ಎಂದರು ಅವರಮ್ಮ. ಅಷ್ಟೆ. ಅಂದಿನಿಂದಲೇ ಅಕ್ಷರಾಭ್ಯಾಸ ಆರಂಭ, ಅಮ್ಮನಿಗೆ, ಮಗಳಿಂದ. ಒಂದು ವಾರದಲ್ಲಿ ಎಲ್ಲಾ ಅಕ್ಷರಗಳು ಕರಗತ ಮಗಳಿಗೆ!!

ಪುಟ್ಕಥೆ - 85
"ಜೀವನ ಎಷ್ಟು ಕಷ್ಟ ನಿಮಗೇನು ಗೊತ್ತು" ಎಂದು ಇಂಜಿನಿಯರ್ ಮೊಮ್ಮಗಳು ಹೇಳಿದಾಗ ಎಂಟು ಮಕ್ಕಳನ್ನು, 20 ಎಕರೆ ಜಮೀನನ್ನು ಒಬ್ಬರೇ ನೋಡಿಕೊಂಡಿದ್ದ ಅಜ್ಜಿ ಮುಸಿಮುಸಿ ನಕ್ಕರು.

 ಪುಟ್ಕಥೆ - 86
"ತಪ್ಪು ಮಾಡುವುದು ಸುಲಭ ಮಗು, ಆದರೆ ಅದರ ಪರಿಣಾಮ ಎದುರಿಸಲು ಎಂಟು ಗುಂಡಿಗೆ ಬೇಕು." ಅಮ್ಮ ಯಾವಾಗ ಹೇಳಿದರೂ ಅವಳಿಗರ್ಥವಾಗಿರಲಿಲ್ಲ, ಅವಳು ತಪ್ಪು ಮಾಡುವವರೆಗೆ! 

ಪುಟ್ಕಥೆ - 87
ಅವ್ವ ಬೈದಳೆಂದು ಫ್ಯಾನಿಗೆ ನೇಣುಹಾಕಿಕೊಳ್ಳಲು ಹೋದವಳಿಗೆ ಕಿಟಕಿಯಾಚೆ ಕಂಡದ್ದು ಗಂಡಾಳಂತೆ ಹೊಲದಲ್ಲಿ ಇಡೀ ದಿನ ದುಡಿದರೂ ನಗುಮೊಗದಿ ಮನೆಯತ್ತ ಹೆಜ್ಜೆ ಹಾಕುತ್ತಿದ್ದ ಅವ್ವ.

ಪುಟ್ಕಥೆ -- 88
ಕೋಪಗೊಂಡು ತಮ್ಮನನ್ನು ಬಾಸುಂಡೆ ಬರುವಂತೆ ಹೊಡೆದಿದ್ದಳು. ಪಶ್ಚಾತ್ತಾಪ ಪಡುತ್ತಿದ್ದವಳಿಗೆ ತಮ್ಮ ಹೇಳಿದ, "ಬಿಡೇ ಅಕ್ಕ, ತಾಯಿ ತರ ಪ್ರೀತಿ ಕೊಡುವವಳಿಗೆ ಇಷ್ಟು ಮಾತ್ರ ಹಕ್ಕಿಲ್ಲವೇ!"

ಪುಟ್ಕಥೆ - 89
ಮಗುವನ್ನು ಹೊಡೆದಳೆಂಬ ಸುಳ್ಳು ಆರೋಪದ ಮೇಲೆ ಆ ಶಿಕ್ಷಕಿಯನ್ನು ಬಂಧಿಸಲಾಯಿತು. ಬೇಲ್ ಮೇಲೆ ಬಿಡಿಸಿಕೊಂಡು ಹೊರಬಂದ ಮೇಲೆ ಲಾಯರ್ ಆಕೆಗೆ ಪಾದಾಭಿವಂದನೆ ಮಾಡಿ, "ನೆನಪಿದೆಯೇ ಟೀಚರ್ ಹತ್ತು ವರ್ಷಗಳ ಹಿಂದೆ ಬೆತ್ತ ಮುರಿದುಹೋಗಿದ್ದು? " ನಗುತ್ತಾ ನುಡಿದ.

ಪುಟ್ಕಥೆ -90

ಯಾರೋ ಎತ್ತಿ ತಮ್ಮ ಪದಕದಲ್ಲಿ ಜೋಡಿಸಿಕೊಳ್ಳುವವರೆಗೆ ಆ ಮುತ್ತು ಧೂಳಿನಲ್ಲಿ ಬಿದ್ದಿತ್ತು.


No comments:

Post a Comment