ಪುಟ್ಕಥೆ - 51
ಆತ ಈಕೆಯ ಮೈಮುಟ್ಟಿದ್ದು ಆಕಸ್ಮಿಕವಾಗಿರಲಿಲ್ಲ. ಅವನ ಕೈತಿರುಚಿ ಹೊಡೆದಳು. ಅಲ್ಲಿ ಹೂ ಹಣ್ಣು ಮಾರುವ ಹೆಣ್ಣುಮಕ್ಕಳು ಸೇರಿಕೊಂಡರು. ನಂತರ ಕೈಮುಗಿದು ಹೇಳಿದರು, "ಇಷ್ಟು ದಿನ ಧೈರ್ಯ ಇರಲಿಲ್ಲ ಕಣಕ್ಕಾ!!"
ಪುಟ್ಕಥೆ - 52
"ನನ್ನಮ್ಮನ ಮೇಲೆ ನಿಮಗೆ ಕೋಪ ಇರಬಹುದು, ಆದರೆ ನಾನೇನು ಮಾಡಿದ್ದೇನಜ್ಜಿ?"
"ನಿನ್ನನ್ನು ಕಂಡಾಗಲೆಲ್ಲ ನಿಮ್ಮ ಅಮ್ಮಾನೇ ನೆನಪು ಬರುತ್ತಾಳೆ."
"ಅದ್ಯಾಕಜ್ಜಿ ನಿಮಗೆ ನಿಮ್ಮ ಮಗನ ನೆನಪು ಬರುವುದಿಲ್ಲ, ಎಲ್ಲರೂ ನಾನು ಅಪ್ಪನಂತೆ ಅಂತಾರೆ!!"
ಪುಟ್ಕಥೆ - 53
ಆಕೆಯನ್ನು ಮಕ್ಕಳ್ಯಾರೂ ನೋಡಿಕೊಳ್ಳಲಿಲ್ಲ. ಅವಳು ಯಾರನ್ನೂ ದೂರಲೂ ಇಲ್ಲ. "ನಾನು ನಮ್ಮ ಅಪ್ಪ ಅಮ್ಮನನ್ನು ನೋಡಿಕೊಂಡಿದ್ದರೆ ನನಗೀ ಗತಿ ಬರುತ್ತಿತ್ತೆ?" ತನ್ನನ್ನೇ ತಾನು ದೂರಿಕೊಳ್ಳುತ್ತಿದ್ದಳು!!
ಪುಟ್ಕಥೆ - 54
೧೦ ವರ್ಷದ ಬಾಲೆ ಚರ್ಚಾಸ್ಪರ್ಧೆಯಲ್ಲಿ ಮಾತನಾಡುತ್ತಾ ಮಧ್ಯದಲ್ಲಿ ನಿಲ್ಲಿಸಿಬಿಟ್ಟಳು. ತೀರ್ಪುಗಾರರು "ಮುಗಿಯಿತೇನಮ್ಮ? ಇನ್ನೂ ಸಮಯವಿದೆ" ಎಂದರು.
"ಗೊತ್ತು ಸರ್, ನೀವು ಅಲ್ಲಿ ಮಾತನಾಡುವುದನ್ನು ನಿಲ್ಲಿಸಿದರೆ ನಾನು ಶುರು ಮಾಡುವೆ" ದಿಟ್ಟವಾಗಿ ಉತ್ತರಿಸಿದಳು.
ಪುಟ್ಕಥೆ - 55
ಮಿಲಿಟರಿ ಆಫೀಸರ್ ಶಾಲೆಯ ಎಚ್ ಎಮ್ ಕಾಲಿಗೆ ನಮಸ್ಕರಿಸಿ ಸೀರೆಯ ಕವರನ್ನು ಅವರತ್ತ ಚಾಚುತ್ತಾ ಹೇಳಿದ, "ಸಿಸ್ಟರ್ ೧ನೇ ತರಗತಿಯಲ್ಲಿದ್ದಾಗ ನಾನೊಮ್ಮೆ ಆಳುತ್ತಿದ್ದೆ. ನೀವು ಥೇಟ್ ನಮ್ಮಮ್ಮನಂತೆ ಸಮಾಧಾನ ಮಾಡಿದ್ದಿರಿ. ಅಂದು ನಿಮ್ಮ ಸೀರೆಯಲ್ಲಿ ಕಣ್ಣು ಮೂಗು ಎಲ್ಲಾ ಒರೆಸಿದ್ದೆ. ಅದಕ್ಕೆ....!!"
ಪುಟ್ಕಥೆ - 56
"ನಿನ್ನ ಪ್ರಸ್ತಾಪವನ್ನು ನಾನು ಒಪ್ಪಲಾಗುವುದಿಲ್ಲ, ನಾವಿಬ್ಬರೂ ಹೀಗೆಯೇ ಸ್ನೇಹಿತರಾಗಿ ಉಳಿಯೋಣ" ಎಂದ ಆತ.
ಅದನ್ನು ನಿರಾಕರಿಸುತ್ತಾ ಹೇಳಿದಳಾಕೆ
" ನನ್ನ ಮನಸ್ಸಿನಲ್ಲಿ ಪ್ರೀತಿಯ ಭಾವನೆ ಬೆಳೆಯಲಾರಂಭಿಸಿದಾಗಲೇ ನೀನದನ್ನು ನಿರಾಕರಿಸಿದ್ದರೆ, ಅದು ಬೆಳೆಯಲು ಆಸ್ಪದ ಕೊಡದೇ ಇದ್ದಿದ್ದರೆ ಒಪ್ಪಬಹುದಿತ್ತು, ಈಗಲ್ಲ."
ಪುಟ್ಕಥೆ - 57
ಅವನಂತಹ ಗಂಡ ಸಿಗಬೇಕೆಂದು ಎಲ್ಲರೂ ಆಶಿಸಿದರು. ಆದರೆ ಅವನೊಂದಿಗೆ ಬಾಳನ್ನು ಹಂಚಿಕೊಳ್ಳಲು ಯಾರೂ ತಯಾರಿರಲಿಲ್ಲ!!
ಪುಟ್ಕಥೆ - 58
ಸಾಯಲು ಹೊರಟಳು ಆಕೆ, ಆದರೆ ದಾರಿ ಸುಲಭವಾಗಿರಲಿಲ್ಲ. ಇದು ಬದುಕಿಗಿಂತ ಕಷ್ಟವಾಗಿದೆಯಲ್ಲಾ, ಹಾಗಿದ್ದರೆ ಬದುಕಿಯೇ ಬಿಡೋಣ ಎಂದು ನಿರ್ಧರಿಸಿದಳು.
ಪುಟ್ಕಥೆ - 59
ಬಿಸಿ ಗಂಜಿಯಲ್ಲಿ ಬಿದ್ದ ಮಗುವಿನ ಬಲ ಭಾಗ ಸುಟ್ಟುಹೋಯಿತು. ಗಂಡ ಹೇಳಿದ "ಈ ಕುರೂಪಿ ಬೇಕಾ, ನಾನು ಬೇಕಾ ನಿರ್ಧರಿಸಿಕೊ" ಎಂದ. ಅವಳು ಯಾವುದನ್ನು ಆರಿಸಿಕೊಂಡಳು ಎಂದು ಹೇಳಬೇಕೆ!!!
ಪುಟ್ಕಥೆ - 60
"ತೆಗೆದುಬಿಡು ಅದನ್ನು, ಅನಿಷ್ಟವದು" ಗಂಡ ಹೆಂಡತಿಗೆ ದಬಾಯಿಸುತ್ತಿದ್ದ. ಅವನ ತಾಯಿ ಹೇಳಿದಳು, "ನೀನು ಇಂತಹ ಅಯೋಗ್ಯನಾಗುತ್ತೀಯ ಎಂದು ನನಗೆ ಗೊತ್ತಿದ್ದರೆ, ನಾನು ಆ ಕೆಲಸ ೨೫ ವರ್ಷಗಳ ಹಿಂದೆಯೇ ಮಾಡುತ್ತಿದ್ದೆ!!"
No comments:
Post a Comment