ಪುಟ್ಕಥೆ - 31
"ಏನೇ ಗಂಡುಬೀರಿ, ಇವತ್ತು ಲಂಗ ಹಾಕ್ಕೊಂಡು ಬಂದುಬಿಟ್ಟಿದ್ದೀಯ?" ಯಾವಾಗಲೂ ಛೇಡಿಸುತ್ತಿದ್ದ ಪಕ್ಕದ್ಮನೆಯಾತ ಅಂದೂ ಛೇಡಿಸಿದ.
"ಈ ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತನಾಡಿ ಅಂಕಲ್" ಕೂಲಾಗಿ ಹೇಳಿ ಎಳ್ಳುಬೆಲ್ಲದ ಪ್ಯಾಕೆಟ್ ಕೈಗಿತ್ತಳು!!
ಪುಟ್ಕಥೆ - 32
ಹೊಸವರ್ಷದ ಪಾರ್ಟಿಯಿಂದ ತಡವಾಗಿ ಬಂದ ಮಗಳನ್ನು ಅಮ್ಮ ಅಪ್ಪ ತರಾಟೆಗೆ ತೆಗೆದುಕೊಂಡರು.
"ನಮ್ಮದು ಸ್ವತಂತ್ರ ದೇಶವಲ್ಲವೇ? " ಕೇಳಿದಳು ಮಗಳು.
"ಹೌದು, ಅದಕ್ಕೂ, ಇದಕ್ಕೂ ಸಂಬಂಧವೇನು?" ರೇಗಿದರು.
"ಸ್ವಾತಂತ್ರ್ಯ ಬಂದಾಗ ಮಧ್ಯರಾತ್ರಿಯಲ್ಲಿ ಯುವತಿಯರು ನಿರ್ಭಯವಾಗಿ ಓಡಾಡಬಹುದು ಎಂದು ಗಾಂಧೀಜಿಯವರು ಹೇಳಿದ್ದರಲ್ಲ" ಉತ್ತರಿಸಿದಳು ಮಗಳು.
ಪುಟ್ಕಥೆ - 33
"ಏನ್ ಮಹಾ ಮಕ್ಕಳನ್ನು ನೋಡಿಕೊಳ್ಳೋದು?" ಗಂಡ ವಾದಿಸುತ್ತಿದ್ದ.
೩ ವರ್ಷದ ಮಗಳು ಪ್ರಶ್ನೆಯೊಂದಿಗೆ ಬಂದಾಗ ಅಪ್ಪನತ್ತ ತೋರಿಸಿ ಎದ್ದು ರೂಮಿಗೆ ಹೋದಳು.
ಅರ್ಧ ಘಂಟೆಯಾದ ನಂತರ "ಮಹರಾಯಿತಿ ನೀನೇ ಗ್ರೇಟ್, ನಾನು ಕಾಫಿ ಕುಡೀಬೇಕು, ತಲೆ ಸಿಡೀತಿದೆ" ಕೈಮುಗಿದು ಹೇಳಿದ ಪತಿ!!
ಪುಟ್ಕಥೆ - 34
"ಒಂದು ದಿನ ಊಟ ಬಡಿಸದಿದ್ದಕ್ಕೆ ಇಷ್ಟು ಕೋಪ ಮಾಡಿಕೊಳ್ಳುತ್ತಿರುವಿರಲ್ಲ, ೨೦ ವರ್ಷಗಳಿಂದ ಒಂದು ದಿನವಾದರೂ ನನ್ನನ್ನು ಊಟ ಮಾಡಿದೆಯಾ ಎಂದು ಕೇಳಿದಿರಾ? " ರೋಸಿ ಹೋದ ಹೆಣ್ಣುಮಗಳ ಪ್ರಶ್ನೆ! !
ಪುಟ್ಕಥೆ - 35
ಶಿಕ್ಷಕರ ಭವನದ ಉದ್ಘಾಟನಾ ದಿನದಿಂದೇ ಕುಸಿದ ಕಟ್ಟಡದಡಿ ಸಿಲುಕಿದ ಹಲವಾರು ಶಿಕ್ಷಕರ ಮನಸ್ಸಿನಲ್ಲಿ ಬಂದಿದ್ದು "ಮಾಡಿದ್ದುಣ್ಣೊ ಮಹರಾಯ!"
ಪುಟ್ಕಥೆ - 36
ಕನ್ನಡಕ್ಕಾಗಿ ಹೋರಾಟ ಮಾಡುತ್ತಿದ್ದವನೊಬ್ಬನ ಭಾಷಣ ಈ ರೀತಿ ಇತ್ತು "ಖನ್ನಡಕ್ಕಾಗಿ ನನ್ನ ಝೀವ ಬೇಕಾದ್ರೂ ಕೊಡ್ತೀನಿ. ನಾನು ಉಟ್ಟು ಓರಾಟಗಾರ.......!!"
ಪುಟ್ಕಥೆ - 37
"ನಗರದಲ್ಲಿ ಮತ್ತೊಂದು ಅತ್ಯಾಚಾರ" ಟಿವಿಯಲ್ಲಿ ಸುದ್ದಿ ಕೇಳುತ್ತಿದ್ದಂತೆ ಮಾತನಾಡತೊಡಗಿದನೊಬ್ಬ
"ಈ ಹೆಣ್ಣು ಮಕ್ಕಳು ಅದ್ಯಾಕೆ ಹಾಗೆ ಕೆಟ್ಟದಾಗಿ ಬಟ್ಟೆ ಧರಿಸುತ್ತಾರೋ, ಹೊತ್ತಾದ ಮೇಲೆ ತಿರುಗುತ್ತಾರೋ ನಾ ಕಾಣೆ."
ಟಿವಿಯಲ್ಲಿ ವಾರ್ತೆ ಮುಂದುವರೆಯಿತು, "ಮನೆಯಲ್ಲಿ ಆಡಿಕೊಂಡಿದ್ದ ಮೂರು ವರ್ಷದ ಮಗುವಿನ ಮೇಲೆ ಅತ್ಯಾಚಾರ!!"
ಪುಟ್ಕಥೆ - 38
"ಸ್ನೇಹಿತರು, ಸ್ನೇಹಿತರು ಅಂತ ಮೂರು ಹೊತ್ತು ತಿರುಗುತ್ತಿದ್ದೀಯ, ನೋಡೋಣ ಕಷ್ಟ ಎಂದಾಗ ಯಾರು ಬರುತ್ತಾರೊ" ಮೂದಲಿಸುತ್ತಿದ್ದ ತಂದೆ, ಮಗ ಆಸ್ಪತ್ರೆಯಲ್ಲಿದ್ದಾಗ ಬಂದ ಸ್ನೇಹಿತರನ್ನು ಕಂಡು ದಂಗಾದರು!!
ಪುಟ್ಕಥೆ - 39
"ಏನ್ರಿ, ನಿಮ್ಮ ಪತಿಯ ಬಗ್ಗೆ ಬಹಳ ಕೊಚ್ಚಿಕೊಳ್ತಾ ಇದ್ರಿ, ಇವತ್ತು ಯಾರೋ ಹುಡುಗಿಯನ್ನು ಬೈಕ್ ನಲ್ಲಿ ಕೂರಿಸಿಕೊಂಡು ಹೋಗ್ತಾ ಇದ್ರು ಗೊತ್ತಾ?" ವ್ಯಂಗ್ಯವಾಡಿದರು ಆಕೆ.
"ಆಕೆ ಇದೇ ಡ್ರೆಸ್ ಹಾಕಿದ್ದರು ತಾನೇ?" ನಗುತ್ತಲೇ ಒಳಗಿನಿಂದ ತಂದ ಚೂಡಿದಾರ್ ತೋರಿಸಿದರು!!
ಪುಟ್ಕಥೆ - 40
ಬುದ್ಧಿವಂತನೆನಿಸಿಕೊಂಡ ಮೊಮ್ಮಗ ತಾತ ಕೆಮ್ಮುತ್ತಿದ್ದಾಗ, ಅವರಿಗೆ ಗೂಗಲ್, ಯೂಟ್ಯೂಬ್ ಗಳ ಮೂಲಕ ಹೇಗೆ ಕಾಳಜಿ ವಹಿಸಬೇಕು ಎನ್ನುವ ಬಗ್ಗೆ ಮಾಹಿತಿ ನೀಡಿದ.
ದಡ್ಡ ಮೊಮ್ಮಗ ಕಷಾಯ ಮಾಡಿಕೊಂಡು ಬಂದು ತಾತನ ಮುಂದೆ ಹಿಡಿದ!!
No comments:
Post a Comment