Wednesday, 23 March 2022

ಕವಿತೆ - ಆದರ್ಶ ಪಟ್ಟದಿಂದ ವಿಮೋಚನೆ

 

ಆದರ್ಶ ಪಟ್ಟದಿಂದ ವಿಮೋಚನೆ

                 - ಸುಧಾ ಜಿ

 

ಬಾಲ್ಯದಿಂದಲೇ ಬೆಳೆದವು ಕನಸುಗಳು

ಅಮ್ಮನಂತಾಗಬೇಕು, ಟೀಚರ್, ಪೋಲಿಸ್,

ಸಾಗಿದೆ ಹೀಗೆ ಕನಸು ಕಟ್ಟುತ್ತಾ

ಚಿಗುರೊಡೆದವು ಮನದಲ್ಲಿ ಹೊಸವು

 

ನ್ನ ಕನಸುಗಳ ಗರಿಗೆದರಿಸುವುದಿರಲಿ

ಚಿವುಟಿದರು ಮೊಳಕೆಯಲೆ ಎಲ್ಲವನು

ನನ್ನಂತೆ ವಕೀಲಳಾಗಲಿಅಪ್ಪನ ಮನಸು

ವೈದ್ಯೆಯಾಗಲಿ ಅಮ್ಮನ ಕನಸು

 

ನೃತ್ಯ, ಸಂಗೀತ, ಕಲಿಯುತ್ತಿದ್ದವಳಿಗೆ

ಮೈನೆರೆದ ನಂತರ ಬೇಕಿಲ್ಲವೆಂದರು

ಬಾರ್ಬಿ ಡಾಲ್ ನಂತೆ ತೆಳ್ಳಗೆ ಬೆಳ್ಳಗಾಗು

ಮದುವೆಯಾಗಲು ಇನ್ನೇನು ಬೇಕೆಂದರು

 

ಹಠದಿಂದ ಕಳಿಸಿದರು ಡಾಕ್ಟರಾಗೆಂದು

ಶಿಕ್ಷಕಿಯಾದರೆ ಸಿಗುವುದೇ ಗಂಡೆಂದು

ಕೊನೆ ವರ್ಷದಲ್ಲಿ ವಿವಾಹಕೆ ಸಿದ್ಧ

ಅಪರೂಪದ ಸಂಬಂಧ ಬಂತೆಂದು

 

ಕಾನನದ ಕೂಗಾಯ್ತು ನನದು

ತಲೆಬಾಗದೆ ನಾ ಪ್ರತಿಭಟಿಸಿದರೆ

ನೀ ಆದರ್ಶ ಮಗಳೇನಾ? - ಪ್ರಶ್ನಿಸಿದರು

ತಾಳಿಗೆ ಕೊರಳೊಡ್ಡಿ ಆದರ್ಶಸುತೆಯಾದೆ

 

ಆದರ್ಶ ಸೊಸೆಯಾದೆ, ಗೃಹಿಣಿಯಾದೆ

ಗರ್ಭಿಣಿಗೇಕೆದೆಂದಾಗ ಪ್ರತಿಭಟಿಸಿದರೆ

ನೀ ಆದರ್ಶ ಸತಿಯೇನಾ? - ಪ್ರಶ್ನಿಸಿದರು

ಅರೆಮನಸಿನಲೇ ಆದರ್ಶಸತಿಯಾದೆ

 

ಮಗುವಿಗಾರು ತಿಂಗಳಾದ ಬಳಿಕ

ಮತ್ತೆ ದುವೆನೆಂದು ಕೇಳಿದರೆ

ನೀ ಆದರ್ಶ ತಾಯೇನಾ? - ಪ್ರಶ್ನಿಸಿದರು

ಆಸೆಗಳ ಹೂತು ಆದರ್ಶತಾಯಾದೆ.

 

ನೆರವಿಗಾಗಿ ಮನೆಗೆ ಬಂದವರಿಗೆ

"ಯಾರಿಲ್ಲ" ಎಂದಾಗ "ನೀವಿಲ್ಲವೇ?"

ಕೇಳಿದ ಪ್ರಶ್ನೆಯ ಕೇಳಿಕೊಂಡೆ ನನ್ನನ್ನೆ

"ನಾನಿಲ್ಲವೇ? ಹಾಗಿದ್ದರೆ ನಾನೆಲ್ಲಿ?"

 

ಹುಡುಕಿದಾಗ ಕಂಡಿತೊಂದು ಪಟ

ನನ್ನಾಸೆಗಳ ಸುಟ್ಟಬೂದಿಯ ಮೇಲೆ

ಆದರ್ಶತೆಯ ಪಟ್ಟ ಹೊತ್ತು ಕೂತಿದ್ದ

ಜೀವಚ್ಛವದಂತಿದ್ದ ನನ್ನದೇ ಚಿತ್ರ

 

ನನ್ನ ಕನಸುಗಳೆಲ್ಲ ಹೊಸಕಿ

ಹೊತ್ತ ಪಟ್ಟಗಳ ಹೆಣಭಾರವಿಳಿಸುವ

ನನ್ನಾಸೆಗಳಿಗೆ ರೆಕ್ಕೆಕಟ್ಟಿ ಮೇಲೇರುವ

ಹೊಸ ಹಾದಿಯಲ್ಲಿರುವೆ ನಾನು

******

No comments:

Post a Comment